ADVERTISEMENT

ಪ್ರಿಪೇಯ್ಡ್‌ ಆಟೊ ನಿಲ್ದಾಣದ ಸುತ್ತಮುತ್ತ...

ಮಂಜುಶ್ರೀ ಎಂ.ಕಡಕೋಳ
Published 8 ಜುಲೈ 2018, 20:16 IST
Last Updated 8 ಜುಲೈ 2018, 20:16 IST
ಕತ್ತಲಲ್ಲಿರುವ ಎಂ.ಜಿ. ರಸ್ತೆಯ ಪ್ರಿಪೇಯ್ಡ್ ಆಟೊ ನಿಲ್ದಾಣ.  
ಕತ್ತಲಲ್ಲಿರುವ ಎಂ.ಜಿ. ರಸ್ತೆಯ ಪ್ರಿಪೇಯ್ಡ್ ಆಟೊ ನಿಲ್ದಾಣ.     

ಸಂಜೆ ಆರು ಗಂಟೆ. ಎಂ.ಜಿ.ರಸ್ತೆಯ ಮೆಟ್ರೊ ರೈಲ್ವೆ ನಿಲ್ದಾಣದ ಮುಂಗಡ ಪಾವತಿ ಆಟೊ ನಿಲ್ದಾಣದ (ಪ್ರಿಪೇಯ್ಡ್ ಆಟೊ ಸ್ಟ್ಯಾಂಡ್) ಬಳಿ ಸಾಲಾಗಿ ನಿಂತಿರುವ ನಾಲ್ಕು ಆಟೊಗಳು... ಆಗಲೇ ಮಳೆ ಹನಿಯ ಚಿಟಪಟ ಸದ್ದು... ಕಚೇರಿ ಕೆಲಸ ಮುಗಿಸಿ ಮನೆಗೆ ಹೋಗುವ ಧಾವಂತ ಆಕೆಗೆ. ಸಂಪಂಗಿರಾಮ ನಗರಕ್ಕೆ ಬರ್ತೀರಾ ಅಂತ ಸಾಲು ಸಾಲು ಆಟೋ ಚಾಲಕರಿಗೆ ಗೋಗರೆದರೂ ಒಬ್ಬರೂ ಬರಲೊಲ್ಲರು...

ಮುಂಗಡ ಆಟೊ ನಿಲ್ದಾಣದಲ್ಲಿದ್ದ ಸಂಚಾರಿ ಮಹಿಳಾ ಪೊಲೀಸ್ ‘ಏನ್ ಮಾಡೋದು ಮೇಡಂ. ಅಲ್ಲಿಗೆ ಯಾರೂ ಬರಲ್ಲ ಅಂತಾರೆ. ತಡೀರಿ ಬೇರೆ ಆಟೊ ಬರಲಿ’ ಅಂತ ಮನೆಗೆ ಹೊರಟವಳಿಗೆ ಸಮಾಧಾನದ ಮಾತುಗಳು. ಅಲ್ರೀ ಪ್ರಿಪೇಡ್ ಆಟೊ ಅಂತ ಯಾಕ್ರೀ ಮಾಡ್ತೀರಿ? ಕರೆದ ಕಡೆಗೆ ಬರಲ್ಲ ಅಂದ್ರೆ ಆಟೊಗಳನ್ನು ಯಾಕೆ ನಿಲ್ಲೋಕೆ ಬಿಡ್ತೀರಿ. ಕಂಪ್ಲೇಂಟ್ ಕೊಡ್ತೀನಿ ನೋಡಿ, ಈ ಆಟೊದವರ ವಿರುದ್ಧ ಅಂದರೂ ಅವಳ ಯಾವ ಮಾತುಗಳಿಗೂ ಕಿಮ್ಮತ್ತಿಲ್ಲ... ಆಟೊಚಾಲಕರು ಆಟೊದೊಳಗೇ ಕೂತು ಮುಸಿಮುಸಿ ನಗುತ್ತಿದ್ದರೆ, ಇಲ್ಲಿ ಅವಳ ಕಣ್ಣಲ್ಲಿ ಇನ್ನೇನು ನೀರು ಜಿನುಗುವುದಷ್ಟೇ ಬಾಕಿ.

–ಇದು ನಗರದ ಎಂ.ಜಿ. ರಸ್ತೆಯಲ್ಲಿರುವ ಪ್ರಿಪೇಯ್ಡ್ ಆಟೊನಿಲ್ದಾಣದ ವಾಸ್ತವ ಚಿತ್ರಣ. ಹಾಗಂತ ಎಲ್ಲಾ ಆಟೊದವರೂ ಬರಲ್ಲ ಅನ್ನೋದಿಲ್ಲ ಅಂತಲ್ಲ. ಕೆಲವರು ಪ್ರಯಾಣಿಕರು ಹೇಳಿದ ಸ್ಥಳಕ್ಕೆ ಹೋಗಲು ಸದಾ ಸಿದ್ಧವಾಗಿದ್ದರೆ, ಮತ್ತೆ ಕೆಲ ಆಟೋದವರಿಗೆ ಗಡಿ ಸಮಸ್ಯೆ! ಅದರಲ್ಲೂ ಮಳೆಗಾಲ ಬಂದರಂತೂ ಆಟೊಗಳಿಗೆ ಬಂಪರ್ ಲಾಟರಿ ಹೊಡೆದಂತೆ ಅವರು ಹೇಳಿದ ದರಕ್ಕೇ ಪ್ರಯಾಣಿಸುವ ಅನಿವಾರ್ಯ ಪ್ರಯಾಣಿಕರದ್ದು. ಕೆಲ ಪ್ರಸಂಗಗಳಲ್ಲಿ ಇದೆಲ್ಲವೂ ಟ್ರಾಫಿಕ್ ಪೊಲೀಸರ ಮುಂದೆಯೇ ನಡೆಯುತ್ತಿದ್ದರೂ ಅವರೆಲ್ಲ ಕಣ್ಣಿದ್ದೂ ಕುರುಡರು!

ADVERTISEMENT

‘ಸಂಜೆಯಾಗುತ್ತಲೇ ಆಟೊದವರೂ ಮನೆಗೆ ಹೋಗಬೇಕು. ಹಾಗಾಗಿ, ಪ್ರಯಾಣಿಕರು ಕರೆದ ಕಡೆಗೆ ಬರಲ್ಲ ಅಂತಾರೆ. ಅವರ ಏರಿಯಾದ ಕಡೆ ಹೋಗುವವರಿದ್ದರೆ ಮಾತ್ರ ಹತ್ತಿಸಿಕೊಳ್ತಾರೆ. ಪ್ರಿಪೇಯ್ಡ್‌ನಲ್ಲಿದ್ದರೂ ಅಷ್ಟೇ. ಇಲ್ಲದಿದ್ದರೂ ಅಷ್ಟೇ. ಹಾಗಂತ ಅವರ ಜತೆಗೆ ಜಗಳ ಕಾದರೆ ಪ್ರಯೋಜನವಿಲ್ಲ. ಬೇರೆ ಆಟೊ ಬರೋತನಕ ತಾಳ್ಮೆಯಿಂದ ಕಾಯಬೇಕಷ್ಟೇ. ನಾವೂ ಆಟೊದವರಿಗೆ ಇಂಥ ಏರಿಯಾಕ್ಕೇ ಹೋಗಿ ಅಂತ ಹೇಳಲಾಗದು. ಅವರ ಹೊಟ್ಟೆಪಾಡನ್ನೂ ನೋಡಬೇಕು. ಪ್ರಯಾಣಿಕರ ಸಮಸ್ಯೆಯನ್ನೂ ಅರ್ಥಮಾಡಿಕೊಳ್ಳಬೇಕು’ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ ಎಂ.ಜಿ. ರಸ್ತೆಯ ಪ್ರಿಪೇಯ್ಡ್ ಆಟೊ ನಿಲ್ದಾಣದ ಸಂಚಾರ ಪೊಲೀಸ್ ಸಿಬ್ಬಂದಿ.

