ADVERTISEMENT

‘ಸ್ವಂತದ ದುಡಿಮೆಯಲ್ಲಿಯೇ ನೆಮ್ಮದಿ’

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2018, 19:30 IST
Last Updated 9 ಏಪ್ರಿಲ್ 2018, 19:30 IST
ಗಿರೀಶ್‌
ಗಿರೀಶ್‌   

ಚೈತ್ರಾ ದೊಡ್ಡಹುಸೇನಪುರ

ಹೆಸರು ಗಿರೀಶ್, 10ನೇ ಕ್ಲಾಸ್‌ ಓದಿದ್ದೀನಿ. ಊರು ಮಂಡ್ಯ ಜಿಲ್ಲೆಯ ವಡೇರಹಳ್ಳಿ. ಅಪ್ಪ ಅಮ್ಮ ಮನೆಗೆಲಸ ಮಾಡಿ ನನ್ನ ಓದಿಸಿದ್ರು ನಾನು ಫೇಲಾದೆ. ಆಮೇಲೆ ಲಾರಿಗೆ ಮರಳು ತುಂಬುವ ಕೆಲಸಕ್ಕೆ ಸೇರಿಕೊಂಡೆ. ಪ್ರತಿನಿತ್ಯ ಮರಳು ಹೊತ್ತು ಸಾಕಾಯಿತು. ನನಗೂ ಮದುವೆ ಆಯಿತು ಸಂಸಾರ ನಿಭಾಯಿಸಬೇಕು, ನನ್ನ ನಂಬಿ ಬಂದವಳನ್ನು ಸಾಕಬೇಕೆಂದು ಬೆಂಗಳೂರಿಗೆ ಬಂದು ಗಾಯತ್ರಿ ನಗರದಲ್ಲಿ ಬಾಡಿಗೆ ಮನೆ ಮಾಡಿದೆ.

ಮೊದಲು ತಳ್ಳೋ ಗಾಡಿಯಲ್ಲಿ ಎಳನೀರು ವ್ಯಾಪಾರ ಶುರು ಮಾಡಿದೆ. ಈಗ ಶ್ರೀರಾಮಪುರ ಮೆಟ್ರೊ ನಿಲ್ದಾಣದ ಬಳಿ ಗಾಡಿ ಹಾಕಿ ವ್ಯಾಪಾರ ಮಾಡುತ್ತೀನಿ. 20 ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದೀನಿ ಬೇಸಿಗೆ ಕಾಲದಲ್ಲಿ ದಿನಕ್ಕೆ 100 ರಿಂದ 150 ಎಳನೀರು ಮಾರುತ್ತೇನೆ. ಮಳೆಗಾಲ, ಚಳಿಗಾಲದಲ್ಲಿ 50ರಿಂದ 60 ಕಾಯಿ ಹೋಗುತ್ತೆ. ಸಂಪಾದನೆಯೂ ಅಷ್ಟೇ.

ADVERTISEMENT

ಬೇಸಿಗೆಯಲ್ಲಿ ದಿನಕ್ಕೆ ₹300ರಿಂದ ₹400 ಸಿಗುತ್ತೆ. ಲಾಭವೋ ನಷ್ಟವೋ ಬೇರೆಯವರ ಬಳಿ ಕೂಲಿ ಮಾಡುವುದಕ್ಕಿಂತ ಈ ಸ್ವಂತ ವ್ಯಾಪಾರದಲ್ಲಿ ಖುಷಿ ಇದೆ ನನಗೆ. ಗಾರ್ಮೆಂಟ್ಸ್‌ಗೆ ಹೋದರೆ ₹ 5,000 ಕೊಡುತ್ತಾರೆ. ಅಷ್ಟನ್ನು ಈ ವ್ಯಾಪಾರದಲ್ಲಿ ನಾನು ಉಳಿಸಬಹುದು.

ಜೀವನ ನಡೆಸೋದಕ್ಕೆ 20 ವರ್ಷದಿಂದ ದಾರಿ ತೋರಿಸೈತೆ ಈ ವ್ಯಾಪಾರ. ಬೇಸಿಗೆ ಕಾಲದಲ್ಲಿ ಎಳನೀರು ಸಿಗಲ್ಲ. ನಮಗೆ ಸರದಾರ್‌ ಎಂಬಾತ ಮಂಡ್ಯದಿಂದ ತರಿಸಿಕೊಡುತ್ತಾನೆ. ಒಂದು ಎಳನೀರಿಗೆ ₹ 24 ಹಾಕಿ ಕೊಡುತ್ತಾನೆ. ಅದನ್ನು ₹ 30ಕ್ಕೆ ಮಾರಾಟ ಮಾಡುತ್ತೇನೆ. ರಾತ್ರಿ ಒಂಬತ್ತಕ್ಕೆ ಗಾಡಿನ ಬಿಟ್ಟು ಹೋಗುತ್ತೇವೆ. ಬೆಳಗ್ಗೆ 6.30ಕ್ಕೆ ಬರ್ತೀನಿ. ಒಮ್ಮೊಮ್ಮೆ ಪುಂಡರು ಕಳ್ಳತನ ಮಾಡುತ್ತಾರೆ.

ನಾವು ಬೀದಿ ವ್ಯಾಪಾರಿಗಳು ಯಾರನ್ನ ಕೇಳೋದು? ಅದಕ್ಕೆ ಸುಮ್ಮನಾಗುತ್ತೇವೆ. ಮೊನ್ನೆ ಇಲ್ಲಿ ನಿಲ್ಲಿಸಿದ್ದ ಹೊಸ ಗಾಡಿಯನ್ನೇ ಕಳ್ಳತನ ಮಾಡಿದ್ದಾರೆ. ಮತ್ತೆ ಎಳನೀರು ಬುರುಡೆ ಯಾರೂ ತೆಗೆದುಕೊಂಡು ಹೋಗುವುದಿಲ್ಲ. ಇಟ್ಟರೆ ಸೊಳ್ಳೆ ಕಾಟ ಅಂತ ನಾವೇ ಕಾರ್ಪೊರೇಷನ್ ಕಸದ ಗಾಡಿಯವರಿಗೆ ಹಣ ಕೊಟ್ಟು ಬುರುಡೆ ಎತ್ತಿಸುತ್ತೇವೆ.

ಕಷ್ಟ ಎಲ್ಲಾ ಕಡೆ ಇರುತ್ತದೆ. ಏನೇ ಕಷ್ಟ ಆದರೂ ಜೀವನ ನಡೆಸುವ ದಾರಿ ದೀಪ ಆಗಿದೆ ಈ ವ್ಯಾಪಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.