ADVERTISEMENT

ಮಕ್ಕಳಿಂದ ಹಣ್ಣು, ತರಕಾರಿ ದೇಣಿಗೆಶಾಲೆಯಲ್ಲಿ ವೆಜ್‌ ಬಾಸ್ಕೆಟ್‌

ಇಂಟರ‍್ಯಾಕ್ಟ್‌ ಕ್ಲಬ್‌ ವಿನೂತನ ಯೋಜನೆ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2019, 19:39 IST
Last Updated 11 ನವೆಂಬರ್ 2019, 19:39 IST
ತರಕಾರಿ ಮತ್ತು ಹಣ್ಣುಗಳು
ತರಕಾರಿ ಮತ್ತು ಹಣ್ಣುಗಳು   

ಹಂಚಿ ತಿನ್ನುವ ಖುಷಿಯ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡುವ ಮಹತ್ವದ ಆಶಯದೊಂದಿಗೆ ಸೋಫಿಯಾ ಹೈಸ್ಕೂಲ್‌ ‘ಶೇರ್‌ ಆ್ಯಂಡ್‌ ಕೇರ್‌’ ಕಾರ್ಯಕ್ರಮ ರೂಪಿಸಿದೆ. ಮಕ್ಕಳಲ್ಲಿ ದಾನ,ಧರ್ಮದ ಗುಣ ಬೆಳೆಸುವುದು ಮೂಲ ಉದ್ದೇಶ. ವಿದ್ಯಾರ್ಥಿಗಳಿಂದ ತರಕಾರಿ ಮತ್ತು ಹಣ್ಣುಗಳನ್ನು ಸಂಗ್ರಹಿಸಿ ಬಡವರು ಮತ್ತು ನಿರ್ಗತಿಕರಿಗೆ ವಿತರಿಸುವ ಕಾರ್ಯಕ್ರಮ ಇದಾಗಿದೆ.

ಪರಿಸರ ಮತ್ತು ಸಾಮಾಜಿಕ ಚಟುವಟಿಕೆಗಳ ಮೂಲಕ ಗಮನ ಸೆಳೆದಿರುವ ಸೋಫಿಯಾ ಹೈಸ್ಕೂಲ್‌ ವಿದ್ಯಾರ್ಥಿಗಳ ಇಂಟರ‍್ಯಾಕ್ಟ್‌ ಕ್ಲಬ್‌ ಮತ್ತೊಂದು ಹೊಸ ಪ್ರಯೋಗಕ್ಕೆ ಮುಂದಾಗಿದೆ!

ಅನಾಥ ಆಶ್ರಮಕ್ಕೆ ನೀಡಲು ಪ್ರತಿದಿನ ವಿದ್ಯಾರ್ಥಿಗಳಿಂದ ತರಕಾರಿ ಮತ್ತು ಹಣ್ಣುಗಳ ರೂಪದಲ್ಲಿ ದೇಣಿಗೆ ಸಂಗ್ರಹಿಸಲು ವಿನೂತನ ಕಾರ್ಯಕ್ರಮ ರೂಪಿಸಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಸದ್ಯದಲ್ಲಿಯೇ ಈ ಯೋಜನೆಗೆ ಪ್ರಾಯೋಗಿಕ ಚಾಲನೆ ಸಿಗಲಿದೆ.

ADVERTISEMENT

ಸೋಫಿಯಾ ಶಾಲೆಯ ಪೋಷಕರು ಇನ್ನು ಮುಂದೆ ಮಕ್ಕಳ ಲಂಚ್‌ ಬ್ಯಾಗ್ ಜತೆ ಯಾವುದಾದರೂ ಒಂದು ಹಣ್ಣು ಇಲ್ಲವೇ ತರಕಾರಿ ಇಟ್ಟು ಕಳಿಸಬೇಕಾಗುತ್ತದೆ. ಹೀಗೆ ಪ್ರತಿದಿನ ಬೆಳಿಗ್ಗೆ ಮಕ್ಕಳು ಮನೆಯಿಂದ ತಮ್ಮೊಂದಿಗೆ ತರುವ ಹಣ್ಣು ಮತ್ತು ತರಕಾರಿಗಳನ್ನು ಶಾಲೆಯ ಪ್ರವೇಶ ದ್ವಾರದಲ್ಲಿರುವ ಬುಟ್ಟಿಗಳಿಗೆ ಹಾಕಬೇಕು. ಹಣ್ಣು ಮತ್ತು ತರಕಾರಿಗೆ ಎರಡು ಪ್ರತ್ಯೇಕ ಬುಟ್ಟಿಗಳಿರುತ್ತವೆ.

ಶಾಲೆಗೆ ಬದನೆ, ಈರುಳ್ಳಿ!

ಟೊಮಾಟೊ, ಈರುಳ್ಳಿ, ಆಲೂಗಡ್ಡೆ, ಗಜ್ಜರಿ, ಬದನೆಕಾಯಿ, ಕ್ಯಾಬೀಜ್‌, ಮೂಲಂಗಿ, ಸೌತೆಕಾಯಿ, ಹಸಿರು ಮೆಣಸಿನಕಾಯಿ ಮುಂತಾದ ತರಕಾರಿ ಮತ್ತು ಮನೆಯಲ್ಲಿರುವ ಯಾವುದಾದರೂ ಹಣ್ಣುಗಳನ್ನು ಮಕ್ಕಳ ಜತೆ ಶಾಲೆಗೆ ಕೊಟ್ಟು ಕಳಿಸಬೇಕು.

ಪ್ರತಿ ದಿನ ವಿದ್ಯಾರ್ಥಿಗಳಿಂದ ದೇಣಿಗೆ ರೂಪದಲ್ಲಿ ಸಂಗ್ರಹಿಸಲಾಗುವ ತರಕಾರಿ ಮತ್ತು ಹಣ್ಣುಗಳನ್ನು ಇಂಟರ‍್ಯಾಕ್ಟ್‌ ಕ್ಲಬ್‌ ವಿದ್ಯಾರ್ಥಿಗಳು ಬೇರ್ಪಡಿಸುತ್ತಾರೆ. ಬಳಿಕ ಅವನ್ನು ಯಾವುದಾದರೂ ಅನಾಥ ಆಶ್ರಮಕ್ಕೆ ನೀಡಲಾಗುತ್ತದೆ.

ಯೋಜನೆಯ ರೂಪುರೇಷೆಗಳನ್ನು ಪ್ರಾಚಾರ್ಯೆ ಸಿಸ್ಟರ್‌ ಅಲ್ಪನಾ ಮತ್ತು ಶಾಲೆಯ ಆಡಳಿತ ಮಂಡಳಿ ಮುಂದಿಡಲಾಗಿದೆ. ಒಪ್ಪಿಗೆ ದೊರೆಯುವುದು ಮಾತ್ರ ಬಾಕಿ ಎನ್ನುತ್ತಾರೆ ಇಂಟರ‍್ಯಾಕ್ಟ್‌ ಕ್ಲಬ್‌ ಶಿಕ್ಷಕಿಯರು ಮತ್ತು ಪದಾಧಿಕಾರಿಗಳು.

ಸ್ವಯಂಪ್ರೇರಣೆಯ ದೇಣಿಗೆ

‘ಮನೆಯಿಂದ ತರಕಾರಿ ಮತ್ತು ಹಣ್ಣು ತರುವಂತೆ ಮಕ್ಕಳ ಮೇಲೆ ಒತ್ತಡ ಹೇರುವುದಿಲ್ಲ. ಇದು ಕಡ್ಡಾಯವೂ ಅಲ್ಲ. ಸ್ವಯಂ ಪ್ರೇರಣೆಯಿಂದ ದೇಣಿಗೆ ನೀಡುವಂತೆ ಪೋಷಕರು ಮತ್ತು ಮಕ್ಕಳಿಗೆ ಮನವಿ ಮಾಡಲಾಗುವುದು. ಶಾಲೆಯ ಒಟ್ಟು ವಿದ್ಯಾರ್ಥಿಗಳ ಪೈಕಿ ಶೇ 25ರಷ್ಟು ಮಕ್ಕಳು ದೇಣಿಗೆ ನೀಡಿದರೂ ಸಾಕು. ದಿನವೂ ಸಾಕಷ್ಟು ಹಣ್ಣು, ತರಕಾರಿ ಸಂಗ್ರಹವಾಗುತ್ತದೆ’ ಎನ್ನುವ ವಿಶ್ವಾಸದಲ್ಲಿ ಶಿಕ್ಷಕಿಯರಿದ್ದಾರೆ.

ಹೆಣ್ಣೂರು ಕ್ರಾಸ್‌ ಬಳಿ ದೊಡ್ಡಗುಬ್ಬಿಯಲ್ಲಿರುವ ಥಾಮಸ್‌ ರಾಜಾ ಅಲಿಯಾಸ್‌ ಆಟೊ ರಾಜಾ ನಡೆಸುತ್ತಿರುವ ಅನಾಥಾಶ್ರಮಕ್ಕೆ ತರಕಾರಿ ನೀಡುವ ಯೋಚನೆ ಇದೆ. ಪ್ರತಿದಿನ ಅಥವಾ ಮೂರ‍್ನಾಲ್ಕು ದಿನಕ್ಕೊಮ್ಮೆ ಶಾಲೆಗೆ ಬಂದು ತರಕಾರಿ ಮತ್ತು ಹಣ್ಣು ಸಂಗ್ರಹಿಸಬೇಕಾಗುತ್ತದೆ. ಈ ಅನಾಥ ಆಶ್ರಮದಲ್ಲಿ 700ಕ್ಕೂ ಹೆಚ್ಚು ನಿರ್ಗತಿಕರು, ವೃದ್ಧರು, ರೋಗಿಗಳು, ಭಿಕ್ಷುಕರು, ಅನಾಥರು, ಬುದ್ಧಿಮಾಂದ್ಯರು, ಹಸುಳೆಗಳು ಆಶ್ರಯ ಪಡೆದಿದ್ದಾರೆ.

ಇಂಥದೊಂದು ಮಹತ್ವಾಕಾಂಕ್ಷೆಯ ಯೋಜನೆಯ ಹಿಂದೆ ಮಾನವೀಯ ಕಳಕಳಿ ಇದೆ ಎನ್ನುತ್ತಾರೆ ಇಂಟರ‍್ಯಾಕ್ಟ್‌ ಕ್ಲಬ್‌ ಸಂಯೋಜಕಿ ಅಲ್ಫೋನ್ಸಾ ಮಹೇಶ್. ಶಿಕ್ಷಕಿಯರಾದ ಅನಿತಾ ಸಲ್ಡಾನಾ, ಪೃಥ್ವಿ ಶಾಸ್ತ್ರಿ ಮತ್ತು ಸ್ನೇಹಾ ರಾಮ್‌ ಈ ಕೆಲಸಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ.

ಪ್ರಾಚಾರ್ಯೆ ಸಿಸ್ಟರ್‌ ಅಲ್ಪನಾ

ದಾನ ಉತ್ಸವ:ಜಾಯ್‌ ಆಫ್‌ ಗಿವಿಂಗ್‌

ವಿಶ್ವ ಆಹಾರ ದಿನ ಮತ್ತು ವಿಶ್ವ ಬಡತನ ನಿರ್ಮೂಲನಾ ದಿನದ ಅಂಗವಾಗಿ ಸೋಫಿಯಾ ಶಾಲೆಯಲ್ಲಿ ಹಮ್ಮಿಕೊಂಡಿದ್ದ ‘ದಾನ ಉತ್ಸವ’ದಲ್ಲಿ ನಿರ್ಗತಿಕರಿಗಾಗಿ ಆಹಾರ ಧಾನ್ಯ ಸಂಗ್ರಹಿಸಲಾಗಿದೆ.

‘ಜಾಯ್‌ ಆಫ್‌ ಗಿವಿಂಗ್‌ ವೀಕ್‌’ ಅಭಿಯಾನದ ಅಡಿ ವಿದ್ಯಾರ್ಥಿಗಳು ಮತ್ತು ಪೋಷಕರಿಂದ ಶಾಲಾ ಆವರಣದಲ್ಲಿ ಮೂರು ದಿನ ಅಕ್ಕಿ, ಎಲ್ಲ ರೀತಿಯ ಬೇಳೆ ಕಾಳು, ಗೋಧಿ ಹಿಟ್ಟು, ಬೆಲ್ಲ,ಸಕ್ಕರೆ ಇತ್ಯಾದಿ ಆಹಾರ ಸಾಮಗ್ರಿಗಳನ್ನು ಸಂಗ್ರಹಿಸಲಾಗಿದೆ.

ಸಂಗ್ರಹವಾದ ಆಹಾರ ಸಾಮಗ್ರಿಗಳನ್ನು ಬಡ ಕುಟುಂಬಗಳು, ನಿರ್ಗತಿಕರು, ಅನಾಥ ಆಶ್ರಮಗಳಿಗೆ ವಿತರಿಸಲಾಗುವುದು ಎಂದು ಶಾಲೆಯ ಪ್ರಾಚಾರ್ಯೆ ಸಿಸ್ಟರ್‌ ಅಲ್ಪನಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.