ಅಮೆರಿಕವು ಭಾರತದ ಉತ್ಪನ್ನಗಳ ಮೇಲೆ ಶೇ 25ರಷ್ಟು ಸುಂಕ ವಿಧಿಸುವ ಬಗ್ಗೆ ಹಾಗೂ ನಂತರದಲ್ಲಿ ಈ ವಿಚಾರವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿರುವ ಟ್ವೀಟ್‌ಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಯಾವುದೇ ಪ್ರತಿಕ್ರಿಯೆ ನೀಡದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿ ಟ್ರಂಪ್ ಅವರು ಟ್ರುಥ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ ಎಂದು ಪ್ರತಿಪಾದಿಸಿ, ‘ಟ್ರುಥ್’ನಲ್ಲಿ ಟ್ರಂಪ್ ಮಾಡಿದ್ದಾರೆ ಎನ್ನಲಾದ ಪೋಸ್ಟ್ ಒಂದರ ಚಿತ್ರವನ್ನು ‘ಎಕ್ಸ್’ನಲ್ಲಿ ಹಂಚಲಾಗುತ್ತಿದೆ. ಆದರೆ, ಇದು ಸುಳ್ಳು.
ಡೊನಾಲ್ಡ್ ಟ್ರಂಪ್ ಅವರ ಅಧಿಕೃತ ‘ಎಕ್ಸ್’ ಖಾತೆ ಮತ್ತು ‘ಟ್ರುಥ್ ಸೋಷಿಯಲ್’ ಜಾಲತಾಣದ ಖಾತೆಯನ್ನು ಕೂಲಂಕಷವಾಗಿ ಪರಿಶೀಲನೆಗೆ ಒಳಪಡಿಸಿದಾಗ, ಈ ವಿಷಯವಾಗಿ ಅವರು ಇತ್ತೀಚೆಗೆ ಮಾಡಿರುವ ಪೋಸ್ಟ್ ಸಿಗಲಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗುತ್ತಿರುವ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅದರಲ್ಲಿ ‘WOKEFLIX’ ಎಂಬ ವಾಟರ್ ಮಾರ್ಕ್ ಕಂಡು ಬಂತು. ಇದು ನಿಜವಾದ ಪೋಸ್ಟ್‌ನ ಚಿತ್ರವಲ್ಲ, ತಮಾಷೆಗಾಗಿ ಮಾಡಿರಬಹುದಾದ ಗ್ರಾಫಿಕ್ ಎಂಬ ಅನುಮಾನ ವ್ಯಕ್ತವಾಯಿತು.ಟ್ರುಥ್ ಜಾಲತಾಣದಲ್ಲಿ ಪ್ರಕಟವಾಗುವ ಪೋಸ್ಟ್‌ನ ವಿನ್ಯಾಸಕ್ಕೆ ಹೋಲಿಸಿದರೆ, ಈ ಪೋಸ್ಟ್ ಭಿನ್ನವಾಗಿತ್ತು. ಅದಲ್ಲದೇ, ನಿರ್ದಿಷ್ಟ ಪದಗಳನ್ನು ಬಳಸಿ ಹುಡುಕಾಟ ನಡೆಸಿದಾಗ ಟ್ರಂಪ್ ಅವರು ಮೋದಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸುದ್ದಿ ಎಲ್ಲೂ ಪ್ರಕಟವಾಗಿಲ್ಲ. ಹಾಗಾಗಿ, ಇದೊಂದು ನಕಲಿ ಪೋಸ್ಟ್ ಎಂದು ಪಿಟಿಐ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.