ಈ ಬಗ್ಗೆ ಕೆಲ ಆಟೊ ಚಾಲಕರನ್ನು ಮಾತನಾಡಿಸಿದಾಗ... ‘ನೋಡಿ ಮೇಡಂ ನಾನಂತೂ ಪ್ರಯಾಣಿಕರು ಎಲ್ಲಿಗೆ ಕರೆದರೂ ಹೋಗ್ತೀನಿ. ಪ್ರಯಾಣಿಕರಿಗೂ ಒತ್ತಡ ಇರುತ್ತೆ. ಅದನ್ನು ನಾವೂ ಅರ್ಥ ಮಾಡಿಕೊಳ್ಳಬೇಕು. ಎಲ್ಲೋ ಕೆಲವರು ಹೆಚ್ಚು ದುಡ್ಡು ಕೇಳುವುದರಿಂದ ಆಟೊ ಚಾಲಕರೇ ಹೀಗೆ ಅನ್ನುವ ಭಾವನೆಯೂ ಸಲ್ಲದು’ ಎನ್ನುತ್ತಾರೆ ರಾಜಾಜಿನಗರದ ಆಟೊಚಾಲಕ ರಾಜು.

ಮೆಜೆಸ್ಟಿಕ್‌ನ ಪ್ರಿಪೇಯ್ಡ್ ಆಟೋ ನಿಲ್ದಾಣದಲ್ಲಿ ಎರಡು ವರ್ಷಗಳಿಂದ ಆಟೋ ಓಡಿಸುತ್ತಿರುವ ತಿಮ್ಮೇಗೌಡ ಅವರದ್ದೂ ಇದೇ ಅಭಿಪ್ರಾಯ. ನಿಗದಿತ ಸ್ಥಳಕ್ಕಿಂತ ತುಸು ಹೋದರೆ ಮೀಟರ್ ಹಾಕ್ತೀವಿ. ಇಲ್ಲದಿದ್ದರೆ ಹತ್ತು–ಹದಿನೈದು ರೂಪಾಯಿ ಮಾತ್ರ ಹೆಚ್ಚುವರಿ ಕೇಳ್ತೀವಿ. ಹಾಗಂತ ಬೇಕಾಬಿಟ್ಟಿ ಹಣ ಕೇಳಿ ಪ್ರಯಾಣಿಕರನ್ನು ಸುಲಿಗೆ ಮಾಡಲ್ಲ ಅಂತಾರೆ ಅವರು.

‘ಪ್ರಯಾಣಿಕರು ಕರೆದ ಕಡೆ ಹೋಗೋದು, ಹೆಚ್ಚು ಹಣ ಕೇಳದಿರುವುದು ಇವೆರಡನ್ನುಸರಿಯಾಗಿ ಪಾಲಿಸಿದರೆ ಸಾಕು ನಮ್ಮ ಚಾಲಕರಿಗೆ ಒಳ್ಳೆ ಹೆಸರು ಬರುತ್ತೆ. ಎಲ್ಲೋ ಕೆಲವರು ಕೆಟ್ಟದಾಗಿ ನಡೆದುಕೊಳ್ಳುವುದರಿಂದ ಎಲ್ಲಾ ಆಟೊಚಾಲಕರು ಹಾಗೇ ಇರ್ತಾರೆ ಅಂತ ತಿಳೀಬಾರ್ದು’ ಅಂತಾರೆ ಯಶವಂತಪುರದ ಆಟೊ ಚಾಲಕ ಮಂಜುನಾಥ್.

ಖಾಸಗಿ ಉಸ್ತುವಾರಿಯಲ್ಲಿರುವ ಸಂಗೊಳ್ಳಿ ರಾಯಣ್ಣ ರೈಲ್ವೆನಿಲ್ದಾಣದ ಪ್ರಿಪೇಯ್ಡ್ ಆಟೊ ನಿಲ್ದಾಣ ಮಾತ್ರ ತುಸು ಭಿನ್ನವಾಗಿ ಕಾರ್ಯ ನಿರ್ವಹಿಸುತ್ತಿದೆ. ಅಲ್ಲಿರುವ ಪ್ರಿಪೇಯ್ಡ್‌ ಆಟೊ ಮತ್ತು ಟ್ಯಾಕ್ಸಿ ಸರ್ವೀಸ್ (ಪಾಟ್ಸ್‌) ಪ್ರಯಾಣಿಕರಿಗೆ ಉತ್ತಮ ಸೇವೆ ಒದಗಿಸುತ್ತಿರುವುದು ಕಂಡು ಬಂತು.

ನಿಗದಿತ ಸ್ಥಳಕ್ಕೆ ವೈಜ್ಞಾನಿಕ ದರ ನಿಗದಿ, ಗುಣಮಟ್ಟದ ರಸೀದಿ, ₹ 2 ರೂ ಸೇವಾ ಶುಲ್ಕ, ದೂರು ನೀಡಲು ರಸೀದಿಯಲ್ಲಿ ಮೊಬೈಲ್ ಸಂಖ್ಯೆಯನ್ನು ಮುದ್ರಿಸಲಾಗಿದೆ. ಎಷ್ಟೋ ಬಾರಿ ಲಗೇಜ್ ಅನ್ನು ಆಟೋದಲ್ಲೇ ಬಿಟ್ಟ ಪ್ರಯಾಣಿಕರು, ಈ ಸಂಖ್ಯೆಗೆ ಫೋನ್ ಮಾಡಿ ಲಗೇಜ್ ವಾಪಸ್ ಪಡೆದದ್ದೂ ಇದೆ ಅನ್ನುತ್ತಾರೆ ಪಾಟ್ಸ್‌ನ ಮುಖ್ಯಸ್ಥ ಬಿ. ಚಂದ್ರಶೇಖರ್.

ಗರುಡಾಮಾಲ್‌ ಮುಂಭಾಗದಲ್ಲಿರುವ ಪ್ರೀಪೇಯ್ಡ್‌ ಆಟೋ ನಿಲ್ದಾಣ

ಇನ್ನು ಕೆಎಸ್‌ಆರ್‌ಟಿಸಿ ಕೇಂದ್ರ ಬಸ್‌ನಿಲ್ದಾಣದಲ್ಲಂತೂ ಪ್ರಿಪೇಯ್ಡ್ ಆಟೊ ನಿಲ್ದಾಣ ಮುಚ್ಚಿ ವರ್ಷವಾಗುತ್ತಾ ಬಂದಿದೆ. ಅಹಮದಾಬಾದ್‌ನಿಂದ ಬೆಂಗಳೂರಿಗೆ ಬಂದಿದ್ದ ಕುನಾಲ್, ವಿಮಾನ ನಿಲ್ದಾಣದಿಂದ ಮೆಜೆಸ್ಟಿಕ್ ತನಕ ಎಸಿ ಬಸ್‌ನಲ್ಲಿ ಬಂದಿದ್ರು. ಆದ್ರೆ ಮೆಜೆಸ್ಟಿಕ್‌ ಬಸ್‌ನಿಲ್ದಾಣದಿಂದ ಸುಧಾಮ ನಗರಕ್ಕೆ ಹೋಗಲು ಅವರಿಗೆ ಒಂದೂ ಆಟೊ ಸಿಗಲಿಲ್ಲ. ಸಿಕ್ಕ ಆಟೊದವರು ಇವರಿಗೆ ಕನ್ನಡ ಬರಲ್ಲ ಅಂತ ಗೊತ್ತಾಗಿ ₹ 250, 300 ಅಂತ ಬಾಯಿಗೆ ಬಂದ ರೇಟ್ ಹೇಳತೊಡಗಿದರು.ಇಲ್ಲಿ ಪ್ರಿಪೇಯ್ಡ್ ಆಟೊ ನಿಲ್ದಾಣ ಇದ್ದಿದ್ದರೆ ನಮ್ಮಂಥವರಿಗೆ ತೊಂದರೆಯಾಗುತ್ತಿರಲ್ಲಿಲ್ಲ ಅನ್ನೋದು ಕುನಾಲ್‌ ಅಭಿಮತ.

