ADVERTISEMENT

Fact Check: ವ್ಯಕ್ತಿಯ ಮೈಪೂರ್ತಿ ಜೇನ್ನೊಣಗಳು: ಕೊಳಲಿನ ಧ್ವನಿಗೆ ಆಕರ್ಷಿತವಾದವೇ?

ಅವಿನಾಶ್ ಬಿ.
Published 8 ಜೂನ್ 2022, 11:14 IST
Last Updated 8 ಜೂನ್ 2022, 11:14 IST
ಕೊಳಲನೂದುವ ವ್ಯಕ್ತಿಯ ಮೈಮೇಲೆ ಜೇನ್ನೊಣಗಳು
ಕೊಳಲನೂದುವ ವ್ಯಕ್ತಿಯ ಮೈಮೇಲೆ ಜೇನ್ನೊಣಗಳು   

ವೈರಲ್ ಪೋಸ್ಟ್: "ಕೃಷ್ಣ ಭಕ್ತನೊಬ್ಬನ ಕೊಳಲಿನ ಧ್ವನಿ ಹೇಗಿರುತ್ತದೆಯೆಂದರೆ, ಧ್ವನಿ ಕೇಳಿ ಜೇನ್ನೊಣಗಳು ಆನಂದಗೊಂಡು ಸುತ್ತುವರಿಯುತ್ತವೆ. ಸನಾತನ ಧರ್ಮದಲ್ಲಿ ಇಂಥಹ ಅದ್ಭುತಗಳು ಕಾಣಸಿಗುತ್ತವೆ" ಎಂದು ಬರೆದಿರುವ ಫೇಸ್‌ಬುಕ್ ವಿಡಿಯೊ ಪೋಸ್ಟ್ ಒಂದು ಸಾಕಷ್ಟು ಸದ್ದು ಮಾಡಿದೆ. ಕೇಸರಿ ಹಣೆ ಪಟ್ಟಿ ಧರಿಸಿರುವ ಆತ ಕೊಳಲು ನುಡಿಸುತ್ತಾ ಇರುವಾಗ, ಜೇನು ಹುಳಗಳೆಲ್ಲ ಆತನ ದೇಹವನ್ನು ಮುತ್ತಿಕೊಂಡಿರುತ್ತವೆ ಮತ್ತು ಅತ್ತಿತ್ತ ಸರಿದಾಡುತ್ತಿರುತ್ತವೆ. ಇದನ್ನು ಫೇಸ್‌ಬುಕ್ ಮಾತ್ರವಲ್ಲದೆ ಟ್ವಿಟರ್‌ನಂತಹ ಬೇರೆ ಸಾಮಾಜಿಕ ಜಾಲತಾಣಗಳಲ್ಲಿಯೂ ಹಂಚಿಕೊಳ್ಳಲಾಗಿದೆ. ಇದಲ್ಲದೆ, ಇದು ಭಾರತದ ದೃಶ್ಯ ಎಂದೂ, ಕೇಸರಿ ಪಟ್ಟಿ ಹಾಗೂ ಹಳದಿ ಚಡ್ಡಿ ಧರಿಸಿರುವ ವ್ಯಕ್ತಿ ಭಾರತದ ಕೃಷ್ಣ ಭಕ್ತನೆಂದೂ ಕೆಲವರು ಬರೆದುಕೊಂಡಿದ್ದಾರೆ.

