ADVERTISEMENT

ಸಾಕು...ಇನ್ನಿದು ನಡಿಯಲ್ಲ

ಸುಶೀಲಾ ಡೋಣೂರ
Published 24 ಮೇ 2018, 19:30 IST
Last Updated 24 ಮೇ 2018, 19:30 IST
ದೀಪಿಕಾ ಪಡುಕೋಣೆ
ದೀಪಿಕಾ ಪಡುಕೋಣೆ   

ಇದು ಇಂದು–ನಿನ್ನೆಯ ಮಾತಲ್ಲ. ಇಂದು ದನಿ ಎತ್ತಿದರೆ ನಾಳೆ ಸರಿ ಹೋಗುವುದೂ ಇಲ್ಲ. ಆದರೆ ಇಂತಹ ಒಂದು ರೂಢಿಗತ ಪ್ರವೃತ್ತಿಯನ್ನು ಪ್ರಶ್ನಿಸಬೇಕೆನ್ನುವ ಜರೂರು ಸೃಷ್ಟಿಯಾಗಿದೆಯಲ್ಲ, ಅದು ಮುಖ್ಯ. ಸಂಭಾವನೆ ಸಮಾನತೆಯ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಿದ್ದು ಈ ಬಾರಿಯ ಕಾನ್‌ ಚಿತ್ರೋತ್ಸವ. ಪ್ರತಿ ವರ್ಷ ಬೆಡಗು–ಬಿನ್ನಾಣಕ್ಕೆ, ವೈಯಾರ–ವೈಭೋಗಕ್ಕೆ ಸಾಕ್ಷಿಯಾಗುವ ‘ರೆಡ್‌ ಕಾರ್ಪೆಟ್‌’ ಮೇಲೆ ಈ ಬಾರಿ ಹೋರಾಟದ ಕಿಡಿ ಹೊತ್ತಿಕೊಂಡಿದ್ದು ವಿಶೇಷ.

ತುತ್ತು ಅನ್ನಕ್ಕೆ ಪರದಾಡುವ ದಿನಗೂಲಿ ಕಾರ್ಮಿರಿಂದ ಹಿಡಿದು, ಸಾವಿರಾರು ಕೋಟಿ ರೂಪಾಯಿ ಒಡತಿಯರನ್ನೂ ಕಾಡಿರುವ ಸಂಗತಿ ಇದು. ಅಷ್ಟಕ್ಕೂ ಮನರಂಜನಾ ಕ್ಷೇತ್ರಕ್ಕೆ ಈ ತರತಮವೂ ಹೊಸದಲ್ಲ, ಪ್ರಶ್ನಿಸುವ ದನಿಯೂ ಹೊಸದಲ್ಲ. ಅನೇಕ ದಶಕಗಳಿಂದ ಸಾಕಷ್ಟು ಜನ ಬಾಲಿವುಡ್‌–ಹಾಲಿವುಡ್‌ ಬೆಡಗಿಯರು ಈ ಬಗ್ಗೆ ಗುಟುರು ಹಾಕುತ್ತಲೇ ಬಂದಿದ್ದಾರೆ. ಆದರೆ ಈಗ ದನಿ ಎತ್ತಿರುವ ಜಾಗ ಹೊಸದು ಮತ್ತು ಇದೇ ಕಾರಣಕ್ಕೆ ಈ ದನಿ ಗಟ್ಟಿಗೊಳ್ಳುತ್ತಿರುವುದು. ಕನ್ನಡವೂ ಸೇರಿದಂತೆ ಪ್ರಾದೇಶಿಕ ಭಾಷಾ ನಟಿಯರು ಸಹ ಸಾಮಾಜಿಕ ಜಾಲತಾಣಗಳಲ್ಲಿ ಸಂಭಾವನೆಯ ತರತಮದ ವಿರುದ್ಧ ಮಾತಾಡುತ್ತಿದ್ದಾರೆ. ‘ಮೀ ಟೂ’ ಎನ್ನುವಂತೆ ಅಂತಹ ಅನುಭವಗಳನ್ನು ಸೇರಿಸುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ನಟಿಯರು, ನಿರ್ಮಾಪಕಿಯರು, ನಿರ್ದೇಶಕಿಯರು ಸೇರಿ 80ಕ್ಕೂ ಹೆಚ್ಚಿನ ವೃತ್ತಿಪರರು ಕಾನ್‌ ಚಿತ್ರೋತ್ಸವದಲ್ಲಿ ಈ ಹೋರಾಟದ ದೀವಿಗೆಯನ್ನು ಹೊತ್ತಿಸಿದ್ದೇ ತಡ, ಅದೆಷ್ಟೊ ವರ್ಷಗಳಿಂದ ಆಂತರ್ಯದಲ್ಲೇ ಹೊಗೆಯಾಡುತ್ತಿರುವ ಕುದಿಗೆ ಮೂರ್ತ ರೂಪ ಸಿಕ್ಕಂತಾಗಿದೆ. ಫ್ರಾನ್ಸ್‌ನಿಂದ ಮುಂಬೈ ತಲುಪಿ, ಅಲ್ಲಿಂದ ಬೆಂಗಳೂರಿಗೂ ಹರಡಿರುವ ಈ ಸಮಾನತೆಯ ಕಿಡಿಗೆ ಕನ್ನಡದ ಕಿರುತೆರೆ–ಹಿರಿತೆರೆ–ರಂಗಭೂಮಿಯ ನಟಿಯರೂ ದನಿಗೂಡಿಸುತ್ತಿದ್ದಾರೆ.

‘ನಿಜ, ನನಗಂತೂ ಎರಡು ದಶಕಗಳಿಂದ ಅರ್ಥವಾಗದೇ ಉಳಿದ ಬಹುದೊಡ್ಡ ಪ್ರಶ್ನೆ ಇದು. ಕೆಲಸ ಮಾಡಿಸಿಕೊಳ್ಳುವಾಗ ಇರುವ ಉತ್ಸಾಹ ಒಪ್ಪಿಕೊಂಡ ಹಣವನ್ನು (ಗೌರವಧನ ಅನ್ನುವುದೂ ದಂಡ) ಕೊಡುವಾಗ ಇರುವುದಿಲ್ಲ. ಅದರಲ್ಲೂ ಹೆಣ್ಣು ಮಕ್ಕಳು ಎಂದರೆ ಔದಾರ್ಯಕ್ಕೆ ಕೆಲಸ ಕೊಟ್ಟವರಂತೆ ಆಡುತ್ತಾರಲ್ಲ, ಅವರಿಗೂ ಜವಾಬ್ದಾರಿಗಳಿರುತ್ತವೆ, ಹೊಟ್ಟೆಪಾಡಿಗಾಗಿಯೇ ಅವರೂ ಕೆಲಸ ಮಾಡುವುದು ಅಂತ ಯಾಕೆ ತಿಳಿಯುವುದಿಲ್ಲ!’ ಎನ್ನುವ ಅಸಮಾಧಾನದ ನೋವು ಹೊರಹಾಕಿದ್ದಾರೆ ರಂಗಭೂಮಿ ಹಾಗೂ ಕಿರುತೆರೆಯಲ್ಲಿ ಸಾಕಷ್ಟು ಕೆಲಸ ಮಾಡಿರುವ ಮಾಧುರಿ ಕೆ. ಶಿವಣಗಿ.‌

ADVERTISEMENT

‘ನ್ಯಾಯವಾಗಿ ಕೆಲಸ ಮಾಡಿದವರಿಗೆ ಒಪ್ಕೊಂಡ ಸಂಭಾವನೆಯನ್ನು ಸಮಯಕ್ಕೆ ಸರಿಯಾಗಿ ಕೊಡಬೇಕು ಅನ್ನೊ ಸಾಮಾನ್ಯ ಜ್ಞಾನ ಇರದಂತೆ ಇರ್ತಾರೆ. ಕೆಲಸ ಮಾಡಿಸಿಕೊಳ್ಳುವಾಗ ಮನೆ ಬಾಗಿಲಿಗೆ ಹೊತ್ತಲ್ಲದ ಹೊತ್ತಿಗೆ ಬರ್ತಾರೆ ಜನ, ಅದೇ ಕೆಲಸ ಆದ್ಮೇಲೆ ಹಂಗೇ ಮಂಗ ಮಾಯವಾಗ್ತಾರೆ...’ ಎಂದು ಅವರು ಫೇಸ್ಬುಕ್‌ನಲ್ಲಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ‘ನನಗೂ ಇಂಥದ್ದೇ ಅನುಭವ ಆಗಿದ್ದಿದೆ’ ಎಂದು ದನಿಗೂಡಿಸುವವರ ಸಂಖ್ಯೆ ಬೆಳೆಯುತ್ತಲೇ ಇದೆ.

ಕಿರುತೆರೆಯಲ್ಲಿ ಮಾತ್ರ ಆಶಾವಾದದ ಕಿರಣವೊಂದಿದೆ. ಇಲ್ಲಿ ಸಂಭಾವನೆಯಲ್ಲಿ ತರತಮದ ಮಾತೇ ಇಲ್ಲವೆನ್ನುವಂತಿದೆ.

‘ನಾ ಕಂಡಂತೆ ಕಿರುತೆರೆಯಲ್ಲಿ ಈ ಪ್ರವೃತ್ತಿ ಇಲ್ಲ. ಇಲ್ಲಿ ನಾಯಕಿಗೇ ಬೆಲೆ ಜಾಸ್ತಿ, ಪ್ರಾಮುಖ್ಯತೆ ಇರೋದು ಸಹ ಹೆಣ್ಮಕ್ಕಳಿಗೇ. ನಮ್ಮ ಪಾತ್ರ ಹಾಗೂ ಸಾಮರ್ಥ್ಯದ ಅನ್ವಯ ನಮ್ಮ ಸಂಭಾವನೆ ಇರುತ್ತದೆ. ಹೆಣ್ಣು–ಗಂಡೆಂಬ ವ್ಯತ್ಯಾಸ ನನಗಂತೂ ಕಂಡಿಲ್ಲ’ ಎನ್ನುವುದು ಹಿರಿಯ ನಟಿ ದೀಪಾ ರವಿಶಂಕರ್‌ ಅವರ ಅಭಿಮತ.

* * *
ಕಳೆದೊಂದು ದಶಕದಿಂದ ಈಚೆಗೆ ವೇತನ ತರತಮದ ಚರ್ಚೆ ಬಾಲಿವುಡ್‌ನಲ್ಲೂ ಬಿಸಿ ಏರಿದೆ. ನಿರ್ಮಾಪಕ ಕರಣ್ ಜೋಹರ್ ‘ಕಲ್ ಹೋ ನ ಹೋ’ ಚಿತ್ರದಲ್ಲಿ ನಟ ಶಾರುಖ್ ಖಾನ್ ಅವರ ಸರಿಸಮ ಸಂಭಾವನೆ ಕೇಳಿದ್ದಕ್ಕೆ ನಟಿ ಕರೀನಾ ಕಪೂರ್ ಅವರನ್ನು ಕೈಬಿಟ್ಟಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಅಷ್ಟೇ ಅಲ್ಲ, ನಂಬರ್‌ ಒನ್‌ ಪಟ್ಟದ ನಟಿಯರು ಸಹ ತಮಗೆ ಸಲ್ಲಬೇಕಿರುವ ಸಂಭಾವನೆಯನ್ನು ಪಡೆಯಲು ಹೋರಾಟ ಮಾಡುತ್ತಿದ್ದಾರೆ, ಮತ್ತದನ್ನು ಪ್ರಶ್ನಿಸುವ ದಿಟ್ಟತನವನ್ನೂ ಪ್ರದರ್ಶಿಸುತ್ತಿದ್ದಾರೆ. ನಟಿ ದೀಪಿಕಾ ಪಡುಕೋಣೆ, ಕಂಗನಾ ರನೋಟ್‌, ಪ್ರಿಯಾಂಕಾ ಚೋಪ್ರಾ, ಸೋನಾಕ್ಷಿ ಸಿನ್ಹಾ, ಸೋನಂ ಕಪೂರ್‌, ಅನುಷ್ಕಾ ಶರ್ಮಾ, ಅದಿತಿ ರಾವ್ ಹೈದರಿ… ಹೀಗೆ ವೇತನ ತರತಮದ ಬಗ್ಗೆ ಮಾತಾಡಿದವರ ದೊಡ್ಡ ಸಾಲೇ ಇದೆ. 

*
ಮನೋಭಾವ ಬದಲಾಗಬೇಕು...
ಇದು ಇಷ್ಟು ಸುಲಭಕ್ಕೆಲ್ಲ ಸರಿ ಹೋಗಲ್ಲ ಕಣ್ರಿ, ಸಿನಿಮಾ ರಂಗದಲ್ಲಿ ಮೊದಲು ತಲೆಗಳು ಸರಿ ಹೋಗ್ಬೇಕು. ಹೆಣ್ಮಕ್ಕಳ ಸಾಮರ್ಥ್ಯಕ್ಕೆ, ಪ್ರತಿಭೆಗೆ ಸೂಕ್ತವಾದ ಪಾತ್ರಗಳನ್ನು ಹೆಣೆಯುವ ಮನಸ್ಥಿತಿಯೇ ಇಲ್ಲಿನವರಿಗೆ ಬಂದಿಲ್ಲ. ಇನ್ನು ಸಮಾನ ಸಂಭಾವನೆ ಕೇಳಿದರೆ ಆಗುತ್ತೆಯೇ? ನಮಗಿಂತ ಮೂರು ಗೇಣು ಎತ್ತರವಿದ್ದ ಮಾತ್ರಕ್ಕೆ ಅವರು ಸೂಪರ್‌ ಹೀರೊ ಆಗಿ ಬಿಡ್ತಾರೆ. ಅವರಿಗಂತಾನೇ ಪಾತ್ರಗಳನ್ನ ಸೃಷ್ಟಿಸ್ತಾರೆ, ಕಥೆಗಳನ್ನ ಹೆಣಿತಾರೆ, ನಮ್ಮನ್ನ ಮಾತ್ರ ಅವರ ಹಿಂದೆ ಅಲೆಯೊ ಪಾತ್ರಕ್ಕೆ ಸೀಮಿತವಾಗಿಟ್ಟು ಬಿಡ್ತಾರೆ. ವಿಲನ್‌ ಅಟ್ಟಿಸಿಕೊಂಡು ಬಂದ್ರೆ ಹೀರೊಯಿನ್‌ ಓಡಿ ಬಂದು ಹೀರೊನ ಹಿಂದೆ ಅಡಗಿಕೊಳ್ಳಬೇಕು. ಇದೇ ಆಗ್ಹೋಯ್ತು… ಪಾತ್ರಗಳಲ್ಲಿಯೇ ಸಮಾನತೆ ಬರ್ತಾ ಇಲ್ಲ, ಈ ಇಂಡಸ್ಟ್ರಿಯಿಂದ ಬೇರೆ ಯಾವ ವಿಧದ ಸಮಾನತೆಯನ್ನು ನಿರೀಕ್ಷಿಸಲು ಸಾಧ್ಯ? ಸಿನಿಮಾ ಸೋತರೂ, ಗೆದ್ದರೂ ಹೀರೊಗೆ ತಲುಪಬೇಕಾದ್ದು ತಲುಪುತ್ತೆ, ಆದ್ರೆ ಹೀರೊಯಿನ್‌ ವಿಷಯಕ್ಕೆ ಬಂದಾಗ ಮಾತ್ರ ಇಲ್ಲದ ನೆಪಗಳು…
-ಭಾವನಾ, ನಟಿ

*
ಮನರಂಜನಾ ಕ್ಷೇತ್ರದಲ್ಲಿ ಸಂಭಾವನೆಯ ತರತಮದ ವಿರುದ್ಧ ಹೋರಾಡುವುದರಲ್ಲಿ ತಪ್ಪೇನಿಲ್ಲ. ನಮ್ಮ ಪ್ರತಿಭೆ, ನಮ್ಮ ಶ್ರಮಕ್ಕೆ ಸೂಕ್ತವೆನಿಸುವ ಸಂಭಾವನೆಯನ್ನೇ ಕೇಳಿ. ಒಂದೆರಡು ಅವಕಾಶ ತಪ್ಪಿದರೂ ಸರಿ, ರಾಜೀ ಮಾಡಿಕೊಳ್ಳಬೇಡಿ.
-ದೀಪಿಕಾ ಪಡುಕೋಣೆ

*
ನಾನು ನನ್ನ ಸಹನಟರ ಸರಿಸಮ ಸಂಭಾವನೆ ಪಡೆಯುವ ಅರ್ಹತೆ ಹೊಂದಿದ್ದೇನೆ. ಯಾವ ಸಿನಿಮಾ ಗೆಲ್ಲುತ್ತದೆ ಎಂದು ಯಾರೂ ಸಹ ಗ್ಯಾರಂಟಿ ಕೊಡಲು ಸಾಧ್ಯವಿಲ್ಲ. ಹಾಗಿದ್ದಾಗ ಈ ತರತಮ ಯಾಕೆ?
-ಕಂಗನಾ ರನೋಟ್‌

*
ಸಮಾನ ಸಾಮರ್ಥ್ಯವಿದ್ದರೂ ನಮಗೆ ನಟರಿಗಿಂತ ಕಡಿಮೆ ಸಂಭಾವನೆ ನೀಡುತ್ತಾರಲ್ಲ, ಏಕೆಂದು ನನಗಂತೂ ಅರ್ಥವಾಗುತ್ತಿಲ್ಲ.
-ಅದಿತಿ ರಾವ್ ಹೈದರಿ

*
‘ಹೆಣ್ಣುಮಕ್ಕಳ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಗೆಲ್ಲುತ್ತಿವೆ. ಆದರೆ ನಾವು ಈಗಲೂ ಸಂಭಾವನೆ ಮತ್ತು ಬಜೆಟ್ ಸಮಾನತೆಯಲ್ಲಿ ಬಹಳ ದೂರವಿದ್ದೇವೆ.
-ಸ್ವರಾ ಭಾಸ್ಕರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.