ADVERTISEMENT

ಫ್ಯಾಕ್ಟ್‌ ಚೆಕ್‌: ವೈಶಾಲಿ ಯಾದವ್‌ ಮನೆಯಲ್ಲೇ ಇದ್ದರೇ?

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2022, 23:30 IST
Last Updated 3 ಮಾರ್ಚ್ 2022, 23:30 IST
   

ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರು ವಿಶೇಷವಾಗಿ ವಿದ್ಯಾರ್ಥಿಗಳು ತಮ್ಮನ್ನು ತೆರವುಗೊಳಿಸುವಂತೆ ವಿಡಿಯೊ ಸಂದೇಶಗಳನ್ನು ಕಳಿಸುತ್ತಿದ್ದಾರೆ. ಅಂತಹ ಒಂದು ವಿಡಿಯೊ ಸಂದೇಶ ಈಗ ವೈರಲ್‌ ಆಗಿದೆ. ವೈಶಾಲಿ ಯಾದವ್ ಎಂಬ ವಿದ್ಯಾರ್ಥಿನಿಯು ತಮ್ಮನ್ನೂ ಸೇರಿ ಇತರ ಭಾರತೀಯ ವಿದ್ಯಾರ್ಥಿಗಳನ್ನು ರಕ್ಷಿಸುವಂತೆ ವಿಡಿಯೊ ಮೂಲಕ ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಈ ವಿದ್ಯಾರ್ಥಿನಿಯು ಸಮಾಜವಾದಿ ಪಕ್ಷದ ಮುಖಂಡ ಮಹೇಂದ್ರ ಯಾದವ್‌ ಅವರ ಮಗಳು. ಆಕೆ ಉಕ್ರೇನ್‌ನಲ್ಲಿ ಇಲ್ಲ. ಮೋದಿ ನೇತೃತ್ವದ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಉದ್ದೇಶದಿಂದ ತಮ್ಮ ಮನೆಯಿಂದಲೇ ಈ ವಿಡಿಯೊ ಮಾಡಿದ್ದಾರೆ ಎಂದು ವಿಡಿಯೊವನ್ನು ಬಿಂಬಿಸಲಾಗುತ್ತಿದೆ.

ವೈಶಾಲಿ ಯಾದವ್‌ ಮನೆಯಲ್ಲೇ ಇದ್ದರು ಎಂಬುದು ಸುಳ್ಳು ಮಾಹಿತಿ ಎಂದು ದಿ ಲಾಜಿಕಲ್‌ ಇಂಡಿಯನ್ ವೇದಿಕೆ ವರದಿ ಮಾಡಿದೆ. ‘ವೈಶಾಲಿಯ ತಂದೆ ಮಹೇಂದ್ರ ಯಾದವ್‌ ಅವರು ಎಸ್‌ಪಿ ಮುಖಂಡರು ಎಂಬುದು ಸತ್ಯ. ವೈಶಾಲಿ ಉಕ್ರೇನ್‌ನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದಾರೆ. ವಿಡಿಯೊ ಮಾಡಿದಾಗ ಆಕೆ ರೊಮೇನಿಯಾದಲ್ಲಿ ಇದ್ದರು. ಭಾರತಕ್ಕೆ ಇನ್ನೂ ಬಂದಿರಲಿಲ್ಲ’ ಎಂದು ಉತ್ತರ ಪ್ರದೇಶದ ಹರ್ದೋಯಿ ಪೊಲೀಸ್‌ ಠಾಣೆಯ ಅಧಿಕಾರಿ ರಾಜೇಶ್‌ ದ್ವಿವೇದಿ ತಿಳಿಸಿದ್ದಾರೆ. ವೈಶಾಲಿ ರೊಮೇನಿಯಾದಿಂದ ಭಾರತಕ್ಕೆ ಬುಧವಾರ ರಾತ್ರಿ ಹೊರಟಿದ್ದಾರೆ ಎಂದು ಆಕೆಯ ತಂದೆ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT