ADVERTISEMENT

ಅಕ್ರಮ ಲಾಟರಿ: ಪಾಕ್‌ಗೆ ಹಣ

​ಪ್ರಜಾವಾಣಿ ವಾರ್ತೆ
Published 15 ಜನವರಿ 2012, 19:30 IST
Last Updated 15 ಜನವರಿ 2012, 19:30 IST

ನವದೆಹಲಿ (ಪಿಟಿಐ): ಪಾಕಿಸ್ತಾನ ಮತ್ತು ಭಾರತದ ವ್ಯಕ್ತಿಗಳು ಸೇರಿಕೊಂಡು ಅಕ್ರಮ ಲಾಟರಿ ದಂಧೆ ನಡೆಸಿ, ಅದರಿಂದ ಸಂಗ್ರಹವಾದ ಹಣವನ್ನು ಹವಾಲಾ ಮೂಲಕ ಪಾಕಿಸ್ತಾನಕ್ಕೆ ರವಾನೆ ಮಾಡುತ್ತಿದ್ದ ಜಾಲವೊಂದನ್ನು ಪೊಲೀಸರು ಬೇಧಿಸಿದ್ದಾರೆ.

ದೆಹಲಿಯ ಅಪರಾಧ ವಿಭಾಗದ ಪೊಲೀಸರು ಈ ಜಾಲವನ್ನು ಬೇಧಿಸಿದ್ದಾರೆ. ಆದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರನ್ನೂ ಬಂಧಿಸಿಲ್ಲ.

ಪಾಕ್ ಮತ್ತು ಭಾರತದ ವ್ಯಕ್ತಿಗಳು ಸೇರಿಕೊಂಡು ಇಂತಹ ಜಾಲ ನಡೆಸುತ್ತಿದ್ದಾರೆ ಎನ್ನುವ ಮಾಹಿತಿ ದೆಹಲಿ ಅಪರಾಧ ವಿಭಾಗದ ಪೊಲೀಸರಿಗೆ ದೊರೆತಿತ್ತು. ಈ ಜಾಲದವರು ತಮಗೆ ಲಾಟರಿ ಬಂದಿದ್ದು, ಹಣ ಸಿಕ್ಕ ತಕ್ಷಣ ಹಿಂತಿರುಗಿಸುವುದಾಗಿ ಜನರನ್ನು ನಂಬಿಸಿ ಠೇವಣಿ ಸಂಗ್ರಹಿಸುತ್ತಿದ್ದರು. ಹಾಗೆ ಸಂಗ್ರಹಿಸಿದ ಠೇವಣಿ ಹಣವನ್ನು ಹವಾಲಾ ಮೂಲಕ ಪಾಕಿಸ್ತಾನಕ್ಕೆ ಕಳುಹಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ವರ್ಷ ಸಹ ಇಂತಹ ಅನೇಕ ಅಕ್ರಮ ಲಾಟರಿ ದಂಧೆ ಜಾಲಗಳನ್ನು ಪೊಲೀಸರು ಬೇಧಿಸಿದ್ದರು. ಬಹುತೇಕ ನೈಜೀರಿಯಾದ ಪ್ರಜೆಗಳು ಸೇರಿದಂತೆ ಒಂಬತ್ತು ಮಂದಿ ವಿದೇಶಿಯರನ್ನು ಒಳಗೊಂಡು 15 ಮಂದಿಯನ್ನು ಬಂಧಿಸಿದ್ದರು. ಈ ವಂಚಕರು ಜನರಿಗೆ ಸುಮಾರು 1.76 ಕೋಟಿ ರೂಪಾಯಿ ವಂಚನೆ ಮಾಡಿದ್ದರು.

ಪಾಕಿಸ್ತಾನದಲ್ಲಿ ಮುದ್ರಣವಾಗಿದ್ದ 2.24 ಕೋಟಿ ರೂಪಾಯಿ ಮುಖಬೆಲೆಯ ಖೋಟಾ ನೋಟುಗಳನ್ನು ಕಳೆದ ವಾರ ಆಗ್ನೇಯ ದೆಹಲಿಯಲ್ಲಿ ಪೊಲೀಸರು ವಶಪಡಿಸಿಕೊಂಡ ಬೆನ್ನಲ್ಲೆ ಈಗ ಅಕ್ರಮ ಲಾಟರಿ ಜಾಲವನ್ನು ಬಯಲಿಗೆಳೆದಿದ್ದಾರೆ.

ಈ ಜಾಲದ ಪ್ರಮುಖ ವ್ಯಕ್ತಿ ಪಾಕಿಸ್ತಾನದಲ್ಲಿದ್ದು, ಅದರ ನಿರ್ವಹಣೆ ನೋಡಿಕೊಳ್ಳುತ್ತಿದ್ದ. ಲೂಧಿಯಾನದಲ್ಲಿ ಅಕ್ರಮವಾಗಿ ನೆಲೆಸಿರುವ ಇನ್ನೊಬ್ಬ ಪಾಕ್ ಪ್ರಜೆ, ಅಮೃತಸರದ ಇಬ್ಬರು ವ್ಯಾಪಾರಿಗಳು, ನೋಯ್ಡಾದ ಚಹಾ ಅಂಗಡಿಯ ಮಾಲಿಕ ಮತ್ತು ದೆಹಲಿಯ ವಜೀರ್‌ಪುರದಲ್ಲಿ ವಾಸವಾಗಿರುವ ವ್ಯಕ್ತಿಯೊಬ್ಬ ಈ ಜಾಲದಲ್ಲಿ ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT