ADVERTISEMENT

ಸಿಟಿಜನ್

​ಪ್ರಜಾವಾಣಿ ವಾರ್ತೆ
Published 27 ಜನವರಿ 2012, 19:30 IST
Last Updated 27 ಜನವರಿ 2012, 19:30 IST

ವೃಷಭಾವತಿ ಈಗಿನಂತಾಗದ ದಿನಗಳವು. ಮಳೆಗಾಲ ಬಂತೆಂದರೆ ಅದು ಉಕ್ಕಿ ಹರಿಯುತ್ತಿತ್ತು. ಅದರೊಳಗೆ ಸುಳಿಗಳೂ ಇದ್ದವು. ಇಂಥದ್ದೊಂದು ಪ್ರವಾಹ ಹೊತ್ತಿನಲ್ಲಿ ಕಲ್ಯಾಣಪ್ಪನಿಗೆ ನದಿಯಲ್ಲಿ ಸ್ನಾನ ಮಾಡುವ ಮನಸ್ಸಾಯಿತು.

ಜನರೆಲ್ಲಾ ಪ್ರವಾಹದ ತೀವ್ರತೆಯನ್ನು ನೋಡುತ್ತಾ ನಿಂತಿದ್ದರೆ ಕಲ್ಯಾಣಪ್ಪ ನದಿಗೆ ಹಾರಿದ. ಜನರೆಲ್ಲಾ ಗಾಬರಿಯಾದರು. ಸಹಾಯಕ್ಕೆ ಬೆಸ್ತರನ್ನು ಕರೆದರು. ಅವರು ನದಿಗೆ ದೋಣಿ ಇಳಿಸುವ ಹೊತ್ತಿಗೆ ಕಲ್ಯಾಣ ಸುಳಿಯೊಂದಕ್ಕೆ ಸಿಲುಕಿ ಗರಗರ ತಿರುಗುತ್ತಿದ್ದ. ಕೆಲವರು ಕಲ್ಯಾಣಪ್ಪನದ್ದು ಜಲಸಮಾಧಿಯ ಪ್ರಯತ್ನ ಎಂದು ಅದಕ್ಕೆ ಯೋಗದ ವ್ಯಾಖ್ಯಾನ ಕೊಡುತ್ತಿದ್ದರು. ಕಲ್ಯಾಣಪ್ಪ ನೀರಿನ ಹೊಡೆತಕ್ಕೆ ಮೈಕೊಟ್ಟು ಕೊಳೆ ತೊಳೆದುಕೊಂಡ. ಜನ ಕಲ್ಯಾಣಪ್ಪ ಕೊಚ್ಚಿ ಹೋಗುತ್ತಾನೆಂದುಕೊಂಡರು. ಕಲ್ಯಾಣಪ್ಪನ ಸ್ನಾನ ಮುಗಿಯಿತು ಮೇಲೆದ್ದು ಬಂದ.

ನೋಡುಗರೆಲ್ಲಾ `ನೀನು ಪ್ರವಾಹವನ್ನು ಮಣಿಸಿದ ಮಹಾತ್ಮ~ ಎಂದರು. ಕಲ್ಯಾಣಪ್ಪ ಗಹಗಹಿಸಿ ನಕ್ಕು `ನಾನು ನದಿಯೊಂದಿಗೆ ಸೆಣಸಲಿಲ್ಲ. ಅದರ ಹರಿವಿನಲ್ಲಿ ಸಾಗಿದೆ ಅಷ್ಟೆ~ ಎಂದ.

***
ಕಲ್ಯಾಣಪ್ಪನಿಗೆ ರಾತ್ರಿ ಹೊತ್ತಿನಲ್ಲಿ ಬ್ರಿಗೇಡ್ ರೋಡ್ ಸುತ್ತುವ ಹುಚ್ಚು ಬಹಳ. ಒಂದು ರಾತ್ರಿ ಬಾರುಗಳೆಲ್ಲಾ ಮುಚ್ಚಿದ ಮೇಲೆಯೂ ಯುವಕನೊಬ್ಬ ಫುಟ್‌ಪಾತ್‌ನಲ್ಲಿ ಬಾಟಲು ಹಿಡಿದುಕೊಂಡು ಕುಳಿತಿದ್ದ. ಕಲ್ಯಾಣಪ್ಪ ಎಂದಿನ ಕಕ್ಕುಲಾತಿಯೊಂದಿಗೆ ಯೋಗಕ್ಷೇಮ ವಿಚಾರಿಸಿದ.

ಆ ಯುವಕ ಹೇಳಿದ `ಅವಳು ನನ್ನನ್ನು ಪ್ರೀತಿಸುತ್ತಿಲ್ಲ~ ಎಂದ. ಕಲ್ಯಾಣಪ್ಪ ಮುಗುಳ್ನಕ್ಕು `ನಾಳೆ ಸೂರ್ಯನುದಯಿಸುವಾಗ ಎದ್ದು ಹೋಗಿ ಅವಳನ್ನು ಭೇಟಿ ಮಾಡಿ `ನನ್ನನ್ನು ಪ್ರೀತಿಸಲು ನಿನಗಿಂತ ನಾನೇ ಸಮರ್ಥ~ ಎಂದು ಹೇಳು ಎಂದ. ಯುವಕ ಬಾಟಲು ಬಿಟ್ಟು ಆಟೋ ರಿಕ್ಷಾ ಹುಡುಕಲಾರಂಭಿಸಿದ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.