ADVERTISEMENT

‘ಸಂಬಂಧಗಳ ಸುತ್ತ...’ ಪ್ರದರ್ಶನ ನಾಳೆ

ಹಿತೇಶ ವೈ.
Published 8 ಜೂನ್ 2018, 19:30 IST
Last Updated 8 ಜೂನ್ 2018, 19:30 IST
‘ಸಂಬಂಧಗಳ ಸುತ್ತ...’ ಪ್ರದರ್ಶನ ನಾಳೆ
‘ಸಂಬಂಧಗಳ ಸುತ್ತ...’ ಪ್ರದರ್ಶನ ನಾಳೆ   

ಐದು ವಿಭಿನ್ನ ಕತೆಗಳು, ಐದು ಭಿನ್ನ ಕಾಲಘಟ್ಟದಲ್ಲಿ ಹೆಣ್ಣಿನ ಆಯಾಮಗಳು, ನಾಟಕದಲ್ಲಿರುವುದು 15 ಪಾತ್ರಗಳು. ಅಭಿನಯಿಸಿರುವವರು ಕೇವಲ 3 ಜನ! ಹೌದು ವಿಭಿನ್ನ ಕಲ್ಪನೆ ಹೊಸತನದ ಚಿಂತನೆಯೊಂದಿಗೆ ಮೂಡಿ ಬಂದಿರುವ ನಾಟಕವೇ ‘ಸಂಬಂಧಗಳ ಸುತ್ತ’

‘ಆತ್ಮೀಯ ಗೆಳತಿಯರ ನಡುವೆ ಹೊಸ ವ್ಯಕ್ತಿಯ ಪ್ರವೇಶವಾದರೆ ಏನಾಗಬಹುದು? ಅಕ್ಕನ ಪ್ರೇಮಿಯನ್ನು ತಂಗಿ ಮದುವೆಯಾದರೆ? ಇವರಿಬ್ಬರ ನಡುವೆ ಸಿಲುಕಿಕೊಂಡ ತಾಯಿಯ ಸ್ಥಿತಿ ಏನು?  ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡುವ ಮೂವರು ಗೆಳತಿಯರ ನಡುವೆ ಬಡ್ತಿ ಸಮಸ್ಯೆ ಬಂದರೆ? ಇರುವುದೆಲ್ಲವ ಬಿಟ್ಟು ವೃದ್ಧಾಶ್ರಮದಲ್ಲಿ ಇರುವವರ ಬದುಕೇನು? ಇಂತಹ ಪರಿಸ್ಥಿತಿಗಳಲ್ಲಿ ಮಾನವ ಸಂಬಂಧಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎನ್ನುವುದನ್ನು ‘ಸಂಬಂಧಗಳ ಸುತ್ತ’ ನಾಟಕ ಕಟ್ಟಿಕೊಡುತ್ತದೆ.

ಮಾನವ ಸಮಾಜ ಎಷ್ಟೇ ಬದಲಾದರೂ, ಬದಲಾದ ಸಾಮಾಜಿಕ ಬದಲಾವಣೆಗಳ ನಡುವೆಯೂ ಹೆಣ್ಣೆಂದರೆ ಹೀಗೆ ಎನ್ನುವ ಹಣೆಪಟ್ಟಿಯನ್ನು ಕಟ್ಟುವ ಮನಸ್ಥಿತಿ ಇನ್ನೂ ಬದಲಾಗಿಲ್ಲ. ಇತ್ತೀಚಿನ ಧಾರಾವಾಹಿ, ಸಿನಿಮಾ, ಕಥೆಗಳಲ್ಲಿ ಹೆಣ್ಣನ್ನು ಕ್ರೂರಿಯಾಗಿಯೊ ಅಥವಾ ಅಬಲೆಯಾಗಿಯೊ ಚಿತ್ರಿಸಲಾಗುತ್ತಿದೆ. ಒಂದು ಹೆಣ್ಣಿನ ವಿಭಿನ್ನ ಮುಖಗಳನ್ನು ತೋರಿಸುವ ಪ್ರಯತ್ನ ಮಾಡಿರುವುದು ತೀರಾ ಕಡಿಮೆ. ಇಂತಹ ಎಲ್ಲಾ ರೂಢಿಗತ ವಿಚಾರಗಳನ್ನು ಬದಲಾಯಿಸುವ ನಿಟ್ಟಿನಲ್ಲಿ ರಂಗದ ಮೇಲೆ ಒಂದು ವಿಶಿಷ್ಟ ಪ್ರಯೋಗವೇ ಈ ನಾಟಕ ಎನ್ನುತ್ತಾರೆ ‘ಸಂಬಂಧಗಳ ಸುತ್ತ’ ನಾಟಕದ ನಿರ್ದೇಶಕಿ ಸಿಂಧು ಹೆಗಡೆ.

ADVERTISEMENT

ವಿಭಿನ್ನ ಕಾಲಘಟ್ಟದಲ್ಲಿರುವ ಐದು ಮಹಿಳೆಯರು ಸುತ್ತ ಐದು ವಿಶಿಷ್ಟ ಕಥೆಗಳನ್ನು ಹೆಣೆಯಲಾಗಿರುವ ‘ಸಂಬಂಧಗಳ ಸುತ್ತ’ ನಾಟಕದಲ್ಲಿ ಎನ್ನುವ ಪ್ರೀತಿ, ಮೋಹ, ದುರಾಸೆ ಮತ್ತು ಮುಗ್ಧ ಸಂಬಂಧಗಳ ಬಗ್ಗೆ ಬಿಂಬಿಸಲಾಗಿದೆ. ಈ ಸಂಬಂಧಗಳು ಕಾಲನ ಹೊಡತಕ್ಕೆ ತುತ್ತಾದಾಗ ಯಾವ ರೀತಿಯ ತಿರುವುಗಳನ್ನು ಪಡೆಯತ್ತವೆ ಎನ್ನುವ ಚಿತ್ರಣವೂ ಇಲ್ಲಿ ನೀಡಲಾಗಿದೆ ಎನ್ನುತ್ತಾರೆ ನಿರ್ದೇಶಕಿ.

ಕ್ರೊವೇಶಿಯಾದ ನಾಟಕಕಾರ ಮಿರೊ ಗಾವ್ರನ್‌ ಅವರು ಬರೆದಿರುವ ‘ಅಲ್‌ ಅಬೌಟ್ ವುಮೆನ್‌’ ಎನ್ನುವ ನಾಟಕದ ಅನುವಾದವನ್ನು ಕನ್ನಡಕ್ಕೆ ಅಭಿಷೇಕ್‌ ಅಯ್ಯಂಗಾರ್‌ ತಂದಿದ್ದು, ನಾಟಕವನ್ನು ಸಿಂಧು ಹೆಗಡೆ ನಿರ್ದೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.