ಲಡಾಖ್‌ನ ಶಿಕ್ಷಣ ತಜ್ಞ, ಪರಿಸರವಾದಿ ಸೋನಮ್ ವಾಂಗ್ಚೂಕ್ ಅವರು ಬಾಂಗ್ಲಾದೇಶದ ಹಂಗಾಮಿ ಮುಖ್ಯ ಸಲಹೆಗಾರ ಮೊಹಮ್ಮದ್ ಯೂನುಸ್ ಅವರೊಂದಿಗೆ ಇರುವ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಲಡಾಖ್‌ನಲ್ಲಿ ಹಿಂಸಾಚಾರ ಸಂಭವಿಸಿತ್ತು. ಇದರ ನಡುವೆಯೇ ಈ ಭೇಟಿ ನಡೆದಿದೆ ಎಂಬರ್ಥದಲ್ಲಿ ಪ್ರತಿಪಾದಿಸಲಾಗುತ್ತಿದೆ. ‘ಭಾರತದ ವಿರುದ್ಧ ಅಂತರರಾಷ್ಟ್ರೀಯ ಸಂಚುಕೋರರು ಆಡುತ್ತಿರುವ ಆಟ ಇದು. ಅಂತರರಾಷ್ಟ್ರೀಯ ದಲ್ಲಾಳಿ ಗ್ಯಾಂಗ್ ಮತ್ತು ಅಂತರರಾಷ್ಟ್ರೀಯ ದಲ್ಲಾಳಿಗಳ ಕುಟುಂಬ ಹಾಗೂ ಅವರ ಏಜೆಂಟರ ಪಿತೂರಿ ಇದು’ ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ. ಆದರೆ, ಇದು ಸುಳ್ಳು.
ರಿವರ್ಸ್ ಇಮೇಜ್ ವಿಧಾನದ ಮೂಲಕ ಗೂಗಲ್‌ನಲ್ಲಿ ಹುಡುಕಾಟ ನಡೆಸಿದಾಗ ಸೋನಮ್ ವಾಂಗ್ಚೂಕ್ ಅವರು 2020ರ ಫೆಬ್ರುವರಿಯಲ್ಲಿ ಫೇಸ್‌ಬುಕ್‌ನಲ್ಲಿ ಮಾಡಿದ ಪೋಸ್ಟ್ ಸಿಕ್ಕಿತು. ಅದರಲ್ಲಿ ಇದೇ ಫೋಟೊ ಇತ್ತು. ಹಾಗಾಗಿ, ಇದು ಇತ್ತೀಚಿನ ಭೇಟಿಯ ಫೋಟೊ ಅಲ್ಲ ಎಂಬುದು ದೃಢಪಟ್ಟಿತು. ಢಾಕಾದ ಬ್ರಿಟಿಷ್ ಹೈಕಮಿಷನ್‌ನಲ್ಲಿ ಡಾ.ಯೂನುಸ್ ಅವರನ್ನು ಭೇಟಿಯಾದೆ’ ಎಂದು ಚಿತ್ರದ ಶೀರ್ಷಿಕೆಯಲ್ಲಿ ಬರೆಯಲಾಗಿತ್ತು. ಆ ಸಂದರ್ಭದಲ್ಲಿ ಯೂನುಸ್ ಅವರು ರಾಜಕೀಯದಲ್ಲಿ ಇರಲಿಲ್ಲ. ಆರ್ಥಿಕ ತಜ್ಞರಾಗಿ ಮತ್ತು ನೊಬೆಲ್ ಪುರಸ್ಕೃತರಾಗಿ ಗುರುತಿಸಿಕೊಂಡಿದ್ದರು. ಕಳೆದ ವರ್ಷವಷ್ಟೆ ಅವರು ಬಾಂಗ್ಲಾದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರರಾಗಿ ನೇಮಕಗೊಂಡಿದ್ದರು. ವಾಂಗ್ಚೂಕ್ ಮತ್ತು ಯೂನುಸ್ ಅವರು ಇತ್ತೀಚೆಗೆ ಭೇಟಿ ಮಾಡಿದ ಬಗ್ಗೆ ಎಲ್ಲೂ ಮಾಹಿತಿ ಇಲ್ಲ. ಹಳೆಯ ಫೋಟೊವನ್ನು ಬಳಸಿ ಇತ್ತೀಚಿನ ಫೋಟೊ ಎಂಬಂತೆ ಬಿಂಬಿಸಲಾಗುತ್ತಿದೆ ಎಂದು ಪಿಟಿಐ ಫ್ಯಾಕ್ಟ್ ಚೆಕ್ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.