ADVERTISEMENT

ಹಬ್ಬಗಳ ಸುಗ್ಗಿ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2019, 19:45 IST
Last Updated 12 ಆಗಸ್ಟ್ 2019, 19:45 IST
   

ಮಹಾಲಕ್ಷ್ಮಿ ವ್ರತಕ್ಕಾಗಿ ತಂದಿದ್ದ ಬಾಳೆದಿಂಡು, ಹೂವು, ಹಣ್ಣು, ತಳಿರು ತೋರಣ ಒಣಗುವ ಮುನ್ನವೇ ಅದಾಗಲೇ ಕಣ್ಣು ಕುಕ್ಕುವ ರಾಖಿ, ತ್ರಿವಣ ಧ್ವಜ, ಗೌರಿ ಮತ್ತು ಗಣೇಶ ವಿಗ್ರಹಗಳು ಮಾರುಕಟ್ಟೆಯಲ್ಲಿ ರಾರಾಜಿಸುತ್ತಿವೆ.ಫ್ರೆಂಡ್ಸ್‌ಶಿಪ್‌ ಡೇ ಬ್ಯಾಂಡ್‌ ಡಬ್ಬ ಸೇರಿ ಅವುಗಳ ಜಾಗದಲ್ಲಿ ಬಣ್ಣ, ಬಣ್ಣದ ರಾಖಿಗಳು ನೇತಾಡುತ್ತಿವೆ.

ಅಣ್ಣ–ತಂಗಿಯರ ಬಾಂಧವ್ಯದ ಸಂಕೇತವಾದ ರಕ್ಷಾ ಬಂಧನ ಮತ್ತು ಸ್ವಾತಂತ್ರ್ಯೋತ್ಸವ ಒಟ್ಟೊಟ್ಟಾಗಿ ಬಂದಿರುವುದು ಹಬ್ಬದ ಸಂಭ್ರಮವನ್ನು ಹೆಚ್ಚಿಸಿವೆ. ಹಬ್ಬದ ಸಂಭ್ರಮದಿಂದ ಮಾರುಕಟ್ಟೆ ಕಳೆಗಟ್ಟಿವೆ. ರಕ್ಷಾ ಬಂಧನ ಮತ್ತು ಸ್ವಾತಂತ್ರ್ಯೋತ್ಸವಕ್ಕಾಗಿ ವಿವಿಧ ಕಂಪನಿಗಳು ಈಗಾಗಲೇ ಆಕರ್ಷಕ ಕೊಡುಗೆ ಮತ್ತು ಶೇ 50ರಷ್ಟು ರಿಯಾಯ್ತಿ ಘೋಷಿಸಿವೆ. ಪೈಪೋಟಿಯಲ್ಲಿ ಆನ್‌ಲೈನ್‌ ಮಾರುಕಟ್ಟೆ ಕೂಡ ಹಿಂದೆ ಬಿದ್ದಿಲ್ಲ.

ಸ್ವಾತಂತ್ರ್ಯೋತ್ಸವಕ್ಕಾಗಿ ಖಾದಿ ಭಂಡಾರಗಳು ಖಾದಿ ಬಟ್ಟೆ ಮೇಲೆ ವಿಶೇಷ ರಿಯಾಯ್ತಿ ಘೋಷಿಸಿವೆ. ಸೀರೆ, ಬಟ್ಟೆ, ವಾಚ್‌, ಚಿನ್ನ ಮತ್ತು ವಜ್ರಾಭರಣ, ಪಾದರಕ್ಷೆ, ಸನ್‌ಗ್ಲಾಸ್‌, ಎಲೆಕ್ಟ್ರಾನಿಕ್‌ ಉಪಕರಣ, ಗ್ಯಾಜೆಟ್‌, ಗೃಹೋಪಯೋಗಿ ಸಲಕರಣೆ ಮತ್ತು ಪೀಠೋಪಕರಣಗಳ ಭರ್ಜರಿ ಸೇಲ್ ನಡೆಯುತ್ತಿವೆ.

ADVERTISEMENT

ಆನ್‌ಲೈನ್‌ನಲ್ಲಿ ಮೊಬೈಲ್‌ ಮತ್ತು ಗ್ಯಾಜೆಟ್‌ ಖರೀದಿಗೆ ಗ್ರಾಹಕರು ಮುಗಿಬಿದ್ದಿದ್ದಾರೆ. ಸೇಲ್‌ ಆರಂಭವಾದ ಕೆಲವೇ ಗಂಟೆಗಳಲ್ಲಿ ಕೆಲವು ಬ್ರ್ಯಾಂಡ್‌ನ ಮೊಬೈಲ್‌ಗಳ ಮುಂದೆ ‘ಔಟ್‌ ಆಫ್‌ ಸ್ಟಾಕ್‌‘ ಸೂಚನೆ ಕಂಡು ಬರುತ್ತಿದೆ. ಆನ್‌ಲೈನ್‌ ಮಾರುಕಟ್ಟೆಯಲ್ಲಿ ಮೊಬೈಲ್‌ ಮತ್ತು ಎಲೆಕ್ಟ್ರಾನಿಕ್‌ ಉಪಕರಣ ಹೆಚ್ಚು ಬಿಕರಿಯಾಗಿವೆ.

ರಕ್ಷಾ ಬಂಧನದಲ್ಲಿ ಸಹೋದರಿಯರಿಗೆ ಕಾಣಿಕೆ ನೀಡಲೆಂದೇ ವಿಶೇಷಚಾಕಲೇಟ್‌, ಮಿಠಾಯಿ ಆಕರ್ಷಕ ಡಬ್ಬಗಳು ಮಾರುಕಟ್ಟೆಗೆ ಬಂದಿವೆ. ಆಶಾ ಸ್ವೀಟ್ಸ್‌, ಕಾಂತಿ ಸ್ವೀಟ್ಸ್‌, ಕೆ.ಸಿ ದಾಸ್‌, ಕೃಷ್ಣ ಭವನ, ವೆಂಕಟೇಶ್ವರ ಸ್ವೀಟ್‌ ಸ್ಟಾಲ್‌ ಮುಂತಾದಸಿಹಿ, ತಿಂಡಿ ತಿನಿಸುಗಳ ಅಂಗಡಿಗಳು ಕಾಲಿಡಲು ಜಾಗವಿಲ್ಲದಷ್ಟು ಗಿಜಿಗುಡುತ್ತಿವೆ.

‘ಇಂದಿನ ಜನರಿಗೆ ಮನೆಯಲ್ಲಿ ಸಿಹಿ ತಿಂಡಿ ತಯಾರಿಸಲು ಪುರಸೊತ್ತು ಮತ್ತು ತಾಳ್ಮೆ ಇಲ್ಲ. ನಗರದ ಜನರು ಹಬ್ಬಕ್ಕಾಗಿಅಂಗಡಿಗಳಿಂದಲೇ ಕುರುಕುಲು ಮತ್ತು ಸಿಹಿ ತಿಂಡಿ ಖರೀದಿಸುತ್ತಿದ್ದಾರೆ. ಕೆಲವು ಕಾರ್ಪೊರೇಟ್‌ ಕಂಪನಿಗಳು ಮುಂಗಡವಾಗಿ ಬುಕ್ಕಿಂಗ್‌ ಮಾಡಿವೆ. ಮಧುಮೇಹ ಹಾವಳಿಯಿಂದ ಸಕ್ಕರೆ ಕಡಿಮೆ ಇರುವ ಮತ್ತು ಬೆಲ್ಲದಿಂದ ತಯಾರಿಸಿದ ಸಿಹಿ ತಿಂಡಿಗಳಿಗೆ (ಶುಗರ್‌ಲೆಸ್ ಸ್ವೀಟ್ಸ್‌) ಬೇಡಿಕೆ ಹೆಚ್ಚುತ್ತಿದೆ‘ ಎನ್ನುತ್ತಾರೆ ಸಿಹಿ ತಿಂಡಿ ಅಂಗಡಿಗಳ ಮಾಲೀಕರು.

ಮುಂದಿನ ತಿಂಗಳು ಮೊದಲ ವಾರ ಗೌರಿ, ಗಣೇಶ ಹಬ್ಬಕ್ಕಾಗಿ ಈಗಾಗಲೇ ಆಳೆತ್ತರದ ಗಣೇಶ ವಿಗ್ರಹಗಳು ಮಾರುಕಟ್ಟೆಗೆ ಬಂದಿವೆ. ಪ್ಲಾಸ್ಟರ್‌ ಆಫ್ ಪ್ಯಾರೀಸ್‌ ಮತ್ತು ಬಣ್ಣದ ಗಣಪ ಬೇಡ ಎಂಬ ಅಭಿಯಾನವೂ ಚುರುಕುಗೊಂಡಿದೆ. ಜೇಡಿ ಮಣ್ಣಿನಿಂದ ಮಾಡಿದ ಸಾದಾ ಗಣೇಶ ಮೂರ್ತಿಗಳ ತಯಾರಿಕೆಗೂ ಚಾಲನೆ ಸಿಕ್ಕಿದೆ.

‘ಐದಡಿಗಿಂತ ಹೆಚ್ಚು ಎತ್ತರದ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವಂತಿಲ್ಲ’ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶ ಹೊರಡಿಸಿರುವುದರಿಂದ ಈಗಾಗಲೇ ದೊಡ್ಡ ವಿಗ್ರಹ ತಯಾರಿಸಿರುವ ಕಲಾವಿದರು ತೊಂದರೆಗೆ ಸಿಲುಕಿದ್ದಾರೆ.

ರಾಷ್ಟ್ರೀಯ ಹಬ್ಬಕ್ಕಾಗಿ ವೈವಿಧ್ಯಮಯ ಕಾರ್ಯಕ್ರಮ

ಸ್ವಾತಂತ್ರ್ಯೋತ್ಸವ ಅಂಗವಾಗಿ ಸಸ್ಯಕಾಶಿ ಲಾಲ್‌ಬಾಗ್‌ ಉದ್ಯಾನದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಆಯೋಜಿಸಿರುವ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನ ಜನರನ್ನು ಸೆಳೆಯುತ್ತಿದೆ.

ಇದೇ 8ರಿಂದ ಆರಂಭವಾಗಿರುವ ಪ್ರದರ್ಶನ ಆಗಸ್ಟ್‌ 19ರವರೆಗೆ ನಡೆಯಲಿದೆ. ಸಾಲು ಸಾಲು ರಜೆ ಕಾರಣ ತುಂತುರು ಮಳೆಯ ನಡುವೆಯೇ ಜನರು ಹೂವುಗಳ ಲೋಕವನ್ನು ಕಣ್ತುಂಬಿಕೊಳ್ಳಲು ಲಾಲ್‌ಬಾಗ್‌ ಕಡೆ ಹೆಜ್ಜೆ ಹಾಕುತ್ತಿದ್ದಾರೆ.

ದೇಶಭಕ್ತಿ ಸಾರುವ, ತ್ಯಾಗ, ಬಲಿದಾನ ಬಿಂಬಿಸುವ ವಿಶೇಷ ಸಾಕ್ಷ್ಯಚಿತ್ರ ಪ್ರದರ್ಶನ, ಛಾಯಾಚಿತ್ರ ಮತ್ತು ಚಿತ್ರಕಲಾ ಪ್ರದರ್ಶನ, ಸಿನಿಮಾ ಉತ್ಸವ, ವಿಚಾರ ಸಂಕಿರಣ, ಸಂಗೀತ ಕಛೇರಿ, ಬೈಕ್‌ ರ‍್ಯಾಲಿ ಆಯೋಜಿಸಲಾಗಿದೆ. ಸಂಘ, ಸಂಸ್ಥೆಗಳು, ಆಸ್ಪತ್ರೆ ಮತ್ತು ಶಾಲೆ, ಕಾಲೇಜುಗಳಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ.

