ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಸಂದರ್ಶನದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಎಲೆಕ್ಟ್ರಾನಿಕ್ ವೋಟಿಂಗ್ ಮಷೀನ್‌ಗಳನ್ನು (ಇವಿಎಂ) ತಿರುಚುವ ಮೂಲಕ ಬಿಜೆಪಿಯು ಚುನಾವಣೆಗಳಲ್ಲಿ ಜಯ ಗಳಿಸುತ್ತಿದೆ ಎಂದು ರೇಖಾ ಗುಪ್ತಾ ಅವರು ಸಂದರ್ಶನದಲ್ಲಿ ಒಪ್ಪಿಕೊಂಡಿದ್ದಾರೆ; ‘ಅವರು (ಕಾಂಗ್ರೆಸ್) 70 ವರ್ಷಗಳಿಂದ ಇವಿಎಂಗಳನ್ನು ತಿರುಚುತ್ತಿದ್ದಾರೆ. ನಾವು ಹಾಗೆ ಮಾಡಿದಾಗ, ಅದನ್ನೊಂದು ಸಮಸ್ಯೆ ಎನ್ನುವಂತೆ ಮಾಡಲಾಗಿದೆ’ ಎಂದು ರೇಖಾ ಅವರು ಹೇಳಿದ್ದಾರೆ ಎಂಬುದಾಗಿ ಪೋಸ್ಟ್ ಹಂಚಿಕೊಳ್ಳುತ್ತಿರುವವರು ಪ್ರತಿಪಾದಿಸುತ್ತಿದ್ದಾರೆ. ಆಮ್ ಆದ್ಮಿ ಪಕ್ಷದ ಅರವಿಂದ ಕೇಜ್ರಿವಾಲ್ ಮತ್ತು ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಅವರು ಕೂಡ ಇದೇ ಪ್ರತಿಪಾದನೆಯೊಂದಿಗೆ ವಿಡಿಯೊ ಹಂಚಿಕೊಂಡಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.
ರೇಖಾ ಗುಪ್ತಾ ಅವರ ಸಂದರ್ಶನದ (8.19 ನಿಮಿಷದ) ಮೂಲ ವಿಡಿಯೊ ಎನ್‌ಡಿಟಿವಿಯಲ್ಲಿ ಪ್ರಸಾರವಾಗಿದೆ. ಅದನ್ನು ಪರಿಶೀಲಿಸಿದಾಗ, ವಿಡಿಯೊದ 2.40 ನಿಮಿಷದಲ್ಲಿ ‘ಅವರು (ಕಾಂಗ್ರೆಸ್) ಗೆದ್ದರೆ, ಅದು ಜನಾದೇಶ. ನಾವು (ಬಿಜೆಪಿ) ಗೆದ್ದರೆ, ಅದು ಇವಿಎಂ ತಿರುಚುವಿಕೆ...’ ಎಂದು ಅವರು ಹೇಳಿದ್ದಾರೆ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗುತ್ತಿರುವ ವಿಡಿಯೊದಲ್ಲಿ ಇರುವಂತೆ, ಅವರ ಉತ್ತರದ ಮುಂದಿನ ಭಾಗ ಮೂಲ ವಿಡಿಯೊದಲ್ಲಿ ಇಲ್ಲ ಎಂದು ಬೂಮ್ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.