ADVERTISEMENT

ಫ್ಯಾಕ್ಟ್‌ಚೆಕ್: ನಾಗಾ ಸಾಧುವೊಬ್ಬರ ಗಡ್ಡ, ಜಡೆಯನ್ನು ಯುವಕ ಕತ್ತರಿಸಿದ್ದು ನಿಜವೇ?

​ಪ್ರಜಾವಾಣಿ ವಾರ್ತೆ
Published 31 ಮೇ 2022, 19:31 IST
Last Updated 31 ಮೇ 2022, 19:31 IST
   

ನಾಗಾ ಸಾಧುವೊಬ್ಬರ ಗಡ್ಡ ಮತ್ತು ಜಡೆಯನ್ನು ಯುವಕನೊಬ್ಬ ಬಲವಂತದಿಂದ ಕತ್ತರಿಸುತ್ತಿರುವ ದೃಶ್ಯವಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜಡೆ ಕತ್ತರಿಸುವುದಕ್ಕೆ ಸಾಧು ಪ್ರತಿರೋಧ ಒಡ್ಡಿದಾಗ, ಆ ಯುವಕ ಸಾಧುವಿನ ಮೇಲೆ ಹಲ್ಲೆ ನಡೆಸುವ ದೃಶ್ಯವೂ ಈ ವಿಡಿಯೊದಲ್ಲಿ ಇದೆ. ಜತೆಗೆ ಆ ಯುವಕ ಸಾಧುವನ್ನು ಅವಾಚ್ಯ ಪದಗಳಿಂದ ನಿಂದಿಸುತ್ತಾನೆ. ‘ಮಧ್ಯಪ್ರದೇಶದಲ್ಲಿ ನಾಗಾ ಸಾಧುವೊಬ್ಬರ ಮೇಲೆ ಮುಸ್ಲಿಂ ಯುವಕ ಹಲ್ಲೆ ನಡೆಸಿದ್ದಾನೆ. ಹಿಂದೂ ಸಂತರ ಮೇಲೆ ಹಲ್ಲೆ ನಡೆಸಿದ ಮುಸ್ಲಿಂ ಯುವಕನಿಗೆ ಕಠಿಣ ಶಿಕ್ಷೆ ನೀಡಬೇಕು’ ಎಂದು ವೈರಲ್ ಆಗಿರುವ ವಿಡಿಯೊ ಜತೆಗೆ ವಿವರವನ್ನು ನೀಡಲಾಗಿದೆ.

‘ಈ ವಿಡಿಯೊಗೆ ಸಂಬಂಧಿಸಿದ ಮಾಹಿತಿಯನ್ನು ತಿರುಚಲಾಗಿದೆ ಮತ್ತು ಅದಕ್ಕೆ ಕೋಮಿನ ಬಣ್ಣ ಹಚ್ಚಲಾಗಿದೆ’ ಎಂದು ಆಲ್ಟ್‌ನ್ಯೂಸ್‌ ಫ್ಯಾಕ್ಟ್‌ಚೆಕ್‌ ಪ್ರಕಟಿಸಿದೆ. ‘ಮಧ್ಯಪ್ರದೇಶದ ಖಾಂಡ್ವಾದಲ್ಲಿ ಈ ಘಟನೆ ನಡೆದಿದೆ. ಪೃಥ್ವಿ ಚಕ್ರ ಎಂಬ ಖಾತೆಯಲ್ಲಿ ಮೊದಲ ಬಾರಿ ಈ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. ಸಾಧುವಿನ ಮೇಲೆ ಹಲ್ಲೆ ನಡೆಸಿದ ಯುವಕನ ಹೆಸರು ಪ್ರವೀಣ್ ಗೌರ್ ಎಂದು ಗುರುತಿಸಲಾಗಿದೆ. ಈತನ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಸದ್ಯ ಬಂಧನದಲ್ಲಿ ಇದ್ದಾನೆ ಎಂದು ಖಾಂಡ್ವಾ ಪೊಲೀಸರು ದೃಢಪಡಿಸಿದ್ದಾರೆ. ಸಾಧುವಿನ ಮೇಲೆ ಪ್ರವೀಣ್ ಗೌರ್ ಏಕೆ ಹಲ್ಲೆ ನಡೆಸಿದ ಎಂಬುದು ಗೊತ್ತಾಗಿಲ್ಲ, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ ಹಲ್ಲೆ ನಡೆಸಿದ ವ್ಯಕ್ತಿ ಮುಸ್ಲಿಂ ಎಂಬುದು ಸುಳ್ಳು ಮಾಹಿತಿ’ ಎಂದು ಆಲ್ಟ್‌ನ್ಯೂಸ್‌ ವಿವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT