ADVERTISEMENT

ನ್ಯೂನತೆ ಮರೆಮಾಚಲು ಧರ್ಮದ ಅಸ್ತ್ರ ಬಳಕೆ: ಸ್ಟಾಲಿನ್

ಪಿಟಿಐ
Published 4 ಸೆಪ್ಟೆಂಬರ್ 2023, 15:55 IST
Last Updated 4 ಸೆಪ್ಟೆಂಬರ್ 2023, 15:55 IST
ಎಂ.ಕೆ. ಸ್ಟಾಲಿನ್‌ –ಪಿಟಿಐ ಚಿತ್ರ 
ಎಂ.ಕೆ. ಸ್ಟಾಲಿನ್‌ –ಪಿಟಿಐ ಚಿತ್ರ    

ಚೆನ್ನೈ: ‘ಬಿಜೆಪಿಯ ಕೋಮುವಾದಿ ರಾಜಕೀಯ, ದ್ವೇಷ ಪ್ರೇರಿತ ನೀತಿಗಳಿಂದ ಮಣಿಪುರ ಮತ್ತು ಹರಿಯಾಣದ ಸ್ಥಿತಿ ಬಿಗಡಾಯಿಸಿದೆ. ಭಾರತದ ಸ್ಥಿತಿಯೂ ಹೀಗಾಗದಂತೆ ತಡೆಯಲು 2024ರ ಲೋಕಸಭಾ ಚುನಾವಣೆಯಲ್ಲಿ ‘ಇಂಡಿಯಾ’ ಮೈತ್ರಿಕೂಟವು ಜಯಗಳಿಸಬೇಕಿದೆ’ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಪ್ರತಿಪಾದಿಸಿದ್ದಾರೆ.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಅಭಿಯಾನದ ಭಾಗವಾಗಿ ಹಮ್ಮಿಕೊಂಡಿರುವ ಪಾಡ್‌ಕಾಸ್ಟ್‌ನ ಮೊದಲ ಸರಣಿಯಲ್ಲಿ ಅವರು, ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.

ಸರ್ಕಾರವು ತನ್ನ ನ್ಯೂನತೆಗಳನ್ನು ಮರೆಮಾಚಲು ಧರ್ಮವನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ. ಜನರ ನಡುವೆ ಧಾರ್ಮಿಕ ಭಾವನೆಗಳನ್ನು ಕೆರಳಿಸುತ್ತಿದೆ. ಈ ಕೋಮು ಜ್ವಾಲೆಯಲ್ಲಿ ತನ್ನ ಇಚ್ಛೆಯನ್ನು ಈಡೇರಿಸಿಕೊಳ್ಳುತ್ತಿದೆ ಎಂದು ದೂರಿದರು.   

ADVERTISEMENT
ವಿವಿಧತೆಯಲ್ಲಿ ಏಕತೆಯೇ ಭಾರತದ ವೈಶಿಷ್ಟ್ಯ. ಪ್ರತಿ ಧರ್ಮವೂ ಪ್ರತ್ಯೇಕವಾದ ಉದಾತ್ತ ಭಾವನೆ ಹೊಂದಿದೆ. ಹಾಗಾಗಿ ಯಾರೊಬ್ಬರೂ ಜನರ ಭಾವನೆಗಳಿಗೆ ಚ್ಯುತಿ ತರಬಾರದು 
-ಮಮತಾ ಬ್ಯಾನರ್ಜಿ, ಮುಖ್ಯಮಂತ್ರಿ ಪಶ್ಚಿಮ ಬಂಗಾಳ

‘2014ರಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ. ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣಗೊಳಿಸಿದೆ. ಜನರ ಮನದಲ್ಲಿ ದ್ವೇಷದ ವಿಷಬೀಜಗಳನ್ನು ಬಿತ್ತುತ್ತಿದೆ. ಜಿಎಸ್‌ಟಿ ಮೂಲಕ ರಾಜ್ಯಗಳ ಆರ್ಥಿಕ ಹಕ್ಕುಗಳನ್ನು ಕಸಿದುಕೊಂಡಿದೆ. ಹಣಕಾಸು ಆಯೋಗದ ಮೂಲಕ ಆರ್ಥಿಕ ನೆರವಿನ ಹಂಚಿಕೆಯನ್ನೂ ಕಡಿಮೆಗೊಳಿಸಿದೆ’ ಎಂದು ಟೀಕಿಸಿದರು.

ಸರ್ವ ಧರ್ಮ ಗೌರವಿಸಿ: ಕಾಂಗ್ರೆಸ್‌
ನವದೆಹಲಿ: ‘ಎಲ್ಲಾ ಧರ್ಮಗಳನ್ನು ಗೌರವಿಸಬೇಕು. ಜೊತೆಗೆ ತನ್ನ ಸ್ವಂತ ಅಭಿಪ್ರಾಯ ಹಂಚಿಕೊಳ್ಳಲು ಪ್ರತಿ ರಾಜಕೀಯ ಪಕ್ಷಕ್ಕೂ ಸ್ವಾತಂತ್ರ್ಯವಿದೆ’ ಎಂದು ಕಾಂಗ್ರೆಸ್‌ ಪ್ರತಿಕ್ರಿಯಿಸಿದೆ. ಸನಾತನ ಧರ್ಮದ ಬಗ್ಗೆ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್‌ ನೀಡಿದ ಹೇಳಿಕೆ ಬಗ್ಗೆ ಕಾಂಗ್ರೆಸ್‌ ಮೌನವಹಿಸಿದೆ ಎಂದು ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಪ್ರಶ್ನಿಸಿದ ಬೆನ್ನಲ್ಲೇ ಕೈಪಾಳಯದಿಂದ ಭಿನ್ನವಾದ ಹೇಳಿಕೆ ಹೊರಬಿದ್ದಿದೆ. ‘ಸರ್ವ ಧರ್ಮಗಳನ್ನು ಸಮಾನವಾಗಿ ಕಾಣಬೇಕು ಎಂಬುದು ಪಕ್ಷದ ಸಿದ್ಧಾಂತ. ಆದರೆ ಆಯಾ ಪಕ್ಷಗಳು ಸ್ವಂತ ಅಭಿಪ್ರಾಯ ಮಂಡಿಸಲು ಸ್ವಾತಂತ್ರ್ಯ ಹೊಂದಿವೆ ಎಂಬುದನ್ನೂ ಬಿಜೆಪಿ ಅರ್ಥಮಾಡಿಕೊಳ್ಳಬೇಕಿದೆ. ಪ್ರತಿಯೊಬ್ಬರು ನಂಬಿಕೆಗಳನ್ನು ನಾವು ಗೌರವಿಸುತ್ತೇವೆ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.