ADVERTISEMENT

ಹೃದಯಶಿವ ಕಟ್ಟಿದ ಸ್ವಪ್ನದ ಮಹಲ್‌

ಪದ್ಮನಾಭ ಭಟ್ಟ‌
Published 5 ಏಪ್ರಿಲ್ 2018, 19:30 IST
Last Updated 5 ಏಪ್ರಿಲ್ 2018, 19:30 IST
ಹೃದಯಶಿವ ಕಟ್ಟಿದ ಸ್ವಪ್ನದ ಮಹಲ್‌
ಹೃದಯಶಿವ ಕಟ್ಟಿದ ಸ್ವಪ್ನದ ಮಹಲ್‌   

ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಬೇಕು ಎಂಬ ಕನಸು ಹೊತ್ತುಕೊಂಡೇ ಚಿತ್ರರಂಗಕ್ಕೆ ಬಂದವನು ನಾನು. ವಿಶೇಷವಾಗಿ ನಿರ್ದೇಶಕ ಓಂ ಪ್ರಕಾಶ್‌ ರಾವ್‌ ಅವರ ಬಳಿ ಕೆಲಸ ಮಾಡಬೇಕು ಎಂಬ ಆಸೆ ಇತ್ತು.

ಆಗ ‘ಹೋಟೆಲ್‌ ಗಾಂಧಿನಗರ’ದಲ್ಲಿ ಓಂ ಪ್ರಕಾಶ್ ರಾವ್‌ ಸಿನಿಮಾ ಕೆಲಸಗಳಿಗೆ ರೂಂ ಮಾಡಿಕೊಂಡು ಇರುತ್ತಿದ್ದರು. ನಾನು ಅಲ್ಲಿಗೆ ಹೋಗಿ ನಿಂತು ಅವರ ಭೇಟಿಗಾಗಿ ಕಾಯುತ್ತಿದ್ದೆ. ಹುಚ್ಚ ವೆಂಕಟ್‌ ಕೂಡ ಅಲ್ಲಿಯೇ ನನಗೆ ಸಿಗುತ್ತಿದ್ದರು. ಆಗ ಅವರು ವೆಂಕಟ್‌ ಅಷ್ಟೇ ಆಗಿದ್ದರು. ಅವರ ಪರಿಚಯ ಆಗಿ ನಾನು ಹಾಡುಗಳನ್ನು ಬರೆಯುತ್ತೇನೆ ಎಂಬುದು ಗೊತ್ತಾದ ನಂತರ, ‘ಯಾರಾದರೂ ಸಂಗೀತ ನಿರ್ದೇಶಕನ ಬಳಿ ಹೋಗಿ ಹಾಡು ಬರೆಯುವ ಅವಕಾಶ ಪಡೆದುಕೊಳ್ಳಿ’ ಎಂದು ಒತ್ತಾಯಿಸುತ್ತಿದ್ದರು.

ಆಗ ನಾನೊಂದಿಷ್ಟು ಕಥೆ ಮಾಡಿಕೊಂಡಿದ್ದೆ. ಈಗ ನೋಡಿದರೆ ಅವೆಲ್ಲ ಸಿನಿಮಾ ಮಾಡಬಲ್ಲಂಥ ಕಥೆಗಳೇ ಆಗಿರಲಿಲ್ಲ ಅನಿಸುತ್ತದೆ. ಆದರೆ ಆಗ ಅವೇ ಚೆನ್ನಾಗಿವೆ ಅನಿಸುತ್ತಿತ್ತು. ಯಾರೂ ನನಗೆ ಸಹಾಯಕ ನಿರ್ದೇಶಕನಾಗಿ ಅವಕಾಶ ಕೊಡಲಿಲ್ಲ. ಓಂ ಪ್ರಕಾಶ್‌ ರಾವ್ ಬಳಿಯೇ ಎರಡು ವರ್ಷ ಕೆಲಸ ಮಾಡಿದೆ. ಆಗ ಅವರು ‘ಕಲಾಸಿಪಾಳ್ಯ’ ಸಿನಿಮಾ ಮಾಡುತ್ತಿದ್ದರು.

