ADVERTISEMENT

ಹೊಸಬರ ದಿನದ ಮಾಸದ ನಗು

​ಪ್ರಜಾವಾಣಿ ವಾರ್ತೆ
Published 26 ಜುಲೈ 2012, 19:30 IST
Last Updated 26 ಜುಲೈ 2012, 19:30 IST
ಹೊಸಬರ ದಿನದ ಮಾಸದ ನಗು
ಹೊಸಬರ ದಿನದ ಮಾಸದ ನಗು   

ಹೈಸ್ಕೂಲ್ ಮುಗಿಸಿ ಕಾಲೇಜು ಮೆಟ್ಟಿಲೇರುವ ಆ   ಘಳಿಗೆ ವಿದ್ಯಾರ್ಥಿಗಳಿಗೆ ಏನೋ ಸಂಭ್ರಮ. ಹೊಸತನದ ಹಾದಿಯಲ್ಲಿ ಸಾಗುವ ಮನಸ್ಸುಗಳಲ್ಲಿ  ಬಣ್ಣಬಣ್ಣದ ಕನಸು, ಜತೆಗೆ ಒಂದಷ್ಟು ತಳಮಳ...

ಹೊಸ ಕಾಲೇಜು, ಹೊಸ ಕಲಿಕಾ ವಿಷಯ, ಹೊಸ ಗೆಳೆಯರು ಹೀಗೆ ಒಂದಷ್ಟು ಆತಂಕದಲ್ಲೇ ಕಾಲೇಜಿಗೆ ಹೊರಟು ನಿಂತ ವಿದ್ಯಾರ್ಥಿಗಳಿಗೆ ಆ ಪರಿಸರಕ್ಕೆ ಹೊಂದಿಕೊಳ್ಳುವುದಕ್ಕೆ ತುಸು ಕಷ್ಟವೆನಿಸಬಹುದು. ಆದರೆ ಈ ಸಮಯ ನಿಮ್ಮ ಜೀವನದಲ್ಲಿ ಸ್ಮರಣೀಯವಾಗಿರಲಿ ಎಂದು ಹೊಸ ವಿದ್ಯಾರ್ಥಿಗಳನ್ನು ಆದರದಿಂದ ಬರ ಮಾಡಿಕೊಂಡಿತು ಬಾಲ್ಡಿವಿನ್ ಮೆಥಾಡಿಸ್ಟ್ ಕಾಲೇಜು.

ತಮ್ಮ ಕಾಲೇಜಿಗೆ ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆಂದೇ ಬಾಲ್ಡ್‌ವಿನ್ ವಿಭಿನ್ನವಾಗಿ `ಫ್ರೆಶರ್ಸ್‌ ಡೇ~ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಕಾಲೇಜಿನ ಲಿಂಕನ್ ಸಭಾಂಗಣ ವಿದ್ಯಾರ್ಥಿಗಳ ಕೇಕೆ, ನಗು, ಮಾತಿನಲ್ಲಿಯೇ ತುಂಬಿಹೋಗಿತ್ತು. ಬಣ್ಣ ಬಣ್ಣದ ಬಟ್ಟೆಗಳ ಧರಿಸಿ ಬಂದಿದ್ದ ವಿದ್ಯಾರ್ಥಿಗಳ ಕಣ್ಣಲ್ಲೂ ನೂರು ಬಗೆಯ ಆಸೆ, ಕನಸುಗಳು. 

ವಿದ್ಯಾರ್ಥಿಗಳ ಒಂದು ತಂಡ ಸಂಗೀತ ಕಾರ್ಯಕ್ರಮ ನೀಡಲು ಸಜ್ಜಾಗಿತ್ತು. ಗಿಟಾರ್, ಡ್ರಮ್ಸ, ಕೀಬೋರ್ಡ್ ಹಿಡಿದ ನಾಲ್ವರ ತಂಡದ ಸಂಗೀತಕ್ಕೆ ಎಲ್ಲೆಡೆಯಿಂದಲೂ ಪ್ರೋತ್ಸಾಹದ ಕೂಗು, ಚಪ್ಪಾಳೆ. ಪಾಶ್ಚಾತ್ಯ ಸಂಗೀತ ಇಡೀ ಸಭಾಂಗಣವನ್ನು ಅರೆಕ್ಷಣ ತುಂಬಿಕೊಂಡಿತ್ತು. ನಂತರ ನಡೆದಿದ್ದು  ಭರತನಾಟ್ಯ.

`ಇಂದು ನೀವೆಲ್ಲ ತುಂಬಾ ಚೆನ್ನಾಗಿ ಕಾಣುತ್ತಿದ್ದೀರಿ. ನನಗೆ ತುಂಬಾ ಖುಷಿಯಾಗುತ್ತಿದೆ. ನಿಮ್ಮೆಲ್ಲರ ಉತ್ಸಾಹ ಹೀಗೆಯೇ ಇರಲಿ~ ಎಂದು ಆಶಿಸಿದರು  ಪ್ರಾಂಶುಪಾಲರಾದ ಡಾ. ಜೋಶ್ವಾ ಸಾಮ್ಯುಯಲ್.

ಕಾರ್ಯಕ್ರಮಕ್ಕೆ ಆಗಮಿಸಿದ್ದ ನಟಿ ನೀತೂ, `ನಾನು ಯಾರ ಜತೆಗೂ ಮಾತನಾಡಬಾರದು ಎಂದು ಐದು ದಿನ ಧ್ಯಾನ ಮಾಡಲು ಆಶ್ರಮಕ್ಕೆ ಹೋಗಿದ್ದೆ. ನಿನ್ನೆಯಷ್ಟೇ ವಾಪಸ್ ಬಂದೆ. ಈಗ ನಿಮ್ಮೆಲ್ಲರ ನಗು, ಕೂಗಾಟ ಕೇಳಿ ತುಂಬಾನೇ ಖುಷಿಯಾಗುತ್ತಿದೆ. ಕಾಲೇಜು ದಿನಗಳೇ ಹಾಗೆ, ಎಂದೂ ಮರೆಯಲಾಗದ ನೆನಪದು. ಇಲ್ಲಿ ಮಾಡುವ ತುಂಟಾಟ, ಚೇಷ್ಟೆ, ಕಲಿಯುವ ವಿದ್ಯೆ ಇವೆಲ್ಲವೂ ನಿಜಕ್ಕೂ ಮರೆಯಲಾಗದ್ದು~ ಎನ್ನುತ್ತಾ ತಮ್ಮ ಕಾಲೇಜು ದಿನಗಳನ್ನು ಮೆಲುಕು ಹಾಕಿಕೊಂಡರು.

`ಇಲ್ಲಿ ಯಾರೆಲ್ಲಾ ಕನ್ನಡ ಮಾತನಾಡುತ್ತೀರಿ... ಕೈ ಮೇಲೆತ್ತಿ~ ಎಂದು ಮಾತಿಗಿಳಿದ ಆರ್‌ಜೆ ನಿರಂಜನ್, ಹಾಸ್ಯ ಚಟಾಕಿ ಹಾರಿಸಿ ಅಲ್ಲಿದ್ದವರ ಮೊಗದಲ್ಲಿ ಇನ್ನಷ್ಟು ನಗು ಮೂಡಿಸಿದರು.
ವಿದ್ಯಾರ್ಥಿಗಳೆಲ್ಲಾ ಕಾಯುತ್ತಿದ್ದ ಫ್ಯಾಷನ್ ಶೋ ಶುರುವಾಗಿಯೇಬಿಟ್ಟಿತು. ಸಾಂಪ್ರದಾಯಿಕ, ಪಾಶ್ಚಾತ್ಯ ಉಡುಗೆ ತೊಟ್ಟು ಹುಡುಗ-ಹುಡುಗಿಯರು ವೇದಿಕೆಯ ಮೇಲೆ ಬಂದಾಗ ಇಡೀ ಸಭಾಂಗಣದಲ್ಲಿ ಚಪ್ಪಾಳೆಯ ಅನುರಣನ.

ಮಾಡೆಲ್‌ಗಳನ್ನು ನಾಚಿಸುವಂತಿದ್ದ ವಿದ್ಯಾರ್ಥಿಗಳ ಬೆಕ್ಕಿನ ನಡಿಗೆಗೆ ತೀರ್ಪು ನೀಡಲು ಒಂದು ತಂಡವೂ ಸಜ್ಜಾಗಿತ್ತು. ವಿದ್ಯಾರ್ಥಿಗಳೂ ಅಷ್ಟೆ, ಹೆಜ್ಜೆ ಮೇಲೊಂದು ಹೆಜ್ಜೆ ಹಾಕುತ್ತಾ ತುಸುವೇ ನಗು ಬೀರುತ್ತಾ ಒಬ್ಬೊಬ್ಬರಾಗಿ ತಮ್ಮ ಪರಿಚಯ ಮಾಡಿಕೊಟ್ಟರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.