ADVERTISEMENT

ಸಮತಟ್ಟಾದವು ರಸ್ತೆ ಉಬ್ಬುಗಳು!

ಎಸ್‌.ಸಂಪತ್‌
Published 2 ಜನವರಿ 2019, 20:00 IST
Last Updated 2 ಜನವರಿ 2019, 20:00 IST
ರಾಜರಾಜೇಶ್ವರಿ ನಗರದಲ್ಲಿ ಸಮತಟ್ಟಾಗಿರುವ ರಸ್ತೆ ಉಬ್ಬು
ರಾಜರಾಜೇಶ್ವರಿ ನಗರದಲ್ಲಿ ಸಮತಟ್ಟಾಗಿರುವ ರಸ್ತೆ ಉಬ್ಬು   

ಪ್ರಸಂಗ ಒಂದು

ಮಗುವನ್ನು ಶಾಲೆಗೆ ಕರೆದುಕೊಂಡು ಹೋಗುಲು ರಸ್ತೆ ದಾಟುತ್ತಿದ್ದ ಪೋಷಕರ ಸಮೀಪದವರೆಗೆ ಅತಿ ವೇಗವಾಗಿ ಬಂದ ಕಾರೊಂದು ಒಮ್ಮೆಗೆ ಬ್ರೇಕ್‌ ಹಾಕಿ ನಿಲ್ಲಿಸಿತು. ಪೋಷಕರು ಒಂದು ಕ್ಷಣ ಕಕ್ಕಾಬಿಕ್ಕಿಯಾದರು. ಮಗು ಹೆದರಿಕೊಂಡು ಚೀರಿತು.

ಕಾರು ಚಾಲಕ ಕೂಡ ಆತಂಕಕ್ಕೊಳಗಾದ. ಆಗ ಕಾರು ಚಾಲಕ ಮತ್ತು ಪೋಷಕರು ಒಬ್ಬರೊನ್ನೊಬ್ಬರು ದುರುಗುಟ್ಟಿ ನೋಡಿದರು. ಕೈ ಸನ್ನೆಯೊಂದಿಗೆ ಒಬ್ಬರನ್ನೊಬ್ಬರು ಬೈದುಕೊಂಡರು. ನಂತರ, ‘ಸದ್ಯ ಯಾರಿಗೂ ಏನೂ ಆಗಲಿಲ್ಲವಲ್ಲ’ ಎಂದು ಅವರವರು, ಅವರವರ ಪಾಡಿಗೆ ಮುಂದಕ್ಕೆ ಹೋದರು.

ADVERTISEMENT

ಪ್ರಸಂಗ ಎರಡು

ಹಿರಿಯ ನಾಗರಿಕ ದಂಪತಿ ರಸ್ತೆ ದಾಟುವಾಗ ಬಿಎಂಟಿಸಿ ಬಸ್‌, ಕಾರು ಅಕ್ಕಪಕ್ಕದಲ್ಲಿ ವೇಗವಾಗಿ ಬಂದು ಒಮ್ಮೆಗೆ ಬ್ರೇಕ್‌ ಹಾಕಿದವು. ಅವುಗಳ ಚಾಲಕರು ಕಿವಿಗಡಚಿಕ್ಕುವಂತೆ ‘ಹಾರನ್‌’ ಮಾಡುತ್ತಾ, ‘ಅಯ್ಯೋ ಬೇಗ ರಸ್ತೆ ದಾಟಿ’ ಎಂದು ಕೈ ಸನ್ನೆಯಲ್ಲಿ ಸೂಚಿಸಿದರು.

ಈ ದೃಶ್ಯಗಳು ಕಂಡು ಬಂದಿದ್ದು ರಾಜರಾಜೇಶ್ವರಿ ನಗರದ ಕೆಂಚೇನಹಳ್ಳಿ ಮುಖ್ಯರಸ್ತೆಯ ಬಾಟಾ ಮಳಿಗೆ ಬಳಿ. ಇಂಥ ದೃಶ್ಯಗಳು ಇಲ್ಲಿ ಸಾಮಾನ್ಯವಾಗಿ ಬಿಟ್ಟಿವೆ. ಇದಕ್ಕೆ ಕಾರಣ ಈ ಮುಖ್ಯರಸ್ತೆಯಲ್ಲಿ ಇದ್ದ ರಸ್ತೆ ಉಬ್ಬುಗಳು (ಹಂಪ್‌ಗಳು) ನೆಲಸಮವಾಗಿರುವುದು. ರಸ್ತೆ ಉಬ್ಬುಗಳೇ ಕಾಣದ ಕಾರಣ ರಸ್ತೆಯಲ್ಲಿ ಬರುವ ವಾಹನಗಳ ವೇಗಕ್ಕೆ ಕಡಿವಾಣ ಹಾಕುವುದು ಕಷ್ಟ ಸಾಧ್ಯವಾಗಿದೆ.

‌ಈ ರಸ್ತೆಗೆ ಎರಡು ತಿಂಗಳ ಹಿಂದೆ ಡಾಂಬರು ಹಾಕಲಾಗಿದೆ. ಇದರಿಂದ ರಸ್ತೆ ಎತ್ತರವಾಗಿ ಅಲ್ಲಿದ್ದ ಹಂಪ್‌ಗಳು ರಸ್ತೆಯ ಮಟ್ಟಕ್ಕೆ ಬಂದು ಬಿಟ್ಟಿವೆ. ಹಾಗಾಗಿ ವಾಹನ ಚಾಲಕರಿಗೆ ಅಲ್ಲಿ ‘ಬ್ರೇಕ್‌’ ಹಾಕುವ ಪ್ರಮೇಯವೇ ಎದುರಾಗದಂತಾಗಿದೆ. ಇದರಿಂದ ತೊಂದರೆಗೆ ಸಿಲುಕಿರುವವರು ಪಾದಚಾರಿಗಳು ಮತ್ತು ರಸ್ತೆಯ ಸಮೀಪದಲ್ಲಿರುವ ನಿವಾಸಿಗಳು.

ಇದೀಗ ರಾಜರಾಜೇಶ್ವರಿ ನಗರದ ಇತರ ಪ್ರಮುಖ ರಸ್ತೆಗಳಿಗೂ ಡಾಂಬರು ಹಾಕಲಾಗುತ್ತಿದೆ. ಕೆಲ ದಿನಗಳ ಹಿಂದೆಯಷ್ಟೇ ನಿಮಿಷಾಂಬ ದೇವಾಲಯದ ರಸ್ತೆ, ಚಂದ್ರಶೇಖರ ರಸ್ತೆ, ಜೆ.ನೆಹರೂ ರಸ್ತೆಗಳು ಡಾಂಬರು ಕಂಡಿವೆ. ಈ ರಸ್ತೆಯಲ್ಲಿದ್ದ ರಸ್ತೆ ಉಬ್ಬುಗಳೆಲ್ಲ ರಸ್ತೆಯ ಮಟ್ಟಕ್ಕೆ ಬಂದು ಬಿಟ್ಟಿವೆ. ಇದರಿಂದ ಇಲ್ಲೂ ವಾಹನ ಚಾಲಕರ ವೇಗಕ್ಕೆ ಕಡಿವಾಣ ಹಾಕುವುದು ಕಷ್ಟವಾಗಿದೆ.

ಇಲ್ಲಿ ಪ್ರಮುಖವಾಗಿ ಬಸ್‌ ನಿಲ್ದಾಣಗಳು, ವೃತ್ತಗಳು, ಚೌಕಕಗಳು, ದೇವಾಲಯ, ಶಾಲೆಗಳು ಇರುವ ಕಡೆ ರಸ್ತೆ ಉಬ್ಬುಗಳನ್ನು ಹಾಕಲಾಗಿದೆ. ಆದರೆ ರಸ್ತೆಗೆ ಟಾರು ಹಾಕಿದ ನಂತರ ಈ ಉಬ್ಬುಗಳು ಇದ್ದೂ ಇಲ್ಲದಂತಾಗಿವೆ. ಅವುಗಳಿಂದ ವಾಹನಗಳ ವೇಗ ಕಡಿಮೆ ಆಗುತ್ತಿಲ್ಲ. ಪಾದಚಾರಿಗಳಿಗೆ, ರಸ್ತೆ ದಾಟುವವರಿಗೆ ಅನುಕೂಲವಾಗುತ್ತಿಲ್ಲ ಎಂಬುದು ನಾಗರಿಕರ ಅಳಲು.

ಸಮತಟ್ಟಾದ ರಸ್ತೆ ಉಬ್ಬುಗಳು: ಕೆಂಚೇನಹಳ್ಳಿ ಮುಖ್ಯರಸ್ತೆ (80 ಅಡಿ ರಸ್ತೆ)ಯಲ್ಲಿ ಇಂಡಿಯನ್‌ ಆಯಿಲ್‌ ಪೆಟ್ರೊಲ್‌ ಬಂಕ್‌ ಮತ್ತು ಟೋಟಲ್‌ ಗ್ಯಾಸ್‌ ಬಂಕ್‌ ಬಳಿ, ವಾಸನ್‌ ಐ ಕೇರ್‌ ಮತ್ತು ಬಾಟಾ ಅಂಗಡಿ ಬಳಿ, ಬಿಎಸ್‌ಎನ್‌ಎಲ್‌ ಕಚೇರಿಯ ಬಳಿ, ಜಯಣ್ಣ ವೃತ್ತದಲ್ಲಿ, ನಿಮಿಷಾಂಬ ದೇವಾಲಯದ ಬಳಿ, ರಾಜರಾಜೇಶ್ವರಿ ಕ್ಯಾಂಟೀನ್‌ ಬಳಿ, ಚಂದ್ರಶೇಖರ ರಸ್ತೆಯಲ್ಲಿ, ನೆಹರೂ ರಸ್ತೆಯಲ್ಲಿನ ಬೆಮೆಲ್‌ ಕಾಂಪ್ಲೆಕ್ಸ್‌ ಬಳಿ ಸೇರಿದಂತೆ ಹಲವು ಕಡೆಯ ರಸ್ತೆ ಉಬ್ಬುಗಳು ರಸ್ತೆಗೆ ಸಮತಟ್ಟಾಗಿವೆ.

‘ರಸ್ತೆಯನ್ನು ಡಾಂಬರು ಮಾಡುವಾಗಲೇ ರಸ್ತೆ ಉಬ್ಬುಗಳನ್ನು ಇನ್ನಷ್ಟು ಎತ್ತರಿಸಬೇಕು. ಉಬ್ಬುಗಳು ವಾಹನ ಸವಾರರಿಗೆ, ಪಾದಚಾರಿಗಳಿಗೆ ಗೊತ್ತಾಗುವಂತಿರಬೇಕು. ಇಲ್ಲದಿದ್ದರೆ ಅಪಘಾತಗಳು ಸಂಭವಿಸುತ್ತವೆ. ಇಲ್ಲಿ ಅಪಘಾತಗಳು ಸಂಭವಿಸಿ, ಸಾವು– ನೋವುಗಳಾಗುವುದಕ್ಕೂ ಮುನ್ನವೇ ಬಿಬಿಎಂಪಿ ಮತ್ತು ಸಂಬಂಧಿಸಿದ ಗುತ್ತಿಗೆದಾರರು ಎಚ್ಚೆತ್ತುಕೊಳ್ಳಬೇಕು’ ಎನ್ನುತ್ತಾರೆ ಚನ್ನಸಂದ್ರದ ನಿವಾಸಿ ಸುಕುಮಾರ್‌.

ರಸ್ತೆ ಉಬ್ಬುಗಳನ್ನು ಹಾಕುವುದೇ ಸುರಕ್ಷೆಯ ದೃಷ್ಟಿಯಿಂದ. ಕಾಲ ಕಾಲಕ್ಕೆ ರಸ್ತೆಗೆ ಡಾಂಬರು ಹಾಕುವುದು ಒಳ್ಳೆಯದು. ಆದರೆ ಈ ವೇಳೆ ರಸ್ತೆ ಉಬ್ಬುಗಳು ಕಾಣೆಯಾಗದಂತೆ ನೋಡಿಕೊಳ್ಳಬೇಕು. ರಸ್ತೆ ಉಬ್ಬುಗಳನ್ನು ವೈಜ್ಞಾನಿಕವಾಗಿ ಮೇಲಕ್ಕೆತ್ತರಿಸಿ, ಅವುಗಳು ಇರುವ ಬಗ್ಗೆಗಿನ ಗುರುತು ವಾಹನ ಚಾಲಕರಿಗೆ ಸಿಗುವಂತೆ ಮಾಡಬೇಕು. ಅವಶ್ಯಕತೆ ಇರುವ ಕಡೆ ಮಾತ್ರ ಹಂಪ್‌ಗಳನ್ನು ನಿರ್ಮಿಸಬೇಕು’ ಎಂಬುದು ಅವರ ಆಗ್ರಹ.

ಪಾಲಿಕೆ ಅಧಿಕಾರಿಗಳು ಹೇಳುವುದೇನು

‘ರಾಜರಾಜೇಶ್ವರಿ ನಗರದ ಮುಖ್ಯರಸ್ತೆಗಳಿಗೆ ಪಾಲಿಕೆಯ ‘ಮೇಜರ್‌ ರೋಡ್‌’ ವಿಭಾಗದಿಂದ ಡಾಂಬರು ಹಾಕಲಾಗುತ್ತಿದೆ. ಅಲ್ಲಿನ ರಸ್ತೆ ಉಬ್ಬುಗಳು ರಸ್ತೆಗೆ ಸಮವಾಗಿರುವುದು ಗಮನಕ್ಕೆ ಬಂದಿದೆ. ರಸ್ತೆ ಉಬ್ಬುಗಳನ್ನು ಎತ್ತರಿಸಬೇಕು ಎಂಬುದನ್ನು ಒಪ್ಪುತ್ತೇವೆ. ಆದರೆ ಇದು ನಮ್ಮ ಕೆಲಸವಲ್ಲ. ಇದಕ್ಕೆಂದೇ ಪಾಲಿಕೆಯಲ್ಲಿ ಟ್ರಾಫಿಕ್‌ ಎಂಜಿನಿಯರಿಂಗ್‌ ಸೆಲ್‌ (ಟಿಇಸಿ) ಇದೆ.

ಅವರು ರಸ್ತೆ ಉಬ್ಬುಗಳ ಕಾಮಗಾರಿ ನೋಡಿಕೊಳ್ಳಬೇಕು. ಈ ಕುರಿತು ಅವರಿಗೆ ಈಗಾಗಲೇ ಮಾಹಿತಿ ನೀಡಿದ್ದೇವೆ ಎನ್ನುತ್ತಾರೆ ಬಿಬಿಎಂಪಿ ಮೇಜರ್‌ ರೋಡ್‌ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ವಿಶ್ವನಾಥ್‌.

ಈ ಕುರಿತು ಟಿಇಸಿ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ‘ಪಾಲಿಕೆಯ 198 ವಾರ್ಡ್‌ಗಳಲ್ಲಿನ ರಸ್ತೆ ಉಬ್ಬುಗಳ ನಿರ್ಮಾಣಕ್ಕೆ ಟೆಂಡರ್‌ ಕರೆಯಲಾಗಿತ್ತು. ಯಾರೂ ಅರ್ಜಿ ಹಾಕಿಲ್ಲ. ಈ ಸಂಬಂಧ ಮತ್ತೊಮ್ಮೆ ಟೆಂಡರ್‌ ಕರೆಯುತ್ತೇವೆ. ಟೆಂಡರ್‌ದಾರರು ನಿಗದಿಯಾದ ನಂತರ ರಸ್ತೆ ಉಬ್ಬುಗಳನ್ನು ಎತ್ತರಿಸುತ್ತೇವೆ. ತೀರ ಅಗತ್ಯವಿದ್ದರೆ ರಸ್ತೆಗೆ ಡಾಂಬರು ಹಾಕುತ್ತಿರುವ ಗುತ್ತಿಗೆದಾರರಿಂದಲೇ ಇದನ್ನು ಮಾಡಿಸಬಹುದು. ಈ ಕುರಿತು ಮೇಜರ್‌ ರೋಡ್‌ ವಿಭಾಗದ ಅಧಿಕಾರಿಗಳೊಂದಿಗೆ ಮಾತನಾಡುತ್ತೇವೆ‘ ಎಂದರು

**

ಬೆಮೆಲ್‌ ಕಾಂಫ್ಲೆಕ್ಸ್‌ ಮುಂಭಾಗದಲ್ಲಿ ರಸ್ತೆಗೆ ಡಾಂಬರು ಹಾಕಿದ್ದರಿಂದ ಇಲ್ಲಿನ ಹಂಪ್‌ಗಳನ್ನು ಗುರುತಿಸುವುದೇ ಕಷ್ಟ. ಇಲ್ಲಿ ಪಾದಚಾರಿಗಳು ಹೆಚ್ಚಾಗಿ ರಸ್ತೆ ದಾಟುತ್ತಾರೆ. ಅಲ್ಲದೆ ಇಲ್ಲಿನ ನಾಲ್ಕೂ ರಸ್ತೆಗಳಿಂದಲೂ ವಾಹನಗಳು ಮುನ್ನುಗ್ಗಿ ಬರುತ್ತವೆ. ಹಾಗಾಗಿ ಇಲ್ಲಿ ರಸ್ತೆ ಉಬ್ಬುಗಳು ಬೇಕೇಬೇಕು. ಇಲ್ಲದಿದ್ದರೆ ಸರಣಿ ಅಪಘಾತಗಳು ಸಂಭವಿಸಬಹುದು

–ಪ್ರಕಾಶ್‌, ಆಟೊ ಚಾಲಕ, ರಾಜರಾಜೇಶ್ವರಿ ನಗರ

**

ರಸ್ತೆ ಡಾಂಬರಿಗೆ ಗುತ್ತಿಗೆ ಕೊಡುವಾಗಲೇ ಅದರಲ್ಲಿನ ರಸ್ತೆ ಉಬ್ಬುಗಳನ್ನು ಎತ್ತರಿಸಲು ಪಾಲಿಕೆ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು

–ರಮೇಶ್‌, ಆಟೊ ಚಾಲಕ, ರಾಜರಾಜೇಶ್ವರಿ ನಗರ

**

ಹಂಪ್‌ ಎಷ್ಟು ಅಗತ್ಯ ಎಂಬುದು ಪಾಲಿಕೆ ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಗೊತ್ತಾಗುವುದಿಲ್ಲವೇ? ಅಷ್ಟೂ ಕಾಮನ್‌ಸೆನ್ಸ್‌ ಅವರಿಗೆ ಇರೋಲ್ಲ ಎಂದರೆ ಹೇಗೆ. ರಸ್ತೆ ಉಬ್ಬುಗಳನ್ನು ರಸ್ತೆಗಳೇ ನುಂಗಿದರೆ ಹಿರಿಯ ನಾಗರಿಕರು, ಮಕ್ಕಳು, ಮಹಿಳೆಯರು ರಸ್ತೆ ದಾಟುವುದಾದರೂ ಹೇಗೆ?

–ಸುಬ್ರಹ್ಮಣ್ಯಂ, ನಿವಾಸಿ, ರಾಜರಾಜೇಶ್ವರಿ ನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.