ನಾಸಾ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಅವರ ಪತ್ರಿಕಾಗೋಷ್ಠಿಯ ವಿಡಿಯೊವೊಂದನ್ನು ‘ಎಕ್ಸ್’ನಲ್ಲಿ ಹಂಚಿಕೊಂಡಿರುವ ಡಾ.ಕೃಷ್ಣ್ ಸಿಂಗ್ ಎಂಬುವವರು, ಒಂಬತ್ತು ತಿಂಗಳ ನಂತರ ತಾವು ಸುರಕ್ಷಿತವಾಗಿ ಭೂಮಿಗೆ ಮರಳುವುದಕ್ಕೆ ಭಗದ್ಗೀತೆ ಮತ್ತು ಉಪನಿಷತ್ತುಗಳು ಕಾರಣ ಎಂದು ಹೇಳಿದ್ದಾರೆ ಎಂದು ಪೋಸ್ಟ್ ಮಾಡಿದ್ದಾರೆ. ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಹಂಚಿಕೊಂಡಿದ್ದಾರೆ. ಆದರೆ, ಇದು ಸುಳ್ಳು.
ಭೂಮಿಗೆ ಮರಳಿದ ನಂತರ ಸುನಿತಾ ವಿಲಿಯಮ್ಸ್ ಸುದ್ದಿಗೋಷ್ಠಿ ಮಾಡಿದ್ದಾರೆಯೇ ಎಂದು ಪರಿಶೀಲಿಸಲು ನಿರ್ದಿಷ್ಟ ಪದಗಳನ್ನು ಬಳಸಿ ಗೂಗಲ್‌ನಲ್ಲಿ ಹುಡುಕಾಡಿದಾಗ ಯಾವುದೇ ಫಲಿತಾಂಶ ಸಿಗಲಿಲ್ಲ. ‘ಎಕ್ಸ್’ನಲ್ಲಿ ಹಂಚಿಕೊಂಡಿರುವ ವಿಡಿಯೊವನ್ನು ಕೂಲಂಕಷವಾಗಿ ಪರಿಶೀಲಿಸಿದಾಗ, ‘ದೆಹಲಿಯಲ್ಲಿ ವಿಲಿಯಮ್ಸ್’ ಎಂಬ ಒಕ್ಕಣೆ ಅದರಲ್ಲಿ ಕಾಣಿಸಿತು. ಇದರ ಆಧಾರದಲ್ಲಿ ಮತ್ತೆ ಗೂಗಲ್‌ನಲ್ಲಿ ಹುಡುಕಿದಾಗ 2013ರ ಏಪ್ರಿಲ್ 2ರಂದು ದೆಹಲಿಯಲ್ಲಿ ಸುನಿತಾ ಅವರು ಮಾತನಾಡಿರುವ ಬಗ್ಗೆ ಎನ್‌ಡಿಟಿವಿ ಮಾಡಿರುವ ವರದಿ ಸಿಕ್ಕಿತು. ಎರಡೂ ವಿಡಿಯೊಗಳು ಒಂದೇ ರೀತಿ ಇದ್ದವು. ನಿರ್ದಿಷ್ಟ ಪದಗಳನ್ನು ಬಳಸಿ ಮತ್ತಷ್ಟು ಹುಡುಕಿದಾಗ, ಇದೇ ಮಾರ್ಚ್ 19ರಂದು ನ್ಯೂಸ್ 18ನಲ್ಲಿ ಪ್ರಕಟವಾದ ವರದಿ ಸಿಕ್ಕಿತು. ‘ಸಮೋಸಾ ಪ್ರಿಯೆಯಾಗಿರುವ ವಿಲಿಮಯ್ಸ್ ಭಾರತದ ಸಂಸ್ಕೃತಿಯೊಂದಿಗಿನ ಅವರ ಸಂಬಂಧದ ಬಗ್ಗೆ ಮಾತನಾಡಿದ್ದಾಗ’ ಎಂಬ ವರದಿ ಸಿಕ್ಕಿತು. ಹಿಂದೆ ಸುನಿತಾ ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ವಿಡಿಯೊ ವೈರಲ್ ಆಗಿರುವ ಬಗ್ಗೆ ವರದಿ ಪ್ರಸ್ತಾಪಿಸಿತ್ತು. ದೆಹಲಿಯ ರಾಷ್ಟ್ರೀಯ ವಿಜ್ಞಾನ ಕೇಂದ್ರದಲ್ಲಿ ನಡೆದಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದರು. ಆಗ ಭಗವದ್ಗೀತೆ, ಉಪನಿಷತ್ ಬಗ್ಗೆ ಪ್ರಸ್ತಾಪಿಸಿದ್ದರು. ಆ ಹಳೆಯ ವಿಡಿಯೊವನ್ನು ಮುಂದಿಟ್ಟುಕೊಂಡು ಸುನಿತಾ ಅವರು ಮಾರ್ಚ್ 18ರಂದು ಭೂಮಿಗೆ ಮರಳಿದ ನಂತರ ಈ ಹೇಳಿಕೆ ನೀಡಿದ್ದಾರೆ ಎಂದು ತಪ್ಪಾಗಿ ಬಿಂಬಿಸಲಾಗುತ್ತಿದೆ ಎಂದು ಪಿಟಿಐ ಫ್ಯಾಕ್ಟ್‌ಚೆಕ್ ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.