ADVERTISEMENT

ಗಾಂಧಿ- ಸಾವರ್ಕರ್ ಮಾತುಕತೆ: ವೈರಲ್ ವಿಡಿಯೊ 'ವೀರ್ ಸಾವರ್ಕರ್' ಸಿನಿಮಾದ್ದು!

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2019, 17:18 IST
Last Updated 30 ಅಕ್ಟೋಬರ್ 2019, 17:18 IST
   

ಬೆಂಗಳೂರು: 'ಆಸ್ಕರ್ ಪ್ರಶಸ್ತಿ ವಿಜೇತ ಹಾಲಿವುಡ್ ಸಿನಿಮಾ ಮಹಾತ್ಮ ಗಾಂಧಿ ದೃಶ್ಯ ವಿದು. 15 ವರ್ಷಗಳ ಹಿಂದೆ ಈ ಸಿನಿಮಾ ಬಿಡುಗಡೆಯಾಗಿತ್ತು ಮೋಹನ್ ದಾಸ್ ಕರಮ್‌ಚಂದ್ ಗಾಂಧಿ ಮತ್ತು ವೀರ್ ಸಾವರ್ಕರ್ ನಡುವಿನ ಪ್ರಧಾನ ಸಂಭಾಷಣೆ ಇಲ್ಲಿ ನಡೆಯುತ್ತಿದೆ. ಇದರ ಬಗ್ಗೆ ಕಾಂಗ್ರೆಸ್ ಪ್ರಾಯೋಜಿತ, ರೋಮಿಲಾ ತಾಪರ್ ಮತ್ತು ಅವರ ಅನುಯಾಯಿಗಳು ಭಾರತದ ಚರಿತ್ರೆ ಪುಸ್ತಕದಲ್ಲಿ ಬರೆದಿಲ್ಲ.ಗಾಂಧಿ ಮತ್ತು ನೆಹರು ನಿಜವಾದ ಹೋರಾಟಗಾರರು ಮತ್ತು ಮೊಘಲರೇ ಶ್ರೇಷ್ಠರು ಎಂದು ನಮಗೆ ಕಲಿಸಲಾಗಿತ್ತು' ಎಂಬ ಒಕ್ಕಣೆಯೊಂದಿಗೆ ಮಹಾತ್ಮಗಾಂಧಿ ಮತ್ತು ಸಾವರ್ಕರ್ ನಡುವಿನ ಸಂಭಾಷಣೆಯ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿಹರಿದಾಡುತ್ತಿದೆ.

ಈ ವಿಡಿಯೊ ಸಿನಿಮಾವೊಂದರ ತುಣುಕು. ಆದರೆ ಇಲ್ಲಿ ಹೇಳಿದಂತೆ ಈ ತುಣುಕು ಗಾಂಧಿ ಸಿನಿಮಾದ್ದು ಅಲ್ಲ, ಆಸ್ಕರ್ ಪ್ರಶಸ್ತಿ ವಿಜೇತ ಗಾಂಧಿ ಸಿನಿಮಾ ನಿರ್ಮಿಸಿದ್ದು ರಿಚರ್ಡ್ ಅಟೆನ್‌ಬರೊ. ಈ ಸಿನಿಮಾ ಬಿಡುಗಡೆ ಆಗಿದ್ದು 1982 ನವೆಂಬರ್ 30ರಂದು. ಅಂದರೆ 37 ವರ್ಷ ಹಿಂದೆ.

ಫ್ಯಾಕ್ಟ್‌ಚೆಕ್
ವೈರಲ್ ವಿಡಿಯೊವನ್ನು ನೋಡಿದ ಕೂಡಲೇ ತಿಳಿಯುವ ಅಂಶ ಎಂದರೆ ಆ ವಿಡಿಯೊ ರಿಚರ್ಡ್ ಅಟೆನ್‌ಬರೊ ನಿರ್ಮಿತ ಗಾಂಧಿ ಸಿನಿಮಾದ್ದುಅಲ್ಲ. ಅದರಲ್ಲಿ ಈ ದೃಶ್ಯ ಇಲ್ಲವೇ ಇಲ್ಲ.ಆಸ್ಕರ್ ಪ್ರಶಸ್ತಿವಿಜೇತ ಚಿತ್ರ ಹಾಲಿವುಡ್ ಸಿನಿಮಾವಾಗಿತ್ತು. ಅಲ್ಲಿಸಂಭಾಷಣೆಗಳು ಇಂಗ್ಲಿಷ್‌ನಲ್ಲಿವೆ. ಆದರೆ ವೈರಲ್ ವಿಡಿಯೊದಲ್ಲಿಸಾವರ್ಕರ್ ಮತ್ತು ಗಾಂಧಿಹಿಂದಿಯಲ್ಲಿ ಮಾತನಾಡುತ್ತಿದ್ದಾರೆ.

ADVERTISEMENT

ಗಾಂಧಿ ಸಿನಿಮಾದಲ್ಲಿ ಗಾಂಧಿ ಪಾತ್ರ ನಿರ್ವಹಿಸಿದ್ದು ಬೆನ್ ಕಿಂಗ್‌ಸ್‌ಲೇಎಂಬ ನಟ. ಆದರೆ ವೈರಲ್ ವಿಡಿಯೊದಲ್ಲಿರುವ ಗಾಂಧಿ ಮತ್ತು ಗಾಂಧಿ ಸಿನಿಮಾದ ಗಾಂಧೀಜಿಪಾತ್ರಕ್ಕೂ ತುಂಬಾ ವ್ಯತ್ಯಾಸವಿದೆ.

ಗಾಂಧಿ ಸಿನಿಮಾದಲ್ಲಿನ ಗಾಂಧೀಜಿ ಪಾತ್ರ
ವೈರಲ್ ವಿಡಿಯೊದಲ್ಲಿರುವ ಗಾಂಧಿ ಪಾತ್ರ

ಅಟೆನ್‌ಬರೊ ಚಿತ್ರದಲ್ಲಿನ ಗಾಂಧಿಯ ಭಾಷೆ ಮತ್ತು ನಡವಳಿಕೆಗೂವೈರಲ್ ವಿಡಿಯೊದಲ್ಲಿರುವ ಗಾಂಧಿಯ ಭಾಷೆ ಮತ್ತು ನಡವಳಿಕೆಗೆವ್ಯತ್ಯಾಸವಿದೆ. ಹಾಗಾಗಿ ಇದು ಆಸ್ಕರ್ ವಿಜೇತ ಗಾಂಧಿ ಸಿನಿಮಾದ್ದು ಅಲ್ಲ ಎಂಬುದು ಸ್ಪಷ್ಟ .

ವೈರಲ್ ವಿಡಿಯೊ ಬಗ್ಗೆ ಫ್ಯಾಕ್ಟ್‌ಚೆಕ್ ಮಾಡಿದಾಗ ತಿಳಿದು ಬಂದ ಸಂಗತಿ ಏನೆಂದರೆಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವಿಡಿಯೊ ವೀರ್ ಸಾವರ್ಕರ್ ಎಂಬ ಸಿನಿಮಾದ್ದು. ವಿನಾಯಕ್ ದಾಮೋದರ್ ಸಾವರ್ಕರ್ ಜೀವನಾಧರಿತ ಕತೆಯ ಹಿಂದಿ ಭಾಷೆಯ ಈ ಸಿನಿಮಾ 2001ರಲ್ಲಿ ತೆರೆಕಂಡಿತ್ತು. ಸಾವರ್ಕರ್ ದರ್ಶನ್ ಪ್ರತಿಷ್ಠಾನ ಈ ಸಿನಿಮಾ ನಿರ್ಮಾಣ ಮಾಡಿತ್ತು. 2011ರಲ್ಲಿ ಮುಂಬೈ, ನವದೆಹಲಿ, ನಾಗಪುರ್ ಮತ್ತು ಇತರ ಆರು ನಗರಗಳಲ್ಲಿ ಈ ಸಿನಿಮಾ ತೆರೆಕಂಡಿತ್ತು. 2012ರಲ್ಲಿ ಆಗ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಈ ಸಿನಿಮಾದ ಗುಜರಾತ್ ಅವತರಣಿಕೆಯನ್ನು ಬಿಡುಗಡೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.