ADVERTISEMENT

Fact Check |ಆಪರೇಷನ್‌ ಸಿಂಧೂರ ವಿಫಲವಾಗಲು ಮೋದಿ ಕಾರಣ: ಶಾ ಹೇಳಿಕೆ -ಇದು ಸುಳ್ಳು

ಫ್ಯಾಕ್ಟ್ ಚೆಕ್
Published 26 ಸೆಪ್ಟೆಂಬರ್ 2025, 0:30 IST
Last Updated 26 ಸೆಪ್ಟೆಂಬರ್ 2025, 0:30 IST
   
‘ಆಪರೇಷನ್‌ ಸಿಂಧೂರ‘ ವಿಫಲವಾಗಲು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಡೊಭಾಲ್‌ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರೇ ಕಾರಣ. ಪಾಕಿಸ್ತಾನದ ಕ್ಷಿಪಣಿಗಳು ಭಾರತದ ಹಲವು ಸ್ಥಳಗಳಿಗೆ ಅಪ್ಪಳಿಸಿದ್ದವು. ಅವುಗಳನ್ನು ತಡೆಯಲು ಸಾಧ್ಯವಾಗಿರಲಿಲ್ಲ. ಈ ಕಾರ್ಯಾಚರಣೆ ವಿಫಲವಾಗಿದ್ದಕ್ಕೆ ಮೋದಿ ಅವರು ರಾಜೀನಾಮೆ ನೀಡಬೇಕು’ ಎಂದು ಗೃಹಸಚಿವ ಅಮಿತ್‌ ಶಾ ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ ಎನ್ನಲಾದ ವಿಡಿಯೊ ತುಣುಕನ್ನು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. 1.30 ನಿಮಿಷದ ಈ ತುಣುಕನ್ನು ‘ದಿ ವಿಷಲ್‌ ಬ್ಲೋವರ್‌’ ಎಂಬ ‘ಎಕ್ಸ್‌’ ಖಾತೆಯಲ್ಲಿ ಮೊದಲಿಗೆ ಪೋಸ್ಟ್‌ ಮಾಡಲಾಗಿತ್ತು. ಆದರೆ, ಇದು ಸುಳ್ಳು ಸುದ್ದಿ. 

ಈಗ ಹರಿದಾಡುತ್ತಿರುವ ವಿಡಿಯೊ ತುಣುಕನ್ನು ಅಮಿತ್‌ ಶಾ ಅವರ ಸಂದರ್ಶನವೊಂದರಿಂದ ಪಡೆಯಲಾಗಿದೆ. ಶಾ ಅವರನ್ನು ನ್ಯೂಸ್‌18 ಹಿಂದಿ ಸುದ್ದಿ ವಾಹಿನಿ ಸಂದರ್ಶನ ಮಾಡಿತ್ತು. ಅದನ್ನು ಫರ್ಸ್ಟ್‌ ಪೋಸ್ಟ್‌ ಸುದ್ದಿ ಮಾಧ್ಯಮ ಸೆ.19ರಂದು ಪೋಸ್ಟ್‌ ಮಾಡಿತ್ತು. ಮೋದಿ ಅವರ 75ನೇ ಜನ್ಮದಿನದ (ಎ.17) ನಂತರ ಈ ಸಂದರ್ಶನ ನಡೆಸಲಾಗಿತ್ತು. ಅದರಲ್ಲಿ ಶಾ ಅವರು ಮೋದಿಯವರ ನಾಯಕತ್ವ, ಸಾಧನೆಗಳ ಬಗ್ಗೆ ವಿವರಿಸಿದ್ದಾರೆ. ಆದರೆ, ಎಲ್ಲಿಯೂ ಮೋದಿ ಅಥವಾ ಡೊಭಾಲ್‌ ಅವರನ್ನು ಟೀಕಿಸಿಲ್ಲ. ಅಥವಾ ಆಪರೇಷನ್‌ ಸಿಂಧೂರದ ಸಮಯದಲ್ಲಿ ಪಾಕಿಸ್ತಾನದ ದಾಳಿಯಲ್ಲಿ ಭಾರತಕ್ಕೆ ನಷ್ಟವಾಗಿರುವ ಬಗ್ಗೆ ಮಾತನಾಡಿಲ್ಲ. ವಿಡಿಯೊ ಹಾಗೂ ಅದರಲ್ಲಿನ ಧ್ವನಿ ಸತ್ಯಾಸತ್ಯತೆ ತಿಳಿಯುವುದಕ್ಕಾಗಿ ವಿಡಿಯೊ ತುಣುಕನ್ನು ಎಐ ಡೀಪ್‌ಫೇಕ್‌ ಧ್ವನಿ ಪತ್ತೆಹಚ್ಚುವ ‘ಹಿಯಾ ಡೀಪ್‌ಫೇಕ್‌ ವಾಯ್ಸ್‌ ಡಿಟೆಕ್ಟರ್‌’ ಮತ್ತು ‘ಡೀಪ್‌ಫೇಕ್‌–ಒ–ಮೀಟರ್‌’ನಲ್ಲಿ ಹಾಕಿದಾಗ, ಮೂಲ ಸಂದರ್ಶನದಲ್ಲಿ ಶಾ ಹೇಳಿಕೆಯನ್ನು ತಿರುಚಿರುವುದು ದೃಢಪಟ್ಟಿತು. ಎಐ ಬಳಸಿ ಅಮಿತ್‌ ಶಾ ಹೇಳಿಕೆಯನ್ನು ತಿರುಚಿ, ಮೋದಿ ರಾಜೀನಾಮೆಗೆ ಅವರು ಆಗ್ರಹಿಸಿದ್ದಾರೆ ಎಂದು ತಪ್ಪಾಗಿ ಬಿಂಬಿಸಲಾಗುತ್ತಿದೆ ಎಂದು ಬೂಮ್‌ ಫ್ಯಾಕ್ಟ್‌ ಚೆಕ್‌ ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.