ADVERTISEMENT

ಹಿಂದಿ ಹೇರಿಕೆ ವಿರುದ್ಧ ಸಿಟಿಜನರ ಗುಡುಗು!

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2019, 20:18 IST
Last Updated 17 ಸೆಪ್ಟೆಂಬರ್ 2019, 20:18 IST
   

ಹಿಂದಿ ಹೇರಿಕೆ ಸಲ್ಲದು

ಕನ್ನಡ ನಾಡಿನಲ್ಲಿ ಕನ್ನಡವೇ ಅಗ್ರಮಾನ್ಯ. ಯಾವುದೇ ಕಾರಣಕ್ಕೂ ಹಿಂದಿ ಹೇರಿಕೆಗೆ ಅವಕಾಶ ನೀಡುವುದಿಲ್ಲ. ಹಿಂದಿಯನ್ನು ಐಚ್ಛಿಕ ಭಾಷೆಯಾಗಿ ಕಲಿಯಲು ಅಭ್ಯಂತರ ಇಲ್ಲ. ಅದನ್ನು ಕಡ್ಡಾಯ ಮತ್ತು ಅನಿವಾರ್ಯ ಮಾಡಕೂಡದು. ಹಿಂದಿ ಹೇರಿಕೆ ಯತ್ನ ಕನ್ನಡಿಗರಿಗೆ ಮಾಡುವ ಮಹಾ ಅನ್ಯಾಯ.


– ಡಾ. ಮನು ಬಳಿಗಾರ,ಅಧ್ಯಕ್ಷ, ಕನ್ನಡ ಸಾಹಿತ್ಯ ಪರಿಷತ್

ADVERTISEMENT

**

ಏಕ ಭಾಷೆ ರಾಜಕೀಯ ಒಕ್ಕೂಟ ವ್ಯವಸ್ಥೆಗೆ ಮಾರಕ

ಮೊದಲಿನಿಂದಲೂ ನಾವು ಹಿಂದಿ ಹೇರಿಕೆ ವಿರೋಧಿಸಿಕೊಂಡು ಬಂದಿದ್ದೇವೆ. ಒಂದು ರಾಷ್ಟ್ರ, ಒಂದು ಧರ್ಮ, ಒಬ್ಬ ನಾಯಕ, ಒಂದು ಸಂಸ್ಕೃತಿ ಮತ್ತು ಒಂದು ಭಾಷೆಯ ಹೆಸರಿನಲ್ಲಿ ಮಾಡುತ್ತಿರುವ ರಾಜಕಾರಣ ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿದೆ. ಭಾರತ ಬಹು ಸಂಸ್ಕೃತಿಯ ನಾಡು. ಇಲ್ಲಿ ಏಕ ಭಾಷೆ, ಒಂದು ಸಂಸ್ಕೃತಿಯ ರಾಜಕೀಯ ಎಂದಿಗೂ ಯಶಸ್ವಿಯಾಗದು. ಹಿಂದಿ ಹೇರಿಕೆ ದೊಡ್ಡ ಆತಂಕ ತಂದೊಡ್ಡಿದೆ. ಇದರ ಹಿಂದೆ ರಾಜಕೀಯ ಪಕ್ಷ ಹಾಗೂ ಸಂಘಟನೆಯೊಂದರ ಗುಪ್ತ ಕಾರ್ಯಸೂಚಿ ಅಡಗಿದೆ.

ಭಾಷೆಯ ವಿಷಯದಲ್ಲಿ ಕನ್ನಡಿಗರು ಹೆಚ್ಚು ಸಹನಶೀಲರು. ಈ ನೆಲೆಯಲ್ಲಾದರೂ ಭಾರತದ ಎಲ್ಲ ಪ್ರಾದೇಶಿಕ ಪಕ್ಷಗಳು ಒಗ್ಗೂಡಬೇಕಿದೆ. ಭಾಷೆಯ ವಿಷಯ ಬಂದಾಗ ಕನ್ನಡ ಸಾಹಿತ್ಯ ಪರಿಷತ್‌ ಧ್ವನಿ ಎತ್ತಬೇಕು.


– ಪ್ರೊ. ಚಂದ್ರಶೇಖರ ಪಾಟೀಲ (ಚಂಪಾ),ಸಾಹಿತಿ

**

ಹಿಂದಿ–ಬಿಜೆಪಿ, ಆರ್‌ಎಸ್‌ಎಸ್‌ನ ಭಾಷೆ

ಹಿಂದಿ ಮತ್ತು ಸಂಸ್ಕೃತ ಈ ಎರಡೂ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಭಾಷೆ. ಜತೆಗೆ ಅವುಗಳ ಆತ್ಮ ಮತ್ತು ಮನಸ್ಸು. ಹಿಂದಿಯ ಮೂಲಕ ಸಂಸ್ಕೃತ ಬೆಳೆಸುವ ಸಂಚು ನಡೆಯುತ್ತಿದೆ. ಪ್ರಾದೇಶಿಕ ಭಾಷೆಗಳನ್ನು ವ್ಯವಸ್ಥಿತವಾಗಿ ತುಳಿಯುವ ಹುನ್ನಾರ ನಡೆಯುತ್ತಿದೆ. ರಾಜಕೀಯ ಸ್ವಾರ್ಥ ಸಾಧನೆಗೆ ತೆರೆಯ ಮರೆಯಲ್ಲಿ ಇಂತಹ ಪ್ರಯತ್ನ ನಡೆಯುತ್ತಿವೆ. ಹಿಂದಿ ಹೇರಿಕೆ ಪ್ರಾದೇಶಿಕ ಭಾಷೆಗಳ ಮಟ್ಟಿಗೆ ಅಪಾಯಕಾರಿ ಬೆಳವಣಿಗೆ. ಇದು ಕೇಂದ್ರ ಸರ್ಕಾರದ ಸರ್ವಾಧಿಕಾರ ಮನೋಭಾವದ ಪ್ರತೀಕ. ಪೆರಿಯಾರ್, ಅಣ್ಣಾದುರೈ, ಕರುಣಾನಿಧಿಯಂಥ ರಾಜಕೀಯ ನಾಯಕರುಕರ್ನಾಟಕಕ್ಕೆ ಬೇಕು.

ಸ್ವಾತಂತ್ರ್ಯಚಳವಳಿ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿ ಅವರು ಹಿಂದಿ ಭಾಷೆಯನ್ನು ಜನರನ್ನು ಬೆಸೆಯುವ, ಒಗ್ಗೂಡಿಸುವ ಭಾಷೆಯಾಗಿ ಬಳಸಿದರು. ಅವರು ಎಂದಿಗೂ ಪ್ರಾದೇಶಿಕ ಭಾಷೆಗಳ ಮೇಲೆ ಹಿಂದಿ ಹೇರುವ ಪ್ರಯತ್ನ ಮಾಡಲಿಲ್ಲ. ಹಿಂದಿ ಕೇವಲ ಸಂಪರ್ಕ ಸೇತುವಾಗಿತ್ತು. ಎಲ್ಲ ಪ್ರಾದೇಶಿಕ ಭಾಷೆಗಳಿಗೂ ಹಿಂದಿಯಷ್ಟೇ ಸಮಾನ ಗೌರವ ನೀಡಿದ್ದರು.


–ವಾಟಾಳ್‌ ನಾಗರಾಜ್‌, ಕನ್ನಡ ಚಳವಳಿಗಾರ

**

ದ್ರಾವಿಡ ದೇಶದಬೇಡಿಕೆಗೆ ನಾಂದಿ

ಮೋದಿ–ಶಾ ಜೋಡಿ ‘ಒಂದು ದೇಶ, ಒಂದು ಭಾಷೆ’ ಸ್ಲೋಗನ್‌ ಅಡಿ ಪ್ರಾದೇಶಿಕ ಭಾಷೆಗಳ ಅಸ್ಮಿತೆಗೆ ಕೈ ಹಾಕಿದ್ದಾರೆ. ಸಾಮ್ರಾಜ್ಯಶಾಹಿ ನಿಲುವನ್ನು ಗಟ್ಟಿಯಾಗಿ ವಿರೋಧಿಸಿಕೊಂಡು ಬಂದ ಇತಿಹಾಸ ತಮಿಳುನಾಡಿಗಿದೆ. ತಮಿಳು ಭಾಷಿಕರು ಧ್ವನಿ ಎತ್ತದಿದ್ದರೆ ಎಂದೋ ನಮ್ಮ ಮೇಲೆ ಹಿಂದಿ ಹೇರಿಯಾಗಿರುತ್ತಿತ್ತು. ಭಾಷಾಭಿಮಾನದ ವಿಷಯದಲ್ಲಿ ತಮಿಳರು ಉಳಿದವರಿಗೆ ಮಾದರಿಯಾಗಬೇಕು. ತಮಿಳುನಾಡಿನ ಹಾದಿಯಲ್ಲಿ ಇಂದು ಅನೇಕ ರಾಜ್ಯಗಳು ಜಾಗೃತವಾಗಿವೆ.

ತಮಿಳುನಾಡಿಗಿರುವ ಅರಿವು, ಬದ್ಧತೆ, ಸ್ಪಷ್ಟತೆ, ಐತಿಹಾಸಿಕ ಹಿನ್ನೆಲೆ, ಹಿಂದಿ ವಿರೋಧಿ ನಿಲುವು, ಭಾಷಾ ಸ್ವಾಭಿಮಾನ ಮತ್ತು ಆತ್ಮಗೌರವ ಬೇರೆ ರಾಜ್ಯಗಳಿಗಿಲ್ಲ.

‘ಹಿಂದಿ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಹಿಂದಿ ರಾಷ್ಟ್ರಭಾಷೆಯಾಗಬೇಕು’ ಎನ್ನುವವರಿಗೆ ‘ರಾಷ್ಟ್ರಪಕ್ಷಿ ನವಿಲಿಗಿಂತಲೂ ಕಾಗೆಗಳು ಸಂಖ್ಯೆಯಲ್ಲಿ ಹೆಚ್ಚಾಗಿವೆ. ಕಾಗೆಯನ್ನೇ ರಾಷ್ಟ್ರಪಕ್ಷಿಯನ್ನಾಗಿ ಘೋಷಿಸಿ’ ಎಂದು ಅಣ್ಣಾದುರೈ ಇಟ್ಟ ವಾದ ಇಂದಿಗೂ ಪ್ರಸ್ತುತ. ಹಿಂದಿ ‘ಆರ್ಯಾವತ’ ರಾಜಕಾರಣದಿಂದ ದಕ್ಷಿಣ ರಾಜ್ಯಗಳ ‘ದ್ರಾವಿಡ’ರಿಗೆ ಆಗುತ್ತಿರುವ ಅಪಾರ ಅನ್ಯಾಯ ಮತ್ತು ನಿರಂತರ ತಾರತಮ್ಯವನ್ನು ಗಮನಿಸಿ ಅಂದು ಪೆರಿಯಾರ್ ಎತ್ತಿದ ಪ್ರತ್ಯೇಕ ‘ದ್ರಾವಿಡ ರಾಷ್ಟ್ರ’ದ ಕೂಗು ಇಂದು ಪ್ರತಿಧ್ವನಿಸುವ ಕಾಲಘಟ್ಟ ಎದುರಾಗಿದೆ.


– ಸಿ.ಎಸ್‌. ದ್ವಾರಾಕಾನಾಥ್‌, ವಿಚಾರವಾದಿಗಳು

**

ಶಾ ಭಾಷಣವನ್ನು ತಪ್ಪಾಗಿ ಅರ್ಥೈಸಲಾಗಿದೆ

ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರ ಭಾಷಣವನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ಅಂದು ಅವರು ಮಾತನಾಡಿದ ವೇದಿಕೆ ಮತ್ತು ಸ್ಥಳ ಹಿಂದಿ ಪ್ರಧಾನವಾಗಿತ್ತು. ಎಲ್ಲ ರಾಜ್ಯಗಳಲ್ಲಿ ಹಿಂದಿ ಹೇರುವ ಬಗ್ಗೆ ಅವರು ಮಾತನಾಡಿಲ್ಲ. ಇಂಗ್ಲಿಷ್‌ಗೆ ಮಾರು ಹೋಗುತ್ತಿರುವುದು ಸರಿ ಅಲ್ಲ. ಅಲ್ಲಿಯ ಪ್ರಾದೇಶಿಕ ಭಾಷೆಯಾದ ಹಿಂದಿ ಬಳಸುವಂತೆ ಹೇಳಿದ್ದರು.

ಯಾವುದೇ ಭಾಷೆಯನ್ನು ಬೇರೆ ಭಾಷೆಗಳ ಮೇಲೆ ಬಲವಂತಾಗಿ ಹೇರಲು ಆಗದು. ಭಾಷೆ, ವೇಷ, ಸಂಸ್ಕೃತಿ ಮುಂತಾದ ವಿಷಯಗಳಲ್ಲಿ ವೈವಿಧ್ಯತೆ ಇದೆ. ವಿವಿಧತೆಯಲ್ಲಿ ಏಕತೆ ಈ ದೇಶದ ಅಂತಃಸತ್ವ. ಎಲ್ಲ ಪ್ರಾದೇಶಿಕ ಭಾಷೆಗಳಿಗೂ ಅವುಗಳದ್ದೇ ಆದ ಪ್ರಾಮುಖ್ಯತೆ ಇದೆ. ನಾವು ತ್ರಿಭಾಷಾ ಸೂತ್ರಕ್ಕೆ ಬದ್ಧರಾಗಿದ್ದೇವೆ. ನಮ್ಮ ತಾಯಿ ಭಾಷೆಯಾದ ಕನ್ನಡನಮಗೆ ದೊಡ್ಡದು.


– ತಾರಾ ಅನುರಾಧಾ, ವಿಧಾನ ಪರಿಷತ್‌ ಸದಸ್ಯೆ

**

ಆತ್ಮದ ಭಾಷೆಕನ್ನಡ

ಹಿಂದಿ, ಇಂಗ್ಲಿಷ್‌ಸಂಪರ್ಕ ಭಾಷೆಗಳಷ್ಟೇ. ಕನ್ನಡ ನಮ್ಮ ಆತ್ಮದ ಭಾಷೆ. ಬಂಗಾಳಿ ಭಾಷೆಯನ್ನು ಕಡೆಗಣಿಸಿ ಪಾಕಿಸ್ತಾನ ಪೂರ್ವ ಪಾಕಿಸ್ತಾನವನ್ನು ಕಳೆದುಕೊಂಡಿತು.ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಇಪ್ಪತ್ತೆರಡು ಭಾಷೆಗಳನ್ನು ರಾಷ್ಟ್ರೀಯ ಜನರಾಡುವ ಭಾಷೆಗಳೆಂದು ಗುರುತಿಸಲಾಗಿದೆಯೇ ಹೊರತು ಕೇವಲ ಹಿಂದಿ ಭಾಷೆ ಒಂದನ್ನೇ ಅಲ್ಲ. ಹಾಗೆ ನೋಡಿದರೆ ಎಲ್ಲಾ ದೃಷ್ಟಿಕೋನಗಳಿಂದಲೂ ದಕ್ಷಿಣದ ತಮಿಳು, ತೆಲಗು,ಕನ್ನಡ, ಮಳೆಯಾಳ ಭಾಷೆಗಳು ಹಿಂದಿಗಿಂತಲೂ ಸಮೃದ್ದವಾಗಿವೆ, ಹಿಂದಿಗಿಂತಲೂ ಪ್ರಾಚೀನವಾಗಿವೆ.
– ಸಾಮಾಜಿಕ ಜಾಲತಾಣದಲ್ಲಿ ಕಂಡುಬಂದ ಅಭಿಪ್ರಾಯ

**

ಕನ್ನಡ ನಮ್ಮ ನೈಜ ಅಸ್ಮಿತೆ

ಉರ್ದು, ಪರ್ಷಿಯನ್ ಮತ್ತುಸಂಸ್ಕೃತ ಸೇರಿ ಹುಟ್ಟಿದ ಭಾಷೆ ಹಿಂದಿ. ಅದು ಕೇವಲ 600 ವರ್ಷಗಳ ಹಿಂದೆ. ಅದು ಉರ್ದುವಿನ ಆಸು ಪಾಸಿನಲ್ಲೇ ಇದ್ದು, ನಂತರ ಬೇರೆ ಬಂದು, ಪ್ರತ್ಯೇಕ ಭಾಷೆ ಆಗಿದ್ದು ಕೇವಲ 200 ವರ್ಷಗಳ ಹಿಂದೆ! ಅಂದರೆ 1800ರಲ್ಲಿ.

ಹಿಂದಿಗೆ ತನ್ನದ್ದೇ ಸ್ವಂತ ಲಿಪಿಯೂ ಇಲ್ಲ. ಸಂಸ್ಕೃತ ಬಳಸುವ ದೇವನಾಗರಿ ಲಿಪಿಯನ್ನೇ ಇದೂ ಬಳಸುತ್ತದೆ.

ಜನರ ತೆರಿಗೆ ಹಣದಿಂದ ಇಂದು ಈ ಭಾಷೆಯನ್ನು ಇಡೀ ದೇಶದ ದಿನವಾಗಿ ಆಚರಿಸುತ್ತಾರೆ ಎನ್ನುವುದು ವಿಪರ್ಯಾಸದ ಸಂಗತಿ. 2500 ವರ್ಷಗಳಿಗೂ ಹಳೆಯದಾದ ಕನ್ನಡ ಮತ್ತು ತಮಿಳು ಭಾಷಾ ದಿನವನ್ನೂ ದೇಶದ ಎಲ್ಲೆಡೆ ಆಚರಿಸಲಿ.

ಪುರಾತನವಾದ ಶ್ರೇಷ್ಠ ಭಾಷೆಗಳನ್ನು ಗೌರವಿಸಲಿ.ಇಲ್ಲಾ ಇದ್ಯಾವುದೂ ಬೇಡ, ಭಾರತೀಯ ಭಾಷಾ ದಿನಾಚರಣೆ ಮಾಡಲಿ. ಕನ್ನಡ ನಮ್ಮ ನೈಜ ಅಸ್ಮಿತೆ.


– ಚೈತ್ರಾ ಕೋಟೂರ್, ಸ್ಯಾಂಡಲ್‌ವುಡ್‌ ನಟಿ

**

ಮೊದಲು ವಿರೋಧ
ಕೇಂದ್ರ ಸರ್ಕಾರ 1965ರಲ್ಲಿ ಅಧಿಕೃತವಾಗಿ ಹಿಂದಿಯನ್ನು ದೇಶದ ಅಧಿಕೃತ ಭಾಷೆಯನ್ನಾಗಿ ಕಡ್ಡಾಯಗೊಳಿಸಲು ಮುಂದಾದಾಗ ತಮಿಳುನಾಡಿನ ಮದುರೆಯಲ್ಲಿ ಧಂಗೆಗಳು ಆರಂಭವಾದವು. ಹಿಂದಿ ವಿರೋಧಿ ಚಳವಳಿ ತಮಿಳರ ಭಾಷಾ ಸ್ವಾಭಿಮಾನದ ಚಳವಳಿಯ ಸ್ವರೂಪ ಪಡೆಯಿತು. ಹಿಂದಿಯನ್ನು ರಾಷ್ಟ್ರಭಾಷೆ ಎನ್ನಲು ಯಾವುದೇ ಆಧಾರಗಳಿಲ್ಲ ಎಂದು ನ್ಯಾಯಾಲಯ ಕೂಡ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.