ADVERTISEMENT

ವೆಸ್ಟ್‌ ಆಫ್‌ ಕಾರ್ಡ್ ರಸ್ತೆಯಲ್ಲಿ ಮಧು ಹೋಟೆಲ್‌ ಇತ್ತು. ಅಲ್ಲಿ ಆರ್‌. ಚಂದ್ರು, ನಾನು ಮತ್ತು ರಘು ನಿಡುವಳ್ಳಿ ಭೇಟಿಯಾಗುತ್ತಿದ್ದೆವು. ಚಂದ್ರು ಆಗ ಎಸ್.ನಾರಾಯಣ್‌ ಅವರ ಬಳಿ ಕೆಲಸ ಮಾಡುತ್ತಿದ್ದರು. ಚಂದ್ರು ಅವರ ಮನೆಯೂ ರಾಜಾಜಿನಗರದಲ್ಲಿಯೇ ಇತ್ತು. ಅಲ್ಲಿ ಕೂತು ನಾವು ಸಿನಿಮಾ ಕಥೆಗಳನ್ನು ಮಾಡುತ್ತಿದ್ದೆವು. ಆ ಸಮಯದಲ್ಲಿಯೇ ನಾನು ವಿ. ಮನೋಹರ್ ‘ಮಿ.ಬಕ್ರಾ’ ಸಿನಿಮಾಗೆ ಒಂದು ಟ್ಯೂನ್ ಕೊಟ್ಟು ಹಾಡು ಬರೆದುಕೊಡು ಎಂದು ಅವಕಾಶ ಕೊಟ್ಟರು. ನಾನು ಬರೆದೆ. ಅವರಿಗದು ಇಷ್ಟವಾಗಲಿಲ್ಲ.

‘ನಿನಗೆ ಶೃಂಗಾರ ಮತ್ತು ಕಾಮದ ವ್ಯತ್ಯಾಸವೇ ಗೊತ್ತಿಲ್ಲ’ ಎಂದು ಬೈದುಬಿಟ್ಟಿದ್ದರು. ನಂತರ ಗುರುಕಿರಣ್‌ ‘ನಮ್ಮಣ್ಣ’ ಸಿನಿಮಾಗೆ ಒಂದು ಟ್ಯೂನ್ ಕೊಟ್ಟರು. ಅದಕ್ಕೆ ಬರೆದಿದ್ದೂ ಇಷ್ಟವಾಗಲಿಲ್ಲ. ನಂತರ ಅದೇ ಸಾಲುಗಳನ್ನು ಇಟ್ಟುಕೊಂಡು ‘ಮಂಡ್ಯ’ ಸಿನಿಮಾಗೆ ಮರುರಚಿಸಿ ಕೊಟ್ಟೆ. ಅದು ಹಾಡಾಯ್ತು.

‘ಮುಂಗಾರು ಮಳೆ’ ಸಿನಿಮಾದ ನಂತರ ನನಗೆ ಗೀತರಚನೆಯ ಅವಕಾಶಗಳು ಹೆಚ್ಚಾದವು. ಸಹಾಯಕ ನಿರ್ದೇಶಕನಾಗಿ ಕೆಲಸಕ್ಕೆ ಸೇರಿಕೊಳ್ಳಬೇಕು ಎಂಬ ಪ್ರಯತ್ನ ಬಿಟ್ಟುಬಿಟ್ಟೆ. ಗೀತರಚನೆಯಲ್ಲಿ ಬ್ಯುಸಿ ಆದೆ. ಒಂದೇ ವರ್ಷದಲ್ಲಿ ಎಪ್ಪತ್ತು ಎಂಬತ್ತು ಸಿನಿಮಾಗಳಿಗೆ ಹಾಡು ಬರೆದೆ. ಆಗ ಒಂದಿಬ್ಬರು ನಿರ್ಮಾಪಕರು ನನ್ನ ಕಥೆಗೆ ಹಣ ಹೂಡಲು ಮುಂದೆ ಬಂದರು. ಆದರೆ ನಾನೇ ಆಸಕ್ತಿ ತೋರಲಿಲ್ಲ. ಹಾಡುಗಳು ಬರೆದುಕೊಂಡು ಇದ್ದುಬಿಡೋಣ ಎಂದುಕೊಂಡೆ. ದೊಡ್ಡ ಬಜೆಟ್ ಸಿನಿಮಾ ಮಾಡಬೇಕು ಎಂಬ ಕನಸೂ ಇತ್ತು.

