ADVERTISEMENT

ಸದಾ ಕಂದನೊಡನೆ ಪಯಣ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2012, 19:30 IST
Last Updated 14 ಫೆಬ್ರುವರಿ 2012, 19:30 IST
ಸದಾ ಕಂದನೊಡನೆ ಪಯಣ
ಸದಾ ಕಂದನೊಡನೆ ಪಯಣ   

ಆಫೀಸಿನಿಂದ ಹೊರಟಾಗ ರಾತ್ರಿ 8 ಗಂಟೆ. ಹಾಸ್ಟೆಲ್‌ಗೆ ಹೋಗುವ ಧಾವಂತದಲ್ಲಿದ್ದ ಮನಸ್ಸು ಎದುರಿಗೆ ಬರುತ್ತಿದ್ದ ಎಲ್ಲ ಆಟೊದತ್ತಲೂ ಕೈ ಬೀಸುವಂತೆ ಮಾಡುತ್ತಿತ್ತು.
 
ಕೆಲ ಆಟೊದವರು ಮೀಟರ್ ಮೇಲೆ ಇಪ್ಪತ್ತು-ಐವತ್ತು ರೂಪಾಯಿ ಹೆಚ್ಚು ಕೊಡಬೇಕೆಂದು ಡಿಮ್ಯಾಂಡ್ ಮಾಡಿದರು. ಮನಸ್ಸು ಒಪ್ಪಲಿಲ್ಲ. ಕೊನೆಗೂ ಒಂದು ಆಟೊ ಹತ್ತುವ ಭಾಗ್ಯ ನನ್ನದಾಯಿತು.

ಮಲ್ಲೇಶ್ವರಂಗೆ ಹೋಗುವಂತೆ ಆಟೊ ಚಾಲಕನಿಗೆ ತಿಳಿಸಿ ನಿರಾಳವಾಗಿ ಕೂರುವವರೆಗೆ ಸೀಟಿನ ಪಕ್ಕದಲ್ಲಿ ಒಬ್ಬ ಬಾಲಕ ಇರುವುದನ್ನು ಗಮನಿಸಿರಲಿಲ್ಲ.

ಆಟೊ ಚಕ್ರಗಳು ಒಂದಿಷ್ಟು ಮಾರು ಚಲಿಸಿದಾಗ ಗಾಬರಿಯಿಂದ, `ಯಾರೋ ಮಗುವನ್ನು ಬಿಟ್ಟುಹೋಗಿದ್ದಾರೆ... ನೋಡಿ~ ಎಂದೆ. ವಯಸ್ಸು ಹತ್ತು, ಹನ್ನೊಂದರ ಆಸುಪಾಸು ಇರಬಹುದು. ಹುಡುಗ ನಗುತ್ತಿದ್ದ.
 
ಆ ಮುಗ್ಧ ನಗು ನೋಡಿ ನನ್ನಲ್ಲೂ ಮಂದಹಾಸ ಮೂಡಿತು. ಅದೇ ಸಮಯದಲ್ಲಿ ಆಟೊ ಚಾಲಕ `ಇವನು ನನ್ನ ಮಗ, ಗೌತಮ~ ಎಂದರು. ಒಂದು ಕ್ಷಣ ನನಗೆ ಕುತೂಹಲ ತಡೆಯಲಾಗಲಿಲ್ಲ.

ಮಗುವನ್ನು ಅಮ್ಮನ ಜತೆ ಮನೆಯಲ್ಲಿ ಬಿಡುವುದು ಬಿಟ್ಟು; ಆಟೊದಲ್ಲಿ ಏಕೆ ಸುತ್ತಾಡಿಸುತ್ತಿದ್ದಾರೆ ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಾ, `ಏನು ಓದುತ್ತಿದ್ದಾನೆ? ಎಂದೆ. `ಏನೂ ಓದುತ್ತಿಲ್ಲ~ ಎಂದರು. `ಹುಡುಗ ತುಂಬಾ ಚೂಟಿ ಇದ್ದಾನೆ, ಶಾಲೆಗೆ ಯಾಕೆ ಕಳುಹಿಸುತ್ತಿಲ್ಲ~ ಎಂದೆ.

`ಅವನಿಗೆ ನಿಲ್ಲಲು ಆಗುವುದಿಲ್ಲ. ಡಿಎಂಡಿ ಎಂಬ ಆನುವಂಶಿಕ ಕಾಯಿಲೆ ಇದೆ. ಹಾಗಾಗಿ ಸದಾ ನನ್ನ ಜೊತೆಯಲ್ಲಿ ಕರೆದುಕೊಂಡು ಹೋಗಲೇಬೇಕು~ ಚಾಲಕ ಗುಣಶೀಲನ್ ಮಾತಿನಲ್ಲಿ ನೋವು ಬೆರೆತಿತ್ತು.

ಆಟೊ ಅದಾಗಲೇ ಶಿವಾಜಿನಗರ ದಾಟಿ ಕನ್ನಿಂಗ್‌ಹ್ಯಾಂ ರಸ್ತೆಯಲ್ಲಿ ಸಾಗುತ್ತಿತ್ತು. ಗುಣಶೀಲನ್ ಮಾತಿಗಿಳಿದರು:

`ನಾನು ವಾಸವಿರುವುದು ಮಲ್ಲೇಶ್ವರಂನಲ್ಲಿ. ಓದಿದ್ದು ಎಸ್‌ಎಸ್‌ಎಲ್‌ಸಿವರೆಗೆ ಮಾತ್ರ. ಸುಮಾರು ವರ್ಷದಿಂದ ಆಟೊ ಓಡಿಸುತ್ತಿದ್ದ ನನ್ನ ಬದುಕಿಗೆ ಸಂಗಾತಿಯಾಗಿ ಬಂದವಳು ವೆನಿಲಾ.
 
ಮದುವೆಯಾದ ಹೊಸತರಲ್ಲಿ ಐಸ್‌ಕ್ರೀಂನಷ್ಟೇ ಸಿಹಿಯಾಗಿತ್ತು ಅವಳ ಮನಸ್ಸು. ಬದುಕು ನೆಮ್ಮದಿಯಾಗಿಯೇ ಸಾಗುತ್ತಿತ್ತು. ವರ್ಷಾಂತ್ಯಕ್ಕೆ ಹೆಂಡತಿ ಸಿಹಿ ಸುದ್ದಿ ಕೂಡ ಕೊಟ್ಟಳು. ತಂದೆಯಾಗುತ್ತೇನೆಂದು ತಿಳಿದಾಗ ನನ್ನ ಮನಸ್ಸಿನಲ್ಲಿ ಆದ ಪುಳಕ ಅಷ್ಟಿಷ್ಟಲ್ಲ. ಆಮೇಲೆ ಇನ್ನೂ ಒಬ್ಬ ಮಗ ಹುಟ್ಟಿದ.

ಮದುವೆಯಾಗಿ ನೆಮ್ಮದಿಯಾಗಿ ಬದುಕು ಕಾಣಬೇಕೆಂಬ ಹಂಬಲದಲ್ಲಿದ್ದಾಗ ಆಘಾತ ನೀಡಿದ್ದೇ ಈ ಮಗನಿಗೆ ಡಿಎಂಡಿ ಕಾಯಿಲೆ ಇದೆ ಎಂಬ ವಿಚಾರ. ಈ ಆಘಾತದ ಬೆನ್ನಲ್ಲೇ ಮತ್ತೊಂದು ನೋವು. ವೆನಿಲಾ ಮಗನ ಕಾಯಿಲೆ ವಿಚಾರ ತಿಳಿದದ್ದೇ ಬಿಟ್ಟುಹೋದಳು.

ಈಗ ಡಿಎಂಡಿಗೆ ತುತ್ತಾಗಿರುವ ಹಿರಿಯ ಮಗ ಮತ್ತು ಎರಡನೇ ಮಗ ಇಬ್ಬರಿಗೂ ತಂದೆ-ತಾಯಿ ಎರಡೂ ನಾನೇ.

ಎರಡನೇ ಮಗ ಆರೋಗ್ಯವಂತ. ಮೂರನೇ ತರಗತಿ ಓದುತ್ತಿದ್ದಾನೆ. ಈ ಮಗನ ಪರಿಸ್ಥಿತಿ ಮಾತ್ರ ನಿತ್ಯವೂ ಕಾಡುತ್ತಿದೆ. ಎಂಟು ವರ್ಷದವರೆಗೆ ಎಲ್ಲಾ ಮಕ್ಕಳಂತೆ ಇವನೂ ಚೆನ್ನಾಗಿ ಆಡಿಕೊಂಡಿದ್ದ. ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೊಳಗಾದ.
 
ಸುಡುಜ್ವರದಿಂದ ಬಳಲಿದ. ದೇಹ ಕೃಶವಾಗತೊಡಗಿತು. ಏನಾಗುತ್ತಿದೆ ಎಂಬುದು ಅರಿವಾಗುವುದರೊಳಗೆ ಸಂಪೂರ್ಣ ಹಾಸಿಗೆ ಹಿಡಿದುಬಿಟ್ಟ. ಆತನಿಗೀಗ ತನ್ನ ಕಾಲಮೇಲೆ ತಾನು ನಿಂತುಕೊಳ್ಳಲೂ ಸಾಧ್ಯವಾಗದ ನಿಶ್ಶಕ್ತಿ. ಅವನಿಗಾಗಿ ನಾನು ಏನು ಮಾಡಲೂ ಸಿದ್ಧ.

ನನ್ನ ದಿನಚರಿ ಶುರುವಾಗುವುದೇ ಬೆಳಿಗ್ಗೆ 5ಕ್ಕೆ. ಎದ್ದು ಮನೆಕೆಲಸ ಮಾಡಿ ಚಿಕ್ಕ ಮಗನನ್ನು ರೆಡಿ ಮಾಡಿ ಶಾಲೆಗೆ ಕಳುಹಿಸುತ್ತೇನೆ.