‘ಈಚೆಗೆ ಇಲ್ಲಿನ ಆಟೊ ನಿಲ್ದಾಣ ನಿರ್ವಹಣೆಯನ್ನು ಉಪ್ಪಾರಪೇಟೆ ಸಂಚಾರ ಪೊಲೀಸ್ ವಿಭಾಗ ಪಡೆದಿದೆ. ಕಿ.ಮೀ. ದರನಿಗದಿಗಾಗಿ ಆರ್‌ಟಿಒಗೆ ಪತ್ರ ಬರೆಯಲಾಗಿದೆ. ಈಗಾಗಲೇ ಟಿಕೆಟ್ ಯಂತ್ರಗಳನ್ನು ತರಿಸಿಕೊಳ್ಳಲಾಗಿದೆ. ದರಪಟ್ಟಿ ಸಿಗುತ್ತಿದ್ದಂತೆಯೇ ಪ್ರಿಪೇಯ್ಡ್ ಆಟೊ ನಿಲ್ದಾಣ ಆರಂಭಿಸಲಾಗುವುದು’ ಎಂದು ಮಾಹಿತಿ ನೀಡಿದರು ಉಪ್ಪಾರಪೇಟೆ ಸಂಚಾರ ಪೊಲೀಸ್ ವಿಭಾಗದ ಸಿಬ್ಬಂದಿ.

ಪ್ರಿಪೇಯ್ಡ್ ಶುರುವಾಗಿದ್ದು ಹೀಗೆ...
‘ಅದು 90ರ ದಶಕದ ಕೊನೆಭಾಗ. ನಗರದಲ್ಲಿ ಆಗಿನ್ನೂ ಸಿಟಿ ಬಸ್‌ಗಳ ಸಂಖ್ಯೆ ಹೆಚ್ಚಿರಲಿಲ್ಲ. ನಾಗರಿಕರು ಆಟೊಗಳಿಗೆ ಹೆಚ್ಚು ಅವಲಿಂಬಿತರಾಗಿದ್ದರು. ಚಾಲಕರು ಹೇಳಿದ್ದ ದರವನ್ನೇ ಪ್ರಯಾಣಿಕರು ಕೊಡಬೇಕಿತ್ತು. ಈ ಸಮಸ್ಯೆ ಅರಿತು ಅಂದಿನ ಎಸ್‌.ಪಿ. ಸಾಂಗ್ಲಿಯಾನಾ ಅವರು ಸಭೆ ನಡೆಸಿ ಪ್ರಿಪೇಯ್ಡ್ ಆಟೊ ನಿಲ್ದಾಣ ಸ್ಥಾಪನೆಯತ್ತ ಒಲವು ತೋರಿದರು’ ಎಂದು ನೆನಪಿಸಿಕೊಳ್ಳುತ್ತಾರೆ ಆ ಸಭೆಯಲ್ಲಿದ್ದ ಪ್ರಿಪೇಯ್ಡ್‌ ಆಟೊ ಮತ್ತು ಟ್ಯಾಕ್ಸಿ ಸರ್ವೀಸ್ ಮುಖ್ಯಸ್ಥ ಬಿ.ಚಂದ್ರಶೇಖರ್

ರೈಲ್ವೆ ಇಲಾಖೆ ಸಹಯೋಗದಲ್ಲಿ ನಗರದ ರೈಲ್ವೆ ನಿಲ್ದಾಣದಲ್ಲಿ ಪ್ರಿಪೇಯ್ಡ್ ಆಟೊ ನಿಲ್ದಾಣಕ್ಕೆ ಚಾಲನೆ ನೀಡಲಾಯಿತು. ಇದನ್ನು ಕರ್ನಾಟಕ ರಾಜೀವ್ ಗಾಂಧಿ ಆಟೊ, ಟ್ಯಾಕ್ಸಿ ಚಾಲಕರ ವೇದಿಕೆ ನಿರ್ವಹಿಸುತ್ತಿದೆ. ಇಲ್ಲಿ ಸಿಸಿಟಿವಿ ವ್ಯವಸ್ಥೆ ಇದೆ. ದಿನದ 24 ಗಂಟೆಯೂ ಪ್ರಯಾಣಿಕರಿಗೆ ಸೇವೆ ದೊರೆಯುತ್ತದೆ. ಇದೇ ಮಾದರಿಯನ್ನು ಮೈಸೂರು, ಚೆನ್ನೈ, ಆಂಧ್ರದಲ್ಲೂ ಅಳವಡಿಸಲಾಗಿದೆ.

ಸಿಬ್ಬಂದಿ ಕೊರತೆ, ವೆಚ್ಚ ಹೆಚ್ಚು
‘ನಗರದಲ್ಲಿ 15 ಪ್ರಿಪೇಯ್ಡ್ ಆಟೊ ನಿಲ್ದಾಣಗಳಿವೆ. ಒಂದು ನಿಲ್ದಾಣದ ನಿರ್ವಹಣೆಗೆ ತಿಂಗಳಿಗೆ ಕನಿಷ್ಠ ₹ 50 ಸಾವಿರ ಬೇಕು. ನಮ್ಮಲ್ಲಿ ಸಿಬ್ಬಂದಿ ಕೊರತೆ ಇದೆ. ದಿನಕ್ಕೆ ಕನಿಷ್ಠ 150ರಿಂದ 200 ಮಂದಿ ಪ್ರಿಪೇಯ್ಡ್ ಆಟೊ ನಿಲ್ದಾಣಕ್ಕೆ ಬಂದು ಟಿಕೆಟ್ ತಗೊಂಡರೆ ಮಾತ್ರ ಆ ನಿಲ್ದಾಣವನ್ನು ನಡೆಸಬಹುದು. ಇಲ್ಲದಿದ್ದರೆ ಅಲ್ಲಿ ನಮ್ಮ ಸಂಪನ್ಮೂಲ ವ್ಯರ್ಥವಾಗುತ್ತದೆ. ಜನರ ಬೇಡಿಕೆ ಇದ್ದ ಕಡೆ ನಿಲ್ದಾಣ ಆರಂಭಿಸಬಹುದು. ಆಟೊ ಚಾಲಕರು ತೊಂದರೆ ಕೊಟ್ಟರೆ, ಪ್ರಯಾಣಿಕರು ಕರೆದ ಕಡೆಗೆ ಬರಲ್ಲ ಅಂದರೆ ಟ್ರಾಫಿಕ್ ಕಂಟ್ರೋಲ್ ರೂಂಗೆ ಕರೆ ಮಾಡಿ ದೂರು ನೀಡಿದರೆ ಕ್ರಮ ಕೈಗೊಳ್ಳುತ್ತೇವೆ’ ಎನ್ನುತ್ತಾರೆ ಹೆಚ್ಚುವರಿ ಪೊಲೀಸ್ ಕಮಿಷನರ್ (ಸಂಚಾರ) ಆರ್. ಹಿತೇಂದ್ರ.

ಎಂ.ಜಿ. ರಸ್ತೆ ಆಟೊನಿಲ್ದಾಣಕ್ಕೆ ವಿದ್ಯುತ್ ಇಲ್ಲ!
ಪ್ರತಿಷ್ಠಿತ ಎಂ.ಜಿ.ರಸ್ತೆಯ ಪ್ರಿಪೇಯ್ಡ್ ಆಟೊನಿಲ್ದಾಣ ಕತ್ತಲಲ್ಲಿ ಮುಳುಗಿದೆ. ಕಾರಣ ಒಂದು ವರ್ಷದಿಂದ ವಿದ್ಯುತ್ ಬಿಲ್ ಪಾವತಿಸಿಲ್ಲ. ₹ 10 ಸಾವಿರ ವಿದ್ಯುತ್ ಬಿಲ್ ಬಾಕಿ ಇರುವುದರಿಂದ ಕೆಇಬಿ ಫ್ಯೂಸ್‌ ಕಿತ್ತುಕೊಂಡು ಹೋಗಿದೆ. ಹಾಗಾಗಿ, ಇಲ್ಲಿನ ಕೌಂಟರ್‌ನಲ್ಲಿ ರಸೀದಿ ಚೀಟಿ ಕೊಡುತ್ತಿಲ್ಲ. ಅಲ್ಲಿನ ಸಿಬ್ಬಂದಿ ಕತ್ತಲಲ್ಲೇ ಕಾರ್ಯ ನಿರ್ವಹಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.