ADVERTISEMENT

ಫ್ಯಾಕ್ಟ್‌ಚೆಕ್‌ | ಒಡಿಶಾ ರೈಲು ದುರಂತದಲ್ಲಿ ಮುಸ್ಲಿಂ ಅಧಿಕಾರಿಯ ಕೈವಾಡ ಇತ್ತೇ?

ಪ್ರಜಾವಾಣಿ ವಿಶೇಷ
Published 8 ಜೂನ್ 2023, 1:01 IST
Last Updated 8 ಜೂನ್ 2023, 1:01 IST
   

ಈಚೆಗೆ ಸಂಭವಿಸಿದ ಬಾಲೇಶ್ವರ ರೈಲು ದುರಂತದಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿರುವ ಸ್ಟೇಷನ್ ಮಾಸ್ಟರ್‌ ಒಬ್ಬರ ಕೈವಾಡವಿದೆ ಎಂಬ ಮಾಹಿತಿಯು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವ್ಯಕ್ತಿಯೊಬ್ಬರ ಚಿತ್ರದೊಂದಿಗೆ ಈ ಕುರಿತ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. ‘ದುರಂತ ನಡೆದ ಸ್ಥಳಕ್ಕೆ ಸಮೀಪದಲ್ಲಿರುವ ಬಹನಾಗಾ ಬಜಾರ್‌ ರೈಲು ನಿಲ್ದಾಣದ ಸ್ಟೇಷನ್‌ ಮಾಸ್ಟರ್‌ ಷರೀಫ್‌ ಆಲಿ ಎಂಬುವವರು ಅಪಘಾತದ ತನಿಖೆ ಆರಂಭವಾದ ಬಳಿಕ ತಲೆಮರೆಸಿಕೊಂಡಿದ್ದಾರೆ. ಇನ್ನು ಮುಂದೆ ಉದ್ಯೋಗ ನೇಮಕಾತಿ ಮಾಡುವ ವೇಳೆ ಹೆಸರನ್ನೂ ಕಡ್ಡಾಯವಾಗಿ ಪರೀಕ್ಷಿಸಬೇಕು’ ಎಂದು ಅಡಿಬರಹ ಬರೆಯಲಾಗಿದೆ. ‌ಆದರೆ, ಇದು ಸುಳ್ಳು ಸುದ್ದಿ.

ಜಾಲತಾಣದಲ್ಲಿ ಹರಿದಾಡುತ್ತಿರುವ ಈ ಮಾಹಿತಿಯು ಸುಳ್ಳು ಎಂದು ‘ದಿ ಲಾಜಿಕಲ್‌ ಇಂಡಿಯನ್‌’ ವೇದಿಕೆ ಫ್ಯಾಕ್ಟ್‌ಚೆಕ್‌ ಪ್ರಕಟಿಸಿದೆ. ‘ಬಹನಾಗಾ ಬಜಾರ್‌ ರೈಲು ನಿಲ್ದಾಣದ ಸ್ಟೇಷನ್‌ ಮಾಸ್ಟರ್‌ ಹೆಸರು ಎಸ್‌.ಬಿ.ಮೊಹಾಂತಿ. ಅವರು ತಲೆಮರೆಸಿಕೊಂಡಿಲ್ಲ’ ಎಂದು ಒಡಿಶಾದ ಇಬ್ಬರು ಐಪಿಎಸ್‌ ಅಧಿಕಾರಿಗಳು ದೃಢಪಡಿಸಿದ್ದಾರೆ. ದುರಂತ ಸಂಭವಿಸಿದಾಗಿನಿಂದ ಮೊಹಾಂತಿ ಅವರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು ಎಂದು ಇಂಡಿಯಾ ಟುಡೆ ಪತ್ರಿಕೆಯು ಜೂನ್ 5ರಂದು ವರದಿ ಮಾಡಿತ್ತು. ಜಾಲತಾಣಗಳಲ್ಲಿ ಹಂಚಿಕೆಯಾಗಿರುವ ಚಿತ್ರವನ್ನು ‘ಗೂಗಲ್‌ ರಿಸರ್ವ್‌ ಇಮೇಜ್‌ ಸರ್ಚ್‌’ ಬಳಸಿ ಪರಿಶೀಲಿಸಿದ ವೇಳೆ ಅದು ಆಂಧ್ರಪ್ರದೇಶದ ಬೊರ್ರಾ ಗುಲ್ಹು ರೈಲು ನಿಲ್ದಾಣದಲ್ಲಿ 19 ವರ್ಷಗಳ ಹಿಂದೆ ತೆಗೆಯಲಾದ ಚಿತ್ರ ಎಂಬುದು ತಿಳಿದುಬಂದಿದೆ ಎಂದು ಫ್ಯಾಕ್ಟ್‌ಚೆಕ್‌ನಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT