ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮಲೇಷ್ಯಾದಲ್ಲಿ ಭಾರತದಿಂದ ಪರಾರಿಯಾಗಿರುವ ವಿವಾದಿತ ಧರ್ಮ ಭೋದಕ ಝಾಕೀರ್ ನಾಯ್ಕ್‌ನನ್ನು ಭೇಟಿಯಾಗಿದ್ದಾರೆ ಎಂದು ಪ್ರತಿಪಾದಿಸುತ್ತಾ, ರಾಹುಲ್ ಗಾಂಧಿ ಆತನೊಂದಿಗೆ ಇರುವ ಫೋಟೊವೊಂದನ್ನು ಸಾಮಾಜಿಕ ಜಾಲತಾಣಗಳ ಹಲವು ಬಳಕೆದಾರರು ಹಂಚಿಕೊಳ್ಳುತ್ತಿದ್ದಾರೆ. ಆದರೆ, ಇದು ಸುಳ್ಳು.
ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದ ಫೋಟೊವನ್ನು ಗೂಗಲ್ ಲೆನ್ಸ್‌ನಲ್ಲಿ ಹಾಕಿ ಹುಡುಕಿದಾಗ 2023ರ ಮಾರ್ಚ್ 23ರಂದು ಅರೇಬಿಯನ್ ನ್ಯೂಸ್ ಎಂಬ ಸುದ್ದಿ ಪೋರ್ಟಲ್ ತನ್ನ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಂಡಿದ್ದ ಫೋಟೊವೊಂದು ಸಿಕ್ಕಿತು. ಝಾಕೀರ್ ನಾಯ್ಕ್, ತನ್ನ ಮಗ ಫಾರಿಕ್‌ನೊಂದಿಗೆ ಒಮಾನ್‌ನ ಗ್ರ್ಯಾಂಡ್ ಮುಫ್ತಿ ಶೇಝ್ ಅಹಮದ್ ಬಿನ್ ಹಮಾದ್ ಅಲ್ ಖಲಿಲಿ ಅವರನ್ನು ಭೇಟಿ ಮಾಡಿದ ಫೋಟೊ ಅದಾಗಿತ್ತು. ಈಗ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಚಿತ್ರಕ್ಕೂ ಈ ಚಿತ್ರಕ್ಕೂ ಸಾಕಷ್ಟು ಸಾಮ್ಯತೆಗಳಿದ್ದು, ಮುಫ್ತಿ ಅವರ ಫೋಟೊ ಇರುವ ಜಾಗದಲ್ಲಿ ರಾಹುಲ್ ಗಾಂಧಿ ಅವರ ಫೋಟೊ ಕಾಣಿಸುತ್ತಿದೆ. ಕೂಲಂಕಷವಾಗಿ ಪರಿಶೀಲಿಸಿದಾಗ, ಫೋಟೊ ತಿರುಚಿರುವ ಅನುಮಾನವೂ ಬಂತು. ಇದರ ಆಧಾರದಲ್ಲಿ ಎಐಯನ್ನು ಪತ್ತೆ ಮಾಡುವ ಹೈವ್ ಮಾಡರೇಷನ್ ಮತ್ತು ವಾಸ್ ಇಟ್ ಎಐ ಟೂಲ್‌ಗಳನ್ನು ಬಳಸಿ ಚಿತ್ರವನ್ನು ಪರಿಶೀಲನೆಗೆ ಒಳಪಡಿಸಿದಾಗ ರಾಹುಲ್ ಗಾಂಧಿ ಮತ್ತು ಝಾಕೀರ್ ನಾಯ್ಕ್ ಅಕ್ಕ ಪಕ್ಕ ಕುಳಿತಿರುವ ಚಿತ್ರ ಎಐ ಮೂಲಕ ಸೃಷ್ಟಿಸಿದ್ದು ಎಂಬುದು ದೃಢಪಟ್ಟಿತು. ಹಳೆಯ ಚಿತ್ರವನ್ನು ಡಿಜಿಟಲ್ ತಂತ್ರಜ್ಞಾನದಲ್ಲಿ ತಿರುಚಿ ಈಗ ತಪ್ಪಾಗಿ ಬಿಂಬಿಸಲಾಗುತ್ತಿದೆ ಎಂದು ಪಿಟಿಐ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.