ADVERTISEMENT

ಹುಣ್ಣಿಮೆಯಲ್ಲಿ ಕಡಲೆ ಪರಿಷೆ ಸೊಬಗು

ಮಂಜುಶ್ರೀ ಎಂ.ಕಡಕೋಳ
Published 21 ನವೆಂಬರ್ 2018, 20:00 IST
Last Updated 21 ನವೆಂಬರ್ 2018, 20:00 IST
ಬೆಂಗಳೂರಿನ ಮಲ್ಲೇಶ್ವರದಲ್ಲಿ ಕಾಡು ಮಲ್ಲೇಶ್ವರ ಗೆಳೆಯರ ಬಳಗ ಭಾನುವಾರ ಮೊದಲ ಬಾರಿಗೆ ಆಯೋಜಿಸಿದ್ದ ‘ಕಡಲೆಕಾಯಿ ಪರಿಷೆಯಲ್ಲಿ ಜನರು ಉತ್ಸಾಹದಿಂದ ಕಡಲೆ ಖರೀದಿಯಲ್ಲಿ ತೊಡಗಿರುವುದು –ಪ್ರಜಾವಾಣಿ ಚಿತ್ರ
ಬೆಂಗಳೂರಿನ ಮಲ್ಲೇಶ್ವರದಲ್ಲಿ ಕಾಡು ಮಲ್ಲೇಶ್ವರ ಗೆಳೆಯರ ಬಳಗ ಭಾನುವಾರ ಮೊದಲ ಬಾರಿಗೆ ಆಯೋಜಿಸಿದ್ದ ‘ಕಡಲೆಕಾಯಿ ಪರಿಷೆಯಲ್ಲಿ ಜನರು ಉತ್ಸಾಹದಿಂದ ಕಡಲೆ ಖರೀದಿಯಲ್ಲಿ ತೊಡಗಿರುವುದು –ಪ್ರಜಾವಾಣಿ ಚಿತ್ರ   

ಮಲ್ಲೇಶ್ವರ...
ಹೆಸರು ಒಂದೆ ಆದರೂ. ಅದರ ಜತೆಗೆ ಬೆಂಗಳೂರಿಗರಿಗೆ ಇರುವ ನಂಟು ಹಲವು. ಯುವಜನರಿಗೆ ಮಲ್ಲೇಶ್ವರ ಶಾಪಿಂಗ್‌ನ ಪ್ರಮುಖ ತಾಣವೆನಿಸಿದರೆ, ಹಿರಿಯರಿಗೆ ಮಲ್ಲೇಶ್ವರದ ಜತೆಗಿನ ಭಾವಬೆಸುಗೆಯೇ ಅನನ್ಯ. ಅಂದು ಮಲ್ಲೇಶ್ವರ ಹಸಿರಿಗೆ ಹೆಸರಾಗಿದ್ದು, ಅದರ ಪ್ರತೀಕವೆಂಬಂತೆ ಕಾಡು ಮಲ್ಲೇಶ್ವರ ದೇವಾಲಯವಿದೆ.

ಒಂದರ್ಥದಲ್ಲಿ ಮಲ್ಲೇಶ್ವರದ ಲ್ಯಾಂಡ್ ಮಾರ್ಕ್ ಆಗಿರುವ ಈ ದೇವಾಲಯಕ್ಕೆ ಶತಮಾನಗಳ ಇತಿಹಾಸವಿದೆ. ಶಿವಾಜಿ ಮಹಾರಾಜರ ತಂದೆ ಷಾಜಿ ಅವರಿಗೆ ಬಿಜಾಪುರದ ಸುಲ್ತಾನರಿಂದ ಜಹಗೀರಾಗಿ ದೊರೆತಿದ್ದ ಬೆಂಗಳೂರು ಆಗ ಗ್ರಾಮವಾಗಿತ್ತು. ಶಿವಾಜಿಯ ಸಹೋದರ ಏಕ್ಕೋಜಿ (ವೆಂಕೋಜಿ) ದಟ್ಟ ಅಡವಿಯ ಮಧ್ಯೆ ಇದ್ದ ಕಾಡುಮಲ್ಲೇಶ್ವರದ ಉದ್ಭವ ಲಿಂಗದ ದರ್ಶನ ಪಡೆದಿದ್ದರು ಎಂಬುದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.

ನಗರ ಬೆಳೆದಂತೆ ಕಾಡುಮಲ್ಲೇಶ್ವರ ದೇವಾಲಯದ ಜಾಗ ಭೂಮಾಫಿಯಾದ ಕೈಗೆ ಸಿಕ್ಕಾಗ, ಆ ಸ್ಥಳದ ಐತಿಹಾಸಿಕ ಪ್ರಾಮುಖ್ಯತೆ ಅರಿತಿದ್ದ ಕಾಡುಮಲ್ಲೇಶ್ವರ ಗೆಳೆಯರ ಬಳಗ ತಕ್ಷಣವೇ ಎಚ್ಚೆತ್ತು ಕೊಂಡಿತ್ತು. ದಶಕದ ಹಿಂದೆ ಈ ಗೆಳೆಯರ ಬಳಗ ಹೋರಾಟ ನಡೆಸಿದ ಫಲವಾಗಿ ಕಾಡುಮಲ್ಲೇಶ್ವರ ದೇವಾಲಯವಷ್ಟೇ ಅಲ್ಲ ನಂದಿತೀರ್ಥ, ವಸಂತ ಮಂಟಪ ಮತ್ತು ತೀರ್ಥ ಬಾವಿ ಇಂದು ಸಾರ್ವಜನಿಕ ಸಂಪತ್ತಾಗಿದೆ.

ADVERTISEMENT

2010ರಿಂದಲೂ ಸಕ್ರಿಯವಾಗಿರುವ ಬಿ.ಕೆ. ಶಿವರಾಂ ನೇತೃತ್ವದ ಕಾಡು ಮಲ್ಲೇಶ್ವರ ಗೆಳೆಯರ ಬಳಗ, ಮಲ್ಲೇಶ್ವರದ ನೆಲ,ಜಲ, ಹಸಿರು ರಕ್ಷಣೆಗೆ ಕಟಿಬದ್ಧವಾಗಿ ಕೆಲಸ ಮಾಡುತ್ತಿದೆ. ಕಸಕಡ್ಡಿಗಳಿಂದ ತುಂಬಿ, ಅನ್ಯರ ಪಾಲಾಗಿದ್ದ ದೇವಾಲಯದ ಕಲ್ಯಾಣಿಯನ್ನು ಸ್ವಚ್ಛಗೊಳಿಸುವಾಗ ದಕ್ಷಿಣ ಮುಖ ನಂದಿ, ಶಿವಲಿಂಗ ಗೋಚರಿಸಿದ್ದು ಗೆಳೆಯರ ಬಳಗದ ಜೀರ್ಣೋದ್ಧಾರ ಕಾರ್ಯಕ್ಕೆ ದೊರೆತ ಪ್ರತಿಫಲ. ಮಲ್ಲೇಶ್ವರದ ಸಂಪಿಗೆ ರಸ್ತೆ 16ನೇ ಅಡ್ಡ ರಸ್ತೆಯಲ್ಲಿರುವ ಕಾಡುಮಲ್ಲೇಶ್ವರ ದೇವಾಲಯಕ್ಕೆ ಸೇರಿದ ಕೋಟ್ಯಂತರ ಬೆಲೆ ಬಾಳುವ ಮೂಲೆ ನಿವೇಶನವನ್ನು ಕಾನೂನಾತ್ಮಕ ಹೋರಾಟ ಮಾಡಿ, ದೇವಸ್ಥಾನಕ್ಕೆ ಉಳಿಸಿಕೊಂಡಿರುವ ಹೆಮ್ಮೆ ಕಾಡು ಮಲ್ಲೇಶ್ವರ ಬಳಗದ್ದು.

‘ಗೆಳೆಯರ ಬಳಗದಲ್ಲಿ ವಿಭಿನ್ನ ಕಾಯಕ ಜಾತಿ, ಧರ್ಮ, ಭಾಷೆ, ಸಿದ್ಧಾಂತಗಳ ವ್ಯಕ್ತಿತ್ವದ ಜನರಿರುವುದು ವಿಶೇಷ. ಒಂದರ್ಥದಲ್ಲಿ ‘ಕಾಡು ಮಲ್ಲೇಶ್ವರ ದೇವಾಲಯದ ಒಕ್ಕಲು’ ಎಂಬ ಭಾವನೆಯಲ್ಲಿರುವ ಬಳಗಕ್ಕೆ ಈ ದೇವಾಲಯದ ಬಗೆಗೆ ಭಾವನಾತ್ಮಕ ಸಂಬಂಧವಿದೆ. ಭವ್ಯ ರಾಜಗೋಪುರದ ನಿರ್ಮಾಣ, ದೇವಾಲಯದ ಆವರಣದಲ್ಲಿ ವಿಶಿಷ್ಟ ಔಷಧಿಗುಣಗಳ ನೂರಾರು ಜಾತಿಯ ಗಿಡಗಳ ಪವಿತ್ರವನ, ಬಯಲು ರಂಗಮಂದಿರ ನಿರ್ಮಾಣ ಹೀಗೆ ಅನೇಕ ಚಟುವಟಿಕೆಗಳನ್ನು ನಡೆಸುತ್ತಾ ಕಾರ್ಯತತ್ಪರವಾಗಿದೆ ಬಳಗ’ ಎನ್ನುತ್ತಾರೆ ಕಾಡುಮಲ್ಲೇಶ್ವರ ಬಳಗದ ಅಧ್ಯಕ್ಷ ಬಿ.ಕೆ. ಶಿವರಾಂ.

‘ಏಷ್ಯಾದಲ್ಲಿರುವ ಅತಿವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿನ ಜಂಜಾಟದ ಬದುಕಿಗೆ ಚುಕ್ಕಿ ಚಂದ್ರಮರ ಬೆಳದಿಂಗಳ ತಂಪು ನೀಡುವ ಕಾಯಕ ಕಾಡುಮಲ್ಲೇಶ್ವರ ಬಳಗದ್ದು. ಹಸಿರು ವನಸಿರಿಯ ನಡೆಯುವ ಹುಣ್ಣಿಮೆ ಹಾಡಿನಲ್ಲಿ ಹಿರಿಯ–ಕಿರಿಯ ಕಲಾವಿದರ ಸಮಾಗಮವೇ ಮೇಳೈಸುತ್ತದೆ. ಸಾಂಸ್ಕೃತಿಕ ಮತ್ತು ಸಾಮಾಜಿಕ ಚಟುವಟಿಕೆಗಳ ಮೂಲಕ ಮಲ್ಲೇಶ್ವರದ ಮೂಲ ಅಸ್ತಿತ್ವವನ್ನು ಕಾಯ್ದುಕೊಳ್ಳುವ ಉದ್ದೇಶ ನಮ್ಮ ಬಳಗದ್ದು’ ಎನ್ನುತ್ತಾರೆ ಅವರು.

ಪ್ರತಿ ತಿಂಗಳು ಹುಣ್ಣಿಮೆಯ ದಿನದಂದು ಬಳಗವು ಆಯೋಜಿಸುವ ‘ಹುಣ್ಣಿಮೆ ಹಾಡು’ ಮಲ್ಲೇಶ್ವರದ ಸೊಬಗನ್ನು ಮತ್ತಷ್ಟು ಹೆಚ್ಚಿಸಿದೆ. ವಿಶಿಷ್ಟ ಹಾಗೂ ಹೆಮ್ಮೆಯ ಸಾಂಸ್ಕೃತಿಕ ಚಟುವಟಿಕೆಯೆಂದು ಖ್ಯಾತಿ ಗಳಿಸಿರುವ ಈ ಕಾರ್ಯಕ್ರಮ ಇದೀಗ ಕಡಲೆಕಾಯಿ ಪರಿಷೆ, ಚಿತ್ರ ಪರಿಷೆ, ಹಸಿರು ಚೈತನ್ಯ ಪುನಶ್ಚೇತನೋತ್ಸವ, ಹುಣ್ಣಿಮೆ ಹಾಡು ವಾರ್ಷಿಕ ಪ್ರಶಸ್ತಿ ತನಕ ಬೆಳೆದಿರುವುದು ಗೆಳೆಯರ ಬಳಗದ ಯಶಸ್ವೀ ಕಾರ್ಯಚಟುವಟಿಕೆಗಳಿಗೆ ಸಾಕ್ಷಿಯಾಗಿವೆ.

ಈ ಬಾರಿಯ ಹುಣ್ಣಿಮೆ ಹಾಡಿನೊಂದಿಗೆ ಕಡಲೆಕಾಯಿ ಪರಿಷೆ ಜತೆಗೆ ಚಿತ್ರ ಪರಿಷೆ ಆರಂಭಿಸಲಾಗುತ್ತಿದೆ. ಈ ಬಾರಿ 113ನೇ ಹುಣ್ಣಿಮೆ ಹಾಡಿನಲ್ಲಿ ಡಾ.ರಾಜ್ ಮಧುರ ನೆನಪಿನ ಗಾನದಲ್ಲಿ ನಟ ಪುನೀತ್ ರಾಜಕುಮಾರ್ ಪಾಲ್ಗೊಳ್ಳುತ್ತಿರುವುದು ವಿಶೇಷ.

ನ. 23ರಿಂದ 26ರ ತನಕ ನಡೆಯಲಿರುವ ಮಲ್ಲೇಶ್ವರ ಕಡಲೆಕಾಯಿ ಪರಿಷೆ ರೈತಸ್ನೇಹಿ, ಜನಪದ ಸಂಬಂಧಗಳನ್ನು ಗಟ್ಟಿಗೊಳಿಸುವ ಉದ್ದೇಶ ಹೊಂದಿದೆ. ಇಲ್ಲಿ ಎಲ್ಲಾ ಜಾತಿ, ಧರ್ಮ,ವರ್ಗದ ಜನರು ಮುಕ್ತವಾಗಿ ಬೆರೆಯುವಂಥ ವಾತಾವರಣವಿದೆ. ಇದೇ ಮೊದಲ ಬಾರಿಗೆ ಚಿತ್ರ ಪರಿಷೆ ಆಯೋಜಿಸಿವೆ. ಪರಿಷೆಯಲ್ಲಿ ನೂರೆಂಟು ರಥ ದೀಪಗಳ ನಮಾಮಿ ಮಲ್ಲೇಶ್ವರ ಶಿವದೀಪೋತ್ಸವ, ಕಾಡು ಮಲ್ಲೇಶ್ವರ ಸ್ವಾಮಿಗೆ ಕಡಲೆಕಾಯಿ ಅಭಿಷೇಕ ನಡೆಯಲಿದೆ.

ಕಾಡು ಮಲ್ಲೇಶ್ವರ ದೇವಾಲಯದ ಗರ್ಭಗುಡಿ

ಮಲ್ಲೇಶ್ವರ ಕಡಲೆಕಾಯಿ ಪರಿಷೆ: ಬೆಳಿಗ್ಗೆ 10.30ಕ್ಕೆ ಉದ್ಘಾಟನೆ–ಸಚಿವ ಕೃಷ್ಣ ಬೈರೇಗೌಡ. ಅತಿಥಿಗಳು–ಗಂಗಾಂಬಿಕಾ ಮಲ್ಲಿಕಾರ್ಜುನ, ಡಾ.ಸಿ.ಎನ್. ಅಶ್ವತ್ಥ ನಾರಾಯಣ, ಶಿವಾನಂದ ತಗಡೂರು, ಬಿ. ಮಂಜುನಾಥ ರಾಜು, ಹೇಮಲತಾ ಸತೀಶ್ ಸೇಠ್, ಚಂದ್ರಕಲಾ ಗಿರೀಶ್ ಲಕ್ಕಣ್ಣ, ಎಚ್. ಮಂಜುನಾಥ್, ಆರ್.ಎಸ್.ಸತ್ಯನಾರಾಯಣ. ಸಿ. ಅಶೋಕಕುಮಾರ್. ಬೆಳಿಗ್ಗೆ 11.30ಕ್ಕೆ ಮಲ್ಲೇಶ್ವರ ಚಿತ್ರ ಪರಿಷೆ: ಉದ್ಘಾಟನೆ–ಡಾ.ಬಿ.ಎಲ್.ಶಂಕರ್. ಅತಿಥಿಗಳು–ಟಿ.ಪ್ರಭಾಕರ್, ಸುದೇಶ್ ಮಹಾನ್, ಬಾದಲ್ ನಂಜುಂಡಸ್ವಾಮಿ, ನವೀನ್ ಸೂರಿಂಜೆ. ಆಯೋಜನೆ–ಕಾಡು ಮಲ್ಲೇಶ್ವರ ಗೆಳೆಯರ ಬಳಗ. ಸ್ಥಳ–ಕಾಡು ಮಲ್ಲೇಶ್ವರ ಬಯಲು ರಂಗಮಂಟಪ. ಮಲ್ಲೇಶ್ವರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.