ADVERTISEMENT

ಸಿಟಿಜೆನ್

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 10 ಫೆಬ್ರುವರಿ 2012, 19:30 IST
Last Updated 10 ಫೆಬ್ರುವರಿ 2012, 19:30 IST
ಸಿಟಿಜೆನ್
ಸಿಟಿಜೆನ್   

ಒಳಬರುವುದು
ಕೆಂಪೇಗೌಡರು ಬೆಂಗಳೂರಿನ ನಾಲ್ಕು ದಿಕ್ಕಿಗೂ ಒಂದೊಂದು ಗೋಪುರ ನಿರ್ಮಿಸಿ ಬೆಂಗಳೂರಿನ ಸೀಮೆಗಳನ್ನು ನಿರ್ಧರಿಸಿದಾಗ ಕಲ್ಯಾಣಪ್ಪನಿಗೆ ಸಿಟ್ಟು ಬಂದದ್ದು ಇತಿಹಾಸ. ಆಗ ಹೊರಗೆ ಹೋದ ಕಲ್ಯಾಣಪ್ಪ ಈ ನಾಲ್ಕು ಗೋಪುರಗಳ ಒಳಗಿರುವ ಬೆಂಗಳೂರಿನ ಒಳಕ್ಕೆ ಯಾವತ್ತೂ ಬಂದದ್ದಿಲ್ಲವಂತೆ.
 
ಗುರು ಆಲ್-ಹಾಲ್ ಮತ್ತು ಟಾ-ರಸರ ಆಶ್ರಮಗಳಲ್ಲಿ ಅಭ್ಯಾಸ ನಡೆಸಿ ಹಿಂದಿರುಗಿದ ಕಲ್ಯಾಣಪ್ಪನ ಬಳಿ ಭಕ್ತನೊಬ್ಬ `ನೀವೇಕೆ ಬೆಂಗಳೂರಿನ ಒಳಕ್ಕೆ ಬರುತ್ತಿಲ್ಲ?~ ಎಂದು ಕೇಳಿದನಂತೆ. ಅದಕ್ಕೆ ಕಲ್ಯಾಣಪ್ಪ ಉತ್ತರಿಸಿದ್ದು ಹೀಗೆ.
`ನಾನು ಹೊರಗಿದ್ದರೆ ತಾನೇ ಒಳಗೆ ಬರುವುದು...!~

***
ಖಾಲಿ ಜಾಗ
ಜಾಗತೀಕರಣದ ಪ್ರಭಾವವನ್ನು ಮಡಕೆ ಮತ್ತು ಪ್ಲಾಸ್ಟಿಕ್ ಬಿಂದಿಗೆಗಳ ಮೂಲಕ ಸಂಕೇತಿಸುವ ಕಲಾತ್ಮಕ ಚಿತ್ರವೊಂದರ ಪ್ರದರ್ಶನ ಸುಚಿತ್ರಾ ಫಿಲ್ಮ್ ಸೊಸೈಟಿಯಲ್ಲಿ ನಡೆಯುತ್ತಿತ್ತು. ಮಡಕೆ ಮಾಡುವುದರ ಕುರಿತಂತೆ ಬಹಳ ಕುತೂಹಲವಿದ್ದ ಕಲ್ಯಾಣಪ್ಪನೂ ಹೋಗಿ ಒಳಗೆ ಕುಳಿತ.
 
ಪ್ರದರ್ಶನ ಮುಗಿಯಿತು. ನಿರ್ದೇಶಕರು ಮಡಕೆಯನ್ನು ಸಾಂಪ್ರದಾಯಿಕ ಆರ್ಥಿಕತೆಯ ರೂಪಕವೆಂಬಂತೆ ಬಳಸಿರುವುದು ಹಾಗೆಯೇ ಪ್ಲಾಸ್ಟಿಕ್ ಬಿಂದಿಗೆಯನ್ನು ಜಾಗತೀಕರಣದ ರೂಪಕವಾಗಿ ಚಿತ್ರಿಸಿರುವುದನ್ನು ಮೆಚ್ಚಿಕೊಂಡು ಅನೇಕರು ಮಾತನಾಡಿದರು. ಚರ್ಚೆಯ ಕೊನೆಯಲ್ಲಿ ಕಲ್ಯಾಣಪ್ಪ ಎದ್ದು ನಿಂತು ತನ್ನದೊಂದು ಪ್ರಶ್ನೆ ಇದೆ ಎಂದ.

ಬುದ್ಧಿಜೀವಿಗಳೆಲ್ಲರೂ ಕಲ್ಯಾಣಪ್ಪನನ್ನು ನೋಡಿದರು. ಸಾಂಪ್ರದಾಯಿಕ ಆರ್ಥಿಕತೆಯ ಪ್ರತೀಕದಂತೆ ಕಾಣುತ್ತಿದ್ದ ಕಲ್ಯಾಣಪ್ಪನನ್ನು ಕಂಡು ಎಲ್ಲರಿಗೂ ಸಂತೋಷವೇ ಆಯಿತೆಂಬಂತೆ ಕಾಣಿಸುತ್ತದೆ. ಎಲ್ಲರೂ `ಕೇಳಿ... ಕೇಳಿ..~ ಎಂದು ಪ್ರೋತ್ಸಾಹಿಸಿದರು.
ಕಲ್ಯಾಣಪ್ಪ ಕೇಳಿದ: `ಮಡಕೆಯೊಳಗೆ ಖಾಲಿ ಜಾಗವನ್ನು ಸೃಷ್ಟಿಸುವುದಕ್ಕೂ ಪ್ಲಾಸ್ಟಿಕ್ ಬಿಂದಿಗೆಯೊಳಗೆ ಅದನ್ನು ಸೃಷ್ಟಿಸುವುದಕ್ಕೂ ಏನಾದರೂ ವ್ಯತ್ಯಾಸವಿದೆಯೇ ?~

ಬುದ್ಧಿಜೀವಿ ನಿರ್ದೇಶಕರೂ ನೋಡಲು ಬಂದ ಬುದ್ಧಿಜೀವಿಗಳೂ ಒಟ್ಟೊಟ್ಟಿಗೇ ಈ ಪ್ರಶ್ನೆಯ ಕುರಿತು ತಲೆಕೆಡಿಸಿಕೊಂಡರು. `ಸಾಂಪ್ರದಾಯಿಕ ಆರ್ಥಿಕತೆಯ ಸಮಸ್ಯೆ ಇರುವುದೇ ಈ ಬಗೆಯ ಪ್ರಶ್ನೆಗಳಲ್ಲಿ.

ತಮ್ಮ ಅಸ್ತಿತ್ವದ ಅನನ್ಯತೆಯನ್ನು ಸಾಂಪ್ರದಾಯಿಕ ಆರ್ಥಿಕತೆಯಲ್ಲಿ ಕಂಡುಕೊಂಡವರಿಗೆ ಜಾಗತೀಕರಣ ತೆರೆದಿಡುವ ಅವಕಾಶಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗದೇ ಹೋಗಿರುವುದೇ ಈ ಕಾರಣದಿಂದ...~ ಎಂದು ಒಬ್ಬರು ಉತ್ತರ ನೀಡಲು ಆರಂಭಿಸಿದರು.

ಅವರ ಮಾತಿನಿಂದ ಕಂಗಾಲಾದ ಕಲ್ಯಾಣಪ್ಪ ಅದನ್ನು ಅರ್ಧದಲ್ಲಿಯೇ ತಡೆದು `ನನಗೆ ಖಾಲಿ ಜಾಗ ಏಕೆ ಮುಖ್ಯವಾಗುತ್ತಿದೆ ಎಂದರೆ ನನಗೆ ಬೇಕಾಗಿದ್ದನ್ನು ಅಲ್ಲಿ ಮಾತ್ರ ತುಂಬಿಸಲು ಸಾಧ್ಯ~.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT