
‘ಭಾರತವನ್ನು ಫ್ರಾನ್ಸ್‌ನ ಕ್ಷಿಪಣಿ ಪಾಲುದಾರನನ್ನಾಗಿ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಬೇಡಿಕೊಂಡಿದ್ದರು. ಭಾರತದ ವಾಯು ಪಡೆಯ ಅಸಮರ್ಥತತೆಯ ಕಾರಣಕ್ಕೆ ಯುದ್ಧವಿಮಾನಗಳನ್ನು ಕಳೆದುಕೊಳ್ಳಬೇಕಾಯಿತು. ಇದರಿಂದ ನಾವು ಶತ ಕೋಟಿ ಡಾಲರ್ ಮೌಲ್ಯದ ರಫೇಲ್ ಮಾರುಕಟ್ಟೆಯನ್ನು ಕಳೆದುಕೊಳ್ಳಬೇಕಾಗಿ ಬಂದಿದೆ. ಈ ಕಾರಣಕ್ಕೆ ಫ್ರಾನ್ಸ್ ಭಾರತದ ಪೂರ್ಣ ರಕ್ಷಣಾ ಪಾಲುದಾರ ರಾಷ್ಟ್ರವಾಗಲು ಸಾಧ್ಯವಿಲ್ಲ’ ಎಂದು ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರನ್ ಅವರು ಹೇಳಿದ್ದಾರೆ ಎಂದು ಪ್ರತಿಪಾದಿಸುತ್ತಾ ‘ಎಕ್ಸ್’ನಲ್ಲಿ ಒಂದು ವಿಡಿಯೊವನ್ನು ಪೋಸ್ಟ್ ಮಾಡಲಾಗಿದೆ. ಎಂಟು ಯುದ್ಧವಿಮಾನಗಳನ್ನು ಕಳೆದುಕೊಳ್ಳಬೇಕಾಯಿತು ಎಂದು ಮ್ಯಾಕ್ರನ್ ಹೇಳಿರುವುದಾಗಿ ಪೋಸ್ಟ್‌ನಲ್ಲಿ ಪ್ರತಿಪಾದಿಸಲಾಗಿದೆ. ಆ ವಿಡಿಯೊದಲ್ಲಿ ಸುದ್ದಿ ಸಂಸ್ಥೆ ಎಎನ್‌ಐ ಲೋಗೊ ಕೂಡ ಇದೆ. ಆದರೆ, ಇದು ಸುಳ್ಳು ಸುದ್ದಿ.
ಈ ವಿಡಿಯೊ ತುಣುಕಿನಲ್ಲಿ ಕೇಳಿಸುವ ಪದಗಳನ್ನು ಬಳಸಿ ಗೂಗಲ್‌ನಲ್ಲಿ ಹುಡುಕಿದಾಗ, ವಿಶ್ವಾಸಾರ್ಹ ಮಾಧ್ಯಮಗಳಲ್ಲಿ ಈ ಕುರಿತ ವಿಶ್ವಾಸಾರ್ಹ ಮಾಧ್ಯಮ ವರದಿಗಳು ಸಿಗಲಿಲ್ಲ. ವಿಡಿಯೊದ ಕೀಫ್ರೇಮ್ ಅನ್ನು ರಿವರ್ಸ್ ಸರ್ಚ್ ವಿಧಾನದಲ್ಲಿ ಹುಡುಕಾಟ ನಡೆಸಿದಾಗ ಫೆ.17ರಂದು ‘ದಿ ಪ್ರಿಂಟ್’ನ ಅಧಿಕೃತ ಯೂಟ್ಯೂಬ್‌ನಲ್ಲಿ ನೇರಪ್ರಸಾರವಾದ ವಿಡಿಯೊ ಸಿಕ್ಕಿತು. ಅದು ಮುಂಬೈನಲ್ಲಿ ಮ್ಯಾಕ್ರನ್ ಮತ್ತು ಮೋದಿ ಅವರು ಜಂಟಿಯಾಗಿ ನಡೆಸಿದ ಪತ್ರಿಕಾಗೋಷ್ಠಿಯ ವಿಡಿಯೊ. ಎಎನ್‌ಐನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲೂ ಸುದ್ದಿಗೋಷ್ಠಿ ನೇರಪ್ರಸಾರಗೊಂಡಿತ್ತು. ಆದರೆ, ಅಲ್ಲಿ ಮ್ಯಾಕ್ರನ್ ಅವರು ಭಾರತೀಯ ವಾಯುಪಡೆ, ರಫೇಲ್ ಯುದ್ಧವಿಮಾನದ ಬಗ್ಗೆ ಎಲ್ಲೂ ಪ್ರಸ್ತಾಪ ಮಾಡಿಲ್ಲ. ಭಾರತ–ಫ್ರಾನ್ಸ್ ಜಂಟಿ ಹೇಳಿಕೆಯಲ್ಲೂ ಇದರ ಪ್ರಸ್ತಾಪವಿರಲಿಲ್ಲ. ಮುಂದಿನ ಹಂತವಾಗಿ ಡೀಪ್‌ಫೇಕ್ ಒ–ಮೀಟರ್, ರಿಸೆಂಬಲ್ ಎಐ ಟೂಲ್‌ಗಳ ಮೂಲಕ ವಿಡಿಯೊವನ್ನು ಮತ್ತು ಧ್ವನಿಯನ್ನು ಪರಿಶೀಲನೆಗೆ ಒಳಪಡಿಸಿದಾಗ, ಅದು ಎಐ ತಂತ್ರಜ್ಞಾನದ ಮೂಲಕ ಸೃಷ್ಟಿಸಿದ ನಕಲಿ ಧ್ವನಿ ಎಂಬುದು ದೃಢಪಟ್ಟಿತು ಎಂದು ಬೂಮ್ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.