ADVERTISEMENT

ಮುಖಭಾವಗಳ ಬಿಂಬ

ಸುಕೃತ ಎಸ್.
Published 9 ಜನವರಿ 2018, 19:30 IST
Last Updated 9 ಜನವರಿ 2018, 19:30 IST
ವರುಣ್‌ ಅವರ ಕುಂಚದಲ್ಲಿ ಬುದ್ಧ
ವರುಣ್‌ ಅವರ ಕುಂಚದಲ್ಲಿ ಬುದ್ಧ   

ವಿರಾಟ್ ಕೊಹ್ಲಿ, ಮೋಹನ್ ಲಾಲ್, ಮೊಗ್ಯಾಂಬೊ, ಕಲಾಂ ಹೀಗೆ ಅನೇಕರು ಅಲ್ಲಿದ್ದರು! ಇವರನ್ನು ನೋಡಲು ಜನರೂ  ಉತ್ಸುಕರಾಗಿದ್ದರು. ತಮ್ಮ ನೆಚ್ಚಿನ ನಟರು, ಆಟಗಾರರು ಮತ್ತು ಸಾಧಕರನ್ನು ಕಲೆಯ ಮೂಲಕ ನೋಡಲು ಅನುವು ಮಾಡಿಕೊಟ್ಟವರು ವರುಣ್ ಎನ್. ರಾವ್. ಅಂದಹಾಗೆ ಈ ಎಲ್ಲಾ ಸಾಧಕರು ಜನವರಿ 15ವರೆಗೆ ನೋಡಲು ಸಿಗಲಿದ್ದಾರೆ.

ವರುಣ್ ಅವರದು ಪೋರ್ಟ್ರೇಯಲ್ ಪ್ರಕಾರದ ಚಿತ್ರಕಲೆ.

‘ನಾನು ಎರಡನೇ ತರಗತಿಯಲ್ಲಿ ಇರುವಾಗಲೇ ನನ್ನನ್ನು ಚಿತ್ರಕಲೆ ಸೆಳೆದಿತ್ತು. ಅಲ್ಲಿಂದ ಇಲ್ಲಿಯವರೆಗೂ ಕೇವಲ ಪ್ರಯೋಗದಿಂದಲೇ, ಚಿತ್ರಕಲೆಯನ್ನು ಕಲಿತಿದ್ದೇನೆ. ನಮ್ಮ ಮುಖ ನೂರಾರು ಭಾವನೆಗಳನ್ನು ವ್ಯಕ್ತಪಡಿಸುತ್ತದೆ. ಕಣ್ಣುಗಳು ಸೂಸುವ ಭಾವನೆಗಳು ಅತೀ ಸೂಕ್ಷ್ಮದ್ದು. ಈ ಎಲ್ಲಾ ಅಂಶಗಳು ನನ್ನ ಸೊಜಿಗಕ್ಕೆ ಕಾರಣವಾದವು. ಈ ಎಲ್ಲಾ ಅಂಶಗಳೇ ನಾನು ಪೋರ್ಟ್ರೇಯಲ್ ಪ್ರಕಾರ ಆಯ್ದುಕೊಳ್ಳಲು ಮುಖ್ಯ ಕಾರಣ’ ಎನ್ನುತ್ತಾರೆ ವರುಣ್.

ADVERTISEMENT

ಅವರ ರಚನೆಯ ಎಲ್ಲಾ ಚಿತ್ರಗಳಲ್ಲೂ ಕಣ್ಣುಗಳೇ ಮುಖ್ಯ ಆಕರ್ಷಣೆ ಎನ್ನುವುದು ಚಿತ್ರಗಳನ್ನು ನೋಡಿದ ಯಾರಿಗಾದರೂ ಅನ್ನಿಸುತ್ತದೆ. ಕೆಲವು ವರ್ಷ ಕಪ್ಪುಬಣ್ಣದ ಪೆನ್ಸಿಲ್‌ ಸ್ಕೆಚ್ ಮಾಡುತ್ತಿದ್ದರು. ಕಳೆದ 5 ವರ್ಷಗಳಿಂದ ಬಣ್ಣದ ಪೆನ್ಸಿಲ್ ಅವರನ್ನು ಸೆಳೆದಿದೆ.

‘ನಾನು ಮೆಕ್ಯಾನಿಕಲ್ ಎಂಜಿನಿಯರ್. ಕಚೇರಿ ಕೆಲಸ ಮತ್ತು ಮನೆ ಎರಡೇ ಬೋರ್ ಅನ್ನಿಸಲು ಪ್ರಾರಂಭವಾಯಿತು. ಓದು, ಕೆಲಸದ ಒತ್ತಡದ ನಡುವೆ ನಾನು ನನ್ನಿಷ್ಟದ ಚಿತ್ರಕಲೆಯಿಂದ ಸುಮಾರು 7 ವರ್ಷ ದೂರ ಉಳಿದಿದ್ದೆ. ಈ ಜಂಜಾಟಕ್ಕೆ ಕಡಿವಾಣ ಹಾಕುವ ದೃಷ್ಟಿಯಿಂದ ಮತ್ತೆ ನನ್ನ ಹವ್ಯಾಸವನ್ನು ಪ್ರಾರಂಭಿಸಿದೆ. ಕಲೆಯೇ ನನ್ನನ್ನು, ನನ್ನ ಚಿಂತನೆಯನ್ನು ಜೀವಂತವಾಗಿರಿಸಿದೆ’ ಎಂದು ದೃಢವಾಗಿ ನುಡಿಯುತ್ತಾರೆ.

ಸಿನಿಮಾ ನಟರು, ಪ್ರಸಿದ್ಧ ಆಟಗಾರರ ಜೊತೆಗೆ ಬುದ್ಧ, ಗಣೇಶ ಸೇರಿದಂತೆ ಹಲವು ದೇವತೆಗಳ ಚಿತ್ರಗಳನ್ನೂ ಬಿಡಿಸಿದ್ದಾರೆ. ಐಸಿಐಸಿಐ ಬ್ಯಾಂಕ್ ಪ್ರತಿ ವರ್ಷ ನಡೆಸುವ ರಾಷ್ಟ್ರಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಕಳೆದ ವರ್ಷ(2017), 18 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಇವರಿಗೆ ಮೊದಲ ಬಹುಮಾನ ದೊರೆತಿದೆ. ‘ಬಾಜಿರಾವ್ ಮಸ್ತಾನಿ’ ಸಿನಿಮಾದ ರಣವೀರ್ ಸಿಂಗ್ ಅವರ ಮುಖಚಿತ್ರಕ್ಕೆ ಈ ಗೌರವ ಸಂದಿದೆ.

‘ಇದು ನನ್ನ ಮೊದಲನೇ ಪ್ರದರ್ಶನ. ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಈ ಪ್ರೋತ್ಸಾಹ ನನ್ನಲ್ಲಿ ಇನ್ನಷ್ಟು ಚೈತನ್ಯ ಮೂಡಿಸಿದೆ. ಮುಂದಿನ ದಿನಗಳಲ್ಲಿ ಬೇರೆಬೇರೆ ಕಡೆಗಳಲ್ಲಿ ಪ್ರದರ್ಶನ ಏರ್ಪಡಿಸುವ ಇರಾದೆ ಇದೆ’ ಎನ್ನುತ್ತಾರೆ ವರುಣ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.