ನಂತರ ಇವನನ್ನು ಆಟೊದಲ್ಲಿ ಕೂರಿಸಿಕೊಂಡು ನನ್ನ ಜೊತೆಯಲ್ಲಿಯೇ ಕರೆದುಕೊಂಡು ಹೋಗುತ್ತೇನೆ. ಸಂಜೆಯವರೆಗೂ ಆಟೊ ಓಡಿಸುತ್ತೇನೆ. ಚಿಕ್ಕ ಮಗನಿಗೆ ರಜೆ ಇದ್ದರೆ ಇವನನ್ನು ಅವನ ಜೊತೆಯಲ್ಲಿ ಬಿಡುತ್ತೇನೆ. ಇಲ್ಲ ಅಂದರೆ ನನ್ನ ಜೊತೆಯಲ್ಲಿಯೇ ಎಲ್ಲ ಕಡೆಗೂ ಕರೆದುಕೊಂಡು ಹೋಗಬೇಕು.

ಜೀವನದಲ್ಲಿ ನಾನು ಏನೂ ಬಯಸಲಿಲ್ಲ. ದೇವರು ಯಾಕೆ ಈ ರೀತಿ ಕಷ್ಟ ಕೊಟ್ಟನೋ? ಎಷ್ಟು ಸಲ ವಿನಂತಿಸಿಕೊಂಡರೂ ಹೆಂಡತಿ ಮಗುವನ್ನು ನೋಡಿಕೊಂಡು ಜೊತೆಗಿರಲು ಒಪ್ಪಲೇ ಇಲ್ಲ. ನಾನು ನೆಂಟರ ಮನೆಗೂ ಹೋಗುವುದಿಲ್ಲ. ನನ್ನ ಮಗನನ್ನು ನೋಡಿ ಯಾರಾದರೂ ವ್ಯಂಗ್ಯ ಮಾಡಬಾರದಲ್ಲ.

ನಗರದ ಎಲ್ಲಾ ಪ್ರಮುಖ ಆಸ್ಪತ್ರೆಗಳಲ್ಲೂ ಇವನನ್ನು ತೋರಿಸಿದೆ. ಸೇಂಟ್ ಮಾರ್ಥಾಸ್ ಆಸ್ಪತ್ರೆಯ ವೈದ್ಯ ಡಾ.ಶರವಣ್ ಹೇಳುವಂತೆ ಇದು ಆನುವಂಶಿಕ ಕಾಯಿಲೆ. ಗಂಡು ಮಕ್ಕಳಿಗೆ ಮಾತ್ರ ಬರುವ ಈ ಕಾಯಿಲೆ ಮೊದಲು 7 ಇಲ್ಲವೇ 8 ನೇ ವಯಸ್ಸಿನಲ್ಲಿ ಕಾಣಿಸಿಕೊಳ್ಳುತ್ತದೆ.
 
ಈ ಮಕ್ಕಳಿಗೆ ಮೊದಲು ನಿಲ್ಲಲು ಆಗುವುದಿಲ್ಲ ನಂತರದ ದಿನಗಳಲ್ಲಿ ದೇಹದ ಎಲ್ಲಾ ಭಾಗಗಳು ಚಟುವಟಿಕೆ ಕಳೆದುಕೊಳ್ಳುತ್ತವೆ. ಸಂಪೂರ್ಣ ದೇಹಬಲ ಕ್ಷೀಣಿಸಿ ಸಾವನ್ನಪ್ಪುತ್ತಾರಂತೆ.

ಪ್ರಪಂಚದಲ್ಲಿ ಕೆಟ್ಟ ತಂದೆಯರು ಇರಬಹುದು. ಆದರೆ ಕೆಟ್ಟ ತಾಯಿಯಂತೂ ಇರಲು ಸಾಧ್ಯವಿಲ್ಲ. ತಾಯಿಯ ಸಂಬಂಧ ಅನ್ನುವುದೇ ಅಂಥದ್ದು. ಒಂಬತ್ತು ತಿಂಗಳು ಹೆತ್ತು ಹೊತ್ತು ಸಾಕಿದ ಮಗು ಒಂದು ಕ್ಷಣ ನೊಂದರೂ ತಾಯಿ ಸಹಿಸಲಾರಳು.

ಆದರೆ ಮಗನಿಗೆ ಕಾಯಿಲೆ ಇದೆ ಎಂದ ತಕ್ಷಣ ನನ್ನವಳು ಬಿಟ್ಟು ಹೋಗಿದ್ದು ವಿಪರ್ಯಾಸ...~

ಗುಣಶೀಲನ್ ಗದ್ಗದಿತರಾದರು. ಗೌತಮನ ಮುಖದಲ್ಲಿ ಮೌನ ಮನೆಮಾಡಿತ್ತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.