ADVERTISEMENT

ಸದಾ ಮಾತಿನ ಚುಂಗು ಹಿಡಿದು

ಪ್ರಜಾವಾಣಿ ವಿಶೇಷ
Published 6 ಆಗಸ್ಟ್ 2012, 19:30 IST
Last Updated 6 ಆಗಸ್ಟ್ 2012, 19:30 IST

ಟೀವಿಯೊಂದಿಗೆ ನನ್ನ ನಂಟು ಬೆಳೆದಿದ್ದು ಆಕಸ್ಮಿಕ. ಯಾವುದೋ ಒಂದು ಕಾರ್ಯಕ್ರಮಕ್ಕೆ ಹೋಗಿದ್ದಾಗ ನನ್ನನ್ನು ನೋಡಿದ ಒಬ್ಬರು ಕಾರ್ಯಕ್ರಮ ನೀಡುತ್ತೀಯಾ ಎಂದರು. ನಾನು ತಕ್ಷಣ ಹ್ಞೂಂಗುಟ್ಟಿದೆ. ಅದೇ ಮೊದಲ ಕಾರ್ಯಕ್ರಮ. ನನ್ನ ಮತ್ತು ಉದಯ ಟೀವಿಯೊಂದಿಗೆ ನಂಟು ಬೆಳೆದುಕೊಂಡಿತು. ನಂತರ `ನೆನಪಿರಲಿ~ ಸಿನಿಮಾದಲ್ಲಿ ಅಭಿನಯಿಸಲು ದಿಢೀರ್ ಅವಕಾಶ ಸಿಕ್ಕಿತು.

ಕ್ಯಾಮೆರಾ ಎದುರಿಸೋಕೆ ನನಗೆ ಯಾವುದೇ ರೀತಿಯ ಭಯವಿರಲಿಲ್ಲ. ನಿರ್ದೇಶಕ ರತ್ನಜ ಅವರು ಚೆನ್ನಾಗಿ ಹೇಳಿಕೊಟ್ಟರು. ನಟನೆ ನನಗೆ ತುಂಬಾ ತೃಪ್ತಿ ನೀಡಿದೆ. ತುಂತುರು ಮಳೆಯಲ್ಲಿ ಸುಮ್ಮನೆ ಕುಳಿತು ಈ ಎಲ್ಲಾ ನೆನಪುಗಳನ್ನು ಮೆಲುಕು ಹಾಕುವಾಗ ಮನಸ್ಸು ಖುಷಿಯಲ್ಲಿ ನಲಿದಾಡುತ್ತದೆ.

ನನ್ನ ಹುಟ್ಟೂರು ಮೈಸೂರು. ಆದರೆ ಕನಸು, ಬದುಕು ಕಟ್ಟಿಕೊಂಡಿದ್ದು ಬೆಂಗಳೂರಿನಲ್ಲಿ. ವಾರಾಂತ್ಯದಲ್ಲಿ ತಪ್ಪದೇ ಮೈಸೂರಿಗೆ ಹೋಗುತ್ತೇನೆ. ಮೈಸೂರೆಂದರೆ ಸ್ವರ್ಗ. ಅಲ್ಲಿ ಬೆಂಗಳೂರಿನಂತೆ ಗಿಜಿಗುಟ್ಟುವ ಟ್ರಾಫಿಕ್ ಇಲ್ಲ. ಶಾಂತವಾದ ಸ್ಥಳ.

ನಾನು ತುಂಬಾನೇ ಎತ್ತರ ಇದೀನಿ. ಹಾಗಂತ ನನಗೆ ಯಾವುದೇ ಕೀಳರಿಮೆ ಇಲ್ಲ. ನನ್ನ ಎತ್ತರದ ಬಗ್ಗೆ ಹೆಮ್ಮೆ ಇದೆ. ನನ್ನ ಎತ್ತರಕ್ಕೆ ತಕ್ಕ ಹೀರೋಗಳು ಸಿಗದೇ ಇರುವ ಕಾರಣದಿಂದಲೋ ಏನೋ ನಾನು ನಿರೂಪಣೆ ಕ್ಷೇತ್ರದಲ್ಲಿಯೇ ನೆಲೆನಿಂತೆ. ಆದರೆ ನಿರೂಪಣೆ ಕ್ಷೇತ್ರದಲ್ಲಿ ಸಿಗುವ ತೃಪ್ತಿಯೇ ಬೇರೆ.

ನಮ್ಮ ಮನೆಯ್ಲ್ಲಲಿ ಎಲ್ಲರೂ ಬೆಂಬಲ ನೀಡಿದ್ದಾರೆ. ನನ್ನ ಆಸಕ್ತಿಗೆ ನನ್ನ ಅಪ್ಪ ಅಮ್ಮ ಯಾವತ್ತೂ ವಿರೋಧ ಮಾಡಿಲ್ಲ. ಈಗ ಮದುವೆಯಾಗಿ ಅವಳಿ-ಜವಳಿ ಮಕ್ಕಳಿಗೆ ಅಮ್ಮನಾಗಿದ್ದೇನೆ. ಜೀವನದ ಪ್ರತಿ ಕ್ಷಣವನ್ನೂ ಖುಷಿಯಿಂದ ಅನುಭವಿಸಬೇಕು ಅಂದುಕೊಂಡಿದ್ದೇನೆ.
 
ಹಾಗಾಗಿ ಯಾವಾಗಲೂ ನಗುನಗುತ್ತಾ ಇರುತ್ತೇನೆ. ನಾನು ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುವುದಕ್ಕೆ ಸಾಧ್ಯವಾಗಿದ್ದು ನನ್ನ ಅತ್ತೆ ಮಾವನವರಿಂದ. ಮತ್ತೆ ನಿರೂಪಣೆಯತ್ತ ಮರಳುವುದಕ್ಕೆ ಕಾರಣರೂ ಅವರೇ. 

ಈಗ ಜೀ ಕನ್ನಡದಲ್ಲಿ ಸರಿಗಮಪ ಲಿಟ್ಲ್ ಚಾಂಪ್ ಕಾರ್ಯಕ್ರಮ ನಡೆಸಿಕೊಡುತ್ತಿದ್ದೇನೆ. ಮಕ್ಕಳೊಂದಿಗೆ ಮಕ್ಕಳಾಗಿ ಬೆರೆಯುತ್ತೇನೆ. ಮಕ್ಕಳಿಗೆ ನಾವು ಹತ್ತಿರವಾಗಬೇಕು. ಆಗ ಮಾತ್ರ ಅವರು ನಮ್ಮಂದಿಗೆ ಮುಕ್ತವಾಗಿ ಮಾತನಾಡುತ್ತಾರೆ.

ಶೋಗೆ ಮೊದಲು ನಾನು ಅವರ ಜತೆ ಸುಮ್ಮನೆ ಮಾತನಾಡುತ್ತೇನೆ. ಅವರು ಸ್ಕೂಲ್‌ನಲ್ಲಿ ಮಾಡಿದ ತುಂಟಾಟಗಳ ಬಗ್ಗೆ ಹೇಳುತ್ತಾರೆ. ಇದೆಲ್ಲ ನನಗೆ ಮಾತನಾಡುವುದಕ್ಕೆ ಸಿಗುವ ವಸ್ತುಗಳು.  ಈ ಮಕ್ಕಳೊಂದಿಗೆ ಬೆರೆಯುವಾಗ ಅವರ ಮಾನಸಿಕ ಸ್ಥಿತಿಯ ಬಗ್ಗೆ ತಿಳಿಯುತ್ತದೆ. ಇದರಿಂದ ನನ್ನ ಮಕ್ಕಳನ್ನು ಅರಿಯುವುದು ನನಗೆ ಸುಲಭವಾಗುತ್ತದೆ.

ಪುಸ್ತಕ ಓದುವುದು ತುಂಬಾ ಇಷ್ಟದ ಕೆಲಸ. ಬಿಡುವು ಮಾಡಿಕೊಂಡು ನನ್ನ ಕೆಲವು ಹವ್ಯಾಸಗಳಿಗೆ ಸಮಯ ಕೊಡುತ್ತೇನೆ. ಹನಿಮೂನ್‌ಗೆಂದು ಬೋರಾ ಬೋರಾ ಐಲ್ಯಾಂಡ್‌ಗೆ ಹೋಗಿದ್ದೆ. ಆ ಸ್ಥಳವನ್ನು ಮರೆಯಲು ಸಾಧ್ಯವೇ ಇಲ್ಲ. ಮಕ್ಕಳೆಲ್ಲಾ ದೊಡ್ಡವರಾದ ಮೇಲೆ ನಾನು ನನ್ನ ಗಂಡ ಮತ್ತೆ ಅಲ್ಲಿಗೆ ಹೋಗಬೇಕು ಎಂದು ಕನಸು ಕಟ್ಟಿಕೊಂಡಿದ್ದೇನೆ.

ನನಗೆ ಮಾತೇ ಎಲ್ಲಾ. ಮಾತಿಲ್ಲದೆ ಒಂದು ಕ್ಷಣವೂ ಇರಲು ಆಗುವುದಿಲ್ಲ. ಇನ್ನೊಬ್ಬರಿಗೆ ನೋವು ಕೊಡುವುದಕ್ಕಿಂತ ನಗಿಸುವುದು ಮುಖ್ಯ. ಭಾವನಾತ್ಮಕ ಮಾತಿಗಿಂತ ನಾನು ತಮಾಷೆ ಮಾಡುವುದೇ ಹೆಚ್ಚು.

ಮಾತನಾಡೋಕೆ ಯಾವತ್ತೂ ಪೂರ್ವ ತಯಾರಿ ಮಾಡಿಕೊಂಡಿಲ್ಲ. ಯಾಕೆಂದರೆ ಮಾತನ್ನು ಹೊರತುಪಡಿಸಿ ನನಗೆ ಬೇರೇನೂ ಗೊತ್ತಿಲ್ಲ. ಕೆಲವು ಕಾರ್ಯಕ್ರಮಗಳಿಗೆ ಹೋಗುವಾಗ ಸ್ವಲ್ಪ ಮಟ್ಟಿನ ತಯಾರಿ ಮಾಡಿಕೊಳ್ಳುತ್ತೇನೆ.

 ಯಾರೇ ಸಿಕ್ಕಿದರೂ ಅವರನ್ನು ಪರಿಚಯ ಮಾಡಿಕೊಂಡಾದರೂ ಮಾತನಾಡುತ್ತೇನೆ. ಯಾರಾದರೂ ಅನಾಮಿಕ ನನಗೆ ಸಂದೇಶ ಕಳುಹಿಸಿದರೆ, ಕರೆ ಮಾಡಿದರೆ, ಸಾಕಪ್ಪಾ ಅನಿಸುವಷ್ಟು ಮಾತಾಡಿ ಅವರ ತಲೆಯನ್ನೇ ತಿನ್ನುತ್ತೇನೆ. ನನ್ನ ಗಂಡ ಕೂಡ ನನ್ನಂತೆ ಮಾತುಗಾರ. ಅವರೂ ನನ್ನ ಕೆಲಸಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಗಂಡ, ಎರಡು ಮಕ್ಕಳೊಂದಿಗೆ ನನ್ನದು ನೆಮ್ಮದಿಯ ಸಂಸಾರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.