
ಜಮ್ಮು ಮತ್ತು ಕಾಶ್ಮೀರದ ನೌಶೆರಾ ವಲಯದಲ್ಲಿ ಭಾರತೀಯ ಸೇನೆಯು ಇತ್ತೀಚೆಗೆ ಪಾಕಿಸ್ತಾನದ ಡ್ರೋನ್‌ಗಳತ್ತ ಗುಂಡು ಹಾರಿಸಿದೆ ಎಂದು ಪ್ರತಿಪಾದಿಸುತ್ತಾ ಇನ್‌ಸ್ಟಾಗ್ರಾಂ ಬಳಕೆದಾರರೊಬ್ಬರು (smoooth_editx) ವಿಡಿಯೊ ತುಣುಕೊಂದನ್ನು ಹಂಚಿಕೊಂಡಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.
ವಿಡಿಯೊ ತುಣುಕಿನ ಕೀ ಫ್ರೇಮ್ ಒಂದನ್ನು ಗೂಗಲ್ ಲೆನ್ಸ್‌ನಲ್ಲಿ ಹಾಕಿ ಹುಡುಕಿದಾಗ, ವಿವಿಧ ಜಾಲತಾಣಗಳಲ್ಲಿ ಇದೇ ವಿಡಿಯೊವನ್ನು ಹಂಚಿರುವುದು ಕಂಡು ಬಂತು. ಮತ್ತಷ್ಟು ಹುಡುಕಾಟ ನಡೆಸಿದಾಗ ssbcrackofficial ಎಂಬ ಇನ್‌ಸ್ಟಾಗ್ರಾಂ ಬಳಕೆದಾರರು ಕಳೆದ ವರ್ಷದ ಮೇ 8ರಂದು ಇದೇ ವಿಡಿಯೊವನ್ನು ಪೋಸ್ಟ್ ಮಾಡಿರುವುದು ತಿಳಿದು ಬಂತು. ‘ಜಮ್ಮು ಮತ್ತು ಪಂಜಾಬ್‌ನಲ್ಲಿರುವ ಭಾರತದ ಪ್ರಮುಖ ಸೇನಾ ಘಟಕಗಳು ಮತ್ತು ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಡ್ರೋನ್ ದಾಳಿ ನಡೆಸಿದೆ’ ಎಂಬ ಶೀರ್ಷಿಕೆಯನ್ನು ವಿಡಿಯೊಕ್ಕೆ ನೀಡಲಾಗಿತ್ತು. ಇದರ ಆಧಾರದಲ್ಲಿ ಗೂಗಲ್‌ನಲ್ಲಿ ನಿರ್ದಿಷ್ಟ ಪದಗಳನ್ನು ಬಳಸಿ ಹುಡುಕಿದಾಗ ಎನ್‌ಡಿಟಿವಿಯಲ್ಲಿ ಮೇ 8ರಂದು ಪ್ರಕಟವಾದ ವರದಿ ಸಿಕ್ಕಿತು. ಇತ್ತೀಚಿನ ಪೋಸ್ಟ್‌ನಲ್ಲಿ ಇದ್ದ ವಿಡಿಯೊವೇ ಎನ್‌ಡಿವಿಟಿಯ ವರದಿಯಲ್ಲೂ ಇತ್ತು. ಪಾಕಿಸ್ತಾನವು ಪಠಾಣ್‌ಕೋಟ್, ಜೈಸಲ್ಮೇರ್ ಮತ್ತು ಜಮ್ಮು ಮೇಲೆ ಡ್ರೋನ್ ದಾಳಿ ನಡೆಸಿದ್ದು, ಭಾರತವು ಎಲ್ಲ ಡ್ರೋನ್‌ಗಳನ್ನು ಹೊಡೆದುರುಳಿಸಿದೆ ಎಂದು ವರದಿಯಲ್ಲಿ ಹೇಳಲಾಗಿತ್ತು. ಮೇ 9ರಂದು ಹಿಂದೂಸ್ತಾನ್ ಟೈಮ್ಸ್‌ನಲ್ಲಿ ಪ್ರಕಟವಾದ ವರದಿಯಲ್ಲೂ ಇದೇ ವಿಡಿಯೊವನ್ನು ಪೋಸ್ಟ್ ಮಾಡಲಾಗಿತ್ತು. ಜನವರಿ 11ರಂದು ಪಾಕಿಸ್ತಾನದ ಡ್ರೋನ್‌ಗಳು ಸಾಂಬಾ, ರಜೌರಿ ಮತ್ತು ಪೂಂಛ್ ಜಿಲ್ಲೆಗಳ ಅಂತರರಾಷ್ಟ್ರೀಯ ಗಡಿ ಮತ್ತು ಗಡಿನಿಯಂತ್ರಣ ರೇಖೆಯನ್ನು (ಎಲ್‌ಒಸಿ) ದಾಟಿ ಭಾರತದ ಭೂಭಾಗದ ಆಗಸದಲ್ಲಿ ಹಾರಾಡಿದ್ದವು. ನಂತರ ಅವು ವಾಪಸ್ ಹೋಗಿದ್ದವು ಎಂದು ಪಿಟಿಐ ವರದಿ ಮಾಡಿತ್ತು. ಆಪರೇಷನ್ ಸಿಂಧೂರ ಸಮಯದ ವಿಡಿಯೊವನ್ನು ಈಗ ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚಿನ ವಿಡಿಯೊ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ ಎಂದು ಪಿಟಿಐ ಫ್ಯಾಕ್ಟ್‌ಚೆಕ್ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.