ADVERTISEMENT

ಸಮರ್ಥನಂನಲ್ಲಿ ಕಾರ್ಪೊರೇಟ್ ಕ್ರಿಕೆಟ್

​ಪ್ರಜಾವಾಣಿ ವಾರ್ತೆ
Published 22 ಮೇ 2012, 19:30 IST
Last Updated 22 ಮೇ 2012, 19:30 IST
ಸಮರ್ಥನಂನಲ್ಲಿ ಕಾರ್ಪೊರೇಟ್ ಕ್ರಿಕೆಟ್
ಸಮರ್ಥನಂನಲ್ಲಿ ಕಾರ್ಪೊರೇಟ್ ಕ್ರಿಕೆಟ್   

ಅಂಧರು, ಅಂಗವಿಕಲರು ಹಾಗೂ ಅವಕಾಶ ವಂಚಿತರ ಸಬಲೀಕರಣಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆ ಸಮರ್ಥನಂ. ಗುಣಮಟ್ಟದ ಶಿಕ್ಷಣ, ವಸತಿ, ಪೌಷ್ಠಿಕ ಆಹಾರ, ವೃತ್ತಿಪರ ತರಬೇತಿ ಮತ್ತು ಪುನರ್ವಸತೀಕರಣದ ಸೌಲಭ್ಯ ಒದಗಿಸುವ ಮೂಲಕ ಅಂಗವಿಕಲರು ಸ್ವಾವಲಂಬಿಗಳಾಗಲು ಸಂಸ್ಥೆ ನೆರವಾಗುತ್ತಿದೆ. ಸಂಸ್ಥೆ ಟಿ.ಇ. ಕನೆಕ್ಟಿವಿಟಿ ಸಹಯೋಗದಲ್ಲಿ ಈಚೆಗೆ `ಸಮರ್ಥನಂ ಕ್ರಿಕೆಟ್ ಕಪ್~ ಪಂದ್ಯಾವಳಿ ಆಯೋಜಿಸಿತ್ತು.

ಪಂದ್ಯಾವಳಿಯಲ್ಲಿ 20 ಕಾರ್ಪೊರೇಟ್ ತಂಡಗಳು ಭಾಗವಹಿಸಿದ್ದವು. `ಆರ್ಕೊಟ್ ಸಿಸ್ಟಂ~ ತಂಡವು ಶೆಲ್ ತಂಡದ ವಿರುದ್ಧ ಜಯ ಗಳಿಸುವ ಮೂಲಕ  ಕಪ್ಪನ್ನು ತನ್ನದಾಗಿಸಿಕೊಂಡಿತು. ಪಂದ್ಯಾವಳಿಯ ಫೈನಲ್ಸ್ ರೋಚಕವಾಗಿತ್ತು. ಗೆದ್ದ ತಂಡದ ಎಲ್ಲ ಸದಸ್ಯರನ್ನು ಅಭಿನಂದಿಸುವ ಸಲುವಾಗಿ ಸಂಸ್ಥೆ ಈಚೆಗೆ ನೃಪತುಂಗ ರಸ್ತೆಯಲ್ಲಿರುವ ರಾಜ್ಯ ಯುವಜನ ಸೇವಾ ಕೇಂದ್ರದ ಯವನಿಕಾ ಸಭಾಂಗಣದಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಗೆದ್ದ ತಂಡಕ್ಕೆ ರೂ.1 ಲಕ್ಷ ಹಾಗೂ ರನ್ನರ್ ಅಪ್ ತಂಡಕ್ಕೆ ರೂ.50 ಸಾವಿರ ನಗದು ಬಹುಮಾನ ನೀಡಿ ಗೌರವಿಸಲಾಯಿತು.

ಕರ್ನಾಟಕ ಬುಲ್ಡೋಜರ್ಸ್‌ನ ಆಟಗಾರ ಹಾಗೂ ಕಳೆದ ಸಿಸಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ (150) ರಾಜೀವ್ ಸಮರ್ಥನಂ ಕ್ರಿಕೆಟ್ ಕಪ್ಪನ್ನು ಗೆದ್ದಂತಹ ತಂಡಕ್ಕೆ ಟ್ರೋಫಿ  ನೀಡಿ ಅಭಿನಂದಿಸಿದರು. ಕಿಂಗ್ಸ್ ಇಲೆವನ್ ಪಂಜಾಬ್ ತಂಡ ಹಾಗೂ ಅಂತರರಾಷ್ಟ್ರೀಯ ಫ್ಯಾಷನ್ ಡಿಸೈನರ್ ಸಂಜನಾ ಜಾನ್ ಸಮರ್ಥನಂ ಸಂಸ್ಥೆಯ ಚಟುವಟಿಕೆಗಳನ್ನು ಬಹುವಾಗಿ ಮೆಚ್ಚಿಕೊಂಡು ಬೆಂಬಲ ಸೂಚಿಸಿದ್ದರು. ಅಂದಹಾಗೆ, ಸಮರ್ಥನಂ ಸಂಸ್ಥೆ ಡಿಸೆಂಬರ್‌ನಲ್ಲಿ `ಟಿ-20 ಅಂಧರ ವಿಶ್ವಕಪ್ ಕ್ರಿಕೆಟ್~ ಕೂಡ ನಡೆಸಲಿದೆ.

ಸಮರ್ಥನಂ ಸಂಸ್ಥೆಯ ಫೌಂಡರ್ ಟ್ರಸ್ಟಿ ಮಹಾಂತೇಶ ಜಿ.ಕೆ, ಪಂದ್ಯಾವಳಿಯ ಮುಖ್ಯ ಪ್ರಾಯೋಜಕ ರಾಜಕುಮಾರ, ಬೆಂಗಳೂರು ನಗರ ಹೆಚ್ಚುವರಿ ಜಿಲ್ಲಾ ಕಮಿಷನರ್ ಶ್ರೀನಿವಾಸ ಮತ್ತು ಕರ್ನಾಟಕ ಟೂರಿಸ್ಟ್ ಫೋರಂ ಅಧ್ಯಕ್ಷ ಸಿ.ಬಿ.ರಾಮಕುಮಾರ ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.