ADVERTISEMENT

ಆಹಾ...ಅವರೆಬೇಳೆ ಮೇಳ

ಶಶಿಕುಮಾರ್ ಸಿ.
Published 28 ಡಿಸೆಂಬರ್ 2018, 19:30 IST
Last Updated 28 ಡಿಸೆಂಬರ್ 2018, 19:30 IST
ಖಾರ ಹಿತಕಿದ ಅವರೆಬೆಳೆ
ಖಾರ ಹಿತಕಿದ ಅವರೆಬೆಳೆ   

ಮಾಗಿಯ ಚಳಿ ದೇಹವನ್ನು ನಡುಗಿಸುತ್ತಿದೆ. ದೇಹಕ್ಕಪ್ಪಿದ ಚಳಿ ದೂರ ಮಾಡಲು ಏನಾದರೂ ತಿನ್ನಬೇಕಲ್ಲ ಅಂದುಕೊಳ್ಳುವಾಗಲೇ ಮತ್ತೆ ಬಂದಿದೆ ಅವರೆಬೇಳೆ ಮೇಳ. ವಾಸವಿ ಕಾಂಡಿಮೆಂಟ್ಸ್ ಪ್ರತಿವರ್ಷ ಆಯೋಜಿಸುವ ಈ ಮೇಳದ ಹೆಸರು ಕಿವಿಗೆ ಬಿದ್ದೊಡನೆ ಅವರೆಕಾಯಿ, ಅವರೆಬೇಳೆಯ ಲೋಕವೇ ಕಣ್ಮುಂದೆ ಮೈದೆಳೆಯುತ್ತದೆ.

ನಗರದ ವಿ.ವಿ.ಪುರದ ಸಜ್ಜನ್ ರಾವ್ ವೃತ್ತದ ಬಳಿಯ ಆಹಾರ ಬೀದಿಯಲ್ಲಿ (ಫುಡ್ ಸ್ಟ್ರೀಟ್‌) ಇದೇ 29ರಿಂದ ಜ.8ರ ವರೆಗೆ ಈ ಮೇಳ ನಡೆಯಲಿದೆ. 1999ರಿಂದ ಪ್ರತಿವರ್ಷವು ಈ ಮೇಳ ಆಯೋಜಿಸುತ್ತಾಬಂದವರು ವಾಸವಿ ಕಾಂಡಿಮೆಂಟ್ಸ್‌ನ ಗೀತಾ. ಮಲ್ಲೇಶ್ವರ, ನಾಗರಬಾವಿಯಲ್ಲೂ ಮೇಳ ನಡೆಯಲಿದೆ.

ಒಟ್ಟು 11 ದಿನಗಳ ವರೆಗೆ ನಡೆಯಲಿರುವ ಈ ಮೇಳದಲ್ಲಿ ಅವರೆಕಾಯಿ ಹಾಗೂ ಅವರೆಬೇಳೆಯದ್ದೇ ಪಾರುಪಾತ್ಯ. ನಾಲಿಗೆಗೆ ಸ್ವಾದಿಷ್ಟಕರವಾದ ಸಸ್ಯಾಹಾರ ತಿನಿಸುಗಳನ್ನು ಪರಿಚಯಿಸಲುಫುಡ್‌ ಸ್ಟ್ರೀಟ್‌ ಹೇಳಿ ಮಾಡಿಸಿದ ತಾಣ. ಇಲ್ಲಿ ಅವರೆಬೇಳೆ ಮೇಳ ಆಯೋಜಿಸಿದರೆ ಹೇಳಬೇಕೆ... ಜನಜಾತ್ರೆಯೇ ಅಲ್ಲಿ ಸೇರಲಿದೆ.

ADVERTISEMENT

ಕುಟುಂಬಸ್ಥರ, ಸ್ನೇಹಿತರ, ಪ್ರಿಯಕರ ಅಥವಾ ಪ್ರೇಯಸಿಯ ಜೊತೆ ಇಲ್ಲಿಗೆ ಬರುವವರಿಗೆ ಅವರೆಬೇಳೆಯಿಂದ ತಯಾರಿಸಿದ ವಿವಿಧ ಖಾದ್ಯಗಳು ಹಿತ ನೀಡಲಿವೆ. ಪ್ರತಿವರ್ಷದಂತೆ ಈ ಬಾರಿಯೂ ಹತ್ತಾರು ಬಗೆಯ ಅವರೆಬೇಳೆ ಹಾಗೂ ಹಿತಕಿದ ಅವರೆಬೇಳೆ ತಿನಿಸುಗಳನ್ನು ಪರಿಚಯಿಸಲಾಗುತ್ತಿದೆ.

ಹಿತಕಿದ ಅವರೆಬೇಳೆ ಎಂದಾಕ್ಷಣ ತಟ್ಟನೆ ನೆನಪಿಗೆ ಬರುವುದು ಮೊದ್ದೆ ಜೊತೆಗೆ ಹಿತಕಿದ ಅವರೆಬೇಳೆ ಸಾರಿನ ಕಾಂಬಿನೇಷನ್. ಸಾರು ಹಾಗೂ ಬಿಸಿಬಿಸಿಯಾದ ಮುದ್ದೆ ಇದ್ದರೆ ನಾಲಿಗೆಗೆ ರಸದೌತಣವೇ ಸಿಗಲಿದೆ. ಜೊತೆಗೊಂದಿಷ್ಟು ತುಪ್ಪ ಮೇಲೆ ಸುರಿದು ಮುದ್ದೆ ಮುರಿದು ಸಾರಿನಲ್ಲಿ ಉರುಳಾಡಿಸಿ ಬಾಯಿಗಿಟ್ಟರೆ ಅಬ್ಬಾ...ವಾಹ್ ಎನ್ನುವ ಉದ್ಘಾರ ತಾನೇ ಹೊರಳುತ್ತದೆ. ಇಂತಹದ್ದೇ ತರಹೇವಾಗಿ ಖಾದ್ಯಗಳನ್ನು ಈ ಮೇಳದಲ್ಲಿ ಇನ್ನು 14 ದಿನ ಗ್ರಾಹಕರು ಸವಿಯಬಹುದು.

ವಿಶೇಷತೆ ಏನು
‘ಅವರೆಕಾಯಿ ಹಾಗೂ ಅವರೆಬೇಳೆಯಿಂದ ಮಾಡಬಹುದಾದ ಬಹುತೇಕ ಖಾದ್ಯಗಳು ಹಾಗು ತಿನಿಸುಗಳನ್ನು ಈಗಾಗಲೇ ನಾವು ಪರಿಚಯಿಸಿದ್ದಾಗಿದೆ. ಈ ಬಾರಿಯ ವಿಶೇಷ ಅವರೆಬೇಳೆ ಐಸ್‌ಕ್ರೀಮ್. ರುಚಿಯು ತುಂಬಾ ಚೆನ್ನಾಗಿಯೇ ಇರುತ್ತದೆ’ ಎನ್ನುತ್ತಾರೆ ಗೀತಾ.

‘ಪ್ರತಿವರ್ಷ ನಮಗೆ ಅವರೆಕಾಯಿ ಪೂರೈಸುವ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಅವರೆಕಾಯಿ ಪೂರೈಸುವ 25 ರೈತರನ್ನು ಉದ್ಘಾಟನಾ ಕಾರ್ಯಕ್ರಮದ ವೇಳೆ ಸನ್ಮಾನಿಸಲಿದ್ದೇವೆ. ಜೊತೆಗೆ ಮನೋನಂದನ ಸಂಸ್ಥೆಯ ಅಂಗವಿಕಲ ಮಕ್ಕಳಿಗೆ ಆರ್ಥಿಕವಾಗಿ ನೆರವು, ವಿ.ವಿ.ಪುರದ ಪೌರಕಾರ್ಮಿಕ ಮಹಿಳೆಯರಿಗೆ ಉಚಿತವಾಗಿ ಸೀರೆ ವಿತರಿಸಲಿದ್ದೇವೆ. ಕಳೆದ ಬಾರಿ ಉದ್ಘಾಟನೆಗೆ ಬಂದಿದ್ದಕೇಂದ್ರದ ಮಾಜಿ ಸಚಿವ ದಿ. ಅನಂತಕುಮಾರ್ ‘ನಮ್ಮ ಕಾರ್ಯಕ್ರಮಗಳಲ್ಲಿಯೂ ನೀವು ಪಾಲ್ಗೊಳ್ಳಿ’ ಎಂದು ಮನವಿ ಮಾಡಿದ್ದರು. ಹೀಗಾಗಿ, ಅವರ ಆಸೆಯಂತೆ, ಬಸವನಗುಡಿ ನ್ಯಾಷನಲ್ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿರುವ ಅನಂತ ನಮನ ಕಾರ್ಯಕ್ರಮದಲ್ಲೂ ಅವರೆಬೇಳೆಯ ವಿವಿಧ ಖಾದ್ಯಗಳನ್ನು ಪರಿಚಯಿಸುತ್ತಿದ್ದೇವೆ ಎಂದರು.

ಮೇಳದಲ್ಲಿ ಲಭ್ಯವಿರುವ ವಿಶೇಷ ತಿನಿಸು
ಹಿತಕಿದ ಅವರೆಬೇಳೆ ಹೋಳಿಗೆ, ಅವರೆಬೇಳೆ ದೋಸೆ, ಖಾಲಿ ದೊಸೆ, ಬಿಳಿ ಹೋಳಿಗೆ, ಅವರೆ ಕಾಳು ಉಪ್ಪಿಟ್ಟು, ಹಿತಕಿದ ಅವರೆಬೇಳೆ ಜಾಮೂನು, ಹಿತಕಿದ ಅವರೆಬೇಳೆ ಹನಿ ಜಿಲೇಬಿ, ಹಿತಕಿದ ಅವರೆಬೇಳೆ ಅಕ್ಕಿ/ರಾಗಿ ರೋಟ್ಟಿ, ಅವರೆಕಾಳು ಸಾರು, ಅವರೆಕಾಳು ಚಿತ್ರನ್ನ, ಅವರೆಕಾಳು ಪಲಾವ್, ಹಿತಕಿದ ಅವರೆಬೇಳೆ ಎಳ್ಳವರೆ, ನಿಪ್ಪಟ್ಟು ಮಸಾಲ, ಪಾಯಸ, ಅವರೆಬೇಳೆ ರೋಲ್, ಅವರೆಬೇಳೆ ಮಂಚೂರಿ, ಅವರೆಬೇಳೆ ರೂಮಾಲಿ ರೊಟ್ಟಿ, ಕಾರ ಹಿತಕಿದ ಅವರೆಬೇಳೆ, ಪುದೀನಾ ಹಿತಕಿದ ಅವರೆಬೇಳೆ, ಬೆಳ್ಳುಳ್ಳಿ ಹಿತಕಿದ ಅವರೆಬೇಳೆ, ಗೋಡಂಬಿ ಮಿಕ್ಸ್ ಹಿತಕಿದ ಅವರೆಬೇಳೆ, ಅವಲಕ್ಕಿ ಮಿಕ್ಸ್ ಹಿತಕಿದ ಅವರೆಬೇಳೆ, ಕಾಂಗ್ರೆಸ್ ಮಿಕ್ಸ್ ಹಿತಕಿದಬೇಳೆ, ಹಿತಕಿದ ಅವರೆಬೇಳೆ ಹಲ್ವಾ, ಹಿತಕಿದ ಅವರೆಬೇಳೆ ನಿಪ‍್ಪಟ್ಟು, ಪುರಿ ಹಿತಕಿದ ಅವರೆಬೇಳೆ... ಅಬ್ಬಾ ಒಂದೇ ಎರಡೇ ಕಣ್ಣು ಹಸಿರಾಗುವಷ್ಟು, ನಾಲಿಗೆ ಸಾಕೆನಿಸುವಷ್ಟು ಹಾಗೂ ಹೊಟ್ಟೆ ಬಿರಿಯುವಷ್ಟು ಖಾದ್ಯಗಳನ್ನು ಇಲ್ಲಿ ಲಭ್ಯ.

ಎಲ್ಲೆಲ್ಲಿಯ ಅವರೆ
‘ವರ್ಷಕ್ಕೊಮ್ಮೆ ನಡೆಯುವ ಮೇಳಕ್ಕೆ ಮಾಗಡಿ ಭಾಗದಿಂದ ಹೆಚ್ಚಾಗಿ ರೈತರು ಅವರೆಕಾಯಿ ಪೂರೈಸುತ್ತಾರೆ. ಮಳವಳ್ಳಿ, ಮದ್ದೂರು, ಮೈಸೂರು, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಚಿಂತಾಮಣಿ, ಕೋಲಾರ, ಮುಳಬಾಗಿಲು, ಹೊಸಕೋಟೆ ಮುಂತಾದ ಕಡೆಯ ರೈತರಿಂದ ನೇರವಾಗಿ ಅವರೇಕಾಯಿ ಖರೀದಿಸುತ್ತೇವೆ’ ಎಂದು ಮಾಹಿತಿ ನೀಡಿದರು ಗೀತಾ ಅವರ ಮಗಳು ಸ್ವಾತಿ.

