ADVERTISEMENT

ಫ್ಯಾಕ್ಟ್ ಚೆಕ್: ಲಡಾಖ್‌ನಲ್ಲಿ ಪ್ರತಿಭಟನೆ ಎಂದು ಹರಿದಾಡುತ್ತಿರುವ ವಿಡಿಯೊ ಸುಳ್ಳು

ಫ್ಯಾಕ್ಟ್ ಚೆಕ್
Published 5 ಅಕ್ಟೋಬರ್ 2025, 19:22 IST
Last Updated 5 ಅಕ್ಟೋಬರ್ 2025, 19:22 IST
...
...   

ಹಿಮಾಲಯದ ತಪ್ಪಲಿನ ಲಡಾಕ್‌ಗೆ ರಾಜ್ಯದ ಸ್ಥಾನ ನೀಡುವಂತೆ ಆಗ್ರಹಿಸಿ ಪ್ರತಿಭಟನೆಗಳು ನಡೆಯುತ್ತಿದ್ದು, ಹಿಂಸಾಚಾರ ಕೂಡ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಹರಿದಾಡುತ್ತಿದೆ. 2025ರ ಸೆ.24ರಂದು ಪ್ರತಿಭಟನಕಾರರು ಸಾರ್ವಜನಿಕ ಸ್ವತ್ತಿಗೆ ಹಾನಿ ಮಾಡುತ್ತಿರುವುದು, ಸರ್ಕಾರಿ ಕಟ್ಟಡವೊಂದನ್ನು ಆಕ್ರಮಿಸಿಕೊಳ್ಳುತ್ತಿರುವುದು ವಿಡಿಯೊದಲ್ಲಿದೆ. ಇದು ಲಡಾಕ್‌ನಲ್ಲಿ ನಡೆದಿರುವ ಪ್ರಕರಣವಾಗಿದೆ ಎಂದು ವಿಡಿಯೊ ಹಂಚಿಕೊಳ್ಳುತ್ತಿರುವವರು ಪ್ರತಿಪಾದಿಸುತ್ತಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.

ವಿಡಿಯೊದ ಕೀಫ್ರೇಮ್‌ಗಳನ್ನು ವಿಂಗಡಿಸಿ, ಒಂದು ಕೀಫ್ರೇಮ್ ಅನ್ನು ರಿವರ್ಸ್ ಇಮೇಜ್‌ ಸರ್ಚ್‌ಗೆ ಒಳಪಡಿಸಿದಾಗ, ಇದೇ ವಿಡಿಯೊ ಅನ್ನು 2025ರ ಸೆ.13ರಂದು (ಲಡಾಕ್‌ನಲ್ಲಿ ಪ್ರತಿಭಟನೆಗಳು ನಡೆಯುವುದಕ್ಕೂ ಮುಂಚೆ) ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿರುವುದು ಕಂಡಿತು. ಅದೇ ಸ್ಥಳದಲ್ಲಿ ನಡೆದಿರುವ ಪ್ರತಿಭಟನೆಯ ಚಿತ್ರ, ವಿಡಿಯೊಗಳನ್ನು ಹಲವರು ಹಂಚಿಕೊಂಡಿರುವುದು ಕಂಡಿತು. ಒಂದು ಪೋಸ್ಟ್‌ನಲ್ಲಿರುವ ಚಿತ್ರದಲ್ಲಿ ‘ನೇಪಾಳ ಸರ್ಕಾರ, ಗೃಹ ಸಚಿವಾಲಯ, ಜಿಲ್ಲಾಡಳಿತ ಭವನ, ಭರತ್‌ಪುರ, ಚಿತ್ವಾನ್’ ಎಂದು ಕಟ್ಟಡದ ಮೇಲೆ ಬರೆದಿರುವುದು ಕಂಡಿತು. ನೇಪಾಳದ ಚಿತ್ವಾನದಲ್ಲಿರುವ ಜಿಲ್ಲಾಡಳಿತ ಭವನದ ಚಿತ್ರವನ್ನು ಗೂಗಲ್‌ನಲ್ಲಿ ಹುಡುಕಿದಾಗ, ಆ ಕಟ್ಟಡ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗುತ್ತಿರುವ ಪೋಸ್ಟ್‌ನಲ್ಲಿರುವ ಕಟ್ಟಡ ಎರಡೂ ಒಂದೇ ಆಗಿರುವುದು ಕಂಡುಬಂತು. 2025ರ ಸೆ.9ರಂದು ನೇಪಾಳದಲ್ಲಿ ನಡೆದಿದ್ದ ಜೆನ್ ಜಿ ಪ್ರತಿಭಟನೆಯ ವಿಡಿಯೊ ಅನ್ನು ಲಡಾಕ್‌ಗೆ ಸೇರಿದ್ದು ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಎಂಬುದಾಗಿ ಫ್ಯಾಕ್ಟ್‌ಲಿ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT