ಸಿಂಗಪುರದಲ್ಲಿ ಸ್ಕೂಬಾ ಡೈವಿಂಗ್ ವೇಳೆ ಮೃತಪಟ್ಟ ಅಸ್ಸಾಂ ಗಾಯಕ ಜುಬಿನ್ ಗರ್ಗ್ ಅವರ ಕೊನೆಯ ಕ್ಷಣಗಳು ಎಂದು ಪ್ರತಿಪಾದಿಸುತ್ತಾ, ಸ್ಕೂಬಾ ಡೈವಿಂಗ್ ಮಾಡುವ ವ್ಯಕ್ತಿಯೊಬ್ಬರು ನೀರಿನೊಳಗೆ ಅಸ್ವಸ್ಥರಾಗುವ ವಿಡಿಯೊ ತುಣುಕನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೊವನ್ನು ಸೆ.19ರಂದು ಪೋಸ್ಟ್ ಮಾಡಲಾಗಿದೆ. ಅದೇ ದಿನ ಜುಬಿನ್ ಅವರು ಮೃತಪಟ್ಟಿದ್ದರು. ಆದರೆ, ಇದು ಸುಳ್ಳು.
ಈ ವಿಡಿಯೊ ತುಣುಕಿನ ಕೀ ಫ್ರೇಮ್ ಒಂದನ್ನು ಗೂಗಲ್ ಲೆನ್ಸ್ ಬಳಸಿ ಹುಡುಕಿದಾಗ, ‘ಸಾಲ್ಟಿಮ್ಯಾಮಲ್ಸ್’ (saltymammals) ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಇದೇ ವಿಡಿಯೊ ಕಂಡು ಬಂತು. ವಿಡಿಯೊವನ್ನು ಈ ವರ್ಷದ ಜೂನ್ 13ರಂದು ಪೋಸ್ಟ್ ಮಾಡಲಾಗಿತ್ತು. ಆ ವಿಡಿಯೊದಲ್ಲಿ @stop.the.sun ಎಂಬ ಇನ್‌ಸ್ಟಾಗ್ರಾಂ ಖಾತೆಯ ವಿವರ ಇತ್ತು. ಆ ಖಾತೆಗೆ ಭೇಟಿ ನೀಡಿದಾಗ, ಮೇ 14ರಂದು ಇದೇ ವಿಡಿಯೊ ತುಣುಕನ್ನು ಪೋಸ್ಟ್ ಮಾಡಲಾಗಿತ್ತು. ಡೈವರ್ ಒಬ್ಬರು ನೀರಿನ ಆಳಕ್ಕೆ ಹೋದಾಗ ಪ್ರಜ್ಞೆ ತಪ್ಪಿದ ಬಗ್ಗೆ ಅದರಲ್ಲಿ ಉಲ್ಲೇಖಿಸಲಾಗಿತ್ತು. ರಕ್ಷಣೆಗಾಗಿ ಇದ್ದ ಡೈವರ್ ಅವರನ್ನು ರಕ್ಷಿಸಿದ್ದರು. ಜುಬಿನ್ ಗರ್ಗ್ ಅವರು ಸಾವು ಹೇಗಾಯಿತು ಎಂಬುದನ್ನು ತಿಳಿಯುವುದಕ್ಕಾಗಿ ನಿರ್ದಿಷ್ಟ ಪದಗಳನ್ನು ಬಳಸಿ ಗೂಗಲ್‌ನಲ್ಲಿ ಹುಡುಕಾಟ ನಡೆಸಿದಾಗ, ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಕಟವಾದ ವರದಿ ಸಿಕ್ಕಿತು. ‘ಆರಂಭದಲ್ಲಿ ಜುಬಿನ್ ಅವರು ಸ್ಕೂಬಾ ಡೈವಿಂಗ್ ಮಾಡುವ ಸಂದರ್ಭದಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿತ್ತು. ಆದರೆ, ಗರ್ಗ್ ಅವರು ಜೀವ ರಕ್ಷಕ ಜಾಕೆಟ್ ಧರಿಸದೇ ಈಜಲು ಹೋಗಿದ್ದರಿಂದ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತಾ ಬಿಸ್ವಾ ಶರ್ಮಾ ಅವರು ಹೇಳಿದ್ದಾರೆ’ ಎಂದು ಆ ವರದಿಯಲ್ಲಿತ್ತು. ಬೇರೆ ಯಾರಿಗೋ ಸಂಬಂಧಿಸಿದ ವಿಡಿಯೊವನ್ನು ಜುಬಿನ್ ಅವರ ಸಾವಿಗೆ ತಳಕು ಹಾಕಿ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ ಎಂದು ಪಿಟಿಐ ಪ್ಯಾಕ್ಟ್ ಚೆಕ್ ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.