ಆಲೋಚನೆ ಚಿಗುರೊಡೆದಿದ್ದು ಹೀಗೆ
‘ಕುಟುಂಬದ ನಿರ್ವಹಣೆಗಾಗಿ 1995ರಲ್ಲಿ ನಗರದ ಮಾವಳ್ಳಿಯ ಮನೆಯಲ್ಲೇ ನಾನು ಹಿತಕಿದ ಅವರೆಬೇಳೆಯ ವಿವಿಧ ತಿನಿಸುಗಳನ್ನು ಮಾಡಲು ಶುರುಮಾಡಿದೆ. ವಾಸವಿ ಕಾಂಡಿಮೆಂಟ್ಸ್ ಶುರುವಾಗಿದ್ದು ಅದೇ ವರ್ಷ. ಅವರೆಕಾಯಿ ಸೀಸನ್ ವೇಳೆ ಅವರೆಕಾಯಿ ಮಾರಾಟಕ್ಕೆ ರೈತರು ಹಿಂದೆ ಫುಡ್‌ಸ್ಟ್ರೀಟ್‌ಗೆ ಬರುತ್ತಿದ್ದರು. ಅವಧಿ ಮುಗಿದ ಬಳಿಕ ಸಾಕಷ್ಟು ಪ್ರಮಾಣದ ಅವರೆಕಾಯಿ ಮಾರಾಟವಾಗದೆ ಉಳಿಯುತ್ತಿತ್ತು. ಅವನ್ನು ರೈತರು ಅಲ್ಲಿಯೇ ಚೆಲ್ಲಿ ಹೋಗುತ್ತಿದ್ದರು. ಕಾಯಿ ಚೆಲ್ಲುವುದನ್ನು ತಡೆಗಟ್ಟಲು, ರೈತರ ನಷ್ಟ ತಡೆಯಲು ಅವರೆಬೇಳೆ ಮೇಳ ಆಯೋಜಿಸಿದರೆ ಹೇಗೆ ಎಂದು ಯೋಚಿಸಿ, ಮೇಳ ಪ್ರಾರಂಭಿಸಿದೆ’ ಎನ್ನುತ್ತಾರೆ ಗೀತಾ.

‘ಮೇಳ ಪ್ರಾರಂಭಿಸಿದ ಮೊದಲೆರಡು ವರ್ಷ ಅಷ್ಟಾಗಿ ಯಶಸ್ವಿ ಆಗಲಿಲ್ಲ. ಕ್ರಮೇಣ ಹೆಚ್ಚಿನ ಸಂಖ್ಯೆಯಲ್ಲಿ ಜನ ಬರತೊಡಗಿದರು. ಗ್ರಾಹಕರ ಬೇಡಿಕೆಗನುಗುಣವಾಗಿ ಅಂದಿನಿಂದ ಇಂದಿನವರೆಗೆ ಹೊಸ ಮಾದರಿಯ ತಿನಿಸುಗಳನ್ನು ಪರಿಚಯಿಸಿತೊಡಗಿದೆವು. ಜನರಿಗೆ ಇಷ್ಟವಾಯಿತು. ‍ಪ್ರಾರಂಭದಿಂದ ಇಂದಿನ ವರೆಗೆ ರುಚಿಯಲ್ಲಾಗಲಿ ಗುಣಮಟ್ಟದಲ್ಲಾಗಿ ರಾಜಿ ಮಾಡಿಕೊಂಡಿಲ್ಲ’ ಎಂದರು.

ಉದ್ಘಾಟನಾ ಸಮಾರಂಭ:ಸಾನ್ನಿಧ್ಯ–ಕುಮಾರಚಂದ್ರಶೇಖರ ಸ್ವಾಮೀಜಿ. ಉದ್ಘಾಟನೆ–ಎಚ್.ಡಿ.ದೇವೇಗೌಡ. ಅತಿಥಿಗಳು–ಗಂಗಾಂಬಿಕೆ ಮಲ್ಲಿಕಾರ್ಜುನ, ಉದಯಗರುಡಾಚಾರ್, ವಾಣಿ ವಿ. ರಾವ್, ತೇಜಸ್ವಿನಿ ಅನಂತ್ ಕುಮಾರ್, ರಾಮಲಿಂಗಾ ರೆಡ್ಡಿ, ತಾರಾ ಅನೂರಾಧ, ಚಿನ್ನೇಗೌಡ, ಎಸ್.ದೊಡ್ಡಣ್ಣ, ರಾಕ್‌ಲೈನ್ ವೆಂಕಟೇಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.