ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಸಂಸತ್ತಿನಲ್ಲಿ ಮಾತನಾಡುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಟೋಲ್ ಬೂತ್‌ಗಳಿಂದ 60 ಕಿ.ಮೀ ವ್ಯಾಪ್ತಿಯ ಗ್ರಾಮ/ಪ್ರದೇಶದ ನಿವಾಸಿಗಳಾಗಿದ್ದರೆ, ಅಂಥವರಿಗೆ ಟೋಲ್ ಶುಲ್ಕ ಪಾವತಿಸುವುದರಿಂದ ವಿನಾಯ್ತಿ ಇದೆ ಎಂದು ಸಚಿವರು ಘೋಷಿಸಿದ್ದಾರೆ ಎಂದು ಅದನ್ನು ಹಂಚಿಕೊಳ್ಳುತ್ತಿರುವವರು ಪ್ರತಿಪಾದನೆ ಮಾಡುತ್ತಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.
ಈ ಬಗ್ಗೆ ಯು ಟ್ಯೂಬ್‌ನಲ್ಲಿ ಕೀ ವರ್ಡ್ ಸರ್ಚ್ ಮಾಡಿದಾಗ, ಮಾರ್ಚ್ 22, 2022ರಂದು ನಿತಿನ್ ಗಡ್ಕರಿ ಅವರ ಯು ಟ್ಯೂಬ್ ಚಾನೆಲ್‌ನಲ್ಲಿ ದೀರ್ಘ ಅವಧಿಯ ವಿಡಿಯೊ ಕಂಡುಬಂತು. ಟೋಲ್ ಬೂತ್‌ಗಳ ಸುತ್ತಮುತ್ತಲಿನ ಗ್ರಾಮ/ಪ್ರದೇಶಗಳ ನಿವಾಸಿಗಳಿಗೆ ಉಚಿತ ಪಾಸ್ ನೀಡುವ ಬಗ್ಗೆ ಕೆಲವು ಸಂಸದರು ಸಲಹೆ ನೀಡಿದ್ದಾರೆ ಎಂದು ಸಚಿವರು ವಿಡಿಯೊದಲ್ಲಿ ಹೇಳಿದ್ದಾರೆ. ನಂತರ ಅವರು 60 ಕಿ.ಮೀ ವ್ಯಾಪ್ತಿಯಲ್ಲಿ ಎರಡು ಟೋಲ್ ಬೂತ್‌ಗಳು ಇರುವಂತಿಲ್ಲ ಎಂದು ಹೇಳಿ, ಮೂರು ತಿಂಗಳ ಒಳಗೆ ಇದನ್ನು ಜಾರಿಗೊಳಿಸಲು ಉದ್ದೇಶಿಸಿರುವುದಾಗಿ ತಿಳಿಸಿದ್ದರು. ಸಚಿವರ ಹಳೆಯದಾದ ಎರಡು ಪ್ರತ್ಯೇಕ ವಿಡಿಯೊಗಳನ್ನು ಒಂದುಗೂಡಿಸಿ, ತಪ್ಪು ಅರ್ಥ ಬರುವಂತೆ ಪ್ರಚಾರ ಮಾಡಲಾಗುತ್ತಿದೆ. ಈ ಬಗ್ಗೆ ಆಲ್ಟ್ ನ್ಯೂಸ್ ಫ್ಯಾಕ್ಟ್ ಚೆಕ್ ಪ್ರಕಟಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.