ADVERTISEMENT

ಎದೆಹಾಲಿನ ಬ್ಯಾಂಕ್‌ಗೆ ವರ್ಷದ ಹೆಮ್ಮೆ

ತಾಯ್ತನ

ರೋಹಿಣಿ ಮುಂಡಾಜೆ
Published 30 ಅಕ್ಟೋಬರ್ 2018, 19:45 IST
Last Updated 30 ಅಕ್ಟೋಬರ್ 2018, 19:45 IST
‘ಅಮಾರ’ದಲ್ಲಿ ಸ್ಫೂರ್ತಿ ವಿಶ್ವಾಸ್‌ ಜೊತೆ ಡಾ.ಶ್ರೀನಾಥ್‌ ಎಸ್. ಮಣಿಕಂಠ
‘ಅಮಾರ’ದಲ್ಲಿ ಸ್ಫೂರ್ತಿ ವಿಶ್ವಾಸ್‌ ಜೊತೆ ಡಾ.ಶ್ರೀನಾಥ್‌ ಎಸ್. ಮಣಿಕಂಠ   

ಒಂಬತ್ತು ತಿಂಗಳು ತಾಯ ಗರ್ಭದಲ್ಲಿ ಬೆಚ್ಚಗೆ ಇದ್ದು ಜನನವಾಗಬೇಕಾದ ಮಕ್ಕಳು ಅವಧಿಪೂರ್ವ ಜನಿಸಿ ‘ಪ್ರಿ ಮೆಚ್ಯೂರ್‌’ ಎಂದೆನಿಸಿಕೊಳ್ಳುತ್ತವೆ. ಈ ಮಕ್ಕಳು ಅತ್ಯಂತ ಸೂಕ್ಷ್ಮವಾಗಿರುವ ಕಾರಣ ಅವುಗಳ ಲಾಲನೆ ಪಾಲನೆ ‌ಸಂಕೀರ್ಣ ಹಾಗೂ ಸವಾಲಿನದ್ದು. ಅನಿರೀಕ್ಷಿತ ಮತ್ತು ಅಪಾಯಕಾರಿ ಸನ್ನಿವೇಶದಲ್ಲಿ ಮಗುವಿನ ಜನನವಾಗುವುದರಿಂದ ತಾಯಿಯಲ್ಲಿ ಎದೆಹಾಲು ಉತ್ಪತ್ತಿಯಾಗುವ ಪ್ರಮಾಣವೂ ನಿರೀಕ್ಷಿತ ಪ್ರಮಾಣದಲ್ಲಿ ಇರುವುದಿಲ್ಲ. ಆದರೆ ಅವಧಿಪೂರ್ವ ಮಗುವಿಗೆ ಹಸುವಿನ ಹಾಲೋ, ಕೃತಕ ಹಾಲಿನ ಪುಡಿಯನ್ನು ಕಲಸಿಯೋ ಕೊಡುವುದು ಪ್ರಾಣಕ್ಕೇ ಸಂಚಕಾರ ತಂದೀತು.

ಅವಧಿಪೂರ್ವ ಮಕ್ಕಳ ರಕ್ಷಣೆಗೆ ಎದೆಹಾಲೆಂಬ ಅಮೃತವನ್ನು ಒದಗಿಸುವ ಉದ್ದೇಶದಿಂದ ನಗರದಲ್ಲಿ ಫೋರ್ಟಿಸ್‌ ಲಾ ಫೆಮೆ ಆರಂಭಿಸಿದ ‘ಅಮಾರ’ ಎದೆಹಾಲಿನ ಬ್ಯಾಂಕ್‌ ನೂರಾರು ನವಜಾತ ಶಿಶುಗಳನ್ನು ಸಾವಿನಂಚಿನಿಂದ ಕಾಪಾಡಿದೆ. ಇದೀಗ ಮೊದಲ ವರ್ಷವನ್ನು ಪೂರೈಸಿದ ಹೆಮ್ಮೆ ‘ಅಮಾರ’ದ್ದು. ಇದು, ನಗರದ ಮೊದಲ ಸಾರ್ವಜನಿಕ ವೈದ್ಯಕೀಯ ಹಾಲಿನ ಬ್ಯಾಂಕ್‌.

ಎದೆಹಾಲಿನ ಬ್ಯಾಂಕ್‌ನ ಸಾಧಕ ಬಾಧಕಗಳ ಬಗ್ಗೆ ಇನ್ನಷ್ಟು ಪೋಷಕರಲ್ಲಿ ಜಾಗೃತಿ ಮೂಡಿಸಲು ಆಸ್ಪತ್ರೆಯಲ್ಲಿ ಫಲಾನುಭವಿಗಳು ಮತ್ತು ದಾನಿಗಳೊಂದಿಗೆ ವೈದ್ಯರ ತಂಡವೂ ಮಾಧ್ಯಮದೊಂದಿಗೆ ಸಂವಾದ ನಡೆಸಿತು.

ADVERTISEMENT

‘ನವಜಾತ ಶಿಶು ಆರು ತಿಂಗಳು ಪೂರೈಸುವವರೆಗೂ ತಾಯಿಯ ಎದೆಹಾಲೇ ಅಮೃತ. ಮಗುವಿಗೆ ಪ್ರತಿ ಎರಡು ಗಂಟೆಗೊಮ್ಮೆ ಕುಡಿಸುವಷ್ಟು ಹಾಲು ಉತ್ಪತ್ತಿಯಾಗುತ್ತಿದ್ದರೆ ತಾಯಿಗೆ ಸಂತೃಪ್ತಿ. ಅದರ ಹೊಟ್ಟೆ ತುಂಬದಿದ್ದರೆ ಅವಳದೂ ಅಳುಮುಖ. ಒಂಬತ್ತು ತಿಂಗಳು ತುಂಬಿ ಜನನವಾದ ಹುಟ್ಟಿದ ಮಗುವಿಗೆ ಹಾಲು ಕಡಿಮೆಯಾದಾಗ ಹಸುವಿನ ಹಾಲೋ, ಹಾಲಿನ ಪುಡಿಯೋ ಕಲಸಿ ಕೊಟ್ಟರೂ ತೊಂದರೆಯಾಗದು. ಆದರೆ ಅವಧಿಪೂರ್ವ (ಪ್ರಿ ಮೆಚ್ಯೂರ್) ಮಗುವಿಗೆ ಹಸುವಿನ ಹಾಲು ಪ್ರಾಣಾಪಾಯ ತಂದೊಡ್ಡಬಹುದು. ಆದರೆ ಈ ಅರಿವು ಹೆಚ್ಚಿನ ಜನರಿಗೆ ಇಲ್ಲ’ ಎಂದು ಮಾತು ಆರಂಭಿಸಿದರು ಲಾ ಫೆಮೆಯ ನವಜಾತ ಶಿಶು ವಿಭಾಗದ ಮುಖ್ಯಸ್ಥರಾದ ಡಾ.ಶ್ರೀನಾಥ್‌ ಎಸ್. ಮಣಿಕಂಠ.

‘ಫೋರ್ಟಿಸ್ ವತಿಯಿಂದ ದೆಹಲಿಯಲ್ಲಿ ಆರಂಭಿಸಿದ ಎದೆಹಾಲು ಬ್ಯಾಂಕ್‌ಗೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿಯೂ ಆರಂಭಿಸಲಾಯಿತು. ಇದು, ಈ ಆಸ್ಪತ್ರೆಯ ನಿರ್ದೇಶಕ ಮತ್ತು ಅಮಾರದ ಸಹಸಂಸ್ಥಾಪಜ ಡಾ.ರಘುರಾಮ್‌ ಮಲ್ಲಯ್ಯ ಅವರ ಕನಸಿನ ಯೋಜನೆ. ತನ್ನ ಮಗುವಿಗೆ ದಿನವಿಡೀ ನಿಗದಿತ ಅವಧಿಯಲ್ಲಿ ಹಾಲುಣಿಸಿಯೂ ಉತ್ಪತ್ತಿಯಾಗುವ ಹೆಚ್ಚುವರಿ ಹಾಲನ್ನು ತಾಯಿಯಿಂದ ಸಂಗ್ರಹಿಸಲಾಗುತ್ತದೆ. ಲಾ ಫೆಮ್ಮೆಯ ನುರಿತ ಸಿಬ್ಬಂದಿ ದಾನಿ ತಾಯಿಯ ಮನೆಯಲ್ಲೇ ಸಂಗ್ರಹಿಸುತ್ತಾರೆ. ಪ್ಯಾಶ್ಚರೀಕರಣ ಮತ್ತು ಅಗತ್ಯ ಪ್ರಕ್ರಿಯೆಗೆ ಒಳಪಡಿಸಿದ ಈ ಹಾಲು, ಅವಧಿಗೂ ಮುನ್ನ ಜನಿಸಿದ ಮಕ್ಕಳನ್ನು ಬದುಕಿಸುವ ಸಂಜೀವಿನಿಯಾಗುತ್ತದೆ. ಎದೆಹಾಲನ್ನು ಆರು ತಿಂಗಳವರೆಗೂ ಕಾಪಾಡಬಹುದು. ಕೆಲವು ಕಡೆ ಒಂದು ವರ್ಷದವರೆಗೂ ಸಂರಕ್ಷಿಸಿ ಮಕ್ಕಳಿಗೆ ನೀಡುವ ಪರಿಪಾಠವಿದ್ದರೂ ಲಾ ಫೆಮ್ಮೆಯಲ್ಲಿ ಸಂರಕ್ಷಿತ ಎದೆಹಾಲಿನ ಬಳಕೆ ಅವಧಿಯನ್ನು ಆರು ತಿಂಗಳಿಗೇ ಸೀಮಿತಗೊಳಿಸಿದ್ದೇವೆ’ ಎಂದು ಅವರು ವಿವರಿಸಿದರು.

ಎದೆಹಾಲು ನೀಡಿದ ವೈದ್ಯೆ
ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಮಕ್ಕಳ ತಜ್ಞೆಯಾಗಿರುವ ಡಾ.ಸುಮನಾ ಅವರೂ ಈ ಎದೆಹಾಲು ಬ್ಯಾಂಕ್‌ಗೆ ಹಾಲು ಒದಗಿಸಿರುವುದು ವಿಶೇಷ. ‘ನಾನು ಮಕ್ಕಳ ತಜ್ಞೆಯಾಗಿರುವ ಕಾರಣ ನನ್ನ ಮಗುವಿಗೆ ದಿನಕ್ಕೆ ಎಷ್ಟು ಹಾಲು ಬೇಕಾಗುತ್ತದೆ ಎಂಬ ಅರಿವು ನನಗಿದೆ. ಹಾಗಾಗಿ ನನ್ನ ಮಗುವಿಗೆ ನೀಡಿದ ಬಳಿಕವೂ ನನ್ನಲ್ಲಿ ಸಂಗ್ರಹವಾಗುವ ಹೆಚ್ಚುವರಿ ಹಾಲನ್ನು ಅಮಾರಕ್ಕೆ ನೀಡುತ್ತಿದ್ದೇನೆ.ಇದು ಪ್ರತಿಯೊಬ್ಬ ತಾಯಿಯೂ, ನಾಗರಿಕರೂ ಅರ್ಥ ಮಾಡಿಕೊಳ್ಳಬೇಕಾದ ಸಂಗತಿ ಎಂದು ಡಾ.ಸುಮನಾ ಅವರ ಅಭಿಪ್ರಾಯಪಟ್ಟರು.

ನಟಿ ಸ್ಫೂರ್ತಿ ವಿಶ್ವಾಸ್‌, ಲಾ ಫೆಮ್ಮೆ ಮತ್ತು ಅಮಾರದ ಬಗೆಗಿನ ತಮ್ಮ ಅನುಭವಗಳನ್ನು ಹಂಚಿಕೊಂಡರು. ಡಾ. ಶ್ರೀಕಾಂತ್‌ ಸುಬುಧಿ ಹಾಜರಿದ್ದರು.

ಅಮಾರ’ದ ಮೂಲಕ ಎಳೆಯ ಮಕ್ಕಳ ಸುರಕ್ಷೆಗೆ ಕೈಜೋಡಿಸಲು ಬಯಸುವ ತಾಯಂದಿರು ಸಂಪರ್ಕಿಸಬೇಕಾದ ಹೆಲ್ಪ್‌ಲೈನ್‌ ಸಂಖ್ಯೆ:99992 87636

176 ಮಕ್ಕಳು ಫಲಾನುಭವಿಗಳು
‘ಲಾ ಫೆಮ್ಮೆ ಆರಂಭವಾಗಿ ಒಂದೇ ವರ್ಷದೊಳಗೆ 176 ನವಜಾತ ಶಿಶುಗಳಿಗೆ ಎದೆಹಾಲು ಪೂರೈಸಿದೆ. ಲಾ ಫೆಮ್ಮೆಯಲ್ಲಿ ಜನಿಸಿದ ಮಕ್ಕಳಿಗಷ್ಟೇ ಅಲ್ಲದೆ ನಗರದ 31 ಆಸ್ಪತ್ರೆಗಳಲ್ಲಿ ಅವಧಿಗೂ ಮೊದಲು ಜನಿಸಿದ ಮಕ್ಕಳೂ ಪ್ರಯೋಜನ ಪಡೆದಿವೆ. ನಮ್ಮಲ್ಲಿ ಹೆರಿಗೆಯಾದ ತಾಯಂದಿರು ಮತ್ತು ಎದೆಹಾಲು ಬ್ಯಾಂಕ್‌ನ ಪ್ರಯೋಜನ ಪಡೆದ ಕುಟುಂಬಗಳೂ ಹೆಚ್ಚುವರಿ ಎದೆಹಾಲನ್ನು ಬ್ಯಾಂಕ್‌ಗೆ ನೀಡಬಹುದು ಎಂಬ ವಾಸ್ತವವನ್ನು ಅರಿತುಕೊಂಡಿದ್ದಾರೆ. ಹೀಗಾಗಿ ಸ್ವಲ್ಪ ಮಟ್ಟಿಗೆ ಜಾಗೃತಿ ಮೂಡುತ್ತಿದೆ. ಎಷ್ಟೋ ತಾಯಂದಿರು ಹೆಚ್ಚುವರಿ ಹಾಲನ್ನು ಹಿಂಡಿ ತೆಗೆಯುತ್ತಾರೆ. ಅಂದರೆ ವ್ಯರ್ಥ ಮಾಡುತ್ತಾರೆ. ಇದು ತಪ್ಪು. ಮಕ್ಕಳಿಗೆ ಅಮೃತ ಸಮಾನವಾದ ಹಾಲನ್ನು ವ್ಯರ್ಥ ಮಾಡುವ ಬದಲು ಅಮಾರಕ್ಕೆ ಕರೆ ಮಾಡಿದಲ್ಲಿ ಸಿಬ್ಬಂದಿ ಆ ತಾಯಿಯ ಮನೆಗೇ ಹೋಗಿ ಹಾಲು ಸಂಗ್ರಹಿಸುತ್ತಾರೆ’ ಎಂದು ಡಾ.ಪ್ರತಿಮಾ ರೆಡ್ಡಿ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.