ADVERTISEMENT

ಹಾಡಿನ ಅಮಲು ಹಸ್ತಾಕ್ಷರದ ಹೊನಲು

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2012, 19:30 IST
Last Updated 11 ಅಕ್ಟೋಬರ್ 2012, 19:30 IST
ಹಾಡಿನ ಅಮಲು ಹಸ್ತಾಕ್ಷರದ ಹೊನಲು
ಹಾಡಿನ ಅಮಲು ಹಸ್ತಾಕ್ಷರದ ಹೊನಲು   

ಸಂಜೆ ಮೆಲ್ಲನೆ ಕರಗುತ್ತಿತ್ತು. ನಗರದ ಬಿಷಪ್ ಕಾಟನ್ ಶಾಲೆಯ ವೇದಿಕೆ ಅದ್ದೂರಿಯಾಗಿ ಸಜ್ಜಾಗಿತ್ತು. ಮಕ್ಕಳ ಕೈಯ್ಯಲ್ಲಿ ಕೆಂಪು- ನೀಲಿ ಬಲೂನ್‌ಗಳು. ನಿಧಾನಕ್ಕೆ ಭರ್ತಿಯಾಗುತ್ತಿದ್ದ ಆಡಿಟೋರಿಯಂನ ಸೀಟುಗಳು. ಎಲ್ಲರಲ್ಲೂ ಕ್ರೀಡಾ ತಾರೆಗಳನ್ನು ಕಣ್ತುಂಬಿಕೊಳ್ಳುವ ತವಕ.

ಸೈನಾ ನೆಹ್ವಾಲ್, ಮೇರಿ ಕೋಮ್ ಹಾಜರಾದದ್ದೇ, ಅವರತ್ತ ನೂರಾರು ಪುಟ್ಟ ಮಕ್ಕಳ ಬೆರಗುನೋಟ. ಚಿಣ್ಣರು ನೋಟ್ ಬುಕ್ ಹಿಡಿದು ಅವರ ಮುಂದೆ ನಗುತ್ತಾ ಹಸ್ತಾಕ್ಷರಕ್ಕೆ ಕೈ ಚಾಚುತ್ತಿದ್ದರು. ಹಸ್ತಾಕ್ಷರ ಹಾಕಿದ ಇಬ್ಬರು ತಾರೆಯರೂ ಅರೆಕ್ಷಣ ಭಾವುಕರಾದರು.
ಲಂಡನ್ ಒಲಿಂಪಿಕ್‌ನಲ್ಲಿ ಕಂಚಿನ ಪದಕ ಗೆದ್ದು, ದೇಶಕ್ಕೆ ಗರಿಮೆ ತಂದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಹಾಗೂ ಬಾಕ್ಸಿಂಗ್ ಚಾಂಪಿಯನ್ ಮೇರಿ ಕೋಮ್ ಇಬ್ಬರನ್ನೂ ಸನ್ಮಾನಿಸಲು ಕಮ್ಯೂನ್ ಇಂಡಿಯಾ, ಟಾರ್ಗೆಟ್ ಗೇಮ್ಸ ಫೆಸಿಲಿಟಿ ಆಯೋಜಿಸಿದ್ದ ಸಮಾರಂಭವದು.
 
ಇಬ್ಬರಿಗೂ ಈ ಉದ್ಯಾನನಗರಿಯಲ್ಲಿ ಫ್ಲಾಟ್‌ಗಳನ್ನು ನೀಡಿದ್ದು ಕಮ್ಯೂನ್ ಸಂಸ್ಥೆ. ಕಾರ್ಯಕ್ರಮಕ್ಕೆ ನಗರ ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ಆಗಮಿಸಿ ಸೈನಾ ಮತ್ತು ಮೇರಿ ಅವರೊಡನೆ ಜ್ಯೋತಿ ಬೆಳಗಿಸಿದರು.

`ಏನಾದರೂ ಸಾಧಿಸಬೇಕೆಂದಿದ್ದರೆ ಚಿಕ್ಕಂದಿನಿಂದಲೇ ಅದಕ್ಕೆ ಪೂರಕವಾಗಿ ಶ್ರಮ ಪಡಬೇಕು. ಚಿಕ್ಕ ವಯಸ್ಸಿನಲ್ಲಿಯೇ ಅಚಲ ಗುರಿಯಿಟ್ಟುಕೊಂಡು ಶ್ರದ್ಧೆ, ಪ್ರಾಮಾಣಿಕತನ ಮತ್ತು ಶ್ರಮಪಟ್ಟು ಅದರೆಡೆಗೆ ನಡೆದರೆ ಸಾಧನೆ ಖಂಡಿತ ಸಾಧ್ಯ. ಅದಕ್ಕೆ ಜೀವಂತ ನಿದರ್ಶನ ನಮ್ಮ  ಕ್ರೀಡಾತಾರೆಗಳಾದ ಸೈನಾ ನೆಹ್ವಾಲ್ ಹಾಗೂ ಮೇರಿ ಕೋಮ್. ಅವರೇ ನಿಮಗೆ ರೋಲ್ ಮಾಡೆಲ್~ ಎಂದು ಶ್ಲಾಘಿಸಿದರು ಮಿರ್ಜಿ. 

ನಂತರ ಸಮರ್ಥನಂ ಟ್ರಸ್ಟ್‌ನ ಅಂಗವಿಕಲ ಮಕ್ಕಳಿಂದ ನೃತ್ಯ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಗಳಲ್ಲಿ ಆ ವಿಶೇಷ ಮಕ್ಕಳ ಚೈತನ್ಯ ಕಂಡು ಅಲ್ಲಿದ್ದ ಇನ್ನಿತರ ಮಕ್ಕಳು ಚಕಿತರಾದರು.

ಸೈನಾ ನೆಹ್ವಾಲ್ ಹಾಗೂ ಮೇರಿ ಕೋಮ್ ತಮ್ಮ ಒಲಿಂಪಿಕ್ ಅನುಭವಗಳನ್ನು ಹಂಚಿಕೊಂಡು ಕೆಳಗೆ ಇಳಿದಿದ್ದರಷ್ಟೇ. ಗಾಯಕಿ ಉಷಾ ಉತ್ತುಪ್ ವೇದಿಕೆ ಮೇಲೆ ಥಟ್ಟನೆ ಬಂದು ನಿಂತಿದ್ದರು. ಇತ್ತ ಜನರಿಂದ ಚಪ್ಪಾಳೆಯ ಸುರಿಮಳೆ. ಒಂದೈದು ನಿಮಿಷ ಸಭಾಂಗಣದ ಪೂರ ಚಪ್ಪಾಳೆಯದ್ದೇ ಸದ್ದು. ತಮ್ಮದೇ ದೊಡ್ಡ, ಗತ್ತಿನ ದನಿಯಲ್ಲಿ ಉಷಾ ಉತ್ತುಪ್ ಹಾಡತೊಡಗಿದರು.

ಅದಕ್ಕೂ ಮೊದಲು ಅವರಾಡಿದ ಮಾತು: `ನಾವು ಭಾರತೀಯರು ಎಂಬುದಕ್ಕೆ ಹೆಮ್ಮೆಯಾಗುತ್ತಿದೆ. ನಾನು ಹೆಣ್ಣು ಎಂಬುದಕ್ಕೆ ಮನಸ್ಸು ತುಂಬಿ ಬರುತ್ತಿದೆ. ನನ್ನ 43 ವರ್ಷಗಳ ಸಂಗೀತ ಪಯಣದಲ್ಲಿ ಈ ಕ್ಷಣ ಅಪೂರ್ವದ್ದು ಎನಿಸುತ್ತಿದೆ. ನನ್ನ ಹಾಡಿನಿಂದ ನಿಮ್ಮನ್ನು ಹುಚ್ಚೆದ್ದು ಕುಣಿಸಲಿಕ್ಕೆಂದೇ ಇಲ್ಲಿಗೆ ಬಂದಿದ್ದೇನೆ. ಕಮಾನ್, ಐ ಲವ್ ಯೂ...~
`ಐ ಬಿಲೀವ್ ಇನ್ ಮ್ಯೂಸಿಕ್~, `ಬಿಂದಿಯಾ ಚಮ್ಕೇಗೀ~ ಮೊದಲಾದ ಹಾಡುಗಳು ಅವರ ದನಿಯಲ್ಲಿ ಕೇಳಿಬಂದವು. 

ಸಂಗೀತದ ಅಮಲಿನಲ್ಲಿ ಜನ ಮಿಂದೆದ್ದಂತೆ ಭಾಸವಾಯಿತು. `ಹುಟ್ಟಿದರೇ ಕನ್ನಡ ನಾಡಲ್ ಹುಟ್ಟಬೇಕು~ ಎಂಬ ಕನ್ನಡ ಹಾಡು ಉತ್ತುಪ್ ಬಾಯಿಂದ ಹೊಮ್ಮಿದ್ದೇ ಇಡೀ ಸಭಾಂಗಣದ ತುಂಬಾ ಕೂಗು, ಸಿಳ್ಳೆ.

ಇವೆಲ್ಲಾ ಮುಗಿದು ರಾತ್ರಿ ಮನೆಗೆ ಹಿಂದಿರುಗುವ ವೇಳೆಯಾದರೂ ಸೈನಾ ಮತ್ತು ಮೇರಿ ಕೋಮ್ ಬಳಿ ಹಸ್ತಾಕ್ಷರ ಗಿಟ್ಟಿಸಿಕೊಳ್ಳಲು ಸಾಧ್ಯವಾಗದ ಪುಟ್ಟ ಪೋರನೊಬ್ಬ ಅಲ್ಲೇ ಅಳುತ್ತಾ ನಿಂತಿದ್ದ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.