ತನಿಖೆ
ಈ ಹೇಳಿಕೆಯ ಕುರಿತು ಪ್ರಜಾವಾಣಿ ಸತ್ಯಾಂಶವೇನೆಂದು ತಿಳಿದುಕೊಳ್ಳಲು ಅಂತರಜಾಲದಲ್ಲಿ ಫ್ಯಾಕ್ಟ್‌ಚೆಕ್ ನಡೆಸಿತು. ವಿಡಿಯೊವನ್ನು ಸರಿಯಾಗಿ ವೀಕ್ಷಿಸಿದರೆ, ಮಧ್ಯೆ ಒಂದು ಕಡೆ ವ್ಯಕ್ತಿಯೊಬ್ಬರ ಕಪ್ಪು ಬಿಳುಪು ಚಿತ್ರಪಟವೊಂದನ್ನು ತೂಗುಹಾಕಲಾಗಿರುತ್ತದೆ. ಇದು ಯಾರು ಎಂದು ಪರಿಶೀಲಿಸಿದಾಗ, ಬಾಂಗ್ಲಾ ಸಂಸ್ಥಾಪಕ, ಬಾಂಗ್ಲಾದ ಮೊದಲ ರಾಷ್ಟ್ರಪತಿ 'ಬಂಗಬಂಧು' ಶೇಖ್ ಮುಜಿಬುರ್ ರಹಮಾನ್ ಅವರ ಚಿತ್ರವೆಂಬುದು ಮನದಟ್ಟಾಯಿತು. ಇದು ವಿಡಿಯೊದ ಮೂಲದ ಬಗೆಗೆ ಒಂದು ಸುಳಿವು ನೀಡಿತು.

ಬಳಿಕ, ಇನ್‌ವಿಡ್ ಎಂಬ ಟೂಲ್ ಬಳಸಿ, ವಿಡಿಯೊದಲ್ಲಿರುವ ಕೆಲವು ಫ್ರೇಮ್‌ಗಳನ್ನು ಪ್ರತ್ಯೇಕಿಸಿ, ಗೂಗಲ್ ಮೂಲಕ ರಿವರ್ಸ್ ಇಮೇಜ್ ಹುಡುಕಾಟ ನಡೆಸಲಾಯಿತು. ಅದಕ್ಕೆ ಸಂಬಂಧಿತ ಕೀವರ್ಡ್‌ಗಳನ್ನೂ ಸೇರಿಸಿ ಹುಡುಕಿದಾಗ, ಈ ವಿಡಿಯೊ ಬಾಂಗ್ಲಾದೇಶದ್ದು ಎಂಬುದಕ್ಕೆ ಸಾಕಷ್ಟು ಪುರಾವೆಗಳು ಲಭಿಸಿದವು. ಬಾಂಗ್ಲಾ ದೇಶದ ಹಲವಾರು ಮಾಧ್ಯಮ ಸಂಸ್ಥೆಗಳು ತಮ್ಮ ಜಾಲತಾಣಗಳಲ್ಲಿ ಸುದ್ದಿ ಪ್ರಕಟಿಸಿವೆ. ಅದರ ಅನುಸಾರ, ಈ ವ್ಯಕ್ತಿ ಬಾಂಗ್ಲಾ ದೇಶದ ಜೆಸ್ಸೋರ್ ಜಿಲ್ಲೆಯ ಭಾಂಡರ್‌ಕಲಾ ಎಂಬಲ್ಲಿ ಜೇನು ಸಾಕಣಿಕೆಯಲ್ಲಿ ತೊಡಗಿಕೊಂಡಿರುವ ಮಹಮ್ಮದ್ ಮಹತಾಬ್ ಅಲಿ.

ADVERTISEMENT

ಈ ಕುರಿತು ಬಾಂಗ್ಲಾದ ಜಿಟಿವಿ ಚಾನೆಲ್‌ನ ಯೂಟ್ಯೂಬ್ ಪುಟದಲ್ಲಿಯೂ ವಿಡಿಯೊ, ಮಾಹಿತಿ ಪ್ರಕಟವಾಗಿದೆ. ಅದು 2021ರ ಜೂನ್‌ನಲ್ಲಿ ಪ್ರಕಟವಾಗಿರುವ ಪೋಸ್ಟ್.

ಅಲ್ಲದೆ, ಜನರಿಂದ ವಿಡಿಯೊ ಖರೀದಿಸುವ ಮತ್ತು ಮಾರಾಟ ಮಾಡುವ ಜಾಲತಾಣ ನ್ಯೂಸ್‌ಫ್ಲೇರ್‌ನಲ್ಲಿ ಕೂಡ ಈತನ ವಿಡಿಯೊ ಸಂದರ್ಶನ ಇದೆ. ಅದರ ಲಿಂಕ್ ಇಲ್ಲಿದೆ.

ಮತ್ತಷ್ಟು ಹುಡುಕಿದಾಗ, ಬಾಂಗ್ಲಾ ದೇಶದ ಭಾಷಾ ಮಾಧ್ಯಮ ಜಾಲತಾಣ 'ಢಾಕಾ ಪೋಸ್ಟ್' ನಲ್ಲಿ ಇದೇ ವ್ಯಕ್ತಿಯ ಚಿತ್ರ ಸಹಿತವಾಗಿ ಸಂದರ್ಶನ ಪ್ರಕಟವಾಗಿರುವುದುಹಾಗೂ ಸಾರಾಬಾಂಗ್ಲಾ ತಾಣದಲ್ಲಿ ಗಮನಕ್ಕೆ ಬಂತು. ಅಲ್ಲಿರುವ ಮಾಹಿತಿಯ ಪ್ರಕಾರ, ಮೆಹತಾಬ್ ಎರಡು ದಶಕಗಳಿಂದ ಜೇನು ಸಂಗ್ರಹಣೆ ಮಾಡಿ ಮಾರಾಟ ಮಾಡುವ ಉದ್ಯೋಗ ಮಾಡುತ್ತಿದ್ದಾನೆ. ಈತನಲ್ಲಿ ವಿಚಾರಿಸಿದಾಗ ಆರಂಭದಲ್ಲಿ, ಜೇನುಹುಳಗಳೆಂದರೆ ತನಗಿಷ್ಟ, ಕೊಳಲು ಊದಿದಾಗ ಅವುಗಳು ಬಂದು ಮುತ್ತಿಕೊಳ್ಳುತ್ತವೆ ಎಂದಷ್ಟೇ ಹೇಳಿದ್ದ. ಹೀಗಾಗಿ, ಇದು ಆ ದೇಶದಲ್ಲಿ ದೊಡ್ಡ ಮಟ್ಟದ ಸುದ್ದಿಯಾಗಿತ್ತು. ಪವಾಡ ಎಂದೂ ಸಾಕಷ್ಟು ಪ್ರಚಾರವಾಯಿತು.

ಜೇನು ಹುಳಗಳು ಕೊಳಲಿನ ಧ್ವನಿಗೆ ತಲೆದೂಗುತ್ತವೆಯೇ?
ಆದರೆ, ಜೇನುಹುಳಗಳ ಈ ಗುಣವೈಶಿಷ್ಟ್ಯದ ಕುರಿತು ಜೀವಶಾಸ್ತ್ರಜ್ಞರ ಬಳಿ ಮಾಹಿತಿ ಕೇಳಿದಾಗ, ಧ್ವನಿಗೆ ಅವುಗಳು ಆಕರ್ಷಣೆಗೊಳ್ಳುವುದಿಲ್ಲವಾದರೂ, ಧ್ವನಿಯಲ್ಲಿ ನಿರ್ದಿಷ್ಟ ತರಂಗಾಂತರಗಳಿದ್ದರೆ, ಅದನ್ನು ಅನುಸರಿಸಿ ಹೋದರೆ ತಮಗೆ ಆಹಾರ ಸಿಗುತ್ತದೆ ಎಂದು ಜೇನುಹುಳಗಳು ನಂಬುತ್ತವೆ. ಆದರೆ, ಅವುಗಳು ಮೂಲತಃ ಜೇನು ಅಥವಾ ಹೂವುಗಳ ಸುಗಂಧದತ್ತ (ಫಿರಮೋನ್) ಹೆಚ್ಚು ಆಕರ್ಷಿತವಾಗುತ್ತವೆ ಎಂಬ ಮಾಹಿತಿ ನೀಡಿದರು.

ಈ ಹಿನ್ನೆಲೆಯಲ್ಲಿ, ಢಾಕಾ ಪೋಸ್ಟ್ ಹಾಗೂ ಈ ವಿಡಿಯೊ ಪ್ರಕಟಿಸಿದ ಮಾಸ್‌ರಂಗಾ ಮಾಧ್ಯಮ ಸಂಸ್ಥೆಯ ಪತ್ರಕರ್ತರು ಆತನನ್ನು ಮತ್ತಷ್ಟು ವಿಚಾರಿಸಿದಾಗ ಸತ್ಯ ವಿಷಯ ಹೊರಬಿದ್ದಿದೆ. ಆತನ ಮನೆಯ ಬಳಿಯಲ್ಲೇ ಆತನೇ ಸಾಕಣಿಕೆ ಮಾಡುತ್ತಿರುವ ಜೇನುಗೂಡುಗಳಿವೆ. ಈ ರೀತಿ ಜೇನುಗಳು ಬರಬೇಕಿದ್ದರೆ, ಅದಕ್ಕೆ ಮುನ್ನ ಆತ ತನ್ನ ದೇಹಕ್ಕೆ ಸಿಹಿಗುಂಬಳದ ಹೂವುಗಳನ್ನು ಸವರಿಕೊಳ್ಳುತ್ತಾನೆ. ನಂತರ ಬಿಸಿಲಿಗೆ ಮೈಯೊಡ್ಡಿ ಕೊಳಲು ಊದಿದಾಗ ದೇಹವು ಬೆವರಲಾರಂಭಿಸುತ್ತದೆ. ಈ ಹೂವಿನ ಸುವಾಸನೆಯು ಹರಡಿ, ಪಕ್ಕದ ಗೂಡುಗಳಲ್ಲಿದ್ದ ಜೇನು ಹುಳಗಳು ಹೊರಬಂದು ಈತನ ಮೈಗೆ ಮುತ್ತಿಕೊಳ್ಳುತ್ತವೆ.

ತೀರ್ಮಾನ
ಈ ಎಲ್ಲ ವಿಚಾರಗಳನ್ನು, ಬಾಂಗ್ಲಾ ಸುದ್ದಿ ಮಾಧ್ಯಮಗಳ ವರದಿಗಳು ಹಾಗೂ ತಜ್ಞರ ಅಭಿಮತವೆಲ್ಲ ಕ್ರೋಡೀಕರಿಸಿದರೆ, ವೈರಲ್ ಪೋಸ್ಟ್‌ನಲ್ಲಿರುವಂತೆ ಈ ಕೊಳಲು ಊದುತ್ತಾ ಜೇನುಹುಳಗಳನ್ನು ಮೈಗೆ ಆಕರ್ಷಿಸಿಕೊಂಡಿರುವ ವ್ಯಕ್ತಿ ಭಾರತೀಯ ಅಲ್ಲ. ಈತ ಬಾಂಗ್ಲಾ ದೇಶದ ಜೆಸ್ಸೋರ್ ಜಿಲ್ಲೆಯ ಭಾಂಡರ್‌ಕಲಾ ಎಂಬಲ್ಲಿ ಜೇನು ಸಾಕಣಿಕೆಯಲ್ಲಿ ತೊಡಗಿಕೊಂಡಿರುವ ಮಹಮ್ಮದ್ ಮಹತಾಬ್ ಅಲಿ. ಕೊಳಲಿನ ಧ್ವನಿ ಕೇಳಿ ಜೇನುಹುಳಗಳು ಬಂದಿರಲಾರವು. ಆದರೆ, ಇದಕ್ಕಾಗಿ ಆತ, ಮೈಗೆ ಹೂವಿನ ಸುಗಂಧವನ್ನು ಸವರಿಕೊಳ್ಳುತ್ತಿದ್ದ. ಹೀಗಾಗಿ ಈ ಪೋಸ್ಟ್ ಅರ್ಧ ಸತ್ಯದಿಂದ ಕೂಡಿದೆ ಮತ್ತು ದಾರಿತಪ್ಪಿಸುವ ಪೋಸ್ಟ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.