ADVERTISEMENT

ಬೆಂಗಳೂರು | ಅನಿರೀಕ್ಷಿತ ಆಘಾತ ಅನುಭವಿಸಿದ ನಗರದ ಕಾಶ್ಮೀರಿವಾಲಾಗಳು

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2019, 4:27 IST
Last Updated 6 ಆಗಸ್ಟ್ 2019, 4:27 IST
ಮೊಹಮ್ಮದ್‌ ಅಸ್ಲಂ ಜಹಾನ್‌
ಮೊಹಮ್ಮದ್‌ ಅಸ್ಲಂ ಜಹಾನ್‌   

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿ ರದ್ದು ಮಾಡಿದ ಮತ್ತು ಲಡಾಖ್‌ನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸುವ ಕೇಂದ್ರ ಸರ್ಕಾರದ ನಡೆಗೆ ಕಾಶ್ಮೀರಿಗಳ ತವಕ, ತಲ್ಲಣಗಳು ಹೇಗಿರಬಹುದು? 30–40 ವರ್ಷಗಳ ಹಿಂದೆಯೇ ಕಣಿವೆ ರಾಜ್ಯದಿಂದ ವಲಸೆ ಬಂದು ನಗರದಲ್ಲಿ ನೆಲೆ ಕಂಡುಕೊಂಡ ಕಾಶ್ಮೀರಿಗಳನ್ನು ‘ಮೆಟ್ರೊ’ ಖುದ್ದಾಗಿ ಕಂಡು ಮಾತನಾಡಿಸಿತು.

ಕಳೆದ ಎರಡು ದಿನಗಳಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ನಿಗೂಢ ಬೆಳವಣಿಗೆ, ಸೇನೆಯ ಜಮಾವಣೆಯನ್ನು ಆತಂಕದಿಂದಲೇ ವೀಕ್ಷಿಸುತ್ತಿದ್ದ ಕಾಶ್ಮೀರಿಗಳಿಗೆ ‘ತಮ್ಮ ರಾಜ್ಯದಲ್ಲಿ ಏನೋ ಆಗಿದೆ’ ಎಂಬ ಸುಳಿವು ಸಿಕ್ಕಿತ್ತು.ಆದರೆ, ಕೇಂದ್ರ ಸರ್ಕಾರದ ಈ ನಡೆ ಅವರಲ್ಲಿ ಅಚ್ಚರಿ ಮತ್ತು ಆಘಾತಕ್ಕೆ ಕಾರಣವಾಗಿದೆ.

ಕೇಂದ್ರ ಗೃಹಸಚಿವ ಅಮಿತ್‌ ಶಾ ಸೋಮವಾರ ಬೆಳಿಗ್ಗೆ ಈ ಕುರಿತು ರಾಜ್ಯಸಭೆಯಲ್ಲಿ ಮಂಡಿಸುತ್ತಿದ್ದ ಪ್ರಸ್ತಾವನೆಯನ್ನು ಟಿ.ವಿಯಲ್ಲಿ ವೀಕ್ಷಿಸುತ್ತಿದ್ದ ಕಾಶ್ಮೀರಿ ವರ್ತಕರ ಮೊಗದಲ್ಲಿ ಸಹಜವಾಗಿ ನಗು ಮಾಯವಾಗಿತ್ತು.

ADVERTISEMENT

ವ್ಯಾಪಾರವನ್ನೇ ಮುಖ್ಯ ವೃತ್ತಿಯನ್ನಾಗಿಸಿಕೊಂಡ ಕಣಿವೆ ರಾಜ್ಯದ ಅಂದಾಜು 300ಕ್ಕೂ ಹೆಚ್ಚು ಕುಟುಂಬಗಳು ನಗರದಲ್ಲಿವೆ. ತವರು ರಾಜ್ಯದಲ್ಲಿಯ ಬೆಳವಣಿಗೆಯಿಂದ ದಿಗಿಲುಗೊಂಡ ಅವರು ತಮ್ಮ ವ್ಯಾಪಾರ, ಜೀವನಕ್ಕೆ ಎಲ್ಲಿ ತೊಂದರೆಯಾಗುತ್ತದೆ ಎಂಬ ಹಿಂಜರಿಕೆಯಿಂದಲೇ ಮಾತಿಗಿಳಿದರು. ಕೇಂದ್ರ ಸರ್ಕಾರ ಇಂತಹ ಮಹತ್ವದ ನಿರ್ಧಾರಕ್ಕೂ ಮುನ್ನ ಜನಾಭಿಮತ ಸಂಗ್ರಹಿಸಬೇಕಿತ್ತು ಎಂಬುವುದು ಅವರ ಒಮ್ಮತದ ಅಭಿಪ್ರಾಯವಾಗಿತ್ತು.

ಮೊದಲಿನಿಂದಲೂ ಅರಸರ ಆಳ್ವಿಕೆಗೆ ಒಳಪಟ್ಟಿದ್ದ ಜಮ್ಮ ಮತ್ತು ಕಾಶ್ಮೀರ ಸ್ವತಂತ್ರ ರಾಜ್ಯವಾಗಿತ್ತು. ಆಗ ನಾವು ಭಾರತದ ಜತೆ ಕೈಜೋಡಿಸಿದ್ದೆವು. ವಿಲೀನದ ಸಂದರ್ಭದಲ್ಲಿ ಸಂವಿಧಾನದ 370ನೇ ವಿಧಿಯ 35(ಎ) ಅಡಿ ವಿಶೇಷ ಸ್ಥಾನಮಾನ ಕಲ್ಪಿಸಲಾಗಿತ್ತು. ಇದು ನಮ್ಮ ಸಾಂವಿಧಾನಿಕ ಹಕ್ಕು. ಅಂದು ನೀಡಲಾಗಿದ್ದ ಹಕ್ಕನ್ನು ಸರ್ಕಾರ ಇಂದು ಬಲವಂತವಾಗಿ ಕಸಿದುಕೊಳ್ಳಲು ಮುಂದಾಗಿದೆ. ಇದ್ಯಾವ ನ್ಯಾಯ? ಸ್ಥಳೀಯರು ಈ ನಿರ್ಧಾರವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಬೆಂಗಳೂರಿನ ಕಾಶ್ಮೀರಿ ಅಸೋಶಿಯೇಷನ್‌ ಅಧ್ಯಕ್ಷ ಮೊಹಮ್ಮದ್‌ ಅಸ್ಲಾಂ ಜಹಾನ್‌ ಅಭಿಪ್ರಾಯಪಟ್ಟರು.

ಕಳೆದ ಒಂದೆರೆಡು ವರ್ಷಗಳಿಂದ ಕಣಿವೆ ರಾಜ್ಯಶಾಂತಯುತವಾಗಿತ್ತು. ನಾವೂ ಇಲ್ಲಿ ಸುಖವಾಗಿದ್ದೆವು. ಈಗ ಜನರು ಹಕ್ಕಿಗಾಗಿ ಬೀದಿಗಿಳಿಯಬಹುದು. ಪರಿಸ್ಥಿತಿ ಪ್ರಕ್ಷುಬ್ಧಗೊಳ್ಳಬಹುದು. ಪೂರ್ವಜರ ನಾಡು ಪ್ರಕ್ಷುಬ್ಧವಾಗಿದೆ ಎಂದರೆ ನಮಗೂ ಸಮಾಧಾನ ಇರುವುದಿಲ್ಲ ಎಂದು ನೋವು ತೋಡಿಕೊಂಡರು.

ತಿಹಾರ್‌ ಜೈಲಿನಲ್ಲಿರುವ ಹುರಿಯತ್‌ ನಾಯಕ ಯಾಸಿನ್‌ ಮಲಿಕ್‌ ಅವರಿಗೆ ಏನಾದರೂ ತೊಂದರೆ ಆಗಿರಬಹುದು.ಪರಿಸ್ಥಿತಿ ನಿಯಂತ್ರಣಕ್ಕಾಗಿ ಕಣಿವೆಯಲ್ಲಿ ಹೆಚ್ಚುವರಿ ಸೇನೆ ನಿಯೋಜಿಸಲಾಗುತ್ತಿದೆ ಎಂದು ಭಾವಿಸಿದ್ದೆವು. ಕಾಶ್ಮೀರದಲ್ಲಿರುವ ಸ್ನೇಹಿತರು, ಸಂಬಂಧಿಗಳು ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಬೆಂಗಳೂರಿನಲ್ಲಿರುವ ಕಾಶ್ಮೀರಿಗಳ ವಾಟ್ಸ್‌ ಆ್ಯಪ್‌ ಗ್ರೂಪ್‌ಗಳಲ್ಲಿಯೂ ಇದೇ ಚರ್ಚೆ ನಡೆದಿತ್ತು. ಕೇಂದ್ರ ಸರ್ಕಾರ ಇಂಥದೊಂದು ನಿರ್ಧಾರ ಕೈಗೊಳ್ಳುತ್ತದೆ ಎಂದು ಖಂಡಿತ ನಿರೀಕ್ಷಿಸಿರಲಿಲ್ಲ.
ಇದರಿಂದ ನಿರಾಸೆಯಾಗಿದೆ. ಇದೊಂದು ರಾಜಕೀಯ ಪ್ರೇರಿತ ಹೆಜ್ಜೆ ಎಂದ ಅಸ್ಲಾಂ ಜಹಾನ್‌ ಅವರ ಮೊಗದಲ್ಲಿ ಅತೃಪ್ತಿ ಭಾವ ಎದ್ದು ಕಾಣುತ್ತಿತ್ತು.

***

ನಾವೂ ಅಪ್ಪಟ ಭಾರತೀಯರು ನಾವು ಅಪ್ಪಟ ಭಾರತೀಯರು. ಪಾಕಿಸ್ತಾನಕ್ಕೂ ನಮಗೂ ಯಾವ ಸಂಬಂಧವೂ ಇಲ್ಲ. ಕಾಶ್ಮೀರದಲ್ಲಿ ಶಾಂತಿ, ಸೌಹಾರ್ದತೆ, ಸಾಮರಸ್ಯ ನೆಲೆಸಿತ್ತು. ಕೇಂದ್ರ ಸರ್ಕಾರದ ನಿರ್ಧಾರದಿಂದ ಶಾಂತಿ ಕದಡುವ ಸಾಧ್ಯತೆ ಇದೆ. ಒಂದು ವೇಳೆ ವಿಶೇಷ ಸ್ಥಾನಮಾನ ರದ್ದು ಮಾಡಿದರೆ ಕಾಶ್ಮೀರದ ಭವಿಷ್ಯ ಕರಾಳವಾಗಲಿದೆ. ಹಲವು ಕಾರ್ಖಾನೆಗಳು ತಲೆ ಎತ್ತಲಿವೆ. ದುಡ್ಡು ಹರಿದು ಬರಲಿದೆ. ಜನರಿಗೆ ಉದ್ಯೋಗ ದೊರೆಯಬಹುದು. ಭೂಮಿ ಮೇಲಿನ ಸ್ವರ್ಗದಂತಿರುವ ಕಾಶ್ಮೀರದ ಸುಂದರ ಪ್ರಕೃತಿ ಮಾಲಿನ್ಯದಿಂದ ಹಾಳಾಗುತ್ತದೆ. ದೇಶದ ಒಳಿತಿನ ದೃಷ್ಟಿಯಿಂದ ಕಣಿವೆಯಲ್ಲಿ ಯಥಾಸ್ಥಿತಿ ಕಾಪಾಡುವುದು ಒಳಿತು.

– ನಿಸ್ಸಾರ್‌ ಅಹಮ್ಮದ್‌, ವರ್ತಕ

***

ಪ್ರಜಾಪ್ರಭುತ್ವದಲ್ಲಿ ಜನಾಭಿಮತ ಏಕಿಲ್ಲ?

ಕೇಂದ್ರ ಸರ್ಕಾರ ಇಂಥದೊಂದು ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಮುನ್ನ ಕಾಶ್ಮೀರಿಗಳ ಅಭಿಪ್ರಾಯ ಪಡೆಯಬೇಕಿತ್ತು. ಇವತ್ತು ಜಮ್ಮು ಮತ್ತು ಕಾಶ್ಮೀರಕ್ಕೆ ಒದಗಿದ ಸ್ಥಿತಿ ಮುಂದೊಂದು ದಿನ ಎಲ್ಲ ರಾಜ್ಯಗಳಿಗೂ ಬರಲಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ. ನಮ್ಮ ಸಂವಿಧಾನದತ್ತ ಹಕ್ಕುಗಳನ್ನು ಕೇಂದ್ರ ಸರ್ಕಾರ ಕಸಿದುಕೊಳ್ಳಲು ಮುಂದಾಗಿದೆ.ಇದರೊಂದಿಗೆ ಕಣಿವೆಯಲ್ಲಿ ನೆಲೆಸಿದ್ದ ಶಾಂತಿಯನ್ನು ಕೈಯಾರೆ ಭಂಗ ಮಾಡಲು ಹೊರಟಿದೆ.

– ಮಹಮ್ಮದ್‌ ಹುಸೇನ್‌, ಕಾಶ್ಮೀರಿ ಮಳಿಗೆ ವರ್ತಕ

***

ವಾಜಪೇಯಿ ರೀತಿ ವಿಶ್ವಾಸಕ್ಕೆ ಪಡೆಯಬೇಕಿತ್ತು

ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಆಡಳಿತದಲ್ಲಿ ಕಣಿವೆಯಲ್ಲಿ ಶಾಂತಿ ನೆಲೆಸಿತ್ತು. ವಾಜಪೇಯಿ ಅವರು ಕಾಶ್ಮೀರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದರು. ಭಾರತ ನಮಗೆ ಎಲ್ಲವನ್ನೂ ನೀಡಿದೆ. ನಾವು ಇಲ್ಲಿಯ ಅನ್ನ ತಿನ್ನುತ್ತೇವೆ. ನಾವು ಅಪ್ಪಟ ಭಾರತೀಯರು. ಕಾಶ್ಮೀರದ ಸಮಸ್ಯೆ ವಿಭಿನ್ನ. ಅದೊಂದು ರಾಜಕೀಯ ಸಮಸ್ಯೆ. ಜನಸಾಮಾನ್ಯರು ಶಾಂತಿ ಮತ್ತು ಸೌಹಾರ್ದಯುತ ಜೀವನ ನಡೆಸಲು ಬಯಸುತ್ತಾರೆ. ಅವರಿಗೆ ರಾಜಕೀಯ ಜಂಜಾಟ ಬೇಡ.

– ಶಬ್ಬೀರ್‌ ಹುಸೇನ್‌, ವ್ಯಾಪಾರಿ

***

ಏಕಪಕ್ಷೀಯ ನಿರ್ಧಾರ

ಕೆಲವು ವರ್ಷದಿಂದ ಕಣಿವೆಯಲ್ಲಿ ಶಾಂತಿ ನೆಲಿಸಿತ್ತು. ಪ್ರವಾಸೋದ್ಯಮ ಚೇತರಿಸಿಕೊಳ್ಳತೊಡಗಿತ್ತು. ಜನರಿಗೆ ಸಾಮರಸ್ಯದ ಬದುಕು ಮುಖ್ಯ. ದುಡಿಮೆ, ಒಂದು ಹೊತ್ತಿನ ಊಟ ಮುಖ್ಯ.ಯಾರೊಂದಿಗೆ ಸಂಘರ್ಷ ಬೇಕಾಗಿಲ್ಲ. ಪಾಕಿಸ್ತಾನದೊಂದಿಗೆ ನಮಗೆ ಯಾವುದೇ ರೀತಿಯ ಸಂಬಂಧವೂ ಇಲ್ಲ. ನಾವು ಭಾರತೀಯರು.ಸ್ಥಳೀಯರನ್ನು ಕೇಂದ್ರ ಸರ್ಕಾರ ವಿಶ್ವಾಸಕ್ಕೆ ಪಡೆಯಬೇಕಿತ್ತು. ಕಣಿವೆಯ ನಾಯಕರನ್ನು ಗೃಹ ಬಂಧನದಲ್ಲಿಟ್ಟು ಕೇಂದ್ರ ಸರ್ಕಾರ ಏಕಪಕ್ಷೀಯ ನಿರ್ಧಾರವನ್ನು ಹೇರಲುಹೊರಟಿದ್ದರಿಂದ ಪರಿಸ್ಥಿತಿ ಮತ್ತೆ ಹದಗೆಡುವ ಸಾಧ್ಯತೆ ಇದೆ.

– ಸಜ್ಜಾದ್‌ ಹುಸೇನ್‌, ವ್ಯಾಪಾರಿ

***

ಜೇನುಗೂಡಿಗೆ ಕಲ್ಲು

ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರವಾದ ಕಾರಣ ಜನಾಭಿಪ್ರಾಯ ಪಡೆಯಬೇಕಿತ್ತಲ್ಲವೇ? ಅವರು ನಮ್ಮ ಹಕ್ಕುಗಳನ್ನು ಕಸಿದುಕೊಳ್ಳಲು ಹೊರಟಿದ್ದಾರೆ. ಕಾಶ್ಮೀರ ಸಮಸ್ಯೆ ವಿಶ್ವಸಂಸ್ಥೆಯಲ್ಲಿದೆ. ವಿಶೇಷ ಸ್ಥಾನಮಾನ ಪ್ರಕರಣ ಇನ್ನೂ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದೆ. ಇದೊಂದು ರಾಜಕೀಯ ಸಮಸ್ಯೆಯಾದ ಕಾರಣ ಸೌಹಾರ್ದಯುತ ಮಾರ್ಗದಲ್ಲಿ ಸರ್ಕಾರ ಎಚ್ಚರಿಕೆಯ ಹೆಜ್ಜೆ ಇಡಬೇಕಿತ್ತು. ಸರ್ಕಾರ ಜೇನುಗೂಡಿಗೆ ಕಲ್ಲು ಹೊಡೆದಿದೆ.

– ಮಹಮ್ಮದ್‌ ರವೂಫ್‌, ವರ್ತಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.