ADVERTISEMENT

ಇಂದು, ನಾಳೆ ‘ಕಾರ್ನಾಡ ಉತ್ಸವ’

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2019, 19:45 IST
Last Updated 20 ಡಿಸೆಂಬರ್ 2019, 19:45 IST
 ಕಾರ್ನಾಡ್‌ ಉತ್ಸವ
 ಕಾರ್ನಾಡ್‌ ಉತ್ಸವ   

ಜೀವನದುದಕ್ಕೂ ಶಾಂತಿ, ಸಹಬಾಳ್ವೆ, ಸೌಹಾರ್ದವನ್ನು ಬಲವಾಗಿ ಪ್ರತಿಪಾದಿಸುತ್ತ ಬಂದಿದ್ದ ಗಿರೀಶ ಕಾರ್ನಾಡ ಅವರು ಸಮಕಾಲೀನ ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಸವಾಲುಗಳನ್ನು ದಿಟ್ಟತನದಿಂದ ಎದುರಿಸಿದವರು. ಸಾಹಿತ್ಯ ಕೃಷಿಯ ಜತೆಗೆ ಸಮಾಜದಲ್ಲಿ ಸಾಂಸ್ಕೃತಿಕ, ರಾಜಕೀಯ ಪ್ರಜ್ಞೆ ಬೆಳೆಸಿದವರು.

ಹೊಸ ಅಲೆಯ ನಾಟಕಗಳ ಮೂಲಕನಾಡಿನಲ್ಲಿ ರಂಗಸಂಸ್ಕೃತಿ ಕಟ್ಟಿ ಬೆಳೆಸಿದ ಶ್ರೇಯ ಕಾರ್ನಾಡರಿಗೆ ಸಲ್ಲುತ್ತದೆ. ಸದಾ ಹೊಸತನ,ಪ್ರಯೋಗಕ್ಕೆ ಹಾತೊರೆಯುತ್ತಿದ್ದ ಕಾರ್ನಾಡ, ಸಾಹಿತ್ಯ, ನಾಟಕ, ಸಿನಿಮಾ, ಚಳವಳಿ, ಹೋರಾಟ, ಅಭಿಯನ, ರಂಗಚಟುವಟಿಕೆ ಹೀಗೆ ನಾನಾ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ಲೋಕವಿರೋಧಿ ಎಂದು ಕರೆಸಿಕೊಂಡರೂ ತಮಗೆ ಅನಿಸಿದ್ದನ್ನುಪ್ರಾಮಾಣಿಕವಾಗಿ ನಿಷ್ಠುರರಾಗಿ ಹೇಳುವ ಛಾತಿ ಅವರಿಗಿತ್ತು. ಚರಿತ್ರೆ ಮತ್ತು ವರ್ತಮಾನಗಳ ಆಧುನಿಕ ಸಂಬಂಧದಂತೆ ಇದ್ದ ಅವರ ಯಯಾತಿ, ತಲೆದಂಡ, ತುಘಲಕ್‌, ಹಯವದನ ನಾಟಕಗಳು ಮತ್ತುಸಂಸ್ಕಾರ, ವಂಶವೃಕ್ಷ, ಕಾಡು, ತಬ್ಬಲಿಯು ನೀನಾದೆ ಮಗನೆ, ಒಂದಾನೊಂದು ಕಾಲದಲ್ಲಿ, ಉತ್ಸವ್‌ ಸಿನಿಮಾ ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿವೆ.

ADVERTISEMENT

ಪ್ರತಿಭೆಗಳ ಸಂಗಮದಂತಿದ್ದ ಕಾರ್ನಾಡ ಅವರ ನೆನಪಿನಲ್ಲಿ ಡಿ.21 ಮತ್ತು 22ರಂದು ಎರಡು ದಿನಗಳ ‘ಕಾರ್ನಾಡ ಉತ್ಸವ’ ಆಯೋಜಿಸಲಾಗಿದೆ.ಇದೊಂದು ರಂಗ ಮತ್ತು ಪ್ರದರ್ಶನ ಕಲೆಗಳ ಉತ್ಸವವಾಗಿದೆ.

ಸೃಷ್ಟಿ ಕಲೆ, ವಿನ್ಯಾಸ ಮತ್ತು ತಂತ್ರಜ್ಞಾನ ಸಂಸ್ಥೆ ಮತ್ತು ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಕೇಂದ್ರದ ಸಹಯೋಗದಲ್ಲಿ ಕವಯತ್ರಿ ಮಮತಾ ಸಾಗರ್‌ ಸಂಯೋಜಿಸಿರುವ ರಂಗೋತ್ಸವದಲ್ಲಿ ದೇಶದ ವಿವಿಧ ಭಾಗಗಳ 11 ಕಲಾವಿದರು ಪ್ರದರ್ಶನ ಕಲೆಗಳನ್ನು ಪ್ರಸ್ತುತ ಪಡಿಸಲಿದ್ದಾರೆ. ಕಾರ್ನಾಡರ ಜೀವನ ಮತ್ತು ಕಲಾ ಬದುಕನ್ನು ರಾಷ್ಟ್ರೀಯ ನಾಟಕ ಶಾಲೆಯ 250 ಕಲಾ ವಿದ್ಯಾರ್ಥಿಗಳು ಕಟ್ಟಿಕೊಡಲಿದ್ದಾರೆ. ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದೆ.

ದಿನಾಂಕ: ಡಿಸೆಂಬರ್‌ 21, 22

ಸಮಯ: ಮಧ್ಯಾಹ್ನ 3.30 ರಿಂದ

ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ನಾಗರಭಾವಿ (ಜ್ಞಾನಭಾರತಿ ಕ್ಯಾಂಪಸ್‌ ಹತ್ತಿರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.