ADVERTISEMENT

Fact check | ನೆಹರೂ ತಾಯಿ ಮುಸ್ಲಿಂ ಎಂಬುದು ಸುಳ್ಳು

​ಪ್ರಜಾವಾಣಿ ವಾರ್ತೆ
Published 25 ಜುಲೈ 2023, 19:30 IST
Last Updated 25 ಜುಲೈ 2023, 19:30 IST
   

ಯುವಕ ಜೆ.ಎಲ್‌. ನೆಹರೂ ಅವರು ತಮ್ಮ ತಾಯಿ ಥುಸ್ಸು ರೆಹಮಾನ್‌ ಭಾಯಿ ಅವರೊಂದಿಗೆ ಇದ್ದಾರೆ ಎನ್ನಲಾದ ಫೋಟೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಖ್ಯೆಯಲ್ಲಿ ಹಂಚಿಕೆ ಆಗುತ್ತಿದೆ. ‘ನೆಹರೂ ಅವರ ತಂದೆ ಮೋತಿಲಾಲ್‌ ನೆಹರೂ ಅವರಿಗೆ ಒಟ್ಟು ಐವರು ಹೆಂಡಿರಿದ್ದರು. ಅವರಲ್ಲಿ ಮುಸ್ಲಿಂ ಮಹಿಳೆ ರೆಹಮಾನ್‌ ಭಾಯಿ ಅವರೂ ಒಬ್ಬರು. ಇವರು ಮೋತಿಲಾಲ್‌ ಅವರ ಎರಡನೇ ಪತ್ನಿ’ ಎಂದೂ ಹೇಳಲಾಗುತ್ತಿದೆ. ಆದರೆ, ಇದು ಸುಳ್ಳು ಸುದ್ದಿ.

ಮೋತಿಲಾಲ್‌ ಹಾಗೂ ಅವರ ಎರಡನೇ ಪತ್ನಿ ಸ್ವರೂಪ್‌ ರಾಣಿ (ಥುಸ್ಸು, ಕಾಶ್ಮೀರಿ ಪಂಡಿತರ ಒಂದು ಪಂಗಡ) ಅವರ ಮೊದಲನೇ ಮಗ ಜವಾಹರಲಾಲ ನೆಹರೂ. ದಂಪತಿಗೆ ನೆಹರೂ ಅವರೂ ಸೇರಿ ವಿಜಯಲಕ್ಷ್ಮಿ ಪಂಡಿತ್‌ ಮತ್ತು ಕೃಷ್ಣಾ ನೆಹರೂ ಎಂಬ ಮೂವರು ಮಕ್ಕಳಿದ್ದಾರೆ. ಮಗುವಿಗೆ ಜನ್ಮ ನೀಡುವ ವೇಳೆಯಲ್ಲಿ ಮಗು ಹಾಗೂ ಮೋತಿಲಾಲ್‌ ಅವರ ಮೊದಲ ಪತ್ನಿ ಸಾವನ್ನಪ್ಪುತ್ತಾರೆ. ಆಗ ಸ್ವರೂಪ್‌ ರಾಣಿ ಅವರನ್ನು ಮೋತಿಲಾಲ್‌ ಅವರು ಮದುವೆ ಆಗುತ್ತಾರೆ. ಬಿ. ಆರ್‌. ನಂದಾ ಅವರು ಬರೆದ ‘ದಿ ನೆಹರೂಸ್‌: ಮೋತಿಲಾಲ್‌ ಅಂಡ್‌ ಜವಾಹರ್‌ಲಾಲ್‌’ ಎಂಬ ಪುಸ್ತಕದಲ್ಲಿ ಈ ಮಾಹಿತಿ ಇದೆ.

ಪತ್ರಕರ್ತೆ ಸಾಗರಿಕ ಘೋಷ್‌ ಅವರು ‘ಇಂದಿರಾ: ಇಂಡಿಯಾಸ್‌ ಮೋಸ್ಟ್‌ ಪವರ್‌ಫುಲ್‌ ಪ್ರೈಮ್‌ ಮಿನಿಸ್ಟರ್‌’ ಎಂಬ ಪುಸ್ತಕ ಬರೆದಿದ್ದಾರೆ. ಮೋತಿಹಾಲ್‌ ಅವರಿಗೆ ಐವರು ಪತ್ನಿಯರಿದ್ದರು ಎಂಬುದನ್ನು ಇವರೂ ನಿರಾಕರಿಸುತ್ತಾರೆ. ಆದ್ದರಿಂದ, ನೆಹರೂ ಅವರು ತಮ್ಮ ತಾಯಿ ಸ್ವರೂಪ್‌ ರಾಣಿ ಅವರೊಂದಿಗೆ ಇರುವ ಫೋಟೊವನ್ನು ತಪ್ಪಾಗಿ ಹಂಚಿಕೆ ಮಾಡಲಾಗುತ್ತಿದೆ. ನೆಹರೂ ಅವರ ತಾಯಿ ಮುಸ್ಲಿಂ ಎಂಬುದು ಸುಳ್ಳು ಎಂದು ಬೂಮ್‌ಲೈವ್‌ ಫ್ಯಾಕ್ಟ್‌ಚೆಕ್‌ ಪ್ರಕಟಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.