ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೆಲವರೊಂದಿಗೆ ಸಂವಾದ ನಡೆಸುವ ಎರಡು ಛಾಯಾಚಿತ್ರಗಳನ್ನು ಒಟ್ಟಾಗಿ ಸೇರಿಸಿದ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ರಾಹುಲ್ ಅವರು ದೆಹಲಿ ವಿವಿ ವಿದ್ಯಾರ್ಥಿಗಳು ಮತ್ತು ರೈಲ್ವೆ ಕೂಲಿಗಳೊಂದಿಗೆ ಸಂವಾದ ನಡೆಸುವ ಚಿತ್ರಗಳು ಅವಾಗಿದ್ದು, ಒಬ್ಬ ವ್ಯಕ್ತಿ ಎರಡೂ ಚಿತ್ರಗಳಲ್ಲಿದ್ದು, ವಿದ್ಯಾರ್ಥಿಯಾಗಿ ಮತ್ತು ಕೂಲಿಯಾಗಿ ಸಂವಾದದಲ್ಲಿ ಭಾಗವಹಿಸಿದ್ದಾರೆ ಎಂದು ಚಿತ್ರದೊಂದಿಗೆ ಹಾಕಲಾಗಿರುವ ಪೋಸ್ಟ್‌ನಲ್ಲಿ ಪ್ರತಿಪಾದಿಸಲಾಗುತ್ತಿದೆ. ಆದರೆ, ಇದು ಸುಳ್ಳು.
ಒಂದು ಚಿತ್ರದಲ್ಲಿ ರಾಹುಲ್ ಗಾಂಧಿ ಅವರು ನೀಲಿ ಟಿ–ಶರ್ಟ್ ಧರಿಸಿದ್ದು, ಅದು ಮೇ 22ರಂದು ದೆಹಲಿ ವಿವಿಯಲ್ಲಿ ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದದ ಚಿತ್ರ. ಪೋಸ್ಟ್‌ನಲ್ಲಿ ಹೇಳಿದಂತೆ ಎರಡೂ ಚಿತ್ರಗಳಲ್ಲಿ ಒಬ್ಬರೇ ಇದ್ದಾರೆ ಎಂದು ಹೇಳಲಾದ ವ್ಯಕ್ತಿಯ ಹೆಸರು ಲೋಕೇಶ್ ಚೌಧರಿ. ದೆಹಲಿ ವಿವಿಯ ವಿದ್ಯಾರ್ಥಿ ಒಕ್ಕೂಟದ ಜಂಟಿ ಕಾರ್ಯದರ್ಶಿಯಾಗಿದ್ದಾರೆ. ಅಲ್ಲದೆ ಕಾಂಗ್ರೆಸ್‌ನ ವಿದ್ಯಾರ್ಥಿ ಘಟಕ ಎನ್‌ಎಸ್‌ಯುಐನ ಸದಸ್ಯರೂ ಆಗಿದ್ದಾರೆ. ವೈರಲ್ ಚಿತ್ರದ ಬಗ್ಗೆ ಪ್ರತಿಕ್ರಿಯಿಸಿರುವ ಅವರು ಪೋಸ್ಟ್‌ನಲ್ಲಿರುವ ಮಾಹಿತಿಯನ್ನು ತಳ್ಳಿ ಹಾಕಿದ್ದಾರೆ. ಎರಡನೇ ಚಿತ್ರವನ್ನು ರಿವರ್ಸ್ ಇಮೇಜ್ ವಿಧಾನದ ಮೂಲಕ ಹುಡುಕಾಟ ನಡೆಸಿದಾಗ, ರಾಹುಲ್ ಗಾಂಧಿ ಅವರು ಈ ವರ್ಷದ ಮಾರ್ಚ್‌ನಲ್ಲಿ ನವದೆಹಲಿ ರೈಲು ನಿಲ್ದಾಣದಲ್ಲಿ ಕೂಲಿಗಳನ್ನು ಭೇಟಿ ಮಾಡಿದಾಗಿನ ಚಿತ್ರ ಎಂಬುದು ಕಂಡು ಬಂತು. ಫೆ.15ರಂದು ನಡೆದಿದ್ದ ಕಾಲ್ತುಳಿತದ ವೇಳೆ, ಪರಿಹಾರ ಕಾರ್ಯಾಚರಣೆಗೆ ನೆರವಾದ ಕೂಲಿಗಳನ್ನು ಅವರು ಭೇಟಿ ಮಾಡಿದ್ದರು. ಇದರ ವಿಡಿಯೊವನ್ನು ರಾಹುಲ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಮಾರ್ಚ್ 5ರಂದು ಪೋಸ್ಟ್ ಮಾಡಿದ್ದರು. ಎರಡೂ ಫೋಟೊಗಳನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಚೌಧರಿ ಮತ್ತು ಕೂಲಿಯಾಗಿ ಕೆಲಸ ನಿರ್ವಹಿಸುವ ವ್ಯಕ್ತಿ ಬೇರೆ ಬೇರೆ ಎಂಬುದು ದೃಢಪಟ್ಟಿದೆ ಎಂದು ಬೂಮ್ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.