ADVERTISEMENT

ಸೋಲ್‌ಕಢಿಯಲ್ಲಿ ಪಂಜಾಬಿ ಭೋಜನ

​ಪ್ರಜಾವಾಣಿ ವಾರ್ತೆ
Published 24 ಜನವರಿ 2013, 19:59 IST
Last Updated 24 ಜನವರಿ 2013, 19:59 IST
ಸೋಲ್‌ಕಢಿಯಲ್ಲಿ ಪಂಜಾಬಿ ಭೋಜನ
ಸೋಲ್‌ಕಢಿಯಲ್ಲಿ ಪಂಜಾಬಿ ಭೋಜನ   

ಮುಂದಲೆಯ ಮೇಲೆ ಹಾಕಿದ್ದ ಕನ್ನಡಕ, ಅರಳು ಹುರಿದಂತೆ ಮಾತನಾಡಿ ರೆಸ್ಟೋರೆಂಟ್‌ಗೆ ಬರುವ ಗ್ರಾಹಕರನ್ನು ಸ್ವಾಗತಿಸುತ್ತಿದ್ದ ಆಕೆ ಸ್ವಾಗತಕಾರಿಣಿಯೇನೂ ಅಲ್ಲ. ಆ ರೆಸ್ಟೋರೆಂಟ್‌ನ ಮಾಲೀಕರಾದ ನಿರ್ಮಲಾ ಬಾಲಕೃಷ್ಣನ್!
`ಅಡುಗೆ ಮಾಡುವಾಗ ರುಚಿಯಲ್ಲಿ, ಮಸಾಲೆ ಆಯ್ಕೆಯಲ್ಲಿ ಹೆಚ್ಚುಕಡಿಮೆ ಆಗುವುದು ಸಹಜ. ನಾವು ಮಾಲೀಕರು ಅಂತ ಎಲ್ಲೋ ಸುತ್ತಾಡುವ ಬದಲು ಎರಡು ಹೊತ್ತು ಗ್ರಾಹಕರ ಬಳಿ ಸಂವಾದ ನಡೆಸಿ ಆಯಾ ದಿನ ಅಡುಗೆಯ ಧನ-ಋಣ ಅಂಶಗಳನ್ನು ತಿಳಿದುಕೊಂಡರೆ ನಾಳೆ ತಿದ್ದಿಕೊಳ್ಳಬಹುದು. ಏನಂತೀರಾ?' ಅಂತ ಕಣ್ಣುಮಿಟುಕಿಸಿದರು.

ರಿಚ್ಮಂಡ್ ಟೌನ್‌ನ `ಅಂಡರ್ ದ ಮ್ಯಾಂಗೋ ಟ್ರೀ'ಯ ಸಹಸಂಸ್ಥೆ `ಸೋಲ್ ಕಢಿ ರೆಸ್ಟೋರೆಂಟ್'ನಲ್ಲಿ ಸಂಕ್ರಾಂತಿಯಿಂದೀಚೆ ನಡೆದಿರುವ `ಲೋಹ್ರಿ ಫುಡ್ ಫೆಸ್ಟಿವಲ್'ನಲ್ಲಿ ಉಣಬಡಿಸುವ ಪಂಜಾಬಿ ವಿಶೇಷ ಖಾದ್ಯಗಳನ್ನು ಪ್ರತಿದಿನ ಹೊಸರುಚಿಯೊಂದಿಗೆ ಉಣಬಡಿಸುವ ಉದ್ದೇಶ ಅವರದು.

ಆರು ತಿಂಗಳ ಹಿಂದಷ್ಟೇ ಆರಂಭವಾದ ರೆಸ್ಟೋರೆಂಟ್‌ನಲ್ಲಿ ಉತ್ತರ ಭಾರತೀಯ ಊಟದ್ದೇ ವಿಶೇಷ. ಪಂಜಾಬ್ ಮಾತ್ರವಲ್ಲದೇ ಹಿಮಾಚಲ ಪ್ರದೇಶ, ದೆಹಲಿ, ಉತ್ತರಖಂಡ್ ಹಾಗೂ ಜಮ್ಮುವಿನಲ್ಲೂ ಈ ಹಬ್ಬ ಪ್ರಖ್ಯಾತವಾಗಿದೆ. ಸಂಕ್ರಾತಿ ಹಬ್ಬದ ಹಾಗೇ ಈ ಹಬ್ಬ ಆಚರಿಸುತ್ತಾರೆ. ರಾತ್ರಿ ಚುಮುಚುಮು ಚಳಿಯಲ್ಲಿ ಬೆಂಕಿಯ ಉರಿಯನ್ನು ಹಾಕಿಕೊಂಡು ಅದರ ಸುತ್ತಲೂ ಹಾಡುಗಳನ್ನು ಹಾಡುತ್ತಾ ಹಬ್ಬದ ಆಚರಣೆ ಜೋರಾಗಿ ನಡೆಯುತ್ತದೆ. ಹಾಗೆಯೇ ಇವರ ಆಹಾರದಲ್ಲೂ ವೈವಿಧ್ಯತೆ ಇದೆ.

ಲೋಹ್ರಿ ಹಬ್ಬದ ವಿಶೇಷ ಊಟವನ್ನು ಸೋಲ್‌ಕಢಿಯಲ್ಲೂ ಸವಿಯಬಹುದು. ಸ್ಟಾರ್ಟರ್‌ನಲ್ಲಿ ಆಲೂಗಡ್ಡೆಯಿಂದ ಮಾಡಿದ `ಆಲೂ ಭರುವಾ', `ಚನಾ ಟಿಕ್ಕಿ', `ಖಸ್ತಾ ಪನ್ನೀರ್ ಟಿಕ್ಕಾ', `ಪಂಜಾಬಿ ಮುರ್ಗ್ ಮಸಾಲಂ', `ಅಮೃತ್‌ಸರಿ ಫಿಶ್ ಟಿಕ್ಕಾ' ಮುಖ್ಯವಾಗಿವೆ.

ರೆಸ್ಟೋರಾದ ಒಳಗೆ ಪಂಜಾಬಿ ಸಂಗೀತದ ಇಂಪು ಭೋಜನಕ್ಕೆ ಸಾಥ್ ನೀಡುವಂತಿತ್ತು. ಸ್ಟಾರ್ಟರ್‌ನ ರುಚಿ ನೋಡುವಷ್ಟರಲ್ಲೇ ಹೊಟ್ಟೆ ತುಂಬಿರುತ್ತದೆ. ಆದರೆ ಮೇನ್‌ಕೋರ್ಸ್‌ನ ರುಚಿ ನೋಡಬೇಕಲ್ಲ. `ಸಾರೋ ದ ಸಾಗ್', `ಚನಾ ಮಸಾಲ', ಹೆಚ್ಚು ಮಸಾಲೆ ಬೆರೆಸಿದ್ದ `ಪಂಜಾಬಿ ಘರ್ ಕಿ ಆಲೂ ಗೋಬಿ', `ದಿಲ್ಲಿ ಬಟರ್ ಚಿಕನ್' `ಮುರ್ಗ್ ಮಖಾನಿ' ಹಾಗೂ ಮುರ್ಗ್ ತರಿವಾಲಾ, `ಮುರ್ಗ್ ಸಾಗ್ ವಾಲಾ' ಇಷ್ಟವಾಗುತ್ತವೆ.

ಸಸ್ಯಾಹಾರ ಹಾಗೂ ಮಾಂಸಾಹಾರ ಎರಡೂ ಬಗೆಯ ಊಟ ಇಲ್ಲಿದೆ. ಅಮೃತ್‌ಸರಿ ಕುಲ್ಚ, ಉಲ್ಟಾ ತವಾ ಪರಾಟ ಹಾಗೂ ಖಾಸ್ತಾ ರೋಟಿ ಕಾಂಬಿನೇಷನ್ ಇದೆ. ಊಟದ ನಂತರ ಕೊಡುವ ರಬ್ಡಿ-ಜಿಲೇಬಿ ಹಾಗೂ ಆಂಗೂರಿ ಜಾಮೂನು ರಬ್ಡಿ ಒಟ್ಟು ಮೆನುವಿನ ಸವಿಯನ್ನು ಮತ್ತೊಂದು ತೂಕ ಹೆಚ್ಚಿಸುವಂತಿರುತ್ತದೆ. ದೆಹಲಿಯ ಬಾಣಸಿಗ ಅಜಯ್ ಸಿಂಗ್ ರಾಣಾ ಹಬ್ಬದ ಆಹಾರ ಸಿದ್ದಪಡಿಸಿರುವುದರಿಂದ ಅಲ್ಲಿನ ಸ್ವಾದದಲ್ಲಿಯೇ ಆಹಾರ ಸವಿಯಬಹುದು ಎಂದು ಹೇಳುತ್ತಾರೆ ನಿರ್ಮಲಾ.
ಎರಡು ಕಿಲೋ ಮೀಟರ್‌ವರೆಗೆ ಕ್ಯಾಟರಿಂಗ್ ಸೌಲಭ್ಯವೂ ಇಲ್ಲಿದೆ. ಮಧ್ಯಾಹ್ನ 12ರಿಂದ 3.30 ಹಾಗೂ ಸಂಜೆ 7.30ರಿಂದ ರಾತ್ರಿ 11.15ರವರೆಗೆ ರೆಸ್ಟೋರೆಂಟ್ ತೆರೆದಿರುತ್ತದೆ.

ಸ್ಥಳ: ಸೋಲ್ ಕಢಿ ರೆಸ್ಟೋರೆಂಟ್, ನಂ3, ಲ್ಯಾಕ್ಮೆ ಪಾರ್ಲರ್ ಹಿಂಭಾಗ, ರಿಚ್ಮಂಡ್ ಟೌನ್. ಟೇಬಲ್ ಕಾಯ್ದಿರಿಸಲು 2211 1112/3/4, 96866 01021, 90360 90369.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.