ADVERTISEMENT

ಫ್ಯಾಕ್ಟ್‌ಚೆಕ್‌: ಅಸ್ಸಾಂನ ಸಿಲ್ಚಾರ್‌ನಲ್ಲಿ ಸಂಭವಿಸಿದ ಪ್ರವಾಹವು ಮಾನವ ನಿರ್ಮಿತ

​ಪ್ರಜಾವಾಣಿ ವಾರ್ತೆ
Published 13 ಜುಲೈ 2022, 19:30 IST
Last Updated 13 ಜುಲೈ 2022, 19:30 IST
ಫ್ಯಾಕ್ಟ್‌ಚೆಕ್‌ 
ಫ್ಯಾಕ್ಟ್‌ಚೆಕ್‌    

ಅಸ್ಸಾಂನ ಸಿಲ್ಚಾರ್‌ನಲ್ಲಿ ಸಂಭವಿಸಿದ ಪ್ರವಾಹವು ‘ಮಾನವ ನಿರ್ಮಿತ’. ಮುಸ್ಲಿಂ ಸಮುದಾಯದ ಕೆಲ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ ಎಂಬ ಮಾಹಿತಿ ಇರುವ ಪೋಸ್ಟ್‌ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಅಣೆಕಟ್ಟೆಗೆ ದುಷ್ಕರ್ಮಿಗಳು ಹಾನಿಯುಂಟು ಮಾಡದಿದ್ದರೆ ಈ ದುರಂತ ಸಂಭವಿಸುತ್ತಿರಲಿಲ್ಲ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾಅವರು ಜೂನ್‌ 26ರಂದು ವರದಿಗಾರರ ಎದುರು ಹೇಳಿದ್ದರು. ಆ ಬಳಿಕ ಮುಸ್ಲಿಂ ಸಮುದಾಯಕ್ಕೆ ಸೇರಿದ ನಾಲ್ವರು ಆರೋಪಿಗಳನ್ನು ಅಸ್ಸಾಂ ಪೊಲೀಸರು ಬಂಧಿಸಿದ್ದಾರೆ ಎಂದು ಹಲವಾರು ಪತ್ರಿಕೆಗಳು ವರದಿ ಮಾಡಿವೆ. ಈ ಪ್ರವಾಹವನ್ನು ಹಲವು ಪತ್ರಿಕೆಗಳು ಮತ್ತು ಬಿಜೆಪಿ ಕಾರ್ಯಕರ್ತರು ‘ಫ್ಲಡ್‌ ಜಿಹಾದ್‌’ ಎಂದು ಕರೆದಿದ್ದಾರೆ.

ವೈರಲ್ ಆಗಿರುವ ಪೋಸ್ಟ್‌ನಲ್ಲಿ ಇರುವ ಮಾಹಿತಿಯು ಸತ್ಯಕ್ಕೆ ದೂರವಾಗಿದೆ ಎಂದು ‘ದಿ ಲಾಜಿಕಲ್‌ ಇಂಡಿಯನ್‌’ ಫ್ಯಾಕ್ಟ್‌ಚೆಕ್‌ ವೇದಿಕೆ ಪ್ರಕಟಿಸಿದೆ. ತಾವು ವಾಸವಿರುವ ಪ್ರದೇಶದಲ್ಲಿ ನೀರು ನಿಲ್ಲುವುದನ್ನು ತಪ್ಪಿಸಿ, ಆ ನೀರು ಬರಾಕ್‌ ನದಿಗೆ ಹರಿಯುವಂತೆ ಮಾಡುವ ಸಲುವಾಗಿ ಸ್ಥಳೀಯರು ಅಣೆಕಟ್ಟೆಯನ್ನು ಕೊರೆದು ಕಾಲುವೆ ನಿರ್ಮಿಸಿದ್ದರು. ಈ ಪ್ರಕರಣವು ಕೋಮು ಭಾವನೆಗೆ ಸಂಬಂಧಿಸಿದ್ದಲ್ಲ. ಪ್ರವಾಹವನ್ನು ‘ಫ್ಲಡ್‌ ಜಿಹಾದ್‌’ ಎಂದು ಕರೆಯುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅಸ್ಸಾಂ ಪೊಲೀಸರು ಹೇಳಿದ್ದರು ಎಂದು ದಿ ಲಾಜಿಕಲ್‌ ಇಂಡಿಯನ್‌ ವಿವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT