ADVERTISEMENT

ಏರಿಯಲ್ ‘ಶೇರ್ ದಿ ಲೋಡ್’ ಆಂದೋಲನ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2019, 20:00 IST
Last Updated 14 ಫೆಬ್ರುವರಿ 2019, 20:00 IST
ಏರಿಯಲ್ ‘ಶೇರ್ ದಿ ಲೋಡ್’ ಆಂದೋಲನದ ಸಮಾನತೆ ಸಂದೇಶ ಸಾರುವ ಸಂವಾದದಲ್ಲಿ ಪಾಲ್ಗೊಂಡಿದ್ದ   ರಾಜಕುಮಾರ್ ರಾವ್, ಗೌರಿ ಶಿಂಧೆ, ಪತ್ರಲೇಖ, ಟಿ. ಚೋಪ್ರಾ
ಏರಿಯಲ್ ‘ಶೇರ್ ದಿ ಲೋಡ್’ ಆಂದೋಲನದ ಸಮಾನತೆ ಸಂದೇಶ ಸಾರುವ ಸಂವಾದದಲ್ಲಿ ಪಾಲ್ಗೊಂಡಿದ್ದ   ರಾಜಕುಮಾರ್ ರಾವ್, ಗೌರಿ ಶಿಂಧೆ, ಪತ್ರಲೇಖ, ಟಿ. ಚೋಪ್ರಾ   

ಮನೆಗೆ ಅಗತ್ಯ ದಿನಸಿ ಸಾಮಗ್ರಿಗಳ ಖರೀದಿ, ಮಕ್ಕಳ ಹೋಮ್‌ವರ್ಕ್‌ ಸೇರಿದಂತೆ ಬಹುತೇಕ ಕೆಲಸ ಮಾಡುವವರಲ್ಲಿ ಮಹಿಳೆಯರ ಸಂಖ್ಯೆಯೇ ಹೆಚ್ಚು. ವಾರಾಂತ್ಯದಲ್ಲಿ ಈ ಕಾರ್ಯವನ್ನು ಮಾಡುವವರಲ್ಲಿ ಶೇ 72ರಷ್ಟು ಮಹಿಳೆಯರೇ ಇರುತ್ತಾರೆ ಎಂಬ ಮಾಹಿತಿಯನ್ನು ಪ್ರಾಕ್ಟರ್ ಅಂಡ್ ಗ್ಯಾಂಬಲ್ ಸಮೀಕ್ಷೆ ಬಹಿರಂಗ ಪಡಿಸಿದೆ.

ಪುರುಷರಲ್ಲಿ ಶೇ 68ರಷ್ಟು ಜನರು ವಾರಾಂತ್ಯ ಎಂದರೆ ವಿಶ್ರಾಂತಿಯ ದಿನ ಎಂದು ಪರಿಭಾವಿಸುತ್ತಾರೆ. ಶೇ 68ರಷ್ಟು ಮಹಿಳೆಯರು ಕೆಲಸದಿಂದ ಬಂದು ಲಾಂಡ್ರಿ ಬಗ್ಗೆ ಗಮನ ಹರಿಸಿದರೆ, ಶೇ 35ರಷ್ಟು ಪುರುಷರು ಮಾತ್ರ ಇದನ್ನು ಮಾಡುತ್ತಿದ್ದಾರೆ. ಶೇ 40 ರಷ್ಟು ಪುರುಷರಿಗೆ ವಾಷಿಂಗ್ ಮಷಿನ್‌ ಹೇಗೆ ನಿಭಾಯಿಸಬೇಕು ಎಂಬುದೇ ಗೊತ್ತಿಲ್ಲ ಎನ್ನುವ ವಿಷಯವನ್ನೂ ಸಮೀಕ್ಷೆ ಬಯಲು ಮಾಡಿದೆ.

‘ಏರಿಯಲ್ ಡಿಟರ್ಜೆಂಟ್’ ಕಂಪೆನಿಯು ಮನೆಯಲ್ಲಿ ಸಮಾನತೆ ತರಬೇಕೆಂಬ ಉದ್ದೇಶದಿಂದ ‘ಶೇರ್ ದಿ ಲೋಡ್’ ಆಂದೋಲನ ಹಮ್ಮಿಕೊಂಡಿದೆ. ಅದರ ಭಾಗವಾಗಿ ಕುಟುಂಬ ಚಟುವಟಿಕೆಗಳ ಕುರಿತು ಸಮೀಕ್ಷೆಯೊಂದನ್ನು ಮಾಡಿಸಿದೆ.ಸಮೀಕ್ಷೆಯ ವೀಡಿಯೊವನ್ನು ಕಂಪೆನಿ ಜನವರಿ ಕೊನೆಯ ವಾರದಲ್ಲಿ ಬಿಡುಗಡೆ ಮಾಡಿದ್ದು, 1.5 ಕೋಟಿ ಜನರು ಇದನ್ನು ವೀಕ್ಷಿಸಿದ್ದಾರೆ ಎಂದು ಕಂಪೆನಿ ಹೇಳಿಕೊಂಡಿದೆ.

ADVERTISEMENT

ಮನೆಯ ಚಟುವಟಿಕಗಳಲ್ಲಿ ಕುಟುಂಬದ ಪುರುಷರು, ಗಂಡು ಮಕ್ಕಳೂ ಭಾಗಿಯಾಗಬೇಕು. ಈ ಸಂಬಂಧ ಪತ್ನಿ, ತಾಯಿ, ಸಹೋದರಿಯರ ಮೇಲಿರುವ ಹೊರೆಯನ್ನು ಕಡಿಮೆ ಮಾಡಿ, ತಾವೂ ಅದನ್ನು ಸಮನಾಗಿ ಹಂಚಿಕೊಂಡು ನಿಭಾಯಿಸಬೇಕು ಎಂಬುದನ್ನು ಸಾರುವುದು ‘ಶೇರ್ ದಿ ಲೋಡ್‌’ನ ಉದ್ದೇಶ. ಏರಿಯಲ್‌ 2015ರಿಂದ ಈ ಆಂದೋಲನ ಹಮ್ಮಿಕೊಂಡಿದೆ.

ಈ ಆಂದೋಲನದ ಭಾಗವಾಗಿ ಕಂ‍ಪೆನಿ ಇತ್ತೀಚೆಗೆ ಮುಂಬೈನಲ್ಲಿ ಸಂವಾದ ಹಮ್ಮಿಕೊಂಡಿತ್ತು. ನಟರಾದ ರಾಜಕುಮಾರ್ ರಾವ್, ಪತ್ರಲೇಖ, ನಿರ್ದೇಶಕರಾದ ಗೌರಿ ಶಿಂಧೆ, ಬಿಬಿಡಿಒ ಮುಖ್ಯಸ್ಥರಾದ ಜೋಸಿ ಪಾಲ್, ಪಿ ಅಂಡ್ ಜಿ ಮಾರುಕಟ್ಟೆ ನಿರ್ದೇಶಕರಾದ ಸೋನಾಲಿ ಧವನ್ ಪಾಲ್ಗೊಂಡಿದ್ದರು.

ಈ ಆಂದೋಲನ ಬೆಂಬಲಿಸಿದ ನಟ ರಾಜಕುಮಾರ್ ರಾವ್ ಅವರು, ‘ನಾವು ಸರಿಯಾದ ದಾರಿಯಲ್ಲಿ ನಡೆದರೆ ಸಮಾಜದ ವ್ಯವಸ್ಥೆಯನ್ನು ಬದಲಿಸಬಹುದು ಎಂಬುದನ್ನು ಏರಿಯಲ್ ಆಂದೋಲನ ತೋರಿಸಿಕೊಟ್ಟಿದೆ. ನನ್ನ ಅಮ್ಮ ಸಮಾನತೆಯ ಪಾಠ ಹೇಳುತ್ತಲೇ ನನ್ನನ್ನು ಬೆಳೆಸಿದ್ದರಿಂದ ಮಹಿಳೆಯರ ಬಗ್ಗೆ ಹೆಚ್ಚು ಗೌರವ ಹೊಂದುವುದು ಸಾಧ್ಯವಾಯಿತು’ ಎಂದಿದ್ದಾರೆ.

ಸಂವಾದದಲ್ಲಿ ಬದಲಾಗುತ್ತಿರುವ ಕುಟುಂಬ ವ್ಯವಸ್ಥೆಯ ಬಗ್ಗೆ ಚರ್ಚೆಗಳು ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.