
ಫ್ಯಾಕ್ಟ್ ಚೆಕ್
ಭಾರತೀಯ ಸೇನೆಯನ್ನು ಸಂಪೂರ್ಣವಾಗಿ ಕೇಸರೀಕರಣ ಮಾಡಬೇಕು ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೇಳಿದ್ದಾರೆ ಎಂದು ಪ್ರತಿಪಾದಿಸುತ್ತಾ, ಭಾಗವತ್ ಅವರು ಮಾತನಾಡುತ್ತಿರುವ 39 ಸೆಕೆಂಡುಗಳ ವಿಡಿಯೊ ತುಣುಕೊಂದನ್ನು ದಿ ವಿಶಲ್ ಬ್ಲೋವರ್ ಎಂಬ ‘ಎಕ್ಸ್’ ಖಾತೆಯಲ್ಲಿ (@InsiderWB) ಪೋಸ್ಟ್ ಮಾಡಲಾಗಿದೆ. ಆದರೆ, ಇದು ಸುಳ್ಳು.
ಮೂಲ ವಿಡಿಯೊಗಾಗಿ ಇಂಟರ್‌ನೆಟ್‌ನಲ್ಲಿ ಹುಡುಕಿದಾಗ ಸಿಎನ್‌ಎನ್–ನ್ಯೂಸ್18ನ ಯೂಟ್ಯೂಬ್ ಖಾತೆಯಲ್ಲಿ 2025ರ ಡಿಸೆಂಬರ್ 21ರಂದು ಅಪ್‌ಲೋಡ್ ಮಾಡಲಾದ ವಿಡಿಯೊ ಸಿಕ್ಕಿತು. ಈಗ ‘ಎಕ್ಸ್’ನಲ್ಲಿ ಹಂಚಲಾದ ವಿಡಿಯೊವನ್ನೇ ಅದು ಹೋಲುತ್ತಿತ್ತು. ಮೂಲ ವಿಡಿಯೊದಲ್ಲಿ ಭಾಗವತ್ ಅವರೆಲ್ಲೂ ಸೇನೆಯ ಕೇಸರೀಕರಣದ ಬಗ್ಗೆ ಮಾತನಾಡುವುದಿಲ್ಲ. ಮುಂದುವರಿದ ಭಾಗವಾಗಿ ವಿಡಿಯೊವನ್ನು ಹಿಯಾ ಡೀಪ್‌ಫೇಕ್ ವಾಯ್ಸ್ ಡಿಟೆಕ್ಟರ್ ಟೂಲ್ ಬಳಸಿಕೊಂಡು ಪರಿಶೀಲಿಸಿದಾಗ, ಅದರಲ್ಲಿರುವ ಧ್ವನಿಯು ಡೀಪ್‌ಫೇಕ್ ಎಂಬುದು ದೃಢಪಟ್ಟಿತು. ಮೂಲ ವಿಡಿಯೊದಲ್ಲಿನ ಧ್ವನಿಯನ್ನು ಎಐ ತಂತ್ರಜ್ಞಾನದಲ್ಲಿ ತಿರುಚಿ, ಭಾಗವತ್ ಅವರು ಸೇನೆಯ ಕೇಸರೀಕರಣ ಮಾಡುವಂತೆ ಹೇಳಿದ್ದಾರೆ ಎಂದು ತಪ್ಪಾಗಿ ಬಿಂಬಿಸಲಾಗಿದೆ. ಈ ಹಿಂದೆಯೂ ಇದೇ ಖಾತೆಯಲ್ಲಿ ಭಾರತೀಯ ಸೇನೆಗೆ ಸಂಬಂಧಿಸಿದಂತೆ ಡೀಪ್‌ಫೇಕ್ ವಿಡಿಯೊ ಪೋಸ್ಟ್ ಮಾಡಲಾಗಿತ್ತು ಎಂದು ಬೂಮ್ ಫ್ಯಾಕ್ಟ್‌ಚೆಕ್ ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.