ADVERTISEMENT

‘ಎಲಿಮೆಂಟ್ಸ್‌’ ಪ್ರದರ್ಶನ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2019, 11:05 IST
Last Updated 5 ಅಕ್ಟೋಬರ್ 2019, 11:05 IST
ಮೆಟ್ರೊ ರಂಗೋಲಿಯಲ್ಲಿ ಪ್ರದರ್ಶನ ಆಯೋಜಿಸುತ್ತಿರುವ ತಂಡ
ಮೆಟ್ರೊ ರಂಗೋಲಿಯಲ್ಲಿ ಪ್ರದರ್ಶನ ಆಯೋಜಿಸುತ್ತಿರುವ ತಂಡ   

ರಾಸಾಯನ ವಿಜ್ಞಾನದಲ್ಲಿ ಬರುವ ಮೂಲವಸ್ತುಗಳ ವರ್ಗೀಕರಣ ಪಟ್ಟಿಯು 150ನೇ ವರ್ಷಾಚರಣೆಯ ಹೊಸ್ತಿಲಲ್ಲಿದೆ. ಈ ಸಂಭ್ರಮವನ್ನು ಆಚರಿಸಲುವಿಶ್ವಸಂಸ್ಥೆಯು 2019ನ್ನು ಅಂತರರಾಷ್ಟ್ರೀಯ‘ಪಿರಿಯಾಡಿಕ್‌ ಟೇಬಲ್‌’ ವರ್ಷ ಎಂದು ಘೋಷಿಸಿದೆ.

ಈ ಹಿನ್ನೆಲೆಯಲ್ಲಿ ರಾಯಲ್‌ ಸೊಸೈಟಿ ಆಫ್‌ ಕೆಮಿಸ್ಟ್ರಿ ಮಕ್ಕಳು ಮತ್ತು ವಿದ್ಯಾರ್ಥಿಗಳಿಗಾಗಿ ವರ್ಷವಿಡಿ ವೈವಿಧ್ಯಮಯ ವೈಜ್ಞಾನಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಬೆಂಗಳೂರಿನ ಸೈನ್ಸ್‌ ಗ್ಯಾಲರಿ, ಜವಾಹರ ಲಾಲ್‌ ನೆಹರೂ ಸೆಂಟರ್‌ ಫಾರ್‌ ಅಡ್ವಾನ್ಸ್ಡ್‌ ಸೈಂಟಿಫಿಕ್‌ ರಿಸರ್ಚ್‌ ಸಹಯೋಗದಲ್ಲಿ ರಾಯಲ್‌ ಸೊಸೈಟಿ ಆಫ್‌ ಕೆಮಿಸ್ಟ್ರಿ ಅ.5ರಿಂದ 11ರವರೆಗೆ ಎಲಿಮೆಂಟ್ಸ್‌ ಪ್ರದರ್ಶನ ಹಮ್ಮಿಕೊಂಡಿದೆ. ಮಹಾತ್ಮ ಗಾಂಧಿ ರಸ್ತೆಯ ರಂಗೋಲಿ ಮೆಟ್ರೊ ಆರ್ಟ್‌ ಸೆಂಟರ್‌ನಲ್ಲಿ ಪ್ರದರ್ಶನ ನಡೆಯಲಿದ್ದು, ವಿದ್ಯಾರ್ಥಿಗಳು ಸೇರಿದಂತೆ ಎಲ್ಲರಿಗೂ ಮುಕ್ತ ಪ್ರವೇಶವಿದೆ.

ADVERTISEMENT

1869ರಲ್ಲಿ ರಷ್ಯಾದ ರಾಸಾಯನ ವಿಜ್ಞಾನಿ ಡಿಮಿಟ್ರಿ ಮೆಂಡಲೀವ್‌, ಸುಸಜ್ಜಿತ ಪಿರಿಯಾಡಿಕ್‌ ಟೇಬಲ್‌ ಸಿದ್ಧಪಡಿಸಿದ.ಅದಕ್ಕೂ ಮೊದಲು ಕೆಲವು ವಿಜ್ಞಾನಿಗಳು ಅನೇಕ ವರ್ಗೀಕರಣ ಪಟ್ಟಿ ಸಿದ್ಧಪಡಿಸಿದ್ದರು. ಇಂದಿಗೂ ರಾಸಾಯನ ವಿಜ್ಞಾನ ಮಾತ್ರವಲ್ಲ ಮೆಡಿಸಿನ್‌, ಫಾರ್ಮಸಿ ಸೇರಿದಂತೆ ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ಮೆಂಡಲೀವ್‌ ವರ್ಗೀಕರಣ ಪಟ್ಟಿ ವ್ಯಾಪಕವಾಗಿ ಬಳಕೆಯಲ್ಲಿದೆ. ಈ ಎಲ್ಲ ವರ್ಗೀಕರಣ ಪಟ್ಟಿಗಳೂ ಪ್ರದರ್ಶನದಲ್ಲಿವೆ.

ಪಿರಿಯಾಡಿಕ್‌ ಟೇಬಲ್‌ ಮತ್ತು ಮೂಲಧಾತುಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಸ್ಥಳದಲ್ಲಿಯೇ ಪ್ರಾತ್ಯಕ್ಷಿಕೆ ಮೂಲಕ ಉತ್ತರ ನೀಡಲಾಗುವುದು ಎಂದು ಬೆಂಗಳೂರು ಸೈನ್ಸ್‌ ಗ್ಯಾಲರಿಯ ಕ್ಯುರೇಟರ್‌ ಮಧು, ನೇಹಾ ಅರೋರಾ ಮತ್ತು ರಾಯಲ್‌ ಸೊಸೈಟಿ ಆಫ್‌ ಕೆಮಿಸ್ಟ್ರಿ (ಭಾರತ) ಎಕ್ಸ್‌ಟರ್ನಲ್‌ ರಿಲೇಶನ್‌ ಆಫೀಸರ್ ರಾಜೇಶ್‌ ಪಾರಿಶ್ವಾಡ್‌ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.ನಗರದ ಯುವ ಮನಸುಗಳು ವೈಜ್ಞಾನಿಕ ಚಟುವಟಿಕೆಗಳಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ವಿಶೇಷವಾಗಿ ಶಾಲಾ ಮಕ್ಕಳು ವಿಜ್ಞಾನದ ಬಗ್ಗೆ ಕುತೂಹಲ ಹೊಂದಿರುತ್ತಾರೆ. ಅಂಥ ಕುತೂಹಲದ ಮನಸುಗಳು ತಮ್ಮ ಅರಿವಿನ ಲೋಕವನ್ನು ಮತ್ತಷ್ಟು ವಿಸ್ತರಿಸಿಕೊಳ್ಳಲು ಈ ಕಾರ್ಯಕ್ರಮ ನೆರವಾಗಲಿದೆ. ರಾಜೇಶ್‌ ಪಾರಿಶ್ವಾಡ್‌, ರಾಯಲ್‌ ಸೊಸೈಟಿ ಆಫ್‌ ಕೆಮಿಸ್ಟ್ರಿಯ ಭಾರತದ ಎಕ್ಸ್ಟ್‌ರ್ನಲ್‌ ರಿಲೇಷನ್‌ ಮ್ಯಾನೇಜರ್‌

ಇಲ್ಲಿಯವರೆಗೆ 118 ಮೂಲಧಾತುಗಳನ್ನು (elements) ಗುರುತಿಸಲಾಗಿದೆ. ಒಂದು ಧಾತು ಮತ್ತೊಂದು ಧಾತುವಿಗಿಂತ ಭಿನ್ನವಾಗಿರುವುದರಿಂದ ಅವುಗಳನ್ನು ಸಂಕೇತಗಳಲ್ಲಿ ಸೂಚಿಸಲಾಗುತ್ತದೆ.

ಮೂಲಧಾತುವಿನ ಹೆಸರುಗಳನ್ನು ಸಂಕೇತಗಳಲ್ಲಿ ಸೂಚಿಸುವ ಪದ್ಧತಿಯನ್ನು ಬರ್ಜೀಲಿಯಸ್ ಎಂಬ ವಿಜ್ಞಾನಿ 1814ರಲ್ಲಿ ಕಂಡುಕೊಂಡರು. ಒಂದು ಧಾತು ಅಥವಾ ಮೂಲವಸ್ತುವಿನ ಅತ್ಯಂತ ಚಿಕ್ಕ ಕಣವನ್ನು ಪರಮಾಣು ಎನ್ನುತ್ತಾರೆ. ಮೂಲಧಾತುವಿನ ಗುಂಪು, ಸಂಖ್ಯೆ ಮತ್ತು ಇಂಗ್ಲಿಷ್‍ ಸಂಕೇತವನ್ನು ತೋರಿಸುವ ಪಟ್ಟಿಗೆ ‘ಪೀರಿಯಾಡಿಕ್ ಟೇಬಲ್’ ಅಥವಾ ‘ಆವೃತ್ತಕೋಷ್ಠಕ’ ಎನ್ನುತ್ತಾರೆ.

ಪ್ರದರ್ಶನದಲ್ಲಿ ಏನಿವೇ?
* ಪಿರಿಯಾಡಿಕ್‌ ಟೇಬಲ್‌ ಇತಿಹಾಸ
* ಸಾರ್ವಜನಿಕರು ತರುವ ಮೂಲವಸ್ತುಗಳ ಪರೀಕ್ಷೆ
* ಪಿರಿಯಾಡಿಕ್‌ ಟೇಬಲ್‌ಗೆ ಸಂಬಂಧಿಸಿದಂತೆ ರಾಯಲ್‌ ಸೊಸೈಟಿ ಆಫ್‌ ಕೆಮಿಸ್ಟ್ರಿ ಆ್ಯಪ್‌ ಅನ್ನು ಸ್ಥಳದಲ್ಲಿಯೇ ಡೌನ್‌ಲೋಡ್‌ ಮಾಡಿಕೊಳ್ಳಬಹುದು
*ಮೂಲಧಾತುಗಳೊಂದಿಗೆ ಪ್ರಯೋಗ ಮಾಡಲು ಅವಕಾಶ

ಸ್ಥಳ– ರಂಗೋಲಿ ಮೆಟ್ರೊ ಆರ್ಟ್‌ ಸೆಂಟರ್‌, ಎಂ.ಜಿ ರಸ್ತೆ. ಬೆಳಿಗ್ಗೆ 10ರಿಂದ 7.30

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.