ಮಾಲ್‌ಗಳಲ್ಲಿ ದೇಶದ ಹಳೆಯ ಕಾರುಗಳ ಪ್ರದರ್ಶನ, ಹೋಟೆಲ್‌ಗಳಲ್ಲಿ ಭಾರತೀಯ ಸ್ಟ್ರೀಟ್‌ ಫುಡ್‌ ಮೇಳ ನಡೆಯುತ್ತಿವೆ. ಕೇಕ್‌ನಲ್ಲಿ ಅರಳಿ ನಿಂತ ಬೃಹತ್‌ ತ್ರಿವರ್ಣ ಧ್ವಜ ಎಲ್ಲರ ಗಮನ ಸೆಳೆಯುತ್ತಿದೆ.

ಮಕ್ಕಳ ತಾಲೀಮು

ಸ್ವಾತಂತ್ರ್ಯೋತ್ಸವದಂದು ಮಹಾತ್ಮ ಗಾಂಧಿ ರಸ್ತೆಯ ಮಾಣೆಕ್‌ ಶಾ ಪರೇಡ್‌ ಮೈದಾನದಲ್ಲಿ ನಡೆಯಲಿರುವಕವಾಯತು ಮತ್ತು ಪಥಸಂಚಲನಕ್ಕಾಗಿ ಪೂರ್ವ ಸಿದ್ಧತೆಗಳು ಭರದಿಂದ ನಡೆದಿವೆ.

ಶಾಲೆ, ಕಾಲೇಜು ವಿದ್ಯಾರ್ಥಿಗಳು,ಎನ್‌ಸಿಸಿ ಕೆಡೆಟ್‌ಗಳು, ಎನ್‌ಎಸ್‌ಎಸ್‌ ವಿದ್ಯಾರ್ಥಿಗಳು, ಪೊಲೀಸರು ತುಂತುರು ಮಳೆಯ ನಡುವೆಯೇ ಕವಾಯತು ತಾಲೀಮು ನಡೆಸುತ್ತಿದ್ದಾರೆ. ನಗರದ ವಿವಿಧ ಶಾಲೆಗಳ ಮಕ್ಕಳು ನೃತ್ಯ, ನೃತ್ಯರೂಪಕ, ಯೋಗ ಮತ್ತು ಟ್ಯಾಬ್ಲೊ ರಿಹರ್ಸನಲ್ಲಿ ತೊಡಗಿದ್ದಾರೆ.

ಕರಿನೆರಳು

ಉತ್ತರ ಕರ್ನಾಟಕದಲ್ಲಿ ಸುರಿಯುತ್ತಿರುವ ಭಾರಿ ಮಳೆ, ಪ್ರವಾಹ ಮತ್ತು ಜೀವಹಾನಿಯ ಛಾಯೆ ಹಬ್ಬದ ಸಂಭ್ರಮದ ಮೇಲೆ ಬಿದ್ದಿದೆ. ಜನರ ಬದುಕು ನೆರೆಯಲ್ಲಿ ಕೊಚ್ಚಿಹೋಗಿದೆ. ಬದುಕು ಕಟ್ಟಿಕೊಳ್ಳಲು ಅವರು ಶ್ರಮಿಸುತ್ತಿದ್ದಾರೆ. ಇಂತಹ ಸಂಕಷ್ಟದ ಸಮಯದಲ್ಲಿ ಹಬ್ಬವನ್ನು ಸಂಭ್ರಮದಿಂದ ಆಚರಿಸುವುದು ಸರಿ ಅಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ವಿದ್ಯಾರ್ಥಿಗಳು ಮತ್ತು ಸ್ವಯಂಸೇವಕರು ಸಂತ್ರಸ್ತರಿಗಾಗಿ ದೇಣಿಗೆ ಸಂಗ್ರಹದಲ್ಲಿ ತೊಡಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.