2008ರಲ್ಲಿ ಮೊದಲ ಬಾರಿ ನಿರ್ಮಾಪಕರೊಬ್ಬರ ಬಳಿ ಕಥೆ ಹೇಳಲೆಂದು ಹೋಗಿದ್ದೆ. ಅವರು ಒಂದು ಕೋಟಿ ಬಜೆಟ್‌ ಹೂಡಲು ಒಪ್ಪಿಕೊಂಡುಬಿಟ್ಟರು. ಆಗ ಅದು ತುಂಬ ದೊಡ್ಡ ಬಂಡವಾಳ. ನಾನೂ ಖುಷಿಯಿಂದ ಗೆಳೆಯ ಶ್ಯಾಮ್‌ ಶಿವಮೊಗ್ಗ ಅವರ ಜತೆ ಗೋವಾಕ್ಕೆ ಹೋಗಿ ಚಿತ್ರಕಥೆ ಸಿದ್ಧ ಮಾಡಿಕೊಂಡೆ. ಆದರೆ ಅಲ್ಲಿಂದ ವಾಪಸ್ ಬರುವಷ್ಟರಲ್ಲಿ ನಿರ್ಮಾಪಕರು ಬಂಡವಾಳ ಹೂಡಲು ಸಾಧ್ಯವಿಲ್ಲ ಅಂದುಬಿಟ್ಟರು. ಗೋವಾಕ್ಕೆ ಹೋಗಿದ್ದು ಪ್ರವಾಸದ ಥರ ಆಯ್ತು.

(ಹೃದಯ ಶಿವ)

ಆಮೇಲೆ ನಾನೂ ಕೊಂಚ ಗಂಭೀರವಾಗಿ ನಿರ್ಮಾಪಕರನ್ನು ಹುಡುಕತೊಡಗಿದೆ. ಆದರೆ ನನ್ನನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳುತ್ತಲೇ ಇರಲಿಲ್ಲ. ‘ಇವನು ಹಾಡು ಬರೆದುಕೊಂಡಿರಲಿ ಸಾಕು’ ಎನ್ನುವಂತೆ ಪ್ರತಿಕ್ರಿಯಿಸುತ್ತಿದ್ದರು. ಹಾಗಂತ ಆತ್ಮವಿಶ್ವಾಸ ಕಡಿಮೆ ಆಗಲಿಲ್ಲ. ಒಬ್ಬ ದೊಡ್ಡ ನಿರ್ಮಾಪಕರಂತೂ ‘ಈಗೆಲ್ಲ ಕಥೆ ಬರೆದವರೇ ಸಿನಿಮಾ ನಿರ್ಮಾಣ ಮಾಡಬೇಕು ಅಂತ ಇತ್ತೀಚೆಗೆ ರೂಲ್‌ ಬಂದುಬಿಟ್ಟಿದೆ’ ಎಂದುಬಿಟ್ಟರು.

ನನ್ನ ಬಳಿ ಹಲವು ಕಥೆಗಳಿವೆ. ಗಂಭೀರವಾದ, ಸಾಮಾಜಿಕ ಕಳಕಳಿ ಇರುವ ಚಿತ್ರ. ನನ್ನ ಮೊದಲ ಸಿನಿಮಾ ಹಾರರ್ ಕಥೆ ಇರಬೇಕು ಎಂದು ನಾನೇನೂ ಅಂದುಕೊಂಡವನಲ್ಲ. ಆದರೆ ಬೇರೆ ಕಥೆಗಳಿಗೆ ಹೆಚ್ಚು ಬಜೆಟ್‌ ಬೇಕು. ಅದಕ್ಕಾಗಿ ಪ್ರಯತ್ನಿಸಿದೆ ಕೂಡ. ನಿರ್ಮಾಪಕರು ಸಿಗಲಿಲ್ಲ. ಕಡಿಮೆ ಬಜೆಟ್‌ ಇಟ್ಟುಕೊಂಡರೆ ಮುಖ್ಯ ಕಲಾವಿದರು ಸಿಗುವುದಿಲ್ಲ. ಹೀಗಿರುವಾಗ ಏನು ಮಾಡುವುದು? ನಮ್ಮ ಕೈಯಲ್ಲಿ ಇರುವುದು ಪೆನ್ನು ಮತ್ತು ಪೇಪರ್‌. ಅಂದ್ರೆ ಒಳ್ಳೆಯ ಸ್ಕ್ರಿಪ್ಟ್‌ ಮಾಡಿಕೊಂಡು ಸಿನಿಮಾ ಮಾಡೋಣ ಎಂದು ಹೊರಟೆ. ಚಿತ್ರಕಥೆ, ಸಂಭಾಷಣೆ ನನ್ನ ಶಕ್ತಿ. ಅದಕ್ಕೆ ಯಾವ ಬಂಡವಾಳವೂ ಬೇಕಿಲ್ಲವಲ್ಲ. ಕನ್ನಡದಲ್ಲಿ ‘ಜಯಮಹಲ್’ ಮತ್ತು ತಮಿಳಿನಲ್ಲಿ ‘ಮಾತಂಗಿ’ ಎಂಬ ಹೆಸರಿನಲ್ಲಿ ಸಿನಿಮಾ ಮಾಡುವುದು ಎಂದು ಸಿದ್ಧತೆ ಮಾಡಿಕೊಂಡೆ. ಆಗಲೂ ನಿರ್ಮಾಪಕರು ಸಿಕ್ಕಿರಲಿಲ್ಲ.

ನನ್ನ ಪರದಾಟವನ್ನು ನೋಡುತ್ತಿದ್ದ ಸ್ನೇಹಿತ ಎಂ. ರೇಣುಕಾ ಸ್ವರೂಪ್ ವಿಚಾರಿಸಿದರು. ನಾನು ನಿರ್ಮಾಪಕರ ಹುಡುಕಾಟದಲ್ಲಿರುವ ಸಂಗತಿ ಹೇಳಿದಾಗ ತಾವೇ ಬಂಡವಾಳ ಹೂಡಲು ಒಪ್ಪಿಕೊಂಡರು. ‘ಜಯಮಹಲ್’ ಸಿನಿಮಾ ಆಗಿದ್ದು ಹೀಗೆ.

ಇದೊಂದು ಹಾರರ್ ಕಥೆ. ತೃಪ್ತಿ ಸಿಗದೇ ಸತ್ತ ವ್ಯಕ್ತಿ ಹೇಗೆ ತನ್ನ ದುರಂತ ಮರಣಕ್ಕೆ ಕಾರಣ ಆದವರ ವಿರುದ್ಧ ಸೇಡು ತೀರಿಸಿಕೊಳ್ಳಲು ಯತ್ನಿಸುತ್ತಾನೆ ಎನ್ನುವುದು ಕಥೆ. ಮನುಷ್ಯ ಸದಾ ನೆಮ್ಮದಿಗಾಗಿ ಹಂಬಲಿಸುತ್ತಲೇ ಇರುತ್ತಾನೆ. ಆದರೆ ಮನುಷ್ಯನಿಗೆ ನೆಮ್ಮದಿ ಸಿಗುವ ಜಾಗ ಎರಡೇ ಎರಡು. ಅದು ತಾಯಿಯ ಗರ್ಭ ಮತ್ತು ಗೋರಿ. ಈ ಸಂಗತಿಯನ್ನೇ ಸಿನಿಮಾ ಮೂಲಕ ಹೇಳಹೊರಟಿದ್ದೇನೆ.

ಇದು ನನ್ನ ಮೊದಲನೇ ಸಿನಿಮಾ. ಇನ್ನು ಮುಂದೆ ಖಂಡಿತ ಯಾವಾಗಲೂ ಹಾರರ್ ಸಿನಿಮಾ ಮಾಡುವುದಿಲ್ಲ. ನನ್ನ ಮುಂದಿನ ಸಿನಿಮಾ ಎಳೆಯ ಮನಸ್ಸುಗಳ ಪ್ರೇಮದ ಕಥಾವಸ್ತು ಹೊಂದಿದೆ. ಮುಂದೆ ಕ್ರೈಂ, ಥ್ರಿಲ್ಲರ್ ಕಥೆಗಳನ್ನು, ಕಾವ್ಯದಂಥ ಸಿನಿಮಾಗಳನ್ನು ಮಾಡಬೇಕು ಎಂಬ ಕನಸಿದೆ. ಕಥೆಗಳನ್ನಂತೂ ಸಿದ್ಧ ಮಾಡಿ ಇಟ್ಟುಕೊಂಡಿದ್ದೇನೆ. ಆದರೆ ಮುಂದೆ ಏನಾಗುತ್ತದೆಯೋ ಗೊತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.