ADVERTISEMENT

ಸನ್ನಿಯ ವೆಬ್‌ ಸರಣಿಗೆ ಕಾತರವೋ ಕಾತರ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2018, 19:40 IST
Last Updated 14 ಮಾರ್ಚ್ 2018, 19:40 IST
ಸನ್ನಿಯ ವೆಬ್‌ ಸರಣಿಗೆ ಕಾತರವೋ ಕಾತರ
ಸನ್ನಿಯ ವೆಬ್‌ ಸರಣಿಗೆ ಕಾತರವೋ ಕಾತರ   

‘ಕರಣ್‌ಜಿತ್‌ ಟು ಸನ್ನಿ’ ಸನ್ನಿ ಲಿಯೋನ್‌ ಬಗ್ಗೆ ಅರೆಬರೆ ತಿಳಿದವರೂ ತುದಿಗಾಲಲ್ಲಿ ನಿಂತು ಕಾಯುತ್ತಿರುವ ಹೊಸ ವೆಬ್‌ ಸರಣಿ. ಬರೋಬ್ಬರಿ 41 ನೀಲಿ ಚಿತ್ರಗಳಲ್ಲಿ ನಟಿಸಿ, ಅಂತಹ 25 ಸಿನಿಮಾಗಳನ್ನು ನಿರ್ಮಿಸಿ ನೋಡುಗರ ಎದೆಗೆ ಕಿಚ್ಚು ಹಚ್ಚಿದ ಸುಂದರಿ ಸನ್ನಿ ಖಾಸಗಿ ಬದುಕಿನ ವಾಸ್ತವಗಳ ಅನಾವರಣ ಮಾಡಲಿರುವ ಈ ವೆಬ್‌ ಸರಣಿ ಬಿಡುಗಡೆಗೂ ಮೊದಲೇ ಭಾರಿ ಸುದ್ದಿ ಮತ್ತು ಚರ್ಚೆಗೆ ಗ್ರಾಸವಾಗಿದೆ.

ಕೆಲದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಸಣ್ಣ ಟಿಪ್ಪಣಿ ಬರೆದು ತಮ್ಮ ಕುರಿತ ಸರಣಿ ಸದ್ಯದಲ್ಲೇ ಬರಲಿದೆ ಎಂಬ ಸೂಚನೆ ಕೊಟ್ಟಿದ್ದೇ ತಡ ಅವರ ಟ್ವಿಟರ್‌ ಮತ್ತು ಇನ್‌ಸ್ಟಾಗ್ರಾಂ ಖಾತೆಗೆ ಜನ ಭೇಟಿ ಕೊಡುವುದು ಹೆಚ್ಚಾಗಿದೆ.

‘ನಾನ್ಯಾಕೆ ‘ಸನ್ನಿ’ ಎಂಬ ಹೆಸರನ್ನು ಆರಿಸಿಕೊಂಡೆ, ನನ್ನ ಬದುಕಿನ ಅಸಲಿ ಕತೆ ಏನು ಎಂಬುದನ್ನು ತಿಳಿದುಕೊಳ್ಳುವ ಬಯಕೆಯಿದ್ದರೆ ಜೀ5ರಲ್ಲಿ ಪ್ರಸಾರವಾಗಲಿರುವ ‘ಕರಣ್‌ಜಿತ್‌ ಟು ಸನ್ನಿ’ ವೆಬ್‌ ಸರಣಿಯನ್ನು ನೋಡಿ’ ಎಂದು ಮುಂಗೈಗೆ ಬೆಣ್ಣೆ ಹಚ್ಚುವಂತೆ ಅವರು ಬರೆದುಕೊಂಡಿದ್ದರು.

ADVERTISEMENT

ಇನ್ನೊಂದು ಕಡೆ ಸಂದರ್ಶನದಲ್ಲಿ ಕೆಲವು ಮಾರ್ಮಿಕ ಸಂಗತಿಗಳನ್ನೂ ಸನ್ನಿ ಬಿಚ್ಚುಮನಸ್ಸಿನಿಂದ ಚರ್ಚಿಸಿದ್ದಾರೆ. ‘ನನ್ನ ಮೂಲ ಹೆಸರು ಕರಣ್‌ಜಿತ್‌. ನಾನು ಹುಟ್ಟುವಾಗ ನನ್ನ ತಂದೆ ತಾಯಿ ಕೆನಡಾದಲ್ಲಿದ್ದರು. ನನ್ನ ಅಣ್ಣನ ಹೆಸರು ಸಂದೀಪ್‌. ನನ್ನ ಹೆಸರಿನಲ್ಲಿರುವ ‘ಸನ್ನಿ’ ಅನ್ನೋದು ಅವನ ಮುದ್ದಿನ ಹೆಸರು. ವಿಕಿಪಿಡಿಯಾ ನೋಡಿದರೆ ನನ್ನ ಹೆಸರಿನ ಮೂಲ ಇತಿಹಾಸ ತಿಳಿಯುವುದಿಲ್ಲ. ಅದಕ್ಕಾಗಿ ವಾಸ್ತವವನ್ನು ಹೊರಗೆಡಹಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ.

‘ಕರಣ್‌ಜಿತ್‌ ಟು ಸನ್ನಿ’ ಸರಣಿಯಲ್ಲಿ ಸನ್ನಿಯ ಬಾಲ್ಯ, ಶಿಕ್ಷಣ, ಜರ್ಮನ್‌ ಬೇಕರಿಯಲ್ಲಿ ಶೆಫ್‌ ಆಗಿ ಕೆಲಸ ಮಾಡಿದ ದಿನಗಳು, ನೀಲಿ ಚಿತ್ರಗಳಲ್ಲಿ ನಟಿಸಿದ್ದು ಯಾಕೆ, ಆಗಿನ ಬದುಕು ಹೇಗಿತ್ತು, ಬಾಲಿವುಡ್‌ಗೆ ಬಂದ ಮೇಲೆ, ಸಾಂಸಾರಿಕ ಜೀವನ ನಡೆಸಿ ಮೂವರು ಮಕ್ಕಳ ತಾಯಿಯಾದ ಮೇಲೂ ಬಾಲಿವುಡ್‌ ಮತ್ತು ಸೆಲೆಬ್ರಿಟಿ ಜಗತ್ತು ತಮ್ಮನ್ನು ಹೇಗೆ ನೋಡುತ್ತಿದೆ ಎಂಬ ಮಾರ್ಮಿಕ ಸಂಗತಿಗಳನ್ನು ಅವರು ಬಯಲಿಗೆಳೆಯಲಿದ್ದಾರಂತೆ. ⇒v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.