ಅಲ್ಲಿ ಎಲ್ಲರಲ್ಲೂ ತುಂಬಿದ ಉತ್ಸಾಹ. ಕತ್ತಲಿನಲ್ಲೂ ಬೆಳಕು ಹುಡುಕುವ ಇವರ ಪರಿ ಎಲ್ಲರಿಗೂ ಸ್ಫೂರ್ತಿ. ತಮ್ಮದೇ ತಂಡ ಕಟ್ಟಿಕೊಂಡು ದೇಶ ವಿದೇಶಗಳಲ್ಲಿ ನೃತ್ಯ ಪ್ರದರ್ಶನ ನೀಡುತ್ತಾ ಬಂದಿರುವ `ಸುನಾದ~ ತಂಡ ಇದೀಗ ಆಗ್ನೇಯ ಏಷ್ಯಾದಲ್ಲಿ ತನ್ನ ಪ್ರದರ್ಶನ ನೀಡಲು ಸಜ್ಜಾಗಿದೆ.
`ಸಮರ್ಥನಂ ಟ್ರಸ್ಟ್~ನ ಸಾಂಸ್ಕೃತಿಕ ತಂಡದ ಹೆಸರು `ಸುನಾದ~. ಕೆಲವು ವರ್ಷಗಳ ಹಿಂದಷ್ಟೇ ಸ್ಥಾಪನೆಗೊಂಡ ಈ ಸಂಸ್ಥೆ ಅಂಧರಿಗೆ ಆತ್ಮವಿಶ್ವಾಸ ತುಂಬಲೆಂದೇ ಹುಟ್ಟಿಕೊಂಡಿದ್ದು. ಅಂಧರಲ್ಲಿರುವ ಪ್ರತಿಭೆ ಪ್ರೋತ್ಸಾಹಿಸಿ ಬೆಳಕಿಗೆ ತರುವ ನಿಟ್ಟಿನಲ್ಲಿ ಈ ಸಂಸ್ಥೆ ರೂಪುಗೊಂಡಿತ್ತು. ಜೊತೆಗೆ ಆರ್ಥಿಕವಾಗಿ ಹಿಂದುಳಿದ ಯುವಜನಾಂಗವನ್ನೂ ತನ್ನಲ್ಲಿ ಸೇರಿಸಿಕೊಂಡು ಅವಕಾಶ ಒದಗಿಸುತ್ತಾ ಬಂದಿದೆ.
ಶಾಸ್ತ್ರೀಯ, ಜಾನಪದ ಇನ್ನಿತರ ನೃತ್ಯ ಪ್ರಕಾರಗಳನ್ನೂ ಸಮರ್ಥವಾಗಿ ಪ್ರದರ್ಶಿಸುವ ಈ ನೃತ್ಯತಂಡ ಕಳೆದ ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ಅಮೆರಿಕದಲ್ಲಿ 10 ಪ್ರದರ್ಶನ ನೀಡಿತ್ತು. ಕೇವಲ ನೃತ್ಯ ಮಾತ್ರವಲ್ಲ, ಸಂಗೀತಕ್ಕೂ ಇಲ್ಲಿ ನೆಲೆಯಿದೆ. ದೇಶ ವಿದೇಶಗಳಲ್ಲಿ ನೃತ್ಯ ಮತ್ತು ಸಂಗೀತ ಪ್ರದರ್ಶನ ನೀಡಲು ಅಂಧರಿಗೆ ವಿಶೇಷ ತರಬೇತಿ ನೀಡುತ್ತದೆ ಸಂಸ್ಥೆ.
ಇವರ ಈ ಸಾಮರ್ಥ್ಯಕ್ಕೆ ಹಂಪಿ ಉತ್ಸವ, ವಿಶ್ವ ಕನ್ನಡ ಸಮ್ಮೇಳನದಂತಹ ಕಾರ್ಯಕ್ರಮಗಳು ನಿರಂತರವಾಗಿ ಅವಕಾಶ ನೀಡಿವೆ. ರಾಷ್ಟ್ರೀಯ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿಯನ್ನೂ ಪಡೆದುಕೊಂಡಿದೆ. ಅಂಧತ್ವ ಮೀರಿ ಸಾಮರ್ಥ್ಯ ಪ್ರದರ್ಶಿಸುವ ಈ ತಂಡ ಭರತನಾಟ್ಯ, ಕೋಲಾಟ, ದೀಪಾಂಜಲಿ, (ದೀಪಗಳೊಂದಿಗೆ ನೃತ್ಯ), ವಂದೇ ಮಾತರಂ, ಶಿವಂ ಶಂಕರಂ ನೃತ್ಯ, ವೈಷ್ಣವ್ ಜನತೋ ಮೊದಲಾದ ನೃತ್ಯ ಪ್ರಕಾರಗಳನ್ನು ಪ್ರದರ್ಶಿಸುವುದರಲ್ಲಿ ಪಳಗಿದೆ.
ಸಾಂಸ್ಕೃತಿಕ ಸಂಬಂಧವನ್ನು ಗಟ್ಟಿಗೊಳಿಸಲು `ಸುನಾದ~ ಪ್ರಯತ್ನಿಸುತ್ತಿದೆ. ವಿವಿಧ ದೇಶಗಳಲ್ಲಿ ಸಂಚರಿಸುತ್ತಾ ಬಗೆಬಗೆಯ ಜನರನ್ನು ಭೇಟಿ ಮಾಡುತ್ತಾ ತಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದ್ದಾರೆ ತಂಡದ ಸದಸ್ಯರು.
ಅಷ್ಟೇ ಅಲ್ಲ, ಇಂತಹ ಕಾರ್ಯಕ್ರಮಗಳು ಅವರ ಆರ್ಥಿಕ ಸ್ಥಿತಿ ಸುಧಾರಿಸಲು ಕೂಡ ಸಹಕಾರಿಯಾಗಿದೆ. ಈಗ ಈ ತಂಡ ಆಗ್ನೇಯ ಏಷ್ಯಾದ ದೇಶಗಳನ್ನು ಸುತ್ತುತ್ತಿದೆ. ಮಾಹಿತಿಗೆ ಸಂಪರ್ಕಿಸಿ 26582570, 9449864788.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.