ADVERTISEMENT

Fact Check: ಅರುಣಾಚಲ ಪ್ರದೇಶದ ಬಳಿ ಚೀನಾ ಸೇನೆ ಜಮಾವಣೆ; ಇದು ಸುಳ್ಳು ಸುದ್ದಿ

ಫ್ಯಾಕ್ಟ್ ಚೆಕ್
Published 15 ಡಿಸೆಂಬರ್ 2025, 23:30 IST
Last Updated 15 ಡಿಸೆಂಬರ್ 2025, 23:30 IST
   
‘ಚೀನಾವು ಅರುಣಾಚಲ ಪ್ರದೇಶದ ಬಳಿ ಸೇನೆಯನ್ನು ಭಾರಿ ಪ್ರಮಾಣದಲ್ಲಿ ಜಮಾವಣೆ ಮಾಡುತ್ತಿದೆ’ ಎಂದು ಪ್ರತಿಪಾದಿಸುತ್ತಾ ‘@JuKcrick_’ ಎಂಬ ಎಕ್ಸ್‌ ಬಳಕೆದಾರೊಬ್ಬರು ಚೀನಾ ಸೇನೆಯು (ಪಿಎಲ್‌ಎ) ಸಮರಾಭ್ಯಾಸ ನಡೆಸುತ್ತಿರುವ 1.34 ನಿಮಿಷದ ವಿಡಿಯೊವನ್ನು ಪೋಸ್ಟ್‌ ಮಾಡಿದ್ದಾರೆ. ಇನ್ನೂ ಕೆಲವರು ಈ ಪೋಸ್ಟ್‌ ಅನ್ನು ಹಂಚಿಕೊಂಡಿದ್ದಾರೆ. ‘ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವರು ಯಾಕೆ ಇನ್ನೂ ಸುಮ್ಮನಿದ್ದಾರೆ’ ಎಂದು ಪ್ರಶ್ನಿಸಿದ್ದಾರೆ. ಆದರೆ. ಇದು ಸುಳ್ಳು ಸುದ್ದಿ.

ಇದು ಚೀನಾ ಸೇನೆಯ ಸಮರಾಭ್ಯಾಸದ ವಿಡಿಯೊ ಎನ್ನುವುದು ನಿಜ. ಗೂಗಲ್‌ನಲ್ಲಿ ಹುಡುಕಾಟ ನಡೆಸಿದಾಗ ಚೀನಾದ ಗ್ಲೋಬಲ್‌ ಟೆಲಿವಿಷನ್‌ ನೆಟ್‌ವರ್ಕ್‌ (ಸಿಜಿಟಿಎನ್‌) ಕಳೆದ ತಿಂಗಳು (ನವೆಂಬರ್‌) 13ರಂದು ಈ ವಿಡಿಯೊವನ್ನು ಪೋಸ್ಟ್‌ ಮಾಡಿರುವುದು ಕಂಡು ಬಂತು. ಪಿಎಲ್‌ಎಯ ಭೂ ಸೇನಾ ಪಡೆಯು ಅತ್ಯಾಧುನಿಕ ತಂತ್ರಜ್ಞಾನದ ಡ್ರೋನ್‌ಗಳು ಮತ್ತು ರೊಬೊಟಿಕ್‌ ಶ್ವಾನಗಳನ್ನು ಬಳಸಿಕೊಂಡು ಸಮರಾಭ್ಯಾಸ ನಡೆಸುತ್ತಿದೆ’ ಎಂದು ಸರ್ಕಾರಿ ಸ್ವಾಮ್ಯದ ಈ ಮಾಧ್ಯಮವು ತನ್ನ ಪೋಸ್ಟ್‌ನಲ್ಲಿ ಹೇಳಿದೆ. ಮಂಗೋಲಿಯಾ, ರಷ್ಯಾ ಮತ್ತು ಉತ್ತರ ಕೊರಿಯಾದೊಂದಿಗೆ ಗಡಿ ಹಂಚಿಕೊಂಡಿರುವ ಚೀನಾದ ಈಶಾನ್ಯ ಭಾಗದಲ್ಲಿ ಸೇನಾ ಕಾರ್ಯಾಚರಣೆಯ ಜವಾಬ್ದಾರಿ ಹೊತ್ತಿರುವ 78ನೇ ಸೇನಾ ಘಟಕವು ಈ ಸಮರಾಭ್ಯಾಸ ನಡೆಸಿದೆ. ಅರುಣಾಚಲ ಪ್ರದೇಶದೊಂದಿಗೆ ಹಂಚಿಕೊಂಡಿರುವ ಗಡಿ ಪ್ರದೇಶವು ಚೀನಾ ಸೇನೆಯ ಪಶ್ಚಿಮ ಕಮಾಂಡ್‌ ವ್ಯಾಪ್ತಿಗೆ ಬರುತ್ತದೆ. ಹೀಗಾಗಿ ಸಂಬಂಧವೇ ಇಲ್ಲದ ವಿಡಿಯೊವನ್ನು ಪೋಸ್ಟ್‌ ಮಾಡಿ, ಅರುಣಾಚಲ ಪ್ರದೇಶದ ಬಳಿ ಚೀನಾ ಸೇನೆ ಜಮಾವಣೆ ಮಾಡುತ್ತಿದೆ ಎಂದು ತಪ್ಪಾಗಿ ಬಿಂಬಿಸಲಾಗುತ್ತಿದೆ ಎಂದು ಬೂಮ್‌ ಫ್ಯಾಕ್ಟ್‌ ಚೆಕ